ರಾಜ್ಯಾದ್ಯಂತ ಕೋನೋಕಾರ್ಪಸ್ ಗಿಡಗಳ ಕಡಿದು ಸ್ಥಳೀಯ ಜಾತಿಯ ಗಿಡ ನೆಡಲು ಅರಣ್ಯ ಇಲಾಖೆ ಸೂಚನೆ!

ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಭಾಗಗಳಲ್ಲಿ ನೆಡಲಾಗಿರುವ ಕೋನೋಕಾರ್ಪಸ್ ಗಿಡಗಳನ್ನು ತೆರವುಗೊಳಿಸಿ, ಅವುಗಳ ಬದಲಿಗೆ ಸ್ಥಳೀಯ ಜಾತಿಯ ಗಿಡಗಳನ್ನು ನೆಡುವ ಕುರಿತು ನಿಯಮಾನುಸಾರ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಕರ್ನಾಟಕ ಅರಣ್ಯ ಇಲಾಖೆ ಸೂಚಿಸಿದೆ. ಈ ಕ್ರಮಕ್ಕೆ ಕಾರಣವೇನು? ಗಿಡ ತೆರವು ಮಾಡುತ್ತಿರುವುದೇಕೆ ಎಂಬ ಮಾಹಿತಿ ಇಲ್ಲಿದೆ.

ರಾಜ್ಯಾದ್ಯಂತ ಕೋನೋಕಾರ್ಪಸ್ ಗಿಡಗಳ ಕಡಿದು ಸ್ಥಳೀಯ ಜಾತಿಯ ಗಿಡ ನೆಡಲು ಅರಣ್ಯ ಇಲಾಖೆ ಸೂಚನೆ!
ಕೋನೋಕಾರ್ಪಸ್ ಗಿಡ
Edited By:

Updated on: Nov 12, 2026 | 8:16 AM

ಮುಖ್ಯಾಂಶಗಳು

  • ಕೋನೋಕಾರ್ಪಸ್ ಗಿಡ ತೆರವಿಗೆ ಕ್ರಮಕ್ಕೆ ಸೂಚನೆ
  • ಸ್ಥಳೀಯ ಜಾತಿಯ ಗಿಡ ನೆಡಲು ಮನವಿ
  • ಆರೋಗ್ಯ ಸಮಸ್ಯೆಗಳ ಆರೋಪದ ಹಿನ್ನೆಲೆ ಕ್ರಮ

ಬೆಂಗಳೂರು, ನವೆಂಬರ್ 12: ಕೋನೋಕಾರ್ಪಸ್ ಗಿಡಗಳನ್ನು ನಿಷೇಧಿಸಿ ತೆರವುಗೊಳಿಸುವಂತೆ ಹಲವು ವರ್ಷಗಳಿಂದ ಕೇಳಿಬರುತ್ತಿದ್ದ ಒತ್ತಾಯದ ಹಿನ್ನೆಲೆಯಲ್ಲಿ ಕರ್ನಾಟಕ ಅರಣ್ಯ ಇಲಾಖೆ ಈಗ ಕ್ರಮಕ್ಕೆ ಮುಂದಾಗಿದೆ. ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಭಾಗಗಳಲ್ಲಿ ನೆಡಲಾಗಿರುವ ಕೋನೋಕಾರ್ಪಸ್ ಗಿಡಗಳನ್ನು ತೆರವುಗೊಳಿಸಿ, ಅವುಗಳ ಬದಲಿಗೆ ಸ್ಥಳೀಯ ಜಾತಿಯ ಗಿಡಗಳನ್ನು ನೆಡುವ ಕುರಿತು ನಿಯಮಾನುಸಾರ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ.

ಕೋನೋಕಾರ್ಪಸ್ ಗಿಡಗಳನ್ನು ತೆರವು ಮಾಡುವುದು ಯಾಕೆ?

ಬೆಂಗಳೂರು ಸೇರಿದಂತೆ ರಾಜ್ಯದಾದ್ಯಂತ ರಸ್ತೆ ಬದಿ ಹಾಗೂ ಅರಣ್ಯ ಇಲಾಖೆ, ಬಿಬಿಎಂಪಿ, ಬಿಡಿಎ ಮತ್ತು ಪಂಚಾಯಿತಿ ವ್ಯಾಪ್ತಿಯ ಪ್ರದೇಶಗಳಲ್ಲಿ ಕೋನೋಕಾರ್ಪಸ್ ಗಿಡಗಳನ್ನು ನೆಡಲಾಗಿದೆ. ನಗರ ಸೌಂದರ್ಯಕ್ಕಾಗಿ ನೆಡಲಾಗಿದ್ದ ಈ ಗಿಡಗಳು ಸಾರ್ವಜನಿಕರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದ್ದು, ಅಸ್ತಮಾ, ಅಲರ್ಜಿ, ನೆಗಡಿ ಹಾಗೂ ಉಸಿರಾಟದ ಸಮಸ್ಯೆಗಳಿಗೆ ಕಾರಣವಾಗುತ್ತಿವೆ ಎಂಬ ಆರೋಪಗಳು ಕೇಳಿಬಂದಿವೆ. ಈ ಹಿನ್ನೆಲೆಯಲ್ಲಿ ಕೋನೋಕಾರ್ಪಸ್ ಗಿಡಗಳ ಬಗ್ಗೆ ಪರಿಸರವಾದಿಗಳು ಆತಂಕ ವ್ಯಕ್ತಪಡಿಸುತ್ತಿದ್ದರು.

Loading...

ಸರ್ಕಾರಕ್ಕೆ ಮನವಿ ಸಲ್ಲಿಸಿದ್ದ ಪರಿಸರವಾದಿಗಳು

ಈ ಸಂಬಂಧ ಪರಿಸರವಾದಿ ‘ಪರಿಸರ ಮಂಜುನಾಥ್’ ಅವರು ‘ಮುಖ್ಯಸ್ಥಾವೋ ಬಜಾವೋ’ ಆಂದೋಲನ ಸಮಿತಿಯ ವತಿಯಿಂದ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರು. ಪರಿಸರ ಮತ್ತು ಆರೋಗ್ಯದ ದೃಷ್ಟಿಯಿಂದ ಕೋನೋಕಾರ್ಪಸ್ ಗಿಡಗಳನ್ನು ಸಂಪೂರ್ಣವಾಗಿ ಬೇರು ಸಮೇತ ತೆರವುಗೊಳಿಸಿ, ಅವುಗಳ ಸ್ಥಳದಲ್ಲಿ ಸ್ಥಳೀಯ ಜಾತಿಯ ಗಿಡಗಳನ್ನು ನೆಟ್ಟು ಪೋಷಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿತ್ತು.

Conocarpus Tree And Fruit

ಮನವಿಯನ್ನು ಪರಿಗಣಿಸಿರುವ ಕರ್ನಾಟಕ ಅರಣ್ಯ ಇಲಾಖೆಯ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಕಚೇರಿ ಈ ಕುರಿತು ಅಧಿಕೃತ ಪತ್ರ ಹೊರಡಿಸಿದೆ. ಕೋನೋಕಾರ್ಪಸ್ ಗಿಡಗಳನ್ನು ತೆರವುಗೊಳಿಸಿ ಸ್ಥಳೀಯ ಜಾತಿಯ ಗಿಡಗಳನ್ನು ನೆಡುವ ಕುರಿತು ನಿಯಮಾನುಸಾರ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಲಾಗಿದೆ.

ಇದನ್ನೂ ಓದಿ: ಕರ್ನಾಟಕದಲ್ಲಿ ಇನ್ನೆರಡು ದಿನ ಒಣ ಹವೆ, ಚಳಿಯ ವಾತಾವರಣ: ಧಾರವಾಡದಲ್ಲಿ 12.2 ಡಿಗ್ರಿ ಸೆಲ್ಸಿಯಸ್ ಕನಿಷ್ಠ ತಾಪಮಾನ

ಕೈಗೊಂಡ ಕ್ರಮದ ಕುರಿತು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವರಿಗೆ ಮಾಹಿತಿ ನೀಡುವಂತೆ ಹಾಗೂ ಅರ್ಜಿದಾರರಿಗೂ ವರದಿ ಸಲ್ಲಿಸುವಂತೆ ಪತ್ರದಲ್ಲಿ ತಿಳಿಸಲಾಗಿದೆ. ಈ ಬೆಳವಣಿಗೆಯಿಂದ ರಾಜ್ಯದ ವಿವಿಧ ಭಾಗಗಳಲ್ಲಿ ನೆಡಲಾಗಿರುವ ಕೋನೋಕಾರ್ಪಸ್ ಗಿಡಗಳ ತೆರವು ಪ್ರಕ್ರಿಯೆ ಯಾವ ರೀತಿಯಲ್ಲಿ ಮುಂದುವರಿಯಲಿದೆ ಎಂಬುದು ಗಮನ ಸೆಳೆದಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಲಕ್ಷ್ಮಿ ನರಸಿಂಹ ಸ್ವಾಮಿ ಎಲ್.

ಲಕ್ಷ್ಮಿ ನರಸಿಂಹ ಸ್ವಾಮಿ. ಎಲ್ ಆದ ನಾನು ಮೂಲತಃ ಬೆಂಗಳೂರಿನವಾಗಿದ್ದು, ಪೂರ್ವ ತಾಲೂಕಿನ ದೊಡ್ಡಗುಬ್ಬಿ ಎಂಬ ಗ್ರಾಮದಲ್ಲಿ ವಾಸವಿದ್ದೇನೆ. ಕಳೆದ 6 ವರ್ಷಗಳಿಂದ ಪತ್ರಕರ್ತನಾಗಿ ಕಾರ್ಯನಿರ್ವಹಿಸುತ್ತಿದ್ದು, ಪ್ರಸ್ತುತ ಟಿವಿ9 ಕನ್ನಡ ಸುದ್ದಿ ವಾಹಿನಿಯಲ್ಲಿ ಬೆಂಗಳೂರು ವರದಿಗಾರನಾಗಿ ಸೇವೆ ಸಲ್ಲಿಸುತ್ತಿದ್ದೇನೆ. ಐತಿಹಾಸಿಕ ಸರ್ಕಾರಿ ಕಲಾ ಕಾಲೇಜಿನಲ್ಲಿ ಸ್ನಾತಕ ಪದವಿ ಪೂರೈಸಿದ ಬಳಿಕ ಬೆಂಗಳೂರು ವಿಶ್ವವಿದ್ಯಾಲಯ (ಜ್ಞಾನಭಾರತಿ) ದಲ್ಲಿ M.A (ಪತ್ರಿಕೋದ್ಯಮ ಮತ್ತು ಸಂವಹನ) ಸ್ನಾತಕೋತ್ತರ ಪದವಿ ಪೂರೈಸಿದ್ದೇನೆ. ಗ್ರೇಟರ್ ಬೆಂಗಳೂರು ಪ್ರಾಧಿಕಾರ ಅಡಿಯ ನಗರ ಪಾಲಿಕೆಗಳು, ಬೆಸ್ಕಾಂ, ಜಲಮಂಡಳಿ, ಆಹಾರ, ಆರೋಗ್ಯ, ಶಿಕ್ಷಣ ಸೇರಿ ವಿವಿಧ ಕ್ಷೇತ್ರಗಳಲ್ಲಿ ನಾಗರಿಕರಿಗೆ ಎದುರಾಗುವ ಸಮಸ್ಯೆಗಳಿಗೆ, ಸಂಕಷ್ಟಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ಈವರೆಗೂ ಶ್ರಮವಹಿಸಿದ್ದು, ಮುಂದಿನ ದಿನಗಳಲ್ಲೂ ನಾಗರಿಕರ ಸೇವೆಯನ್ನೂ ಮುಂದುವರೆಸುವ ಗುರಿಯೊಂದಿಗೆ ಉತ್ತಮ ಸಮಾಜಕ್ಕಾಗಿ ಬದ್ಧನಾಗಿದ್ದೇನೆ..

Read More
Loading...
Unable to load recommendations.
Follow Us