ಸಿಎಂ ಚಿನ್ನದ ಪದಕಕ್ಕೆ ಆಯ್ಕೆಯಾದ ಇನ್ಸ್ಪೆಕ್ಟರ್ಗೆ ಲೋಕಾ ಶಾಕ್: ಬಂಧನದ ಭೀತಿಯಲ್ಲಿ ಪಿಐ ಎಸ್ಕೇಪ್
ಬೆಂಗಳೂರಿನ ಅನ್ನಪೂರ್ಣೇಶ್ವರಿ ನಗರ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಲೋಕಾಯುಕ್ತ ದಾಳಿಯಿಂದ ಪರಾರಿಯಾಗಿದ್ದಾರೆ. 4 ಕೋಟಿ ರೂ. ಮೌಲ್ಯದ ಮನೆ ಮಾರಾಟದಲ್ಲಿ ಭ್ರಷ್ಟಾಚಾರ ಆರೋಪದಡಿ ಲೋಕಾಯುಕ್ತ ದಾಳಿ ನಡೆಸಿದಾಗ ಇನ್ಸ್ಪೆಕ್ಟರ್ ಪರಾರಿಯಾಗಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಕಾನ್ಸ್ಟೇಬಲ್‌ಗಳು ಸೇರಿದಂತೆ ಐವರನ್ನು ಬಂಧಿಸಲಾಗಿದೆ.

ಬೆಂಗಳೂರು, ಏಪ್ರಿಲ್ 02: ಸಿಎಂ ಚಿನ್ನದ ಪದಕಕ್ಕೆ ಆಯ್ಕೆಯಾದ ಇನ್ಸ್ಪೆಕ್ಟರ್ಗೆ ಲೋಕಾಯುಕ್ತ (Lokayukta) ಶಾಕ್ ನೀಡಿದ್ದು ಬಂಧನ ಭೀತಿ ಹಿನ್ನೆಲೆ ಪರಾರಿಯಾಗಿರುವಂತಹ ಘಟನೆ ನಡೆದಿದೆ. ಸುಳ್ಳು ಕೇಸ್ ದಾಖಲಿಸಿ 4 ಕೋಟಿ ರೂ. ಮೌಲ್ಯದ ಮನೆ ಮಾರಾಟಕ್ಕೆ ನಾಗರಬಾವಿಯ (Naagarabhaavi) ಖಾಸಗಿ ಹೋಟೆಲ್ನಲ್ಲಿ ಡೀಲ್ ನಡೆದಿತ್ತು. ಈ ವೇಳೆ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದಾರೆ. ವಿಚಾರ ತಿಳಿದು ಮನೆಯಲ್ಲೇ ಪೊಲೀಸ್ ಜೀಪ್ ಬಿಟ್ಟು ಅನ್ನಪೂರ್ಣೇಶ್ವರಿ ನಗರ ಠಾಣೆ ಪೊಲೀಸ್ ಇನ್ಸ್ಪೆಕ್ಟರ್ ಕುಮಾರ್ ಪರಾರಿ ಆಗಿದ್ದಾರೆ. ನಿನ್ನೆ ಸಂಜೆ 5 ಗಂಟೆಯಿಂದ ಮುಂಜಾನೆ 3 ಗಂಟೆವರೆಗೆ ಕಾರ್ಯಾಚರಣೆ ಮಾಡಲಾಗಿದೆ.
4 ಕೋಟಿ ರೂ ಮೌಲ್ಯದ ಮನೆ ಮಾರಾಟಕ್ಕೆ ಒತ್ತಡ ಆರೋಪ
ಸಿವಿಲ್ ಕಂಟ್ರ್ಯಾಕ್ಟರ್ ಚನ್ನೇಗೌಡ ಪತ್ನಿ ಅನುಷಾ ಎಂಬುವವರಿಗೆ ಅನ್ನಪೂರ್ಣೇಶ್ವರಿ ನಗರ ಠಾಣೆ ಪಿಐ ಕುಮಾರ್ನಿಂದ ಕಿರುಕುಳ ಆರೋಪ ಕೇಳಿಬಂದಿದೆ. ಸುಳ್ಳು ಕೇಸ್ ದಾಖಲಿಸಿ ಚನ್ನೇಗೌಡಗೆ ಸೇರಿದ 4 ಕೋಟಿ ರೂ ಮೌಲ್ಯದ ಮನೆ ಮಾರಾಟಕ್ಕೆ ಒತ್ತಡ ಹಾಕಿದ್ದು, ಕಡಿಮೆ ಮೊತ್ತಕ್ಕೆ ನೋಂದಣಿ ಮಾಡಿಕೊಡುವಂತೆ ಪಿಐ ಕಿರುಕುಳ ಆರೋಪ ಮಾಡಲಾಗಿದೆ.
ಇದನ್ನೂ ಓದಿ: ಮಂಗಳೂರು: ಮುಡಾದಲ್ಲಿ ಭ್ರಷ್ಟಾಚಾರ ಅಬ್ಬರ, ಕಮಿಷನರ್ ವಿರುದ್ಧವೇ ವಾಮಾಚಾರ ಬೆದರಿಕೆ
ಈ ಹಿಂದೆ ದಾಖಲಾಗಿದ್ದ ಪ್ರಕರಣಕ್ಕೆ ಬಿ ರಿಪೋರ್ಟ್ ಹಾಕುತ್ತೇನೆ. ಮನೆ ಬರೆದುಕೊಡಿ ಎಂದು ಇನ್ಸ್ಪೆಕ್ಟರ್ ಕುಮಾರ್ ಕಿರುಕುಳ ನೀಡಿದ್ದು, ಈ ಹಿಂದೆ ಚನ್ನೇಗೌಡ ಮನೆಗೆ ಕೆಲ ಪುಂಡರನ್ನು ನುಗ್ಗಿಸಿ ದಾಂದಲೆ ಮಾಡಿದ್ದಾರೆ. ಈ ವೇಳೆ ಸಿವಿಲ್ ಕಂಟ್ರ್ಯಾಕ್ಟರ್ ಚನ್ನೇಗೌಡ ವಿಡಿಯೋ ಮಾಡಿಕೊಂಡಿದ್ದರು. ಚನ್ನೇಗೌಡನನ್ನು ಠಾಣೆಗೆ ಕರೆಸಿ ಒತ್ತಾಯಪೂರ್ವಕವಾಗಿ ಅಗ್ರಿಮೆಂಟ್ಗೆ ಸಹಿ ಮಾಡಿಸಿ, ಆನ್ಲೈನ್ ಮೂಲಕ 4 ಲಕ್ಷ ರೂಪಾಯಿ ವರ್ಗಾವಣೆ ಮಾಡಿಸಿಕೊಂಡಿದ್ದಾರೆ.
ಸೋದರ ಸಂಬಂಧಿ ಗವಿಗೌಡ, ದಿವ್ಯಾ ಹೆಸರಿಗೆ ಮನೆ ನೋಂದಣಿಗೆ ಒತ್ತಡ ಹೇರಿದ್ದು, ನಿನ್ನೆ ಸಂಜೆ ಅಗ್ರಿಮೆಂಟ್ಗೆ ಸಹಿ ಹಾಕಿಸಲು ನಾಗರಬಾವಿಯ ಖಾಸಗಿ ಹೋಟೆಲ್ಗೆ ಚನ್ನೇಗೌಡ ಪತ್ನಿ ಅನುಷಾರನ್ನು ಕರೆಸಿದ್ದರು. ಈ ವೇಳೆ ಲೋಕಾ ದಾಳಿ ವಿಚಾರ ತಿಳಿಯುತ್ತಿದ್ದಂತೆ ಕುಮಾರ್ ಪರಾರಿ ಆಗಿದ್ದಾರೆ. ಆದರೆ, ಇಬ್ಬರು ಕಾನ್ಸ್ಟೇಬಲ್‌ಗಳು ಸೇರಿದಂತೆ ಐವರು ಆರೋಪಿಗಳನ್ನು ಬಂಧಿಸಲಾಗಿದೆ. ಕಾನ್ಸ್ಟೇಬಲ್ಗಳಾದ ಉಮೇಶ್, ಅನಂತ್ ಸೋಮಶೇಖರ್ ಆರಾಧ್ಯ, ಖರೀದಿದಾರ ಗವಿಗೌಡ, ದಿನೇಶ್ ಸೇರಿ ಐವರು ಆರೋಪಿಗಳನ್ನು ಬಂಧಿಸಲಾಗಿದೆ.
ಲಂಚ ಮುಟ್ಟಲ್ಲವೆಂದು ಲಂಚ ಸ್ವೀಕರಿಸುವಾಗ ಸಿಕ್ಕಿಬಿದ್ದ ಬೆಸ್ಕಾಂ ಸಹಾಯಕ ಇಂಜಿನಿಯರ್
ಕೆಟ್ಟು ಹೋದ ಟಿಸಿ ದುರಸ್ತಿ ಮಾಡಿಕೊಡಲು ರೈತನಿಂತ ಹತ್ತು ಸಾವಿರ ರೂ. ಲಂಚ ಸ್ವೀಕರಿಸುವಾಗ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಸಂತೆಬೆನ್ನೂರು ವಿಭಾಗದ ಬೆಸ್ಕಾಂ ಸಹಾಯಕ ಇಂಜಿನಿಯರ್ ಮೋಹನ್ ಕುಮಾರ ಲೋಕಾಯುಕ್ತ ಬಲೆಗೆ ಬಿದ್ದಿರುವಂತಹ ಘಟನೆ ನಡೆದಿದೆ.
ಇದನ್ನೂ ಓದಿ: ಆದಾಯದಲ್ಲಿ ಮೈಲಿಗಲ್ಲು ಸಾಧಿಸಿದ ನೈಋತ್ಯ ರೈಲ್ವೆ: ಹುಬ್ಬಳ್ಳಿ, ಮೈಸೂರು ವಿಭಾಗದಿಂದ ಭಾರೀ ಕೊಡುಗೆ
ಮಲ್ಲಾಪುರ ಗ್ರಾಮದ ಬಿಎಂ ಮಂಜುನಾಥ ಎಂಬ ರೈತನಿಂದ ತಮ್ಮ ಕಚೇರಿಯಲ್ಲಿ ಲಂಚ ಸ್ವೀಕರಿಸುವಾಗ ಲೋಕಯುಕ್ತ ಬಲೆಗೆ ಬಿದ್ದಿದ್ದಾರೆ. ದಾವಣಗೆರೆ ಲೋಕಾಯುಕ್ತ ಎಸ್ಪಿ ಎಂಎಸ್ ಕೌಲಾಪುರೆ ನೇತ್ರತ್ವದಲ್ಲಿ ಡಿವೈಎಸ್ಪಿ ಕಲಾವತಿ ದಾಳಿ ಮಾಡಿ ವಶಕ್ಕೆ ಪಡೆದುಕೊಂಡಿದ್ದಾರೆ. ಇದೇ ಅಧಿಕಾರಿ ರೈತರಿಂದ ಲಂಚ ಮುಟ್ಟಲ್ಲ ಎಂದು ಸಂತೆಬೆನ್ನೂರು ಪ್ರಸನ್ ಗಣಪತಿ ದೇವಸ್ಥಾನದಲ್ಲಿ ಪ್ರಮಾಣ ಮಾಡಿದ್ದರು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.