ಬೆಂಗಳೂರು: ಕೊವಿಡ್‌ನಿಂದ ಬಲಿಯಾದವರ ಮರಣ ವರದಿ ಪತ್ರ ಮತ್ತು ಶವ ಸಂಸ್ಕಾರದ ವರದಿಗಳನ್ನು ವಾರಸುದಾರರು ಕಡ್ಡಾಯವಾಗಿ ಪಡೆಯಬೇಕು ಎಂದು ರಾಜ್ಯ ಸರ್ಕಾರ ಆದೇಶಿಸಿದೆ. ಕೊವಿಡ್ ಸೋಂಕಿನಿಂದ ರೋಗಿ ಆಸ್ಪತ್ರೆಯಲ್ಲಿ ಮೃತಪಟ್ಟಲ್ಲಿ ಆಸ್ಪತ್ರೆ ಮುಖ್ಯಸ್ಥರು ಈ ವರದಿಗಳನ್ನು ಸೋಂಕಿತರ ಮನೆಯವರಿಗೆ ನೀಡಬೇಕು. ಮನೆಯಲ್ಲಿ ಮೃತಪಟ್ಟಲ್ಲಿ ಖಾಸಗಿ ವೈದ್ಯರಿಂದ ಮರಣದ ವರದಿ ಪಡೆಯಬೇಕು. ಗ್ರಾಮ ಲೆಕ್ಕಾಧಿಕಾರಿ ಶವಸಂಸ್ಕಾರದ ವರದಿಯನ್ನು ದೃಢೀಕರಿಸಬೇಕು ಎಂದು ಸರ್ಕಾರ ತಿಳಿಸಿದೆ.
ಮೃತರ ವಾರಸುದಾರರು ನೋಂದಣಾಧಿಕಾರಿ ಕಚೇರಿಯಲ್ಲಿ ಡೆತ್‌ಸರ್ಟಿಫಿಕೆಟ್ ಪಡೆಯಲು ಮರಣದ ವರದಿ ಮತ್ತು ಶವಸಂಸ್ಕಾರದ ವರದಿಗಳನ್ನು ಕಡ್ಡಾಯವಾಗಿ ಸಲ್ಲಿಸಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಬ್ಲ್ಯಾಕ್ ಫಂಗಸ್ ಚಿಕಿತ್ಸೆಗೆ ಮಾರ್ಗಸೂಚಿ ನಿಗದಿ
ಕೊವಿಡ್ ಸೋಂಕಿತರಲ್ಲಿ ಕಾಣಿಸಿಕೊಳ್ಳಬಹುದಾದ ಬ್ಲ್ಯಾಕ್ ಫಂಗಸ್ ಚಿಕಿತ್ಸೆಗೆ ಕರ್ನಾಟಕ ಸರ್ಕಾರ ಅಧಿಕೃತ ಮಾರ್ಗಸೂಚಿ ಪ್ರಕಟಿಸಿದೆ. ಬ್ಲ್ಯಾಕ್ ಫಂಗಸ್ ಕಂಡು ಬಂದವರಿಗೆ 14-21 ದಿನ ಚಿಕಿತ್ಸೆ ನೀಡಬೇಕು ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದ್ದು, ನಿಗದಿತ ಆಸ್ಪತ್ರೆಗಳಲ್ಲಿ ಮಾತ್ರ ಚಿಕಿತ್ಸೆ ನೀಡಲು ಸೂಚಿಸಲಾಗಿದೆ. ರಾಜ್ಯದ ಪ್ರಮುಖ 6 ಆಸ್ಪತ್ರೆಗಳಲ್ಲಿ ಬ್ಲ್ಯಾಕ್ ಫಂಗಸ್ ಚಿಕಿತ್ಸೆ ನೀಡಲು ಸರ್ಕಾರ ನಿರ್ಧರಿಸಿದೆ.
“ಬ್ಲಾಕ್ ಫಂಗಸ್ ರೋಗ ಸೂಚಿಸಬಹುದಾದ ರೋಗ”. ಎಲ್ಲಾ ಆಸ್ಪತ್ರೆಗಳು ರೋಗಿಗಳ ಮಾಹಿತಿ ಸಲ್ಲಿಸಬೇಕು. ಜಿಲ್ಲಾ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸಲ್ಲಿಸಬೇಕು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸುತ್ತೋಲೆ ಹೊರಡಿಸಿದೆ. ಚಿಕಿತ್ಸಾ ಸಾಮರ್ಥ್ಯ ಹೊಂದಿದ ಯಾವುದೇ ಆಸ್ಪತ್ರೆಯೂ ಬ್ಲಾಕ್ ಫಂಗಸ್ ರೋಗಕ್ಕೆ ಚಿಕಿತ್ಸೆ ನಿರಾಕರಿಸುವಂತಿಲ್ಲ ಎಂದು ರಾಜ್ಯ ಆರೋಗ್ಯ ಇಲಾಖೆ ಆದೇಶದಲ್ಲಿ ಸ್ಪಷ್ಟ ಉಲ್ಲೇಖ ಮಾಡಲಾಗಿದೆ.
ಬೆಂಗಳೂರು ಮೆಡಿಕಲ್ ಕಾಲೇಜು ಆಸ್ಪತ್ರೆ (BMCRI), ಮೈಸೂರು ಮೆಡಿಕಲ್ ಕಾಲೇಜು, ಹುಬ್ಬಳ್ಳಿಯ ಕಿಮ್ಸ್, ಗುಲ್ಬರ್ಗಾ ಮೆಡಿಕಲ್ ಕಾಲೇಜು ಆಸ್ಪತ್ರೆ, ಶಿವಮೊಗ್ಗ ಮೆಡಿಕಲ್ ಕಾಲೇಜು, ಮಂಗಳೂರಿನ ವೆನ್ಲಾಕ್ ಆಸ್ಪತ್ರೆ, ಕಲಬುರಗಿ ಮೆಡಿಕಲ್ ಕಾಲೇಜು, ಹುಬ್ಬಳ್ಳಿಯ ಕಿಮ್ಸ್ನಲ್ಲಿ ಮಾತ್ರ ಚಿಕಿತ್ಸೆ ನೀಡುವುದಾಗಿ ತಿಳಿಸಿದೆ. ಡಾ. ಎಚ್.ಎಸ್. ಸತೀಶ್ ಅಧ್ಯಕ್ಷತೆಯಲ್ಲಿ ಚಿಕಿತ್ಸೆ ವಿಧಾನ ನಿಗದಿಪಡಿಸಲಾಗಿದೆ.
ಕೊವಿಡ್ ಸೋಂಕಿತರಿಗೆ ಬ್ಲ್ಯಾಕ್ ಫಂಗಸ್ ಬಂದ್ರೆ 3 ಆಸ್ಪತ್ರೆಗಳನ್ನು ಚಿಕಿತ್ಸೆಗೆಂದು ನಿಗದಿಪಡಿಸಲಾಗಿದ್ದು, ವಿಕ್ಟೋರಿಯಾ ಆಸ್ಪತ್ರೆ ಮತ್ತು ಮಿಂಟೋ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತದೆ. ವಿಕ್ಟೋರಿಯಾ ಆಸ್ಪತ್ರೆ ಒಳಗೆ ನೆಫ್ರೋ ಯುರಾಲಜಿ ಕೇಂದ್ರ, ಟ್ರಾಮಾ ಕೇರ್, PMSSY ಆಸ್ಪತ್ರೆಯಲ್ಲಿ ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತದೆ. ಕೊವಿಡ್ ಪಾಸಿಟಿವ್ ಇದ್ದು ಬ್ಲ್ಯಾಕ್ ಫಂಗಸ್ ಬಂದ್ರೆ ಅಲ್ಲೇ ಚಿಕಿತ್ಸೆ ನೀಡಲಾಗುತ್ತದೆ. ಕೊವಿಡ್ ಗುಣಮುಖರಾದವರಿಗೆ ಬ್ಲ್ಯಾಕ್ ಫಂಗಸ್ ಬಂದರೆ ಬೌರಿಂಗ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತದೆ.
ಇದನ್ನೂ ಓದಿ: ಕೊಪ್ಪಳ ಗವಿಮಠದಿಂದ ಸಮಾಜಮುಖಿ ಕಾರ್ಯ; 200 ಬೆಡ್ಗಳ ಕೊವಿಡ್ ಕೇರ್ ಸೆಂಟರ್ ಆರಂಭ
‘ಗ್ರಾಮೀಣ ಭಾರತದಲ್ಲಿ ಕೊವಿಡ್ನಿಂದಾಗಿ ಇಡೀ ಕುಟುಂಬಗಳೇ ಇಲ್ಲದಾಗಬಹುದು’
(death report is mandatory for one who died from Covid in Karnataka)