Diesel Price in Karnataka: ಡೀಸೆಲ್ ಬೆಲೆ ಹೆಚ್ಚಳ: ಕರ್ನಾಟಕದಲ್ಲಿ ಈಗ 1 ಲೀಟರ್ ಡೀಸೆಲ್ ಬೆಲೆ ಎಷ್ಟು? ಇಲ್ಲಿದೆ ಮಾಹಿತಿ
ಕರ್ನಾಟಕದಲ್ಲಿ ಡೀಸೆಲ್ ಬೆಲೆ ಹೆಚ್ಚಳ: ಕರ್ನಾಟಕ ಕಾಂಗ್ರೆಸ್ ಸರ್ಕಾರವು ಡೀಸೆಲ್ ಮೇಲಿನ ಮಾರಾಟ ತೆರಿಗೆಯನ್ನು ಶೇ 2.73 ರಷ್ಟು ಹೆಚ್ಚಳ ಮಾಡಿ ಆದೇಶ ಹೊರಡಿಸಿದ್ದು, ಪರಿಣಾಮವಾಗಿ ಡೀಸೆಲ್ ಬೆಲೆ 2 ರೂ.ನಷ್ಟು ಏರಿಕೆಯಾಗಿದೆ. ಹಾಗಾದರೆ, ಕರ್ನಾಟಕದಲ್ಲಿ ಈಗ ಡೀಸೆಲ್ ಬೆಲೆ ಎಷ್ಟಾಗಿದೆ? ನೆರೆ ರಾಜ್ಯಗಳಲ್ಲಿ ಎಷ್ಟಿದೆ? ಮಾಹಿತಿ ಇಲ್ಲಿದೆ.

ಬೆಂಗಳೂರು, ಏಪ್ರಿಲ್ 2: ಹಾಲು, ಮೊಸರು, ಮುದ್ರಾಂಕ ಶುಲ್ಕ ಹಾಗೂ ಇನ್ನಿತರ ಅಗತ್ಯ ವಸ್ತು ಹಾಗೂ ಸೇವೆಗಳ ದರ ಏರಿಕೆಯಿಂದ ಕಂಗಾಲಾಗಿರುವ ಕರ್ನಾಟಕದ ಜನತೆಗೆ ಕಾಂಗ್ರೆಸ್ ಸರ್ಕಾರ (Congress Govt) ಮಂಗಳವಾರ ಮತ್ತೊಂದು ದರ ಏರಿಕೆಯ ಬರೆ ಎಳೆದಿದೆ. ಡೀಸೆಲ್ ಮೇಲಿನ (Diesel Price) ಮಾರಾಟ ತೆರಿಗೆಯನ್ನು (Sales Tax) ಶೇಕಡಾ 2.73 ರಷ್ಟು ಹೆಚ್ಚಳ ಮಾಡಿ ಶೇಕಡಾ 21.17 ಕ್ಕೆ ಹೆಚ್ಚಿಸಿದೆ. ಇದರ ಪರಿಣಾಮವಾಗಿ ಡೀಸೆಲ್ ದರ ಪ್ರತಿ ಲೀಟರ್‌ಗೆ 2 ರೂ.ನಷ್ಟು ಹೆಚ್ಚಳವಾಗಿದೆ. ಪರಿಷ್ಕೃತ ದರ ತಕ್ಷಣದಿಂದಲೇ ಜಾರಿಯಾಗಲಿದೆ ಎಂದು ರಾಜ್ಯ ಸರ್ಕಾರ ಆದೇಶದಲ್ಲಿ ತಿಳಿಸಿತ್ತು. ಹಾಗಾಗಿ ಏಪ್ರಿಲ್ 1 ರಿಂದಲೇ ಹೊಸ ದರ ಅಸ್ತಿತ್ವಕ್ಕೆ ಬಂದಿದೆ.
ಕರ್ನಾಟಕದಲ್ಲಿ ಡೀಸೆಲ್ ಬೆಲೆ ಎಷ್ಟಾಯ್ತು?
ಈ ದರ ಪರಿಷ್ಕರಣೆಯೊಂದಿಗೆ, ಕರ್ನಾಟಕದಲ್ಲಿ ಇದೀಗ ಡೀಸೆಲ್ ಬೆಲೆ ಈಗ ಪ್ರತಿ ಲೀಟರ್‌ಗೆ 91.02 ರೂ. ಆಗಿದೆ. ಇದಕ್ಕೂ ಮುನ್ನ ಬೆಂಗಳೂರಿನಲ್ಲಿ ಪ್ರತಿ ಲೀಟರ್ ಡೀಸೆಲ್ 88.99 ರೂ.ಗೆ ಮಾರಾಟವಾಗುತ್ತಿತ್ತು. ಆದರೆ, ಈ ಹಿಂದೆ ರಾಜ್ಯದಲ್ಲಿ ಡೀಸೆಲ್ ದರ ಹೆಚ್ಚಿತ್ತು. ತೆರಿಗೆ ಹೆಚ್ಚಿದ್ದ ಕಾರಣ ಡೀಸೆಲ್ ದರ ಕೂಡ ಹೆಚ್ಚಿತ್ತು. ನಂತರ ಹಲವು ಬಾರಿ ತೆರಿಗೆ ಕಡಿಮೆ ಮಾಡಲಾಗಿತ್ತು. ಈ ಹಿಂದಿನ 2 ವರ್ಷಗಳ ತೆರಿಗೆ ಪ್ರಮಾಣಕ್ಕೆ ಹೋಲಿಸಿದರೆ ಈಗ ಡೀಸೆಲ್ ದರ ಕಡಿಮೆಯೇ ಇದೆ ಎಂದು ಸರ್ಕಾರ ಹೇಳಿದೆ.
ಈ ಹಿಂದೆ ಕರ್ನಾಟಕದಲ್ಲಿ ಎಷ್ಟಿತ್ತು ಡೀಸೆಲ್ ಮಾರಾಟ ತೆರಿಗೆ?
2021 ರ ನವೆಂಬರ್ 4 ಕ್ಕಿಂತ ಮೊದಲು ಕರ್ನಾಟಕದಲ್ಲಿ ಡೀಸೆಲ್ ಮೇಲಿನ ಮಾರಾಟ ತೆರಿಗೆ ದರವು ಶೇಕಡಾ 24 ರಷ್ಟಿತ್ತು. ಆಗ ಪ್ರತಿ ಲೀಟರ್ ಡೀಸೆಲ್ ಮಾರಾಟ ಬೆಲೆ 92.03 ರೂ.ನಷ್ಟಿತ್ತು. 2024 ರ ಜೂನ್ 15 ರಂದು, ತೆರಿಗೆ ದರವನ್ನು ಶೇಕಡಾ 18.44 ಕ್ಕೆ ಇಳಿಸಲಾಗಿತ್ತು. ಸಕ್ಷಮ ಪ್ರಾಧಿಕಾರವು ಅನುಮೋದಿಸಿದ ಇತ್ತೀಚಿನ ಹೆಚ್ಚಳವು ಅದನ್ನು ಮತ್ತೆ ಶೇಕಡಾ 21.17 ಕ್ಕೆ ತಂದು ನಿಲ್ಲಿಸಿದೆ ಎಂದು ಎಂದು ಅಧಿಕೃತ ಹೇಳಿಕೆಯಲ್ಲಿ ತಿಳಿಸಲಾಗಿದೆ.
ನೆರೆ ರಾಜ್ಯಗಳಲ್ಲೆಷ್ಟಿದೆ ಡೀಸೆಲ್ ದರ?
ದರ ಏರಿಕೆಯ ಹೊರತಾಗಿಯೂ, ಕರ್ನಾಟಕದ ಡೀಸೆಲ್ ಬೆಲೆ ನೆರೆಯ ರಾಜ್ಯಗಳಿಗಿಂತ ಕಡಿಮೆಯಾಗಿದೆ ಎಂದು ಸರ್ಕಾರ ಹೇಳಿದೆ. 2025 ರ ಮಾರ್ಚ್ 31 ರ ವೇಳೆಗೆ ಡೀಸೆಲ್ ಬೆಲೆ ಹೊಸೂರು (ತಮಿಳುನಾಡು) ನಲ್ಲಿ 94.42 ರೂ., ಕಾಸರಗೋಡಿನಲ್ಲಿ (ಕೇರಳ) ನಲ್ಲಿ 95.66 ರೂ., ಅನಂತಪುರ (ಆಂಧ್ರಪ್ರದೇಶ) ದಲ್ಲಿ 97.35 ರೂ., ಹೈದರಾಬಾದ್ (ತೆಲಂಗಾಣ) ನಲ್ಲಿ 95.70 ರೂ., ಮತ್ತು ಕಾಗಲ್ (ಮಹಾರಾಷ್ಟ್ರ) ನಲ್ಲಿ 91.07 ರೂ. ಇತ್ತು. ದರ ಏರಿಕೆಗೆ ಮುನ್ನ ಬೆಂಗಳೂರಿನಲ್ಲಿ ಡೀಸೆಲ್ ಬೆಲೆ ಲೀಟರ್‌ಗೆ 89.02 ರೂ. ಆಗಿತ್ತು.
ಇದನ್ನೂ ಓದಿ: ಕರ್ನಾಟಕ ಸರ್ಕಾರದಿಂದ ಜನರಿಗೆ ಮತ್ತೊಂದು ಬರೆ: ಡೀಸೆಲ್ ದರ ಏರಿಕೆ
ಏತನ್ಮಧ್ಯೆ, ಡೀಸೆಲ್ ದರ ಏರಿಕೆಗೆ ಪ್ರತಿಪಕ್ಷಗಳಿಂದ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಕನ್ನಡಿಗರಿಗೆ ಈ ವರ್ಷ ಮಾರಿಹಬ್ಬ ಕಾದಿದೆ ಎಂದು ಬಜೆಟ್ ಅಧಿವೇಶನದಲ್ಲಿ ನಾನು ನೀಡಿದ್ದ ಎಚ್ಚರಿಕೆ ಈಗ ಅಕ್ಷರಶಃ ನಿಜವಾಗುತ್ತಿದೆ. ಬಜೆಟ್ನಲ್ಲಿ ಯಾವುದೇ ತೆರಿಗೆ ಹೆಚ್ಚಳ, ಬೆಲೆ ಏರಿಕೆಯನ್ನು ಘೋಷಣೆ ಮಾಡದೆ ಕನ್ನಡಿಗರ ಕಿವಿಗೆ ಹೂವಿಟ್ಟ ಸಿಎಂ ಸಿದ್ದರಾಮಯ್ಯ ಅವರು ಈಗ ದಿನಕ್ಕೊಂದು ವಸ್ತುಗಳ ಮೇಲೆ ತೆರಿಗೆ ಹಾಕಿ, ಬೆಲೆ ಹೆಚ್ಚಿಸಿ, ಬಡವರು, ಮಾಧ್ಯಮ ವರ್ಗದ ರಕ್ತ ಹೀರಲು ಹೊರಟಿದ್ದಾರೆ ಎಂದು ಪ್ರತಿಪಕ್ಷ ನಾಯಕ ಆರ್ ಅಶೋಕ್ ಕಿಡಿಕಾರಿದ್ದಾರೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:47 am, Wed, 2 April 25