ಎಚ್.ಎಸ್.ದೊರೆಸ್ವಾಮಿ ನಿಧನ: ಕೊವಿಡ್ ನಿಯಮಾನುಸಾರ, ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ
HS Doreswamy Passed Away: ಕೊರೊನಾ ಹಿನ್ನೆಲೆಯಲ್ಲಿ ಇಂದೇ ಅಂತ್ಯಸಂಸ್ಕಾರ ಮಾಡಲು ದೊರೆಸ್ವಾಮಿ ಕುಟುಂಬಸ್ಥರು ನಿರ್ಧಾರ ಮಾಡಿದ್ದಾರೆ. ಈ ಬಗ್ಗೆ ಬೆಂಗಳೂರಲ್ಲಿ ಎಚ್ ಎಸ್ ದೊರೆಸ್ವಾಮಿ ಪುತ್ರ ರಾಜು ಹೇಳಿಕೆ ನೀಡಿದ್ದಾರೆ.
ಬೆಂಗಳೂರು: ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್ ಎಸ್ ದೊರೆಸ್ವಾಮಿ ಬುಧವಾರ ಮಧ್ಯಾಹ್ನ 1.30 ಸುಮಾರಿಗೆ ನಗರದ ಖಾಸಗಿ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ನಿಧನ ಹೊಂದಿದ್ದಾರೆ. ಕೊರೊನಾ ಲಾಕ್ಡೌನ್ ಹಾಗೂ ಕೊವಿಡ್-19 ನಿಯಮಾವಳಿಗಳು ಚಾಲ್ತಿಯಲ್ಲಿ ಇರುವುದರಿಂದ ಅದರ ಅನುಸಾರ ದೊರೆಸ್ವಾಮಿ ಪಾರ್ಥಿವ ಶರೀರದ ಅಂತ್ಯಕ್ರಿಯೆ ವಿಧಿವಿಧಾನಗಳನ್ನು ನಡೆಸಲು ಸರ್ಕಾರ ಆದೇಶಿಸಿದೆ.
ಸರ್ಕಾರಿ ಗೌರವಗಳೊಂದಿಗೆ ನಿಯಮಾನುಸಾರ ಅಂತ್ಯಕ್ರಿಯೆ ನಡೆಸಲಾಗುವುದು. ಕೊವಿಡ್ ನಿಯಮಾನುಸಾರ ಅಂತ್ಯಕ್ರಿಯೆ ನೆರವೇರಿಸಲಾಗುವುದು ಎಂದು ರಾಜ್ಯ ಸರ್ಕಾರದಿಂದ ಆದೇಶ ಹೊರಬಂದಿದೆ. ಬೆಂಗಳೂರು ನಗರ ಜಿಲ್ಲಾಧಿಕಾರಿ ಜೆ ಮಂಜುನಾಥ ಉಸ್ತುವಾರಿಯಲ್ಲಿ ಕೊವಿಡ್ ನಿಯಮಾನುಸಾರವೇ, ಸಕಲ ಸರ್ಕಾರಿ ಗೌರವದೊಂದಿಗೆ ಅಂತ್ಯಕ್ರಿಯೆ ಮಾಡಲಾಗುವುದು. ಮೃತರ ಕುಟುಂಬದವರ ಮನವಿಯಂತೆ ಸಮಯ ಹಾಗೂ ಸ್ಥಳ ನಿಗದಿ ಮಾಡಲಾಗುವುದು ಎಂದು ಸರ್ಕಾರ ತಿಳಿಸಿದೆ.
ಕೊರೊನಾ ಹಿನ್ನೆಲೆಯಲ್ಲಿ ಇಂದೇ ಅಂತ್ಯಸಂಸ್ಕಾರ ಮಾಡಲು ದೊರೆಸ್ವಾಮಿ ಕುಟುಂಬಸ್ಥರು ನಿರ್ಧಾರ ಮಾಡಿದ್ದಾರೆ. ಈ ಬಗ್ಗೆ ಬೆಂಗಳೂರಲ್ಲಿ ಎಚ್ ಎಸ್ ದೊರೆಸ್ವಾಮಿ ಪುತ್ರ ರಾಜು ಹೇಳಿಕೆ ನೀಡಿದ್ದಾರೆ. ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ಟಿ.ಆರ್.ಮಿಲ್ ಚಿತಾಗಾರದಲ್ಲಿ ಅಂತ್ಯಕ್ರಿಯೆಗೆ ತೀರ್ಮಾನ ಮಾಡಲಾಗಿದೆ ಎಂದೂ ಮಾಹಿತಿ ಲಭ್ಯವಾಗಿದೆ.
ಅಷ್ಟೇ ಅಲ್ಲದೆ, ಇದೀಗ ಲಭ್ಯವಿರುವ ಮಾಹಿತಿಯಂತೆ, ಎಚ್ ಎಸ್ ದೊರೆಸ್ವಾಮಿಗೆ ಕೊರೊನಾ ಪಾಸಿಟಿವ್ ವರದಿ ಬಂದಿದೆ. ನಿಧನದ ಬಳಿಕ ಕೊವಿಡ್ ಟೆಸ್ಟ್ ಮಾಡಲಾಗಿದ್ದು, ಕೊವಿಡ್-19 ಟೆಸ್ಟ್‌ನಲ್ಲಿ ಸೋಂಕು ಇರುವುದು ದೃಢವಾಗಿದೆ. ಈ ಮೊದಲು ಕೊರೊನಾ ಸೋಂಕಿಗೆ ತುತ್ತಾಗಿದ್ದ ದೊರೆಸ್ವಾಮಿ ಗುಣಮುಖರಾಗಿದ್ದರು. ಬಳಿಕ ಬಳಲಿಕೆಯ ಕಾರಣಕ್ಕೆ ಆಸ್ಪತ್ರೆ ಸೇರಿದ್ದರು.
ಹೃದಯಾಘಾತದಿಂದ ನಮ್ಮ ತಂದೆ ವಿಧಿವಶರಾಗಿದ್ದಾರೆ. ಅಂತ್ಯಕ್ರಿಯೆಗೆ ಸರ್ಕಾರದ ನಿರ್ದೇಶನಕ್ಕಾಗಿ ಕಾಯುತ್ತಿದ್ದೇವೆ. ಬೆಂಗಳೂರಿನಲ್ಲಿ ನಿಯಮಾನುಸಾರ ಅಂತ್ಯಕ್ರಿಯೆ ಮಾಡಬೇಕೆಂದು ನಿರ್ಧಾರ ಮಾಡಿದ್ದೇವೆ. ಪಾರ್ಥಿವ ಶರೀರ ಸಾರ್ವಜನಿಕ ದರ್ಶನಕ್ಕೆ ಅವಕಾಶವಿಲ್ಲ. ಕೊವಿಡ್ ಸಂದರ್ಭದಲ್ಲಿ ನಿಯಮಗಳನ್ನ ಪಾಲಿಸಬೇಕು. ನಮ್ಮ ತಾಯಿ ಮೃತಪಟ್ಟಾಗ ದೇಹದಾನ ಮಾಡಲಾಗಿತ್ತು. ಪ್ರಸ್ತುತ ಸ್ಥಿತಿಯಲ್ಲಿ ತಂದೆಯ ದೇಹದಾನ ಮಾಡುವುದಿಲ್ಲ ಎಂದು ಎಚ್ ಎಸ್ ದೊರೆಸ್ವಾಮಿ ಪುತ್ರ ರಾಜು ಹೇಳಿಕೆ ನೀಡಿದ್ದರು.
ಇದನ್ನೂ ಓದಿ: HS Doreswamy Passes Away: ಎಚ್ ಎಸ್ ದೊರೆಸ್ವಾಮಿ ನಿಧನಕ್ಕೆ ವಿವಿಧ ವಲಯದ ಗಣ್ಯರಿಂದ ಸಂತಾಪ
Published On - 4:42 pm, Wed, 26 May 21