ಬೆಂಗಳೂರು: ಬಿಜೆಪಿಯ ಶಾಸಕರು-ಸಚಿವರ ವಿರುದ್ಧ ದಾಖಲಾಗಿದ್ದ 62 ಕ್ರಿಮಿನಲ್ ಮೊಕದ್ದಮೆಯನ್ನು ಹಿಂಪಡೆಯಲು ನಿರ್ಧರಿಸಿದ್ದ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ತಡೆ ನೀಡಿದೆ. ಆದೇಶವನ್ನು ಜಾರಿ ಮಾಡದಂತೆ ಸೂಚಿಸಿದೆ.
ಕೆಲವು ರೈತ ಪ್ರತಿಭಟನೆಗಳು, ಮಹದಾಯಿ ಹೋರಾಟದಲ್ಲಿ ಪಾಲ್ಗೊಂಡಿದ್ದ ಬಿಜೆಪಿ ನಾಯಕರ ವಿರುದ್ಧ ದಾಖಲಾಗಿದ್ದ ಒಟ್ಟು 62 ಕ್ರಿಮಿನಲ್ ಕೇಸ್ಗಳನ್ನು ಕೈಬಿಡುವ ಸಂಬಂಧ ಆಗಸ್ಟ್ 31ರಂದು ಬಿಜೆಪಿ ಸರ್ಕಾರ ಆದೇಶ ಹೊರಡಿಸಿತ್ತು.
ಸರ್ಕಾರದ ಈ ಕ್ರಮವನ್ನು ಪ್ರಶ್ನಿಸಿ ಮಾನವ ಹಕ್ಕು ಸಂಸ್ಥೆಯಾದ ಪೀಪಲ್ ಯೂನಿಯನ್ ಆಫ್ ಸಿವಿಲ್ ಲಿಬರ್ಟೀಸ್ (PUCL)ನ ಕರ್ನಾಟಕ ವಿಭಾಗ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿತ್ತು. ಈ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ವಿಚಾರಣೆಯನ್ನು 2021ರ ಜನವರಿ 29ಕ್ಕೆ ಮುಂದೂಡಿದೆ. ಈ ಮಧ್ಯೆ ಜನವರಿ 22ರೊಳಗೆ ಆಕ್ಷೇಪಣಾ ಅರ್ಜಿಯನ್ನು ಸಲ್ಲಿಸಲು ರಾಜ್ಯ ಸರ್ಕಾರಕ್ಕೆ ಸೂಚಿಸಿದೆ.
ಬಿಜೆಪಿ ಪ್ರಮುಖರ ವಿರುದ್ಧದ 62 ಕ್ರಿಮಿನಲ್ ಕೇಸ್ಗಳನ್ನು ವಾಪಸ್ ಪಡೆಯುವ ಸಂಬಂಧ 2020ರ ಆಗಸ್ಟ್ 31ರಂದು ತೆಗೆದುಕೊಂಡ ತೀರ್ಮಾನವನ್ನು ಸದ್ಯ ಅನುಷ್ಠಾನಗೊಳಿಸುವಂತಿಲ್ಲ ಎಂದು ಇಂದಿನ ವಿಚಾರಣೆ ಬಳಿಕ ಹೈಕೋರ್ಟ್ ಸ್ಪಷ್ಟವಾಗಿ ಹೇಳಿದೆ.
ಸಂಪುಟ ಉಪಸಮಿತಿಯ ನೇತೃತ್ವ ವಹಿಸಿರುವ ಗೃಹ ಸಚಿವ ಬಸವರಾಜ ಬೊಮ್ಮಾಯಿ ಶಿಫಾರಿಸಿನ ಆಧಾರದಲ್ಲಿ, ಯಡಿಯೂರಪ್ಪ ಸರ್ಕಾರ ಈ ತೀರ್ಮಾನಕ್ಕೆ ಬಂದಿತ್ತು. ಅದರ ಅನ್ವಯ ವಿವಿಧ ಪ್ರತಿಭಟನೆಯಲ್ಲಿ ಪಾಲ್ಗೊಂಡು, ಕಾನೂನು ಉಲ್ಲಂಘನೆ ಮಾಡಿದ್ದರಿಂದ ಮೈಸೂರು ಸಂಸದ ಪ್ರತಾಪ್ ಸಿಂಹ, ಯಲಬುರ್ಗಾ ಶಾಸಕ ಹಾಲಪ್ಪ ಆಚಾರ್, ಹೊನ್ನಾಳಿ ಶಾಸಕ ರೇಣುಕಾಚಾರ್ಯ ಸೇರಿ ಇನ್ನೂ ಹಲವು ಪ್ರಮುಖ ನಾಯಕರ ವಿರುದ್ಧ ದಾಖಲಾಗಿದ್ದ ಕ್ರಿಮಿನಲ್ ಪ್ರಕರಣಗಳು ರದ್ದಾಗುತ್ತಿದ್ದವು. ಆದರೆ ಸದ್ಯಕ್ಕಂತೂ ಆ ಭಾಗ್ಯವನ್ನು ಹೈಕೋರ್ಟ್ ನೀಡುತ್ತಿಲ್ಲ.
ಕರ್ನಾಟಕ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಸಂದರ್ಶನ: B Y ವಿಜಯೇಂದ್ರ ಹಸ್ತಕ್ಷೇಪದ ಬಗ್ಗೆ ನನಗೆ ಯಾವ ದೂರೂ ಬಂದಿಲ್ಲ
Published On - 5:01 pm, Mon, 21 December 20