ಏಪ್ರಿಲ್ 2ರಂದು ಲೋಕಸಭೆಯಲ್ಲಿ ವಕ್ಫ್ ತಿದ್ದುಪಡಿ ಮಸೂದೆ ಮಂಡನೆ
ವಕ್ಫ್ ತಿದ್ದುಪಡಿ ಮಸೂದೆಯ ಕುರಿತು ಜಂಟಿ ಸಂಸದೀಯ ಸಮಿತಿಯು ಈಗಾಗಲೇ ತನ್ನ ವರದಿಯನ್ನು ನೀಡಿದೆ. ಈ ಮಸೂದೆಯನ್ನು ಪೂರ್ವಾನ್ವಯವಾಗಿ ಜಾರಿಗೆ ತರಲಾಗುವುದಿಲ್ಲ ಮತ್ತು ದೂರುಗಳಿರುವ ಜನರು ನ್ಯಾಯಾಲಯದ ಮುಂದೆ ಹೋಗುವ ಆಯ್ಕೆಯನ್ನು ಹೊಂದಿದ್ದಾರೆ. ವಿರೋಧ ಪಕ್ಷಗಳಲ್ಲಿ ನಿರಂತರ ಪ್ರತಿಭಟನೆಯ ನಡುವೆಯೇ ಸರ್ಕಾರ ಬುಧವಾರ ಲೋಕಸಭೆಯ ಮುಂದೆ ವಕ್ಫ್ ಮಸೂದೆಯನ್ನು ಮಂಡಿಸಲು ನಿರ್ಧರಿಸಲಾಗಿದೆ. ಏಪ್ರಿಲ್ 4ರಂದು ಮುಕ್ತಾಯಗೊಳ್ಳಲಿರುವ ಬಜೆಟ್ ಅಧಿವೇಶನಕ್ಕೂ ಮುನ್ನ ಈ ದಾಖಲೆ ಸಂಸತ್ತಿನ ಕೆಳಮನೆಯ ಮುಂದೆ ಬರಲಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.

ನವದೆಹಲಿ, ಮಾರ್ಚ್ 31: ವಕ್ಫ್ ತಿದ್ದುಪಡಿ ಮಸೂದೆಯನ್ನು (Waqf Amendment Bill) ಏಪ್ರಿಲ್ 2ರಂದು ಲೋಕಸಭೆಯಲ್ಲಿ ಮಂಡಿಸಲು ನಿರ್ಧರಿಸಲಾಗಿದೆ. ಆಗಸ್ಟ್ 2024ರಲ್ಲಿ ಜಂಟಿ ಸಂಸದೀಯ ಸಮಿತಿಗೆ ಕಳುಹಿಸಲಾದ ತಿದ್ದುಪಡಿ ಮಾಡಿದ ವಕ್ಫ್ ಮಸೂದೆಯನ್ನು ಏಪ್ರಿಲ್ 2ರಂದು ಲೋಕಸಭೆಯಲ್ಲಿ ಮಂಡಿಸಲು ನಿರ್ಧರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಈ ಮಸೂದೆಗೆ ಈಗಾಗಲೇ ತೀವ್ರ ವಿರೋಧ ವ್ಯಕ್ತವಾಗಿದೆ. ಈ ಮಸೂದೆಯನ್ನು ಸಂಸತ್ತಿನಲ್ಲಿ ಮಂಡಿಸುವ ಮೊದಲು ಹಿರಿಯ ಬಿಜೆಪಿ ಸಚಿವರು ಇಂಡಿಯಾ ಬ್ಲಾಕ್ ನಾಯಕರೊಂದಿಗೆ ಚರ್ಚೆ ನಡೆಸುವ ನಿರೀಕ್ಷೆಯಿದೆ ಎಂದು ಮೂಲಗಳು ತಿಳಿಸಿವೆ.
ಸಂಸತ್ತಿನ ಪ್ರಸ್ತುತ ಬಜೆಟ್ ಅಧಿವೇಶನ ಏಪ್ರಿಲ್ 4ರಂದು ಮುಕ್ತಾಯಗೊಳ್ಳಲಿದೆ. ಈ ಮಸೂದೆ ಜಾರಿಗೆ ಬರಲು ಲೋಕಸಭೆ ಮತ್ತು ರಾಜ್ಯಸಭೆ ಎರಡೂ ಅಂಗೀಕರಿಸಬೇಕು. ಮುಸ್ಲಿಂ ಸಮುದಾಯದೊಳಗೆ ಧಾರ್ಮಿಕ ಮತ್ತು ದತ್ತಿ ಉದ್ದೇಶಗಳಿಗಾಗಿ ಗೊತ್ತುಪಡಿಸಿದ ಆಸ್ತಿಗಳನ್ನು ನಿರ್ವಹಿಸುವ ವಕ್ಫ್ ಮಂಡಳಿಗಳ ಆಡಳಿತವನ್ನು ಪುನರ್ರಚಿಸಲು ಈ ಮಸೂದೆ ಪ್ರಸ್ತಾಪಿಸುತ್ತದೆ. ಈ ಪ್ರಸ್ತಾವನೆಯು ರಾಜಕೀಯ ವಿವಾದಕ್ಕೆ ಕಾರಣವಾಗಿದೆ. ವಿರೋಧ ಪಕ್ಷದ ನಾಯಕರು ಇದನ್ನು ಅಸಂವಿಧಾನಿಕ ಮತ್ತು ಮುಸ್ಲಿಮರ ವಿರುದ್ಧ ಪಕ್ಷಪಾತಿ ಎಂದು ಟೀಕಿಸಿದ್ದಾರೆ.
ಇದನ್ನೂ ಓದಿ: ಭಾರೀ ಗದ್ದಲದ ನಡುವೆ ರಾಜ್ಯಸಭೆಯಲ್ಲಿ ವಕ್ಫ್ ಮಸೂದೆ ಕುರಿತ ಜೆಪಿಸಿ ವರದಿ ಮಂಡನೆ
ಜಂಟಿ ಸಮಿತಿಯ ಶಿಫಾರಸುಗಳನ್ನು ಸೇರಿಸಿದ ನಂತರ ಕೇಂದ್ರ ಸಚಿವ ಸಂಪುಟ ಇತ್ತೀಚೆಗೆ ಮಸೂದೆಯನ್ನು ಅಂಗೀಕರಿಸಿತು. ಅದರ ಸಂಸತ್ತಿನ ಚರ್ಚೆಗೆ ವೇದಿಕೆಯನ್ನು ಸಿದ್ಧಪಡಿಸಿತು. ಈ ಮಸೂದೆಯನ್ನು ಮೂಲತಃ ರಿಜಿಜು ಅವರು ಆಗಸ್ಟ್ 2024ರಲ್ಲಿ ಸಮಿತಿಗೆ ಕಳುಹಿಸುವ ಮೊದಲು ಲೋಕಸಭೆಯಲ್ಲಿ ಪರಿಚಯಿಸಿದರು.
“ಈ ಸಂಸತ್ ಅಧಿವೇಶನದಲ್ಲಿ ನಾವು ವಕ್ಫ್ ತಿದ್ದುಪಡಿ ಮಸೂದೆಯನ್ನು ಮಂಡಿಸುತ್ತೇವೆ. ವಕ್ಫ್ ಮಸೂದೆಯ ಬಗ್ಗೆ ಯಾರೂ ಭಯಪಡುವ ಅಗತ್ಯವಿಲ್ಲ. 2013ರಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರವು ವಕ್ಫ್ ಮಸೂದೆಯನ್ನು ಅಂಗೀಕರಿಸಿತು. ನಮ್ಮ ಸಂವಿಧಾನಕ್ಕೆ ಹೊಂದಿಕೆಯಾಗದ ಹಲವಾರು ನಿಬಂಧನೆಗಳನ್ನು ಮಾಡಿತು. ನಾವು ಈಗ ಮಸೂದೆಯನ್ನು ಸಾಂವಿಧಾನಿಕ ತತ್ವಗಳೊಂದಿಗೆ ಜೋಡಿಸಲು ಪ್ರಯತ್ನಿಸುತ್ತಿದ್ದೇವೆ” ಎಂದು ಅಮಿತ್ ಶಾ ಖಾಸಗಿ ಕಾರ್ಯಕ್ರಮವೊಂದರಲ್ಲಿ ಹೇಳಿದ್ದರು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:25 pm, Mon, 31 March 25