ಬೆಂಗಳೂರು: ರಾಜ್ಯದಲ್ಲಿ ಕೊವಿಡ್-19 ಎರಡನೇ ಅಲೆ ತೀವ್ರವಾಗುತ್ತಿದೆ. ಇದರಿಂದ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳಿಗೆ ತಮ್ಮ ಪರೀಕ್ಷೆಗಳು ನಡೆಯುವ ಕುರಿತು ಅನುಮಾನ ಮೂಡುತ್ತಿವೆ. ಆದರೆ ಈ ಕುರಿತು ಸ್ಪಷ್ಟನೆ ನೀಡಿರುವ ಉಪ ಮುಖ್ಯಮಂತ್ರಿ ಡಾ.ಅಶ್ವತ್ಥ ನಾರಾಯಣ್, ಪದವಿ, ಸ್ನಾತಕ ಪದವಿ, ಎಂಜಿನಿಯರಿಂಗ್, ಡಿಪ್ಲೋಮಾ ಮತ್ತು ಇತರ ಎಲ್ಲ ಪರೀಕ್ಷೆಗಳೂ ನಡೆಯಲಿವೆ. ಈ ಕುರಿತು ಯಾವುದೇ ಗೊಂದಲ ಬೇಡ ಎಂದು ಸ್ಪಷ್ಪಪಡಿಸಿದ್ದಾರೆ. ಸದ್ಯ ಸಾರಿಗೆ ಸಿಬ್ಬಂದಿಗಳ ಮುಷ್ಕರ, ಕೊರೊನಾ ಸೋಂಕಿನ ಹೆಚ್ಚಳದಿಂದ ಪರೀಕ್ಷೆ ನಡೆಸುವಲ್ಲಿ ಕೆಲಕಾಲ ವ್ಯತ್ಯಯವಾಗಿದೆ. ಮುಂದಿನ ದಿನಗಳಲ್ಲಿ ಎಲ್ಲವೂ ಸರಿಹೋದ ತಕ್ಷಣ ಪರೀಕ್ಷೆಗಳು ಎಂದಿನಂತೆ ನಡೆಯಲಿವೆ ಎಂದು ಅವರು ತಿಳಿಸಿದರು.
ರಾಜ್ಯದ ವಿವಿಧ ಭಾಗಗಳಲ್ಲಿ ಹಲವಾರು ಪೋಷಕರು ಆನ್ಲೈನ್ ಪರೀಕ್ಷೆ ನಡೆಸುವಂತೆ ಬೇಡಿಕೆಯಿಡುತ್ತಿದ್ದಾರೆ, ಆದರೆ ಕರ್ನಾಟಕದಲ್ಲಿ ಆನ್ಲೈನ್ ಪರೀಕ್ಷೆ ನಡೆಸುವುದಿಲ್ಲ. ಪರಿಸ್ಥಿತಿ ಹತೋಟಿಗೆ ಬಂದ ನಂತರ ಆಫ್ಲೈನ್ನಲ್ಲೇ ಪರೀಕ್ಷೆ ನಡೆಸುತ್ತೇವೆ. ನಮ್ಮ ಸದ್ಯದ ವ್ಯವಸ್ಥೆಯಲ್ಲಿ ಆನ್ಲೈನ್ ಪರೀಕ್ಷೆ ನಡೆಸುವುದು ಸಾಧ್ಯವಿಲ್ಲ ಎಂದು ಅವರು ತಿಳಿಸಿದರು.
ಮುಂದಿನ ಶೈಕ್ಷಣಿಕ ವರ್ಷದ ಕುರಿತೂ ಸುದ್ದಿಗೋಷ್ಠಿಯಲ್ಲಿ ತಿಳಿಸಿದ ಉಪ ಮುಖ್ಯಮಂತ್ರಿ ಡಾ.ಅಶ್ವತ್ಥ ನಾರಾಯಣ್, 2021-2022ರಲ್ಲಿ ಆನ್ಲೈನ್ ತರಗತಿಗಳನ್ನು ಮೊದಲು ಆರಂಭಿಸಲಾಗುವುದು. ಕೊರೊನಾ ಸೋಂಕಿನ ಪರಿಸ್ಥಿತಿ ಒಂದು ಹದಕ್ಕೆ ಬಂದ ನಂತರವಷ್ಟೇ ಆಫ್ಲೈನ್ ತರಗತಿ ಪ್ರಾರಂಭ ಮಾಡಲಾಗುವುದು. ವಿದ್ಯಾರ್ಥಿಗಳು ಇವೆರಡರಲ್ಲಿ ಯಾವುದೇ ತರಗತಿಗಳಿಗೂ ಕೂರಬಹುದು. ತಮಗೆ ಅನುಕೂಲ ಎನಿಸಿದ ತರಗತಿಗಳಿಗೆ ವಿದ್ಯಾರ್ಥಿಗಳು ಹಾಜರಾಗಲೇಬೇಕು. ಆದರೆ ಯಾವುದೇ ತರಗತಿಗಳಿಗೆ ಕೂರದೇ ಇರಲು ಅವಕಾಶವಿಲ್ಲ ಎಂದು ಅವರು ತಿಳಿಸಿದರು.
ಮಹಾರಾಷ್ಟ್ರದಲ್ಲಿ ಪರೀಕ್ಷೆ ಮುಂದೂಡಿಕೆ
ಮಹಾರಾಷ್ಟ್ರದಲ್ಲಿ ಅತಿಹೆಚ್ಚು ಜನರು ಸೋಂಕಿಗೆ ತುತ್ತಾಗುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ರಾಜ್ಯ ಬೋರ್ಡ್ ಪರೀಕ್ಷೆಗಳನ್ನು ಮುಂದೂಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. 10 ಮತ್ತು 12ನೇ ತರಗತಿ ಪರೀಕ್ಷೆಗಳನ್ನು ಮಹಾರಾಷ್ಟ್ರ ಸರ್ಕಾರ ಮುಂದೆ ಹಾಕಿದೆ. 10ನೇ ತರಗತಿ ಪರೀಕ್ಷೆ ಜೂನ್ ವೇಳೆ ಹಾಗೂ 12ನೇ ತರಗತಿ ಪರೀಕ್ಷೆಗಳು ಮೇ ಅಂತ್ಯದ ವೇಳೆ ನಡೆಸುವ ಬಗ್ಗೆ ಶಿಕ್ಷಣ ಸಚಿವರಾದ ವರ್ಷಾ ಗಾಯಕ್ವಾಡ್ ಮಾಹಿತಿ ನೀಡಿದ್ದಾರೆ. ಕೊರೊನಾ ಪರಿಸ್ಥಿತಿಯನ್ನು ಅವಲಂಬಿಸಿ ಪರೀಕ್ಷಾ ದಿನಾಂಕ ಘೋಷಿಸಲಾಗುವುದು ಎಂದು ತಿಳಿಸಲಾಗಿದೆ.
ಸದ್ಯದ ಪರಿಸ್ಥಿತಿಯು ಪರೀಕ್ಷೆ ಸಡೆಸಲು ಯೋಗ್ಯವಾಗಿಲ್ಲ. ಆರೋಗ್ಯವೇ ಸರ್ಕಾರದ ಮೊದಲ ಆದ್ಯತೆ ಎಂದು ಗಾಯಕ್ವಾಡ್ ಟ್ವಿಟರ್ನಲ್ಲಿ ಹಂಚಿಕೊಂಡಿರುವ ವಿಡಿಯೋದಲ್ಲಿ ತಿಳಿಸಿದ್ದಾರೆ. ಈ ನಿರ್ಧಾರವು ವಿದ್ಯಾರ್ಥಿಗಳು, ಶಿಕ್ಷಕರು, ರಾಜಕಾರಣಿಗಳು, ಶಿಕ್ಷಣ ತಜ್ಞರನ್ನು ಸಂಪರ್ಕಿಸಿದ ಬಳಿಕವೇ ತೆಗೆದುಕೊಂಡದ್ದಾಗಿದೆ ಎಂದು ಅವರು ಹೇಳಿದ್ದಾರೆ. CBSE, ICSE, IB ಹಾಗೂ ಕ್ಯಾಂಬ್ರಿಡ್ಜ್ ಬೋರ್ಡ್ಗಳಿಗೂ ಪರೀಕ್ಷೆ ಮುಂದೂಡುವಂತೆ ಕೇಳಿಕೊಳ್ಳುತ್ತೇವೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: TV9 Digital Live| ಕೊವಿಡ್ ನಿಯಂತ್ರಣ ಮಾಡಲು ಸರ್ಕಾರ ತಂದ ಹೊಸ ಮಾರ್ಗಸೂಚಿ ಸಹಕಾರಿಯಾಗಬಹುದೇ?
ಇದನ್ನೂ ಓದಿ: ಇಂಥ ಲಕ್ಷಣಗಳಿದ್ದರೆ ಕೊರೊನಾ ಬಂದಿರುವ ಸಾಧ್ಯತೆಯಿದೆ, ಒಮ್ಮೆ ಟೆಸ್ಟ್ ಮಾಡಿಸಿ