ಗದಗದಲ್ಲಿ ಮತ್ತೆ ಸರ್ಕಾರಿ ನಿಯಮಗಳ ಉಲ್ಲಂಘನೆ; ದೇವರ ಜಾತ್ರೆ ಹೆಸರಿನಲ್ಲಿ ನೂರಾರು ಮಂದಿ ಒಂದೆಡೆ ಭಾಗಿ
ಕೊರೊನಾ ಭಯದಲ್ಲೂ ಪುಟ್ಟ ಮಕ್ಕಳು, ವೃದ್ಧರು, ಯುವಕ, ಯುವತಿಯರು, ಮಹಿಳೆಯರು ಮಾಸ್ಕ್ ಇಲ್ಲದೇ ಗುಂಪು ಗುಂಪಾಗಿ ಪೂಜೆ ಪುನಸ್ಕಾರದಲ್ಲಿ ಭಾಗಿಯಾಗಿದ್ದರು. ಮಂಗಳವಾರ ದೇವಿವಾರದ ಹಿನ್ನಲೆಯಲ್ಲಿ ವಾರದ ಹಬ್ಬ ಮಾಡಿದ್ದಾರೆ. ಹೀಗಾಗಿ ದೇವಸ್ಥಾನಗಳಲ್ಲಿ ಜನರು ನೂರಾರು ಸಂಖ್ಯೆಯಲ್ಲಿ ಸೇರಿದ್ದಾರೆ.
ಗದಗ: ಕೊರೊನಾ ಎರಡನೇ ಅಲೆಯಿಂದಗಾಗಿ ಇಡೀ ದೇಶವೇ ನಲುಗಿಹೋಗಿದೆ. ನಗರಗಳಿಂದ ಹಿಡಿದು ಹಳ್ಳಿಗಳವರೆಗೂ ಕೊರೊನಾ ಹೆಚ್ಚಾಗುತ್ತಿದೆ. ಹೀಗಾಗಿ ಕೊರೊನಾ ಯುದ್ಧದಲ್ಲಿ ಹಳ್ಳಿಗಳು ಗೆದ್ದರೆ ಇಡೀ ದೇಶವೇ ಗೆದ್ದಂತೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಆದರೆ, ಸರ್ಕಾರ, ಜಿಲ್ಲಾಡಳಿತ ಮಾತ್ರ ಪ್ರಧಾನಿಗಳ ಮಾತು ಕೇಳಿ ಸುಮ್ಮನಾಗಿದೆ ಹೊರತು ಯಾವುದೇ ಪ್ರಯೋಜನವಾಗುತ್ತಿಲ್ಲ. ಇದಕ್ಕೆ ಸಾಕ್ಷಿ ಗದಗ ಜಿಲ್ಲಾಡಳಿತ ಬೇಜವಾಬ್ದಾರಿ. ಗದಗ ಜಿಲ್ಲೆಯಲ್ಲಿ ಕೊರೊನಾ ನಡುವೆ ಜಾತ್ರೆ ನಡೆದಿದ್ದು, ನೂರಾರು ಜನರು ಒಂದೆಡೆ ಭಾಗಿಯಾಗಿದ್ದಾರೆ. ಆದರೆ ಈ ಹಳ್ಳಿಗಳ ಕಡೆ ಕಂದಾಯ, ಪೊಲೀಸ್, ಆರೋಗ್ಯ ಇಲಾಖೆ ಅಧಿಕಾರಿಗಳು ಮಾತ್ರ ಗಮನಕೊಡುತ್ತಿಲ್ಲ.
ಗದಗ ಜಿಲ್ಲೆಯಲ್ಲಿ ಕೊರೊನಾತಂಕ ಹೆಚ್ಚುತ್ತಿದೆ. ಇದಕ್ಕೆ ಕಾರಣ ಇಲ್ಲಿ ಜಾತ್ರೆ ಮೇಲೆ ಜಾತ್ರೆಗಳು ನಡೆಯುತ್ತಿರುವುದಾಗಿದೆ. ಮೇ 19 ರಂದು ಉಸ್ತುವಾರಿ ಸಚಿವ ಸಿ. ಸಿ. ಪಾಟೀಲ್ ಅವರ ಕ್ಷೇತ್ರ ಬನಹಟ್ಟಿ ಗ್ರಾಮದಲ್ಲಿ ಹನುಮಂತ ದೇವರ ಓಕಳಿ ಕಾರ್ಯಕ್ರಮದಲ್ಲಿ ನೂರಾರು ಜನರು ಭಾಗಿಯಾಗಿದ್ದ, ರಾಜ್ಯ ಮಟ್ಟದಲ್ಲಿ ಭಾರಿ ಸುದ್ದಿಯಾಗಿತ್ತು. ಆದ್ರೂ ಗದಗ ಜಿಲ್ಲಾಡಳಿತ ಎಚ್ಚೆತ್ತುಕೊಂಡಿಲ್ಲ. ಹಳ್ಳಿಗಳತ್ತ ನಿರ್ಲಕ್ಷ್ಯ ಮುಂದುವರೆದಿದೆ. ನಿನ್ನೆ (ಮೇ 25) ಜಿಲ್ಲಾಡಳಿತ ಭವನದ ನಾಲ್ಕೈದು ಕಿಲೋಮೀಟರ್ ದೂರದ ನಾಗಾವಿ ಗ್ರಾಮದಲ್ಲಿ ದೇವರ ಹೆಸರಲ್ಲಿ ದೇವಸ್ಥಾನಗಳಲ್ಲಿ ಜನರ ಗುಂಪು ಸೇರಿದೆ.
ಕೊರೊನಾ ಭಯದಲ್ಲೂ ಪುಟ್ಟ ಮಕ್ಕಳು, ವೃದ್ಧರು, ಯುವಕ, ಯುವತಿಯರು, ಮಹಿಳೆಯರು ಮಾಸ್ಕ್ ಇಲ್ಲದೇ ಗುಂಪು ಗುಂಪಾಗಿ ಪೂಜೆ ಪುನಸ್ಕಾರದಲ್ಲಿ ಭಾಗಿಯಾಗಿದ್ದರು. ಮಂಗಳವಾರ ದೇವಿವಾರದ ಹಿನ್ನಲೆಯಲ್ಲಿ ವಾರದ ಹಬ್ಬ ಮಾಡಿದ್ದಾರೆ. ಹೀಗಾಗಿ ದೇವಸ್ಥಾನಗಳಲ್ಲಿ ಜನರು ನೂರಾರು ಸಂಖ್ಯೆಯಲ್ಲಿ ಸೇರಿದ್ದಾರೆ. ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರಾದ ಸಿ. ಸಿ. ಪಾಟೀಲ್ ಕೇಳಿದರೆ ಕಾನೂನು ಉಲ್ಲಂಘನೆ ಮಾಡಿದವರ ಮೇಲೆ ಕೇಸ್ ಹಾಕುತ್ತೇವೆ. ಪಿಡಿಓ ಮತ್ತು ಕಾರ್ಯದರ್ಶಿ ಇಬ್ಬರು ಇರುತ್ತಾರೆ. ಇವರು ಗ್ರಾಮದವರನ್ನು ಹೆದರಿಸುತ್ತಾರೆ ಎಂದು ಹೇಳಿದ್ದಾರೆ.
ಗದಗ ಜಿಲ್ಲೆಯಲ್ಲಿ ಕೊರೊನಾ ಸೋಂಕಿಗೆ ನಿತ್ಯ 10-15 ಜನರು ಸಾಯುತ್ತಿದ್ದಾರೆ. ಹೀಗಿರುವಾಗ ಹಳ್ಳಿಗಳನ್ನು ಬಚಾವ್ ಮಾಡಲು ಜಿಲ್ಲಾಡಳಿತ ಇನ್ನಷ್ಟು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಅದು ಬಿಟ್ಟು ಜನರು ಸೇರಿದರೆ ಸೇರಲಿ ನಾವು ಕೇಸ್ ಹಾಕುತ್ತೇವೆ ಎನ್ನವುದು ಸರಿಯಲ್ಲ. ಇನ್ನು ಗ್ರಾಮ ಪಂಚಾಯತಿ ಅಧಿಕಾರಿಗಳಿಗೆ ಗೋತ್ತಿದ್ದರೂ ಜನಜಾತ್ರೆ ನಿಯಂತ್ರಣ ಮಾಡುವಲ್ಲಿ ಸಂಪೂರ್ಣ ನಿರ್ಲಕ್ಷ್ಯ ತೋರಿದ್ದಾರೆ. ಒಟ್ಟಾರೆ ಗದಗ ಜಿಲ್ಲಾಡಳಿತದ ವೈಫಲ್ಯ ಮತ್ತೊಮ್ಮೆ ಸಾಬೀತಾಗಿದೆ.
ಇದನ್ನೂ ಓದಿ: ಓಕಳಿ ಆಡಿದ ಗದಗದ ಗ್ರಾಮ ಸೀಲ್ಡೌನ್; ಕೊವಿಡ್ ನಿಯಮ ಉಲ್ಲಂಘಿಸಿದ ದೇವಸ್ಥಾನ ಅರ್ಚಕರ ವಿರುದ್ಧ ಪ್ರಕರಣ ದಾಖಲು
ಉತ್ತರ ಕನ್ನಡದ ಖಾಕಿಗೆ ಕಾಡುತ್ತಿದೆ ಕೊರೊನಾ ಆತಂಕ; ಲಾಕ್ಡೌನ್ ಜಾರಿ ನಂತರ 251 ಪೊಲೀಸರಲ್ಲಿ ಸೋಂಕು ಧೃಡ