HS Doreswamy Obituary : 104ರ ವಯಸ್ಸಿನಲ್ಲಿಯೂ ದೊರೆಸ್ವಾಮಿಯವರಿಗಿದ್ದ ನೈತಿಕ ಸಿಟ್ಟು ನಮ್ಮ ದೇಶದ ಜನತೆಗೆ ಸ್ವಲ್ಪವಾದರೂ ಬರಲಿ
HS Doreswamy Memories : ಅವರ ನಾಯಕತ್ವದ ಎಲ್ಲಾ ಚಳವಳಿಗಳಲ್ಲಿಯೂ ಭಾಗವಹಿಸಿದ್ದೇನೆ. ಸಂಪೂರ್ಣ ತನ್ಮಯರಾಗಿಬಿಡುತ್ತಿದ್ದರು. ಅದಕ್ಕೇ ಅವರಿಗೆ ಸಿಟ್ಟು ಬರುತ್ತಿತ್ತು. ಅಂಥಾ ನೈತಿಕ ಸಿಟ್ಟು ಬರುವುದು ಪ್ರಾಮಾಣಿಕವಾಗಿದ್ದಾಗ ಮಾತ್ರ. ನಿಜವಾದ ಕಳಕಳಿ ಇದ್ದಾಗ ಮಾತ್ರ. ಇದು ಎಲ್ಲರಿಗೂ ಬರುವುದಿಲ್ಲ!
ಕೊನೆತನಕವೂ ಎಚ್. ಎಸ್. ದೊರೆಸ್ವಾಮಿಯವರಿಗೆ ಹೋರಾಟದ ಬಗ್ಗೆಯೇ ಯೋಚನೆ. ಹೊಸ ಹೋರಾಟ ಹುಟ್ಟುಹಾಕಬೇಕು. ಸರ್ವಾಧಿಕಾರಿ ಧೋರಣೆಯಿಂದ ದೇಶದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ದಿನೇದಿನೆ ಧಕ್ಕೆಯುಂಟಾಗುತ್ತಿದೆ. ಕನಿಷ್ಟ ಐನೂರು ಜನರನ್ನಾದರೂ ಕೂಡಿಸಿಕೊಂಡು ಹೋರಾಟ ಮಾಡಬೇಕು ಎಂದು ಅವರು ನಮ್ಮನ್ನೆಲ್ಲ ಕೂರಿಸಿಕೊಂಡು ಹೇಳುತ್ತಿದ್ದದ್ದು ಜಯನಗರದ ಅದೇ ಬಾಡಿಗೆಮನೆಯಲ್ಲಿ. ನಾವೆಲ್ಲ ಅವೇ ಹಳೆಯ ಮಡಿಚುವ ಕುರ್ಚಿಯಲ್ಲಿ ಕುಳಿತು ಕೇಳಿಸಿಕೊಳ್ಳುತ್ತಿದ್ದೆವು. ಕೊನೇತನಕ ಕನಿಷ್ಟ ಸೌಲಭ್ಯದಲ್ಲಿ ಬದುಕಿದ ಸರಳ ಜೀವಿ ಅವರು.
ದೊರೆಸ್ವಾಮಿಯಂಥ ದೀರ್ಘ ಹೋರಾಟದ ಅನುಭವವುಳ್ಳ ಮಹಾನ್ ವ್ಯಕ್ತಿ ಕರ್ನಾಟಕದಲ್ಲಿ ಇನ್ನೊಬ್ಬರು ಇಲ್ಲವೇ ಇಲ್ಲ. ನಿಜವಾದ ಗಾಂಧೀವಾದಿ. ಸ್ವಾತಂತ್ರ್ಯ ಹೋರಾಟ, ಭೂದಾನ ಚಳವಳಿ ಮತ್ತು ತುರ್ತು ಪರಿಸ್ಥಿತಿ ಈ ಮೂರು ಹೋರಾಟಗಳ ಸಂದರ್ಭಗಳಲ್ಲಿಯೂ ಜೈಲುವಾಸ ಅನುಭವಿಸಿದ ದಿಟ್ಟ ವ್ಯಕ್ತಿ ಅವರು. ಮೊನ್ನೆಮೊನ್ನೆಯವರೆಗೂ ದೇಶಕ್ಕೆ ಒದಗಿದ ಪರಿಸ್ಥಿತಿ ಮತ್ತು ಅನ್ಯಾಯದ ವಿರುದ್ಧ ಚಳವಳಿ ಮಾಡಲೇಬೇಕು ಎನ್ನುವ ಮನಸ್ಥಿತಿಯಲ್ಲಿಯೇ ಇದ್ದವರು. ಅಂತಹ ನೈತಿಕ ಸಿಟ್ಟು, ಎಂಥ ಶತ್ರುವನ್ನೂ ಅಲುಗಾಡಿಸುವಂಥ ಸಿಟ್ಟು. ಒಂದು ತಿಂಗಳ ಹಿಂದೆ ಅವರ ಮನೆಗೆ ಹೋದಾಗ ಆರೋಗ್ಯವಾಗಿದ್ದರು.
104ರ ವಯಸ್ಸಿನಲ್ಲಿಯೂ ಹೋರಾಟದ ಬಗ್ಗೆಯೇ ಯೋಚನೆ. ಹೊಸ ಹೋರಾಟ ಹುಟ್ಟುಹಾಕಬೇಕು. ಸರ್ವಾಧಿಕಾರಿ ಧೋರಣೆಯಿಂದ ದೇಶದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ದಿನೇದಿನೆ ಧಕ್ಕೆಯುಂಟಾಗುತ್ತಿದೆ. ಕನಿಷ್ಟ ಐನೂರು ಜನರನ್ನಾದರೂ ಕೂಡಿಸಿಕೊಂಡು ಹೋರಾಟ ಮಾಡಬೇಕು ಎಂದು ಅವರು ನಮ್ಮನ್ನೆಲ್ಲ ಕೂರಿಸಿಕೊಂಡು ಹೇಳುತ್ತಿದ್ದದ್ದು ಜಯನಗರದ ಅದೇ ಬಾಡಿಗೆಮನೆಯಲ್ಲಿ. ನಾವೆಲ್ಲ ಅವೇ ಹಳೆಯ ಮಡಿಚುವ ಕುರ್ಚಿಯಲ್ಲಿ ಕುಳಿತು ಕೇಳಿಸಿಕೊಳ್ಳುತ್ತಿದ್ದೆವು. ಕೊನೇತನಕ ಕನಿಷ್ಟ ಸೌಲಭ್ಯದಲ್ಲಿ ಬದುಕಿದ ಸರಳ ಜೀವಿ ಅವರು.
ವಿನೋಬಾ ಭಾವೆಯವರೊಂದಿಗೆ ಇಡೀ ಭಾರತವನ್ನು ಕಾಲುನಡಿಗೆಯಲ್ಲಿ ಸುತ್ತಿದ ಮಹಾನ್ ಹೋರಾಟಗಾರರು. ಈ ವಯಸ್ಸಿನ ತನಕವೂ ಅವರು ಅನ್ಯಾಯದ ವಿರುದ್ಧ ವ್ಯಕ್ತಪಡಿಸುತ್ತಿದ್ದ ನೈತಿಕ ಸಿಟ್ಟಿದೆಯಲ್ಲ ಅದು ನಮ್ಮ ದೇಶದ ಜನತೆಗೆ ಸ್ವಲ್ಪವಾದರೂ ಬರಲಿ.
ಬೆಂಗಳೂರಿನಲ್ಲಿ ಸರ್ಕಾರಿ ಜಮೀನನ್ನು ಅನೇಕ ಭೂಮಾಫಿಯಾ ವ್ಯಕ್ತಿಗಳು ಒತ್ತುವರಿ ಮಾಡಿಕೊಂಡಿದ್ದರು. ಆ ಸಂದರ್ಭದಲ್ಲಿ ಶಾಸಕ ರಾಮಸ್ವಾಮಿ ಅವರ ಅಧ್ಯಕ್ಷತೆಯಲ್ಲಿ ಒಂದು ಸಮಿತಿ ರಚಿಸಿದ್ದರು. ಆಗ ನಾನೂ ಕೂಡ ಅವರೊಂದಿಗೆ ಮುಖ್ಯಮಂತ್ರಿ ಯಡಿಯೂರಪ್ಪನವರ ಭೇಟಿಗೆ ಹೋಗಿದ್ದೆ. ಮಾತುಕತೆ ನಡೆಯಿತು. ಆದರೆ ಔಪಚಾರಿಕವಾದ ಆಳಕ್ಕಿಳಿಯದ ಮಾತುಗಳಿಂದ ಏನಾದರೂ ಬದಲಾವಣೆ ಸಾಧ್ಯವೆ? ದೊರೆಸ್ವಾಮಿಯವರ ನಿಜವಾದ ಕಳಕಳಿ ವ್ಯವಸ್ಥೆಯ ಸೂತ್ರ ಹಿಡಿದವರಿಗೆ ಕೊನೆತನಕವೂ ಅರ್ಥವೇ ಆಗಲಿಲ್ಲ. ಎಲ್ಲಾ ಮುಖ್ಯಮಂತ್ರಿಗಳನ್ನೂ ಭೇಟಿ ಮಾಡುತ್ತಲೇ ಬಂದರು. ಆದರೆ ಅಧಿಕಾರದ ಚುಕ್ಕಾಣಿ ಹಿಡಿದವರು ಅವರನ್ನು ಅರ್ಥ ಮಾಡಿಕೊಳ್ಳಲೇ ಇಲ್ಲ.
ವಿನೋಭಾ ಅವರೊಂದಿಗೆ ಚಳವಳಿಯಲ್ಲಿ ಭಾಗವಹಿಸಿದಾಗಿನ ಸಂದರ್ಭದಲ್ಲಿ ನಡೆದ ಒಂದು ಘಟನೆಯನ್ನು ಅವರು ಹಂಚಿಕೊಂಡಿದ್ದು ಈಗ ನೆನಪಿಗೆ ಬರುತ್ತಿದೆ. ಗುಜರಾತಿನ ಒಂದು ಸಣ್ಣ ಹಳ್ಳಿಯಲ್ಲಿ ಅವರೆಲ್ಲ ಉಳಿದುಕೊಳ್ಳುತ್ತಾರೆ. ದೊರೆಸ್ವಾಮಿಯವರು ರಾತ್ರಿ ಮಲವಿಸರ್ಜನೆಗೆಂದು ಹೋದಾಗ ದೊಡ್ಡ ಗುಂಡಿಯಲ್ಲಿ ಬಿದ್ದುಬಿಡುತ್ತಾರೆ. ಆದರೆ ತಿಂಗಳಾನುಗಟ್ಟಲೆ ಹಾಸಿಗೆ ಹಿಡಿದರೂ ಯಾವುದೇ ಔಷಧೋಪಚಾರವಿಲ್ಲದೆ ಸುಧಾರಿಸಿಕೊಳ್ಳುತ್ತಾರೆ. ಅವರಿಗೆ ಔಷಧಿಯಲ್ಲಿ ನಂಬಿಕೆ ಇರಲಿಲ್ಲ ಹಾಗೇ ಹಣವೂ ಅವರ ಬಳಿ ಇರಲಿಲ್ಲ. ಆದರೆ ಆತ್ಮಬಲ ಮಾತ್ರವಿತ್ತು. ಅಂತಹ ಬದುಕನ್ನು ಬದುಕಿದ ಸರಳ ಚಳವಳಿಕಾರರಾಗಿದ್ದರು. ಅವರ ನಾಯಕತ್ವದ ಎಲ್ಲಾ ಚಳವಳಿಗಳಲ್ಲಿಯೂ ಭಾಗವಹಿಸಿದ್ದೇನೆ. ಸಂಪೂರ್ಣ ತನ್ಮಯರಾಗಿಬಿಡುತ್ತಿದ್ದರು. ಅದಕ್ಕೇ ಅವರಿಗೆ ಸಿಟ್ಟು ಬರುತ್ತಿತ್ತು. ಅಂಥಾ ನೈತಿಕ ಸಿಟ್ಟು ಬರುವುದು ಪ್ರಾಮಾಣಿಕವಾಗಿದ್ದಾಗ ಮಾತ್ರ. ನಿಜವಾದ ಕಳಕಳಿ ಇದ್ದಾಗ ಮಾತ್ರ. ಇದು ಎಲ್ಲರಿಗೂ ಬರುವುದಿಲ್ಲ!
ಕೊರೋನಾ ಸಂದರ್ಭದಲ್ಲಿ ಸರ್ಕಾರ ಸರಿಯಾಗಿ ನಿಭಾಯಿಸುತ್ತಿಲ್ಲ ಎನ್ನುವ ಕೊರಗು ಅವರಿಗೆ ಇತ್ತು, ಸ್ವತಃ ತಾವು ಕೊರೋನಾಕ್ಕೆ ಒಳಗಾದ ಸಂದರ್ಭದಲ್ಲಿಯೂ. ಲಾಕ್ಡೌನ್ನಿಂದ ಬಡವರಿಗೆ ಅನ್ಯಾಯವಾಗುತ್ತಿದೆ ಎಂದು ಸಂಕಟಪಡುತ್ತಿದ್ದರು. ದಿನಗೂಲಿ ನೌಕರರು ಅಂದಿನ ತುತ್ತಿನ ಚೀಲ ಹೇಗೆ ತುಂಬಿಸಿಕೊಳ್ಳಬೇಕು? ಇದೊಂದೇ ಸಂದರ್ಭ ಅಂತಲ್ಲ. ಸರ್ಕಾರ ತೆಗೆದುಕೊಂಡ ಯಾವ ನಿರ್ಧಾರವೂ ಬಡವರ ಮೇಲೆಯೇ ಮೊದಲು ಪರಿಣಾಮ ಬೀರುತ್ತದೆ. ಇದನ್ನು ಹೇಗಾದರೂ ಸರಿ ಮಾಡಬೇಕು ಎಂದೇ ಸದಾ ಚಿಂತಿಸುತ್ತಿದ್ದರು. ಸದಾ ದೇಶದ ಬಡಜನರ ಬಗ್ಗೆಯೇ ಚಿಂತಿಸುತ್ತಿದ್ದಂಥ ನಿಸ್ವಾರ್ಥ ಜೀವ ನಮ್ಮ ನಡುವಿಲ್ಲ ಎನ್ನುವುದು ಸಣ್ಣ ದುಃಖವಲ್ಲ.
ಬುಡಕಟ್ಟು ಜನರಿಗೆ ವಸತಿ ವ್ಯವಸ್ಥೆ ಮಾಡಿಕೊಡಬೇಕು ಎನ್ನುವ ಹಿನ್ನೆಲೆಯಲ್ಲಿ 102ನೇ ವಯಸ್ಸಿನಲ್ಲಿ ಕೊಡಗಿಗೆ ಹೋಗಿ, ಅಲ್ಲಿಂದ ಸುಮಾರು 30 ಕಿ.ಮೀ ದೂರದಲ್ಲಿರುವ ಬುಡಕಟ್ಟು ಜನರಿದ್ದ ಜಾಗಕ್ಕೆ ಹೋಗಿ ಧರಣಿಗೆ ಕುಳಿತಿದ್ದರೆಂದರೆ ಅವರ ಹೋರಾಟ ಮನೋಭಾವದ ಆಳವನ್ನು ಸತ್ವವನ್ನು ನಾವಿಂದು ಅರ್ಥ ಮಾಡಿಕೊಳ್ಳಬೇಕು. ಇದೆಲ್ಲವೂ ವ್ಯವಸ್ಥೆಯ ಸೂತ್ರ ಹಿಡಿದವರಿಗೆ ಅರ್ಥವೇ ಆಗಲಿಲ್ಲವಲ್ಲ?
*
ಪರಿಚಯ : ಡಾ. ಕೆ. ಮರುಳಸಿದ್ದಪ್ಪ ಚಿಕ್ಕಮಗಳೂರು ಜಿಲ್ಲೆಯ ಕಾರೇಹಳ್ಳಿಯವರು. ತಂದೆ ಉಜ್ಜನಪ್ಪ, ತಾಯಿ ಕಾಳಮ್ಮ. ರಂಗಭೂಮಿ, ನಾಟಕ ಮತ್ತು ಜಾನಪದ ಕ್ಷೇತ್ರಗಳಲ್ಲಿ ಮರುಳಸಿದ್ಧಪ್ಪನವರು ಅಪಾರ ಅನುಭವ ಹೊಂದಿದ್ದಾರೆ. ಕರ್ನಾಟಕ ನಾಟಕ ಅಕಾಡೆಮಿ ಹಾಗೂ ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಅಧ್ಯಕ್ಷರಾಗಿದ್ದರು. ಭಾರತೀಯ ಜಾನಪದ ಸಮೀಕ್ಷೆ, ಲಾವಣಿಗಳು, ಷಟ್ಟದಿ, ಜಾನಪದ ಸಾಹಿತ್ಯ ರಚನಕಾರರು, ಕನ್ನಡ ನಾಟಕ ಸಮೀಕ್ಷೆ, ನೋಟನಿಲುವು, ರಕ್ತಕಣಗೀತೆ ಇವು ಅವರ ಪ್ರಕಟಿತ ಪುಸ್ತಕಗಳು. ‘ಆಧುನಿಕ ಕನ್ನಡ ನಾಟಕ ವಿಮರ್ಶೆ’ ಇದು ಅವರ ಪಿಎಚ್. ಡಿ ಮಹಾಪ್ರಬಂಧ. ಹಲವು ಇಂಗ್ಲೀಷ್ ನಾಟಕಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಕಿ.ರಂ. ನಾಗರಾಜ ಅವರೊಂದಿಗೆ ‘ವಚನ ಕಮ್ಮಟ’ ಸಂಪಾದಿಸಿದ್ದಾರೆ.
ಇದನ್ನೂ ಓದಿ : HS Doreswamy Passes Away: ಎಚ್ ಎಸ್ ದೊರೆಸ್ವಾಮಿ ನಿಧನಕ್ಕೆ ವಿವಿಧ ವಲಯದ ಗಣ್ಯರಿಂದ ಸಂತಾಪ
Published On - 5:08 pm, Wed, 26 May 21