ಟ್ರಾಫಿಕ್ ರೂಲ್ಸ್ ಉಲ್ಲಂಘನೆ ಮಾಡಿದ್ರೆ ಹುಷಾರ್: ಕಠಿಣ ಕ್ರಮಕ್ಕೆ ಪಾಯಿಂಟ್ ಬೇಸ್ಡ್ ಸಿಸ್ಟಮ್ ಜಾರಿಗೆ ಚಿಂತನೆ

ಸಂಚಾರ ನಿಯಮಗಳ ಉಲ್ಲಂಘನೆಯ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳಲು ರಾಜ್ಯ ಸರ್ಕಾರ ಮುಂದಾಗಿದೆ. ಬೆಂಗಳೂರು ನಗರ ಸೇರಿದಂತೆ ಜಿಲ್ಲೆಗಳಲ್ಲಿ ಸಂಚಾರಿ ನಿಯಮಗಳ ಉಲ್ಲಂಘನೆ ದೊಡ್ಡ ಪ್ರಮಾಣದಲ್ಲಿ ನಡೆಯುತ್ತಿದೆ. ಇದಕ್ಕೆ ಕಡಿವಾಣ ಹಾಕುವುದು ಅನಿವಾರ್ಯವಾಗಿದೆ. ಈ ನಿಟ್ಟಿನಲ್ಲಿ ಸರ್ಕಾರ ಕೆಲವೊಂದು ಕಠಿಣ ಕ್ರಮಗಳನ್ನು ಕೈಗೊಳ್ಳಲು ಪಾಯಿಂಟ್ ಬೇಸ್ಡ್ ಸಿಸ್ಟಮ್ ಜಾರಿಗೆ ಚಿಂತನೆ ನಡೆಸಿದೆ. ಹಾಗಾದ್ರೆ, ಏನಿದು ಪಾಯಿಂಟ್ ಬೇಸ್ಡ್ ಸಿಸ್ಟಮ್ ಎನ್ನುವ ಮಾಹಿತಿ ಇಲ್ಲಿದೆ.

ಟ್ರಾಫಿಕ್ ರೂಲ್ಸ್ ಉಲ್ಲಂಘನೆ ಮಾಡಿದ್ರೆ ಹುಷಾರ್: ಕಠಿಣ ಕ್ರಮಕ್ಕೆ ಪಾಯಿಂಟ್ ಬೇಸ್ಡ್ ಸಿಸ್ಟಮ್ ಜಾರಿಗೆ ಚಿಂತನೆ
Bengaluru Traffic
Edited By:

Updated on: Sep 30, 2026 | 10:47 PM

ಬೆಂಗಳೂರು, (ಸೆಪ್ಟೆಂಬರ್ 30): ಬೆಂಗಳೂರಿನ ಸಂಚಾರ ದಟ್ಟಣೆ ನಿಯಂತ್ರಣ, ರಸ್ತೆ ಸುರಕ್ಷತೆ ಹೆಚ್ಚಿಸುವುದು ಹಾಗೂ ಸಂಚಾರಿ ನಿಯಮಗಳ ಉಲ್ಲಂಘನೆಗೆ ಪರಿಣಾಮಕಾರಿಯಾಗಿ ಕಡಿವಾಣ ಹಾಕುವ ನಿಟ್ಟಿನಲ್ಲಿ ಕೆಲವೊಂದು ಕಠಿಣ ಕ್ರಮಗಳನ್ನು ಕೈಗೊಳ್ಳಲು ಸರ್ಕಾರ ಮುಂದಾಗಿದೆ. ಈ ನಿಟ್ಟಿನಲ್ಲಿ ಇಂದು (ಸೆಪ್ಟೆಂಬರ್ 30) ಗೃಹ ಹಾಗೂ ಸಾರಿಗೆ ಇಲಾಖೆ ಅಧಿಕಾರಿಗಳ ಜಂಟಿ ವಿಮರ್ಶಾ ಸಭೆ ವಿಕಾಸಸೌಧದಲ್ಲಿ ನಡೆಯಿತು. ಗೃಹ ಸಚಿವ ಪ್ರಿಯಾಂಕ್ ಖರ್ಗೆ ಹಾಗೂ ಸಾರಿಗೆ ಸಚಿವ ಭೈರತಿ ಸುರೇಶ್ ಅವರ ಉಪಸ್ಥಿತಿಯಲ್ಲಿ ನಡೆದ ಸಭೆಯಲ್ಲಿ ಸಂಚಾರಿ ವ್ಯವಸ್ಥೆಗೆ ಸಂಬಂಧಿಸಿದ ಹಲವು ಪ್ರಮುಖ ವಿಷಯಗಳ ಕುರಿತು ವಿಸ್ತೃತ ಚರ್ಚೆ ನಡೆದಿದ್ದು, ಪಾಯಿಂಟ್ ಬೇಸ್ಡ್ ಸಿಸ್ಟಮ್ ಜಾರಿಗೆ ಚಿಂತನೆ ನಡೆಸಿದೆ. ವಿವಿಧ ಸಂಚಾರಿ ಉಲ್ಲಂಘನೆಗಳಿಗೆ ಅಂಕಗಳನ್ನು ನಿಗದಿಪಡಿಸಿ ನಿರ್ದಿಷ್ಟ ಮಿತಿಯನ್ನು ತಲುಪಿದಾಗ ಚಾಲನಾ ಪರವಾನಗಿಯನ್ನು ಅಮಾನತುಗೊಳಿಸಲು ಮುಂದಾಗಿದೆ.

ವಿವಿಧ ಸಂಚಾರಿ ಉಲ್ಲಂಘನೆಗಳಿಗೆ ಅಂಕಗಳನ್ನು ನಿಗದಿಪಡಿಸಿ ನಿರ್ದಿಷ್ಟ ಮಿತಿಯನ್ನು ತಲುಪಿದಾಗ ಚಾಲನಾ ಪರವಾನಗಿಯನ್ನು ಅಮಾನತುಗೊಳಿಸುವ ಬಗ್ಗೆ ಚರ್ಚೆ ನಡೆಸುತ್ತಿದೆ. ಅಂಕ ಆಧಾರಿತ ಚಾಲನಾ ಪರವಾನಗಿ ವ್ಯವಸ್ಥೆ ಜಾರಿಗೊಳಿಸು ವ್ಯವಸ್ಥೆ ಜಾರಿಗೆ ಅಗತ್ಯವಿರುವ ಕಾನೂನು ಕ್ರಮಗಳ ಬಗ್ಗೆಯೂ ಸಚಿವರಾದ ಪ್ರಿಯಾಂಕ್ ಖರ್ಗೆ, ಭೈರತಿ ಸುರೇಶ್ ಪರಿಶೀಲಿಸಿದರು.

ಇದನ್ನೂ ಓದಿ: ಕಡಿಮೆ ವೇಗದ ಎಲೆಕ್ಟ್ರಿಕ್ ವಾಹನಗಳಿಗೂ ಟ್ರಾಫಿಕ್ ರೂಲ್ಸ್; ಕಾರ್ ಪೂಲಿಂಗ್‌ಗೆ ಹೊಸ ನೀತಿ ಜಾರಿಗೆ ಸರ್ಕಾರ ಪ್ಲ್ಯಾನ್!

ಸಾರಥಿ–ಇ-ಚಲನ್ ವ್ಯವಸ್ಥೆ ಸಂಯೋಜನೆ

ಚಾಲನಾ ಪರವಾನಗಿ ಅಮಾನತು ಹಾಗೂ ಸಂಚಾರಿ ಉಲ್ಲಂಘನೆಗಳ ಮಾಹಿತಿಯ ಸಮಗ್ರ ನಿರ್ವಹಣೆಗಾಗಿ ಸಾರಿಗೆ ಇಲಾಖೆಯ ಸಾರಥಿ ವ್ಯವಸ್ಥೆಯನ್ನು ಬೆಂಗಳೂರು ಸಂಚಾರ ಪೊಲೀಸರ ಇ-ಚಲನ್ ವ್ಯವಸ್ಥೆಯೊಂದಿಗೆ ನೇರವಾಗಿ ಸಂಯೋಜಿಸುವ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು. ಈ ವ್ಯವಸ್ಥೆಯಿಂದ ಸಂಚಾರಿ ಪೊಲೀಸರಿಗೆ ಸ್ಥಳದಲ್ಲಿಯೇ ಚಾಲನಾ ಪರವಾನಗಿಯ ಸಿಂಧುತ್ವ ಪರಿಶೀಲಿಸಲು, ಚಾಲಕರ ಹಿಂದಿನ ಉಲ್ಲಂಘನೆಗಳ ವಿವರ ಪಡೆಯಲು ಹಾಗೂ ಹೊಸದಾಗಿ ದಾಖಲಿಸುವ ಪ್ರಕರಣಗಳನ್ನು ಚಾಲಕರ ಡಿಜಿಟಲ್ ದಾಖಲೆಯೊಂದಿಗೆ ನೇರವಾಗಿ ಜೋಡಿಸಲು ಸಾಧ್ಯವಾಗಲಿದೆ. ಇದರಿಂದ ಕಾಗದ ಆಧಾರಿತ ಪ್ರಕ್ರಿಯೆ ಕಡಿಮೆಯಾಗಿ, ಸಂಚಾರಿ ನಿಯಮಗಳ ಜಾರಿ ಮತ್ತಷ್ಟು ಪರಿಣಾಮಕಾರಿಯಾಗುವ ನಿರೀಕ್ಷೆಯಿದೆ.

ಸಂಚಾರಿ ನಿಯಮ ಉಲ್ಲಂಘನೆಗಳಿಗೆ ದಂಡ ಹೆಚ್ಚಳ

ಬೆಂಗಳೂರಿನಲ್ಲಿ ಸಂಚಾರ ದಟ್ಟಣೆ ಹಾಗೂ ಸಾರ್ವಜನಿಕ ಸುರಕ್ಷತೆಗೆ ತೊಂದರೆ ಉಂಟುಮಾಡುವ ಸಂಚಾರಿ ಉಲ್ಲಂಘನೆಗಳಿಗೆ ವಿಧಿಸಲಾಗುತ್ತಿರುವ ದಂಡದ ಮೊತ್ತವನ್ನು ಹೆಚ್ಚಿಸುವ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು. ಪಾದಚಾರಿ ಮಾರ್ಗದಲ್ಲಿ ವಾಹನ ನಿಲುಗಡೆ, ಏಕಮುಖ ರಸ್ತೆಯಲ್ಲಿ ವಿರುದ್ಧ ದಿಕ್ಕಿನಲ್ಲಿ ವಾಹನ ಚಲಾಯಿಸುವುದು, ಪಾದಚಾರಿ ಮಾರ್ಗದಲ್ಲಿ ವಾಹನ ಚಾಲನೆ, ಅನಧಿಕೃತ ವಾಹನ ನಿಲುಗಡೆ, ನಿಲುಗಡೆ ನಿಷೇಧಿತ ಸ್ಥಳದಲ್ಲಿ ವಾಹನ ನಿಲ್ಲಿಸುವುದು, ಸಂಚಾರ ಸಂಕೇತ ಉಲ್ಲಂಘಿಸುವುದು ಹಾಗೂ ಸಾರ್ವಜನಿಕ ಸಂಚಾರದ ಮುಕ್ತ ಹರಿವಿಗೆ ಅಡ್ಡಿಪಡಿಸುವಂತಹ ಉಲ್ಲಂಘನೆ ಹಾಗೂ ಮರುಉಲ್ಲಂಘನೆಗೆ ದಂಡ ಹೆಚ್ಚಿಸುವ ಪ್ರಸ್ತಾವನೆ ಸಭೆಯಲ್ಲಿ ಚರ್ಚಿಸಲಾಯಿತು. ಅಪಾಯಕಾರಿ ಚಾಲನೆಗೆ ಸಂಬಂಧಿಸಿದಂತೆ ದ್ವಿಚಕ್ರ ದಂಡ ಹೆಚ್ಚಿಸುವ ಪ್ರಸ್ತಾವನೆಯೂ ಸಭೆಯ ಚರ್ಚೆ ಆಯ್ತು.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರಸನ್ನ ಗಾಂವ್ಕರ್​

ಹುಟ್ಟೂರು ಯಲ್ಲಾಪುರ, ಬೆಳೆದೂರು ದಾಂಡೇಲಿಯ ದಟ್ಟ ಕಾಡುಗಳ ನಡುವೆ. ರವಿ ಬೆಳಗೆರೆ ಎಂಬ ಅಕ್ಷರ ರಾಕ್ಷಸನ ಕಟ್ಟಾಭಿಮಾನದಿಂದ ಹಾಳಾಗಿ, ಸೈನ್ಸ್ ನಲ್ಲಿ ಡಿಗ್ರಿ ಪಡೆದು ಜರ್ನಲಿಸಂಗೆ ಹಿಂಬದಿ ಕಿಟಕಿಯಿಂದ ನುಸುಳಿದ್ದು 2010 ರ ಅಕ್ಟೋಬರ್ ನಲ್ಲಿ. ಉಡುಪಿಯಲ್ಲಿ ಮೊದಲ ಪತ್ರಿಕೋದ್ಯಮ ಕರ್ತವ್ಯ ಪ್ರಾರಂಭಿಸಿದ್ದು 2010 ರಲ್ಲಿಯೇ. ಜನಶ್ರೀ ನ್ಯೂಸ್ ಮೊದಲು ಅನ್ನ ನೀಡಿದ ಸಂಸ್ಥೆ. ಉಡುಪಿ ಜಿಲ್ಲಾ ವರದಿಗಾರನಾಗಿ ಮೂರು ವರ್ಷ ಕೆಲಸ ಮಾಡಿ 2013 ರ ಅಂತ್ಯಕ್ಕೆ ಸಮಯ ನ್ಯೂಸ್ ಮೂಲಕ ಬೆಂಗಳೂರಿಗೆ ಎಂಟ್ರಿ. ಬಿಗ್ ೩, ಬೆಂಗಳೂರ್ ಲೈವ್, ಸಮಯ ಸಕಾಲ ಕಾರ್ಯಕ್ರಮದಲ್ಲಿ ವರದಿಗಾರಿಕೆ ಮಾಡಿದ ಖುಷಿ. 2014 ರ ಡಿಸೆಂಬರ್ ನಿಂದ ಟಿವಿ9 ನಲ್ಲಿ ಕೆಲಸ ಪ್ರಾರಂಭ. ಟಿವಿ9 ನಲ್ಲಿ ಮೊದಲು ಮೆಟ್ರೋ ರಿಪೋರ್ಟಿಂಗ್ ಮೂಲಕ ಬೆಂಗಳೂರು ಸುತ್ತುವ ಅರಿಯುವ ರಾಜಧಾನಿಯ ನಾಡಿಮಿಡಿತ ಹುಡುಕುವ ಅವಕಾಶ. ಮೆಟ್ರೋ ಬ್ಯೂರೋ ದಲ್ಲಿ ಶೈಕ್ಷಣಿಕ ಹಾಗೂ ಬಿಬಿಎಂಪಿ ವರದಿಗಾರಿಕೆ. ಚಪ್ಪಲಿಯಿಂದ ಹಿಡಿದು ಚಾದರ್ ತನಕ ಸ್ಟೋರಿ ಮಾಡಿದ ಅನುಭವ. ಮೆಟ್ರೋ ಟೀಂ ನಿಂದ ರಾಜಕೀಯ ವರದಿಗಾರಿಕೆಗೆ ಶಿಫ್ಟ್ ಆದ ತಕ್ಷಣ- ಮುಂದುವರಿದಿದೆ ನಿರಂತರ ಪಯಣ. ಕಥೆ, ಕಾದಂಬರಿ, ಕವನ, ಸಿನಿಮಾ, ಸುತ್ತಾಟ, ಆಗಾಗ ಕಿತ್ತಾಟ, ಸ್ನೇಹಿತರೊಂದಿಗೆ ಒಡನಾಟ ಇವೆಲ್ಲ ಮಾಮೂಲಿ ದಿನಚರಿ. ಇವತ್ತಿಗೂ ಬರವಣಿಗೆಯೊಂದೇ ಖುಷಿ ಕೊಡುವ ಖರ್ಜೂರ. ಸ್ಟಾಕ್ ಮಾರ್ಕೆಟ್ ನಲ್ಲಿ 2019 ರಿಂದ ಆ್ಯಕ್ಟಿವ್.

Read More
Loading...
Unable to load recommendations.
Follow Us