ಬೆಂಗಳೂರು: ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ನಿಧನ ಹೊಂದಿದ್ದಾರೆ. ಇಂದು (ಮೇ 26) ಮಧ್ಯಾಹ್ನ 1.30ರ ಸುಮಾರಿಗೆ ದೊರೆಸ್ವಾಮಿ ನಿಧನರಾಗಿದ್ದಾರೆ. ತಮ್ಮ ಇಳಿ ವಯಸ್ಸಿನಲ್ಲಿಯೂ ಸಮಾಜದ ಆಗುಹೋಗುಗಳಿಗೆ ಸ್ಪಂದಿಸುತ್ತಿದ್ದ ಹಿರಿಜೀವದ ಬಗ್ಗೆ ವಿವಿಧ ವಲಯದ ನೂರಾರು ಗಣ್ಯರು ಸಂತಾಪ ಸೂಚಿಸಿ, ತಮ್ಮ ಮಾತುಗಳನ್ನು ತಿಳಿಸಿದ್ದಾರೆ. ಕೆಲವು ಗಣ್ಯರು ದೊರೆಸ್ವಾಮಿ ಬಗ್ಗೆ ಟಿವಿ9 ಜೊತೆಗೆ ಹಂಚಿಕೊಂಡ ಮಾತುಗಳನ್ನು ಇಲ್ಲಿ ನೀಡಲಾಗಿದೆ.
ಎಚ್.ಎಸ್. ದೊರೆಸ್ವಾಮಿ ಬಗ್ಗೆ ಹೃದ್ರೋಗ ತಜ್ಞ, ಜಯದೇವ ಆಸ್ಪತ್ರೆ ನಿರ್ದೇಶಕ ಡಾ.ಸಿ.ಎನ್. ಮಂಜುನಾಥ್ ಮಾತನಾಡಿದ್ದಾರೆ. ದೊರೆಸ್ವಾಮಿ ಕೊರೊನಾಗೆ ಜಯದೇವ ಆಸ್ಪತ್ರೆಯಲ್ಲೇ ಚಿಕಿತ್ಸೆ ಪಡೆದಿದ್ದರು. ಆಸ್ಪತ್ರೆಯಿಂದ ಮನೆಗೆ ತೆರಳಿದ ಬಳಿಕ ಸುಸ್ತಾಗುತ್ತಿದೆ ಎನ್ನುತ್ತಿದ್ದರು. ಆ ಹಿನ್ನೆಲೆಯಲ್ಲಿ ಮತ್ತೊಮ್ಮೆ ಆಸ್ಪತ್ರೆಗೆ ದಾಖಲಾಗಿದ್ದರು. 2ನೇ ಬಾರಿಗೆ ಆಸ್ಪತ್ರೆಗೆ ಬಂದಾಗ ನನಗ್ಯಾಕೆ ಚಿಕಿತ್ಸೆ ನೀಡ್ತೀರಿ. ನನಗೆ 104 ವರ್ಷವಾಗಿದೆ, ನನಗೆ ಬೆಡ್ ನೀಡುವುದು ಬೇಡ. ನನ್ನನ್ನು ಮನೆಗೆ ಕಳುಹಿಸಿಬಿಡಿ ಎಂದು ಮನವಿ ಮಾಡಿದ್ದರು ಎಂದು ದೊರೆಸ್ವಾಮಿ ಅವರ ಮಾತುಗಳನ್ನು ಡಾ. ಮಂಜುನಾಥ್ ಸ್ಮರಿಸಿಕೊಂಡಿದ್ದಾರೆ.
ನನ್ನ ಬದಲು ಬೇರೆ ಯಾರಿಗಾದ್ರೂ ಚಿಕಿತ್ಸೆ ನೀಡಿ ಎಂದು ದೊರೆಸ್ವಾಮಿಯವರು ಹೇಳುತ್ತಿದ್ದರು. ಹಾಗೆ ಹೇಳಬೇಡಿ, ನೀವು ಎಲ್ಲೇ ಹೋದರೂ ನಿಮಗಾಗಿ ಒಂದು ಹಾಸಿಗೆ ಮೀಸಲಿರುತ್ತದೆ ಎಂದು ಹೇಳಿದ್ದೆ. ಎಚ್.ಎಸ್.ದೊರೆಸ್ವಾಮಿ ಒಬ್ಬ ಒಳ್ಳೆಯ ರೋಗಿಯೂ ಆಗಿದ್ದರು. ವೈದ್ಯರ ಸಲಹೆ ಸೂಚನೆಯನ್ನು ಚಾಚೂತಪ್ಪದೆ ಪಾಲಿಸುತ್ತಿದ್ದರು ಎಂದು ಹೃದ್ರೋಗ ತಜ್ಞ ಡಾ.ಸಿ.ಎನ್. ಮಂಜುನಾಥ್ ಹೇಳಿಕೆ ನೀಡಿದ್ದಾರೆ.
ದೊರೆಸ್ವಾಮಿ ಬಗ್ಗೆ ವಾಟಾಳ್ ನಾಗರಾಜ್
ಎಚ್.ಎಸ್.ದೊರೆಸ್ವಾಮಿ ಓರ್ವ ಪ್ರಾಮಾಣಿಕ ವ್ಯಕ್ತಿಯಾಗಿದ್ದರು ಎಂದು ವಾಟಾಳ್ ನಾಗರಾಜ್ ಪ್ರತಿಕ್ರಿಯೆ ನೀಡಿದ್ದಾರೆ. ದೊರೆಸ್ವಾಮಿ ಸರಳ ಸಜ್ಜನಿಕೆಯ ವ್ಯಕ್ತಿಯಾಗಿದ್ದರು. ನಮ್ಮ ದೇಶದ, ರಾಜ್ಯದ ಸ್ವತ್ತಾಗಿದ್ದರು. ಅವರು ಅನ್ಯಾಯ ಕಂಡರೆ ಪ್ರತಿಭಟನೆ ಮಾಡುತ್ತಿದ್ದರು. ಅವರ ಜತೆ ನಾನು ಅನೇಕ ಹೋರಾಟದಲ್ಲಿ ಭಾಗಿಯಾಗಿದ್ದೆ. ಕರ್ನಾಟಕದಲ್ಲಿ ಮತ್ತೊಮ್ಮೆ ದೊರೆಸ್ವಾಮಿ ಸಿಗಲು ಸಾಧ್ಯವಿಲ್ಲ ಎಂದು ವಾಟಾಳ್ ನಾಗರಾಜ್ ಹೇಳಿದ್ದಾರೆ.
ದೊರೆಸ್ವಾಮಿಯವರು ಅತ್ಯಂತ ಗಂಭೀರವಾದ ವ್ಯಕ್ತಿ. ಅವರನ್ನು ಯಾರು ಎಲ್ಲಿಗೆ ಬೇಕಾದರೂ ಕರೆದೊಯ್ಯಬಹುದಿತ್ತು. ಚುನಾವಣಾ ವ್ಯವಸ್ಥೆ ಬಗ್ಗೆ ದೊರೆಸ್ವಾಮಿ ಬೇಸರ ವ್ಯಕ್ತಪಡಿಸಿದ್ದರು. ಸುಮಾರು 10 ವರ್ಷಗಳ ಕಾಲ ನನ್ನ ಜತೆ ಒಡನಾಟದಲ್ಲಿದ್ದರು ಎಂದು ಹೋರಾಟಗಾರ ವಾಟಾಳ್ ನಾಗರಾಜ್ ಮಾತನಾಡಿದ್ದಾರೆ.
ಬಡತನವೇ ನನ್ನ ಆರೋಗ್ಯದ ಗುಟ್ಟು
ದೊರೆಸ್ವಾಮಿಯವರು ಗಾಂಧಿವಾದಿಯಾಗಿದ್ದರು. ಅದು ಯಾರೇ ಆಗಿದ್ದರು ನೇರ, ನಿಷ್ಠುರವಾಗಿ ಮಾತನಾಡುತ್ತಿದ್ದರು ಎಂದು ಜೆಡಿಎಸ್ ಶಾಸಕ ಎ.ಟಿ.ರಾಮಸ್ವಾಮಿ ಪ್ರತಿಕ್ರಿಯೆ ನೀಡಿದ್ದಾರೆ. ಭೂಕಬಳಿಕೆ ವಿರುದ್ಧ 9 ದಿನಗಳ ಕಾಲ ಹೋರಾಟ ನಡೆಸಿದ್ದರು. ಎಲ್ಲೇ ಅನ್ಯಾಯ ನಡೆದರೂ ಮುಂದೆ ನಿಂತು ಹೋರಾಡುತ್ತಿದ್ರು. ಸಾರ್ವಜನಿಕರ ಸೇನಾನಿಯಾಗಿ ಅನ್ಯಾಯದ ವಿರುದ್ಧ ಹೋರಾಟ ಮಾಡುತ್ತಿದ್ದರು. ಬಡತನವೇ ನನ್ನ ಆರೋಗ್ಯದ ಗುಟ್ಟು ಎಂದು ಹೇಳುತ್ತಿದ್ದರು. ಎಚ್.ಎಸ್.ದೊರೆಸ್ವಾಮಿ ಅಗಲಿಕೆ ನನಗೆ ಅತೀವ ದುಃಖ ತರಿಸಿದೆ ಎಂದು ಎ.ಟಿ.ರಾಮಸ್ವಾಮಿ ತಿಳಿಸಿದ್ದಾರೆ.
ಎಚ್.ಎಸ್.ದೊರೆಸ್ವಾಮಿ ನಿಧನ: ಕೊವಿಡ್ ನಿಯಮಾನುಸಾರ, ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ
Published On - 5:26 pm, Wed, 26 May 21