ಬೆಂಗಳೂರು: ಕರ್ನಾಟಕ ರಾಜ್ಯ ಎಪಿಡಮಿಕ್ ಕಾಯ್ದೆಯನ್ನು ಸುಗ್ರೀವಾಜ್ಞೆ ಮೂಲಕ ಜಾರಿಗೊಳಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಈಗಾಗಲೇ ಸುಗ್ರೀವಾಜ್ಞೆ ಅಂತಿಮಗೊಳಿಸಿ ರಾಜ್ಯಪಾಲರಿಗೆ ರವಾನೆ ಮಾಡಿದೆ. ರಾಜ್ಯಪಾಲರು ನಾಳೆಯೊಳಗೆ ಸುಗ್ರೀವಾಜ್ಞೆಗೆ ಅಂಕಿತ ನೀಡುವ ನಿರೀಕ್ಷೆಯಲ್ಲಿದೆ ಸರ್ಕಾರ.
ಸರ್ಕಾರಿ ಅಧಿಕಾರಿಗಳು, ಕೊರೊನಾ ವಾರಿಯರ್ಸ್ ಮೇಲೆ ಹಲ್ಲೆ ನಡೆಸಿದವರಿಗೆ ಮೂರು ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸುವುದು. ಆಸ್ತಿ ನಷ್ಟ ಉಂಟು ಮಾಡುವವರ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳುವುದು ಆಸ್ತಿ ಇಲ್ಲದಿದ್ದರೆ ಬಂಧನ, ಜೈಲುಶಿಕ್ಷೆ ವಿಧಿಸುವುದಕ್ಕೆ ಈ ಸುಗ್ರೀವಾಜ್ಞೆಯಲ್ಲಿ ಅವಕಾಶ ಇರುತ್ತದೆ.
ಸುಗ್ರೀವಾಜ್ಞೆ ಜಾರಿಯಲ್ಲಿ ಟಿವಿ9 ಪಾತ್ರ ಏನು?
‘ಸುಗ್ರೀವಾಜ್ಞೆ ಇನ್ನೂ ವಿಳಂಬ, ಸಿದ್ಧವಾಗಿಲ್ಲ ಕರಡು’ ಎಂಬ ವರದಿಯನ್ನು ಟಿವಿ9 ನಿನ್ನೆ ಬಿತ್ತರಿಸಿತ್ತು. ನಿನ್ನೆ ನೇಷನ್@9ನಲ್ಲಿ ಸುಗ್ರೀವಾಜ್ಞೆ ಬಗ್ಗೆ ಮಾತಾಡಿ ಸರ್ಕಾರ ಸೈಲೆಂಟ್ ಆಗಿ ಬಿಡ್ತಾ? ಎಂದು ಪ್ರಶ್ನಿಸಿತ್ತು. ಟಿವಿ9 ವರದಿ ಬೆನ್ನಲ್ಲೇ ಸುಗ್ರೀವಾಜ್ಞೆ ಅಂತಿಮಗೊಳಿಸಿದ ರಾಜ್ಯ ಸರ್ಕಾರ, ಕರ್ನಾಟಕ ರಾಜ್ಯ ಎಪಿಡಮಿಕ್ ಕಾಯ್ದೆಗೆ ಸುಗ್ರೀವಾಜ್ಞೆ ಅಂತಿಮಗೊಳಿಸಿ ರಾಜ್ಯಪಾಲರಿಗೆ ರವಾನಿಸಿದೆ.
ಕೇರಳ ಮಾದರಿಯಲ್ಲಿದೆ ‘ಕರ್ನಾಟಕ ರಾಜ್ಯ ಎಪಿಡಮಿಕ್ ಕಾಯ್ದೆ’!
ಉತ್ತರ ಪ್ರದೇಶ ಮಾದರಿ ಕೈಬಿಟ್ಟು ಕೇರಳ ಮಾದರಿ ಅನುಸರಿಸಿದ ರಾಜ್ಯ ಸರ್ಕಾರ ಗೂಂಡಾ ಕಾಯ್ದೆಯ ಕೆಲ ಅಂಶಗಳನ್ನೂ ಸುಗ್ರೀವಾಜ್ಞೆಯಲ್ಲಿ ಅಳವಡಿಸಿದೆ. ಪ್ರತಿಭಟನೆ ವೇಳೆ ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾದ್ರೆ ಅನುಸರಿಸಬೇಕಾದ ಕ್ರಮದ ಬಗ್ಗೆ ಪ್ರಸ್ತಾಪ ಮಾಡಲಾಗಿದೆ. ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾದ್ರೆ ನಷ್ಟದ ಮೂರು ಪಟ್ಟು ದಂಡ ವಿಧಿಸುವುದು ಮತ್ತು ನಷ್ಟಕ್ಕೆ ಕಾರಣವಾದ ವ್ಯಕ್ತಿ ಅಥವಾ ಸಂಘಟನೆಯ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳುವುದು. ಕನಿಷ್ಠ 2 ವರ್ಷದಿಂದ ಗರಿಷ್ಠ ಮೂರು ವರ್ಷ ಜೈಲು ಶಿಕ್ಷೆಗೆ ಅವಕಾಶ. ಕ್ವಾರಂಟೈನ್‌ಗೆ ಒಳಗಾಗಲು ನಿರಾಕರಿಸುವವರಿಗೂ ಜೈಲು ಶಿಕ್ಷೆ ವಿಧಿಸುವ ಪ್ರಸ್ತಾವನೆಯಿದೆ.
ವೈದ್ಯರು, ಪೊಲೀಸರ ರಕ್ಷಣೆಗಾಗಿ ಈ ಸುಗ್ರೀವಾಜ್ಞೆ ಬರಲಿದೆ. ಪ್ಯಾರಾಮೆಡಿಕಲ್ ಸಿಬ್ಬಂದಿ, ಸ್ವಯಂಸೇವಕರ ರಕ್ಷಣೆಗಾಗಿ ಸುಗ್ರೀವಾಜ್ಞೆಯ ಮತ್ತೊಂದು ಅಸ್ತ್ರ. ಆರೋಪಿಗಳಿಗೆ ಜಾಮೀನು ಕೊಡುವ ವಿಚಾರದಲ್ಲೂ ಕಠಿಣ ಕ್ರಮದ ಬಗ್ಗೆ ಪ್ರಸ್ತಾಪ ಮಾಡಲಾಗಿದೆ. ಕೇಸ್ ಇತ್ಯರ್ಥವಾಗುವವರೆಗೆ ಜಾಮೀನು ನೀಡಬಾರದೆಂಬ ಪ್ರಸ್ತಾಪವನೆಯೂ ಇದೆ. ತನಿಖೆಗೆ ವಿಶೇಷ ತನಿಖಾಧಿಕಾರಿ ನೇಮಿಸಿ, ಮುಕ್ತ ಸ್ವಾತಂತ್ರ್ಯ ನೀಡುವ ಬಗ್ಗೆಯೂ ಪ್ರಸ್ತಾಪನೆಯಿದೆ.
Published On - 1:17 pm, Wed, 22 April 20