ಬೆಂಗಳೂರು: ವೈಜ್ಞಾನಿಕ ಅಧ್ಯಯನಗಳನ್ನು (ಕ್ಲಿನಿಕಲ್ ಟ್ರಯಲ್) ಪೂರ್ಣಗೊಳಿಸದೇ ಜನರಿಗೆ ಕೊವಿಡ್ ಲಸಿಕೆ ನೀಡುತ್ತಿರುವ ಕ್ರಮ ಪ್ರಶ್ನಿಸಿದ್ದ ಸಾರ್ವಜನಿಕ ಹಿತಾಸಕ್ತಿ (ಪಿಐಎಲ್) ಅರ್ಜಿಯನ್ನು ಹೈಕೋರ್ಟ್ ಬುಧವಾರ ವಜಾಗೊಳಿಸಿದೆ. ಪೂರ್ಣ ಪ್ರಮಾಣದಲ್ಲಿ ಅಧ್ಯಯನ ಪೂರ್ಣಗೊಳಿಸದೇ ಲಸಿಕೆ ನೀಡುತ್ತಿರುವುದರಿಂದ ಸಾರ್ವಜನಿಕರಿಗೆ ತೊಂದರೆಯಾಗಲಿದೆ ಎಂದು ಅರ್ಜಿಯಲ್ಲಿ ದೂರಲಾಗಿತ್ತು.
18 ಕೋಟಿ ಜನರಿಗೆ ಲಸಿಕೆ ಹಾಕಿದ ಮೇಲೆ ಇಂಥ ಅರ್ಜಿ ಸಲ್ಲಿಸಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಹೈಕೋರ್ಟ್ ವಿಭಾಗೀಯ ಪೀಠ, ಇದು ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲ ಎಂದು ಅಭಿಪ್ರಾಯಪಟ್ಟು ₹ 50 ಸಾವಿರ ದಂಡ ವಿಧಿಸಿ ಅರ್ಜಿ ವಜಾ ಮಾಡಿತು. ಕೊವ್ಯಾಕ್ಸಿನ್, ಕೊವಿಶೀಲ್ಡ್‌ಗೆ ಅರ್ಜಿದಾರರ ವಿರೋಧ ವ್ಯಕ್ತಪಡಿಸಿದ್ದರು.
ರಾಜ್ಯದಲ್ಲಿ ಕೊರೊನಾ ಸೋಂಕು ಹೆಚ್ಚಿರುವ ಹಿನ್ನೆಲೆಯಲ್ಲಿ ನಗರದ ವಸತಿಹೀನರಿಗೆ ಸೂರು ಕಲ್ಪಿಸುವ ಅಗತ್ಯವಿದೆ. ಇಂಥವರಿಗೆ ತಾತ್ಕಾಲಿಕ ಸೂರು ಕಲ್ಪಿಸುವ ಬಗ್ಗೆ ನಿಲುವು ತಿಳಿಸಿ ಎಂದು ಮತ್ತೊಂದು ಪ್ರಕರಣದಲ್ಲಿ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಿದೆ.
ಹೆಸರಘಟ್ಟ: ಯಥಾಸ್ಥಿತಿಗೆ ಹೈಕೋರ್ಟ್ ಆದೇಶ
ಹೆಸರಘಟ್ಟ ಹುಲ್ಲುಗಾವಲು ಪ್ರದೇಶವು ವನ್ಯಜೀವಿ, ಪಕ್ಷಿಗಳ ಆವಾಸಸ್ಥಾನವಾಗಿದೆ. ಸಂರಕ್ಷಿತ ಪ್ರದೇಶವಾಗಿ ಯಥಾಸ್ಥಿತಿ ಕಾಪಾಡಬೇಕು ಎಂದು ಹೈಕೋರ್ಟ್ ವಿಭಾಗೀಯ ಪೀಠ ಬುಧವಾರ ಮಧ್ಯಂತರ ಆದೇಶ ನೀಡಿದೆ. ಹೆಸರಘಟ್ಟ ಪರಿಸರ ಸಂರಕ್ಷಿಸಬೇಕು ಎಂದು ಒತ್ತಾಯಿಸಿ ವಿಜಯ್ ನಿಶಾಂತ್ ಎಂಬುವವರು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.
ಸಾರಿಗೆ ನೌಕರರ ಸಂಘಗಳಿಗೆ ನೊಟೀಸ್
ರಾಜ್ಯದಲ್ಲಿ ಸಾರಿಗೆ ನೌಕರರ ಮುಷ್ಕರದ ಕುರಿತು ವಿಚಾರಣೆಯನ್ನು ಹೈಕೋರ್ಟ್ ಇಂದು ಮುಂದುವರಿಸಿತು. ಸಾರಿಗೆ ನೌಕರರ ಸಂಘಗಳನ್ನು ಪ್ರತಿವಾದಿಯಾಗಿಸಿ ಆದೇಶ ಹೊರಡಿಸಿದ ಹೈಕೋರ್ಟ್, ಎಲ್ಲಾ ಸಾರಿಗೆ ಸಂಘಗಳ ಅಹವಾಲು ಆಲಿಸುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟಿತು. 10 ವಾರಗಳಲ್ಲಿ ತಿದ್ದುಪಡಿ ಅರ್ಜಿ ಸಲ್ಲಿಸಲು ಸೂಚನೆ ನೀಡಿ ಎಲ್ಲ ಸಾರಿಗೆ ನೌಕರರ ಸಂಘಗಳಿಗೂ ನೊಟೀಸ್ ಜಾರಿ ಮಾಡಿತು.
(Karnataka High Court Cancels PIL submitted to stop Vaccination)
ಇದನ್ನೂ ಓದಿ: ಲಸಿಕೆ ಪೂರೈಕೆಯನ್ನು ಸಮಾನತೆಯ ಹಕ್ಕಿನಡಿ ಪರಿಗಣಿಸಿ: ಕೇಂದ್ರಕ್ಕೆ ಕರ್ನಾಟಕ ಹೈಕೋರ್ಟ್ ಮಹತ್ವದ ಸೂಚನೆ
ಇದನ್ನೂ ಓದಿ: ದೇಶದಲ್ಲಿ 7,200ಕ್ಕೂ ಹೆಚ್ಚು ಬ್ಲ್ಯಾಕ್ ಫಂಗಸ್ ಪ್ರಕರಣ; ದೆಹಲಿ ಹೈಕೋರ್ಟ್ಗೆ ಕೇಂದ್ರ ಸರ್ಕಾರದಿಂದ ಅಫಿಡವಿಟ್