ಬೆಂಗಳೂರು: ಕೊವಿಡ್ ಸೋಂಕಿತರಲ್ಲಿ ಕಾಣಿಸಿಕೊಳ್ಳಬಹುದಾದ ಬ್ಲ್ಯಾಕ್ ಫಂಗಸ್ ಚಿಕಿತ್ಸೆಗೆ ಕರ್ನಾಟಕ ಸರ್ಕಾರ ಅಧಿಕೃತ ಮಾರ್ಗಸೂಚಿ ಪ್ರಕಟಿಸಿದೆ. ಬ್ಲ್ಯಾಕ್ ಫಂಗಸ್ ಕಂಡು ಬಂದವರಿಗೆ 14-21 ದಿನ ಚಿಕಿತ್ಸೆ ನೀಡಬೇಕು ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದ್ದು, ನಿಗದಿತ ಆಸ್ಪತ್ರೆಗಳಲ್ಲಿ ಮಾತ್ರ ಚಿಕಿತ್ಸೆ ನೀಡಲು ಸೂಚಿಸಲಾಗಿದೆ. ರಾಜ್ಯದ ಪ್ರಮುಖ 6 ಆಸ್ಪತ್ರೆಗಳಲ್ಲಿ ಬ್ಲ್ಯಾಕ್ ಫಂಗಸ್ ಚಿಕಿತ್ಸೆ ನೀಡಲು ಸರ್ಕಾರ ನಿರ್ಧರಿಸಿದೆ.
“ಬ್ಲಾಕ್ ಫಂಗಸ್ ರೋಗ ಸೂಚಿಸಬಹುದಾದ ರೋಗ”. ಎಲ್ಲಾ ಆಸ್ಪತ್ರೆಗಳು ರೋಗಿಗಳ ಮಾಹಿತಿ ಸಲ್ಲಿಸಬೇಕು. ಜಿಲ್ಲಾ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸಲ್ಲಿಸಬೇಕು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸುತ್ತೋಲೆ ಹೊರಡಿಸಿದೆ. ಚಿಕಿತ್ಸಾ ಸಾಮರ್ಥ್ಯ ಹೊಂದಿದ ಯಾವುದೇ ಆಸ್ಪತ್ರೆಯೂ ಬ್ಲಾಕ್ ಫಂಗಸ್ ರೋಗಕ್ಕೆ ಚಿಕಿತ್ಸೆ ನಿರಾಕರಿಸುವಂತಿಲ್ಲ ಎಂದು ರಾಜ್ಯ ಆರೋಗ್ಯ ಇಲಾಖೆ ಆದೇಶದಲ್ಲಿ ಸ್ಪಷ್ಟ ಉಲ್ಲೇಖ ಮಾಡಲಾಗಿದೆ.
ಬೆಂಗಳೂರು ಮೆಡಿಕಲ್ ಕಾಲೇಜು ಆಸ್ಪತ್ರೆ (BMCRI), ಮೈಸೂರು ಮೆಡಿಕಲ್ ಕಾಲೇಜು, ಹುಬ್ಬಳ್ಳಿಯ ಕಿಮ್ಸ್, ಗುಲ್ಬರ್ಗಾ ಮೆಡಿಕಲ್ ಕಾಲೇಜು ಆಸ್ಪತ್ರೆ, ಶಿವಮೊಗ್ಗ ಮೆಡಿಕಲ್ ಕಾಲೇಜು, ಮಂಗಳೂರಿನ ವೆನ್ಲಾಕ್ ಆಸ್ಪತ್ರೆ, ಕಲಬುರಗಿ ಮೆಡಿಕಲ್ ಕಾಲೇಜು, ಹುಬ್ಬಳ್ಳಿಯ ಕಿಮ್ಸ್ನಲ್ಲಿ ಮಾತ್ರ ಚಿಕಿತ್ಸೆ ನೀಡುವುದಾಗಿ ತಿಳಿಸಿದೆ. ಡಾ. ಎಚ್.ಎಸ್. ಸತೀಶ್ ಅಧ್ಯಕ್ಷತೆಯಲ್ಲಿ ಚಿಕಿತ್ಸೆ ವಿಧಾನ ನಿಗದಿಪಡಿಸಲಾಗಿದೆ.
ಕೊವಿಡ್ ಸೋಂಕಿತರಿಗೆ ಬ್ಲ್ಯಾಕ್ ಫಂಗಸ್ ಬಂದ್ರೆ 3 ಆಸ್ಪತ್ರೆಗಳನ್ನು ಚಿಕಿತ್ಸೆಗೆಂದು ನಿಗದಿಪಡಿಸಲಾಗಿದ್ದು, ವಿಕ್ಟೋರಿಯಾ ಆಸ್ಪತ್ರೆ ಮತ್ತು ಮಿಂಟೋ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತದೆ. ವಿಕ್ಟೋರಿಯಾ ಆಸ್ಪತ್ರೆ ಒಳಗೆ ನೆಫ್ರೋ ಯುರಾಲಜಿ ಕೇಂದ್ರ, ಟ್ರಾಮಾ ಕೇರ್, PMSSY ಆಸ್ಪತ್ರೆಯಲ್ಲಿ ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತದೆ. ಕೊವಿಡ್ ಪಾಸಿಟಿವ್ ಇದ್ದು ಬ್ಲ್ಯಾಕ್ ಫಂಗಸ್ ಬಂದ್ರೆ ಅಲ್ಲೇ ಚಿಕಿತ್ಸೆ ನೀಡಲಾಗುತ್ತದೆ. ಕೊವಿಡ್ ಗುಣಮುಖರಾದವರಿಗೆ ಬ್ಲ್ಯಾಕ್ ಫಂಗಸ್ ಬಂದರೆ ಬೌರಿಂಗ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತದೆ.
ನಿನ್ನೆ (ಮೇ 17) ಬ್ಲ್ಯಾಕ್ ಫಂಗಸ್ ಸೋಂಕಿನ ಕುರಿತು ಮಾತನಾಡಿದ್ದ ಆರೋಗ್ಯ ಸಚಿವ ಸುಧಾಕರ್, ಬ್ಲ್ಯಾಕ್ ಫಂಗಸ್ ಸಂಬಂಧ ತಜ್ಞರ ಜೊತೆ ಸಭೆ ನಡೆದಿದೆ. ಫಂಗಸ್ಗೆ ಚಿಕಿತ್ಸೆ, ಮುಂಜಾಗ್ರತಾ ಕ್ರಮದ ಬಗ್ಗೆ ಚರ್ಚೆ ಮಾಡಲಾಗಿದೆ. ಸಂಜೆ 5 ಗಂಟೆಗೆ ರಾಜ್ಯ ಸರ್ಕಾರಕ್ಕೆ ಟಾಸ್ಕ್ ಫೋರ್ಸ್ ವರದಿ ನೀಡುತ್ತದೆ. ಕೊರೊನಾದಷ್ಟೇ ಬ್ಲ್ಯಾಕ್ ಫಂಗಸ್ ಹರಡುತ್ತಿಲ್ಲ. ಅನ್ ಕಂಟ್ರೋಲ್ಡ್ ಡಯಾಬಿಟಿಸ್ ಇರುವವರಿಗೆ ಕೊರೊನಾ ಸೋಂಕು ಬಂದಾಗ ಸ್ಟಿರಾಯ್ಡ್ ಬಳಸಿದರೆ ಅಂತಹವರಿಗೆ ಸ್ವಾಭಾವಿಕವಾಗಿ ಶುಗರ್ ಹೆಚ್ಚಾಗುತ್ತದೆ. ಇಂತಹವರು ಆರೋಗ್ಯದ ಮೇಲೆ ನಿಗಾ ಇಡಬೇಕು ಎಂದು ಹೇಳಿದ್ದರು.
ಕಾನೂನು ಕ್ರಮ
ಕ್ಯಾನ್ಸರ್ ರೋಗಿಗಳು, ಹೆಚ್ಐವಿ ಇರುವವರು, ಅಂಗಾಂಗ ಕಸಿ ಮಾಡಿಸಿಕೊಂಡವರಿಗೆ ಈ ಫಂಗಸ್ ತಗುಲುವ ಸಾಧ್ಯತೆಯಿದೆ. ಹೀಗಾಗಿ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕಾಗಿದೆ. ಮಧುಮೇಹಿಗಳು, ಅಂಗಾಂಗ ಕಸಿ ಮಾಡಿಸಿಕೊಂಡವರು, ಕ್ಯಾನ್ಸರ್ಗೆ ಚಿಕಿತ್ಸೆ ಪಡೆಯುತ್ತಿರುವವರು, ಹೆಚ್ಐವಿ ಸೇರಿದಂತೆ ಇತರೆ ಕಾಯಿಲೆ ಇದ್ದವರು ಎಚ್ಚರದಿಂದ ಇರಬೇಕು. ಕೊರೊನಾದಿಂದ ಗುಣಮುಖರಾದ ಬಳಿಕ ಕಿವಿ, ಮೂಗು, ಕಣ್ಣು ತಪಾಸಣೆ ಮಾಡಿಸಿಕೊಳ್ಳಬೇಕು. ತಪಾಸಣೆ ಮಾಡಿಸಿಕೊಂಡು ಡಿಸ್ಚಾರ್ಜ್ ಆಗಬೇಕು. ಇದನ್ನು ಯಾರೂ ಮುಚ್ಚಿಡಬಾರದು. ಮುಚ್ಚಿಟ್ಟರೆ ಕಾನೂನು ಕ್ರಮ ಕೈಗೊಳ್ಳಲಾಗುವುದು. ಈ ಬಗ್ಗೆ ಇಂದು ನೋಟಿಸ್ ಸಹ ಹೊರಡಿಸುತ್ತೇವೆ ಎಂದು ತಿಳಿಸಿದ್ದರು.
ಫಂಗಸ್ ಅನ್ನೋದು ಗಾಳಿಯಲ್ಲಿಯೂ ಇರುತ್ತದೆ. ರೋಗ ನಿರೋಧಕ ಶಕ್ತಿ ಕಡಿಮೆ ಇದ್ದರೆ ಅಟ್ಯಾಕ್ ಮಾಡುತ್ತದೆ. ಇದು ಮೊದಲಿಗೆ ಕಣ್ಣಿಗೆ ಅಟ್ಯಾಕ್ ಆಗುತ್ತದೆ. ಕಣ್ಣಿನ ನೋವು, ಊತ ಬರುವುದು ಆಗುತ್ತದೆ. ಕಣ್ಣು, ಮುಗಿನ ಬಳಿಕ ಮೆದುಳಿಗೆ ತಾಗುತ್ತದೆ. ಹೀಗಾಗಿ ಆರಂಭದಲ್ಲೇ ಎಚ್ಚರಿಕೆ ವಹಿಸಬೇಕಾಗಿದೆ. ಈ ಬಗ್ಗೆ ಪತ್ತೆ ಹಚ್ಚುವುದಕ್ಕೆ ಸಮಿತಿಯನ್ನು ರಚಿಸಿದ್ದೇವೆ. ವೆಂಟಿಲೇಟರ್ಗಳು ಸ್ವಚ್ಛವಾಗಿಲ್ಲದೆ ಹರಡುತ್ತಿದೆಯಾ. ಎಲ್ಲದರ ಬಗ್ಗೆ ಪರಿಶೀಲನೆ ಮಾಡಿ ವರದಿ ನೀಡಲು ಸೂಚನೆ ನೀಡಲಾಗಿದೆ ಎಂದು ಅವರು ವಿವರಿಸಿದ್ದರು
ಮೈಸೂರು ಮೆಡಿಕಲ್ ಕಾಲೇಜು, ಶಿವಮೊಗ್ಗ, ಕಲಬುರಗಿಯ ಜಿಮ್ಸ್, ಹುಬ್ಬಳ್ಳಿಯ ಕಿಮ್ಸ್, ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ ಬ್ಲ್ಯಾಕ್ ಫಂಗಸ್ಗೆ ಚಿಕಿತ್ಸೆ ನೀಡುವುದಕ್ಕೆ ವ್ಯವಸ್ಥೆ ಮಾಡಲಾಗುತ್ತದೆ. ಆಯಾ ಸ್ಥಳದಲ್ಲೇ ಬ್ಲ್ಯಾಕ್ ಫಂಗಸ್ಗೆ ಚಿಕಿತ್ಸೆ ನೀಡಲಾಗುವುದು. ನಾವು ಹೋಮ್ ಐಸೋಲೇಶನ್ನಲ್ಲಿರುವ ಸೋಂಕಿತರಿಗೆ ಸ್ಟೀರಾಯ್ಡ್ ನೀಡುತ್ತಿಲ್ಲ. ಒಂದೊಮ್ಮೆ ನೀಡುತ್ತಿದ್ದರೆ ನಾನು ಬಿಬಿಎಂಪಿ ಆಯುಕ್ತರಿಗೆ ಸೂಚನೆ ನೀಡುತ್ತೇನೆ. ಹೋಮ್ ಐಸೋಲೇಶನ್ನಲ್ಲಿ ಇರುವವರಿಗೆ ಸ್ಟೀರಾಯ್ಡ್ ನೀಡುವಂತಿಲ್ಲ ಎಂದು ಸಚಿವರು ಅಭಿಪ್ರಾಯಪಟ್ಟಿದ್ದರು.
ಇದನ್ನೂ ಓದಿ: ಕೊಪ್ಪಳ ಗವಿಮಠದಿಂದ ಸಮಾಜಮುಖಿ ಕಾರ್ಯ; 200 ಬೆಡ್ಗಳ ಕೊವಿಡ್ ಕೇರ್ ಸೆಂಟರ್ ಆರಂಭ
‘ಗ್ರಾಮೀಣ ಭಾರತದಲ್ಲಿ ಕೊವಿಡ್ನಿಂದಾಗಿ ಇಡೀ ಕುಟುಂಬಗಳೇ ಇಲ್ಲದಾಗಬಹುದು’
(Karnataka govt released Black Fungus treatment Guidelines here is the treatment hospital list)
Published On - 9:02 pm, Tue, 18 May 21