ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಕ್ಯಾಬಿನೆಟ್​ ಸಭೆ: ಮಹತ್ವದ ತೀರ್ಮಾನಗಳೇನು?

ಕರ್ನಾಟಕ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಮಹತ್ವದ ಸಚಿವ ಸಂಪುಟ ಸಭೆ ವಿಧಾನ ಸೌಧದಲ್ಲಿ ನಡೆಯಿತು. ಸಾಮಾಜಿಕ, ಶೈಕ್ಷಣಿಕ & ಆರ್ಥಿಕ ಸಮೀಕ್ಷೆ ವಿಚಾರದ ಚರ್ಚೆಯ ಜೊತೆಗೆ ಹಲವು ಮಹತ್ವದ ತೀರ್ಮಾನಗಳನ್ನ ಕ್ಯಾಬಿನೆಟ್​ ಸಭೆಯಲ್ಲಿ ಕೈಗೊಳ್ಳಲಾಗಿದೆ. ಕರ್ನಾಟಕ ರಾಜ್ಯ ಕೌಶಲ್ಯ ಅಭಿವೃದ್ಧಿ ನೀತಿ 2025-2032ನ್ನೂ ಸಚಿವ ಸಂಪುಟ ಅಂಗೀಕರಿಸಿದೆ.

ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಕ್ಯಾಬಿನೆಟ್​ ಸಭೆ: ಮಹತ್ವದ ತೀರ್ಮಾನಗಳೇನು?
ಸಿಎಂ ಸಿದ್ದರಾಮಯ್ಯ ಮತ್ತು ಸಚಿವರು. (File Photo)
Updated By: ಪ್ರಸನ್ನ ಹೆಗಡೆ

Updated on: Sep 25, 2025 | 4:44 PM

ಬೆಂಗಳೂರು, ಸೆಪ್ಟೆಂಬರ್​ 25: ಸಿಎಂ ಸಿದ್ದರಾಮಯ್ಯ (Siddaramaiah) ನೇತೃತ್ವದಲ್ಲಿ ವಿಧಾನ ಸೌಧದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ (Cabinet Meeting) ಹಲವು ಮಹತ್ವದ ನಿರ್ಧಾರಗಳನ್ನ ಕೈಗೊಳ್ಳಲಾಗಿದೆ. ರಾಜ್ಯದಲ್ಲಿ ನಡೆಯುತ್ತಿರುವ ಸಾಮಾಜಿಕ, ಶೈಕ್ಷಣಿಕ & ಆರ್ಥಿಕ ಸಮೀಕ್ಷೆ ವಿಚಾರದ ಬಗ್ಗೆಯೂ ಕ್ಯಾಬಿನೆಟ್​ ಸಭೆಯಲ್ಲಿ ಚರ್ಚೆ ನಡೆದಿದ್ದು, ಸಮೀಕ್ಷೆಗೆ ಗೈರಾದ ಸಿಬ್ಬಂದಿ ಮತ್ತು ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಸಂಪುಟ ತೀರ್ಮಾನಿಸಿದೆ.

ವಿರಾಜಪೇಟೆ ಆಸ್ಪತ್ರೆ ಮೇಲ್ದರ್ಜೆಗೆ

ಚಿಕ್ಕೋಡಿಗೆ ಮಂಜೂರಾಗಿದ್ದ 50 ಹಾಸಿಗೆಗಳ ತೀವ್ರ ನಿಗಾ ಘಟಕವನ್ನ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕು ಆಸ್ಪತ್ರೆಗೆ ಸ್ಥಳಾಂತರಕ್ಕೆ ಸಂಪುಟ ಸಭೆಯಲ್ಲಿ ಅನುಮೋದನೆ ಸಿಕ್ಕಿದೆ. ಕಟ್ಟಡ ಮತ್ತು ವೈದ್ಯಕೀಯ ಉಪಕರಣಗಳು ಸೇರಿ 23.75 ಕೋಟಿ ರೂಪಾಯಿ ವೆಚ್ಚದಲ್ಲಿ ತೀವ್ರ ನಿಗಾ ಘಟಕ ನಿರ್ಮಾಣಕ್ಕೆ ಒಪ್ಪಿಗೆ ಸಿಕ್ಕಿದೆ. ಕೊಡಗು ಜಿಲ್ಲೆಯ ವಿರಾಜಪೇಟೆಯಲ್ಲಿ ಪ್ರಸ್ತುತ ಇರುವ 60 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆ ಮೇಲ್ದರ್ಜೆಗೆ ಏರಿಸಲು ತೀರ್ಮಾನಿಸಲಾಗಿದೆ. ಮೊದಲನೇ ಹಂತದ ಭಾಗವಾಗಿ 95.60 ಕೋಟಿ ರೂಪಾಯಿ ಅಂದಾಜು ಮೊತ್ತದಲ್ಲಿ 250 ಹಾಸಿಗೆಗಳ ಸಾಮರ್ಥ್ಯದ ಆಸ್ಪತ್ರೆಯನ್ನಾಗಿ ಮೇಲ್ದರ್ಜೆಗೆ ಏರಿಸಲು ಸಚಿವ ಸಂಪುಟ ಒಪ್ಪಿದೆ.

ಇದನ್ನೂ ಓದಿ: ಓದುವ ವಯಸ್ಸಲ್ಲಿ ಪ್ರೀತಿ-ಪ್ರೇಮ: ಹೆದರಿ ದುರಂತ ಅಂತ್ಯ ಕಂಡ ಅಪ್ರಾಪ್ತ ಪ್ರೇಮಿಗಳು

ಬಾಗಲಕೋಟೆ ಜಿಲ್ಲೆಯ ಲೋಕಾಪುರ ಪಟ್ಟಣ ಪಂಚಾಯತಿ ವ್ಯಾಪ್ತಿಯಲ್ಲಿ ಸಾರ್ವಜನಿಕ ಉದ್ದೇಶಕ್ಕಾಗಿ ಕಾಯ್ದಿರಿಸಿದ್ದ ಆಸ್ತಿ ನಂ.3741, ಕ್ಷೇತ್ರ-400.63 ಚ.ಮೀಟರ್ ನಿವೇಶನವನ್ನು ಗುತ್ತಿಗೆ ಆಧಾರದ ಮೇಲೆ ನೀಡಲು ತೀಮಾರ್ನಿಸಲಾಗಿದೆ. ಕಾಂಗ್ರೆಸ್ ಭವನ ಟ್ರಸ್ಟ್, ಬೆಂಗಳೂರು ಇವರಿಗೆ 30 ವರ್ಷಗಳವರೆಗೆ ಗುತ್ತಿಗೆ ನೀಡಲು ಕ್ಯಾಬಿನೆಟ್ ಅನುಮೋದನೆ ನೀಡಿದೆ. ಚನ್ನರಾಯಪಟ್ಟಣದ ಅಮಾನಿಕೆರೆ ಗ್ರಾಮದ ನಂ. 152/1, 2, 3, 4, 151/1, 5, 153/20 ರಲ್ಲಿ ಕಾಯ್ದಿರಿಸಿದ 799 ಚ.ಮೀ. ವಿಸ್ತೀರ್ಣದ (ಸಿ.ಎ.ನಿವೇಶನದ) ಪೈಕಿ 210 ಚ.ಮೀ ನಿವೇಶನ ಮತ್ತು ಬಾಗಲಕೋಟ ಜಿಲ್ಲೆಯ ಲೋಕಾಪುರ ಪಟ್ಟಣ ಪಂಚಾಯತಿಯ ವ್ಯಾಪ್ತಿಯಲ್ಲಿ ಸಾರ್ವಜನಿಕ ಉದ್ದೇಶಕ್ಕಾಗಿ ಕಾಯ್ದಿರಿಸಿದ ಆಸ್ತಿ ನಂ.3741ರ ಕ್ಷೇತ್ರ-400.63 ಚ.ಮೀಟರ್ ನಿವೇಶನವನ್ನೂ ಕಾಂಗ್ರೆಸ್ ಭವನ ಟ್ರಸ್ಟ್​ಗೆ​ ಗುತ್ತಿಗೆ ಆಧಾರದ ಮೇಲೆ ನೀಡಲು ಸಚಿವ ಸಂಪುಟ ಒಪ್ಪಿದೆ.

ಕಡೂರಿನಲ್ಲಿ ಹೊಸ ಪ್ರಜಾಸೌಧ ಕಟ್ಟಡ

ದೆಹಲಿಯ ಕರ್ನಾಟಕ ಭವನ-2 ಕಟ್ಟಡದ ನವೀಕರಣ ಮತ್ತು ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲು ಸಂಪುಟ ತೀಮಾರ್ನಿಸಿದ್ದು, 16.30 ಕೋಟಿ ರೂಪಾಯಿ ಮೊತ್ತದಲ್ಲಿ ಕಾಮಗಾರಿಗೆ ನಿರ್ಧರಿಸಲಾಗಿದೆ. 16 ಕೋಟಿ ರೂಪಾಯಿ ವೆಚ್ಚದಲ್ಲಿ ಚಿಕ್ಕಮಗಳೂರು ಜಿಲ್ಲೆಯ ಕಡೂರಿನಲ್ಲಿ ಹೊಸ ಪ್ರಜಾಸೌಧ ಕಟ್ಟಡ ನಿರ್ಮಾಣಕ್ಕೆ ಕ್ಯಾಬಿನೆಟ್​​​ ಒಪ್ಪಿಗೆ ಸೂಚಿಸಿದೆ. ಕೇಂದ್ರದ 15ನೇ ಹಣಕಾಸು ಆಯೋಗದ ಯೋಜನೆಯಡಿ ರಾಜ್ಯ ಅಗ್ನಿಶಾಮಕ & ತುರ್ತು ಸೇವೆಗಳ ಇಲಾಖೆ ವಿಸ್ತರಣೆ ಮತ್ತು ಆಧುನೀಕರಣದ ಪರಿಷ್ಕೃತ 329 ಕೋಟಿ ಮೊತ್ತದ ಕ್ರಿಯಾ ಯೋಜನೆಗೂ ಸಚಿವ ಸಂಪುಟ ಸಭೆಯಲ್ಲಿ ಗ್ರೀನ್​ ಸಿಗ್ನಲ್​ ಸಿಕ್ಕಿದೆ. ಕರ್ನಾಟಕ ರಾಜ್ಯ ಕೌಶಲ್ಯ ಅಭಿವೃದ್ಧಿ ನೀತಿ 2025-2032ನ್ನೂ ಸಚಿವ ಸಂಪುಟ ಅಂಗೀಕರಿಸಿದೆ.

ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Published On - 4:40 pm, Thu, 25 September 25