ಬೆಂಗಳೂರು, (ಜೂನ್ 18): ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿ ಎಂ.ನಾಗಪ್ರಸನ್ನ(Karnataka high court justice nagaprasanna) ಅವರು ಒಂದು ದಿನದ ಕಲಾಪದ ಅವಧಿಯಲ್ಲಿ ವಿವಿಧ ಪ್ರಕಾರಗಳ 608 ಅರ್ಜಿಗಳನ್ನು ಅದೇ ದಿನವೇ ವಿಲೇವಾರಿ ಮಾಡುವ ಮೂಲಕ ಕರ್ನಾಟಕ ಹೈಕೋರ್ಟ್‌ನಲ್ಲಿ ಹೊಸ ದಾಖಲೆ ಬರೆದಿದ್ದಾರೆ. ಹೌದು.. ಬಾಕಿ ಪ್ರಕರಣಗಳ ವಿಲೇವಾರಿಯಲ್ಲಿ ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿ ಎಂ ನಾಗಪ್ರಸನ್ನ ಇಂದು (ಜೂನ್ 18) ಮತ್ತೊಂದು ಮಹತ್ವದ ಮೈಲುಗಲ್ಲು ಸಾಧಿಸಿದ್ದಾರೆ. ಇಂದು (ಜೂನ್ 18) ಒಂದೇ ದಿನ 600 ಅರ್ಜಿಗಳ ವಿಚಾರಣೆ ನಡೆಸಿದ್ದಾರೆ. ಈ ಪೈಕಿ ಹಲವು ಪ್ರಕರಣಗಳಲ್ಲಿ ಮಧ್ಯಂತರ ಆದೇಶ ಪ್ರಕಟಿಸಿರುವ ನ್ಯಾಯಮೂರ್ತಿಗಳು ಕೆಲ ಅರ್ಜಿಗಳಲ್ಲಿ ಅಂತಿಮ ಆದೇಶವನ್ನೂ ನೀಡಿದ್ದಾರೆ. ಈ ಹಿಂದೆಯೂ ಬಾಕಿ ಪ್ರಕರಣಗಳ ವಿಲೇವಾರಿಯಲ್ಲಿ ನ್ಯಾಯಮೂರ್ತಿ ಎಂ..ನಾಗಪ್ರಸನ್ನ ಹಲವು ವಿಕ್ರಮಗಳನ್ನು ಸಾಧಿಸಿದ್ದಾರೆ.
2023 ರ ಜೂ.12 ರಂದು ಒಂದೇ ದಿನ 522 ಪ್ರಕರಣಗಳ ವಿಚಾರಣೆ ನಡೆಸಿದ್ದರು. 2023 ರ ಡಿ.20 ರಂದು ಒಂದೇ ದಿನ 50 ತೀರ್ಪುಗಳನ್ನು ಪ್ರಕಟಿಸಿದ್ದರು. ಕೆಲ ತಿಂಗಳ ಹಿಂದೆ ಒಂದೇ ದಿನ 480 ಪ್ರಕರಣಗಳ ಪಟ್ಟಿ ಮಾಡಿಸಿ ಅಷ್ಟೂ ಪ್ರಕರಣಗಳ ವಿಚಾರಣೆ ನಡೆಸಿದ್ದರು. ಬಾಕಿ ಪ್ರಕರಣಗಳ ವಿಲೇವಾರಿಯಲ್ಲಿ ಮಹತ್ವದ ಪಾತ್ರ ವಹಿಸಿರುವ ನ್ಯಾಯಮೂರ್ತಿಗಳು ಪ್ರಕರಣವನ್ನು ಶೀಘ್ರವಾಗಿ ಗ್ರಹಿಸಿ ತಕ್ಷಣ ಆದೇಶ ಪ್ರಕಟಿಸುವುದರಲ್ಲಿ ಸಿದ್ದಹಸ್ತರೆಂದು ಹೈಕೋರ್ಟ್ ವಕೀಲರ ವಲಯದಲ್ಲಿ ಖ್ಯಾತಿ ಗಳಿಸಿದ್ದಾರೆ.
ಇದನ್ನೂ ಓದಿ: ಮೋದಿ-ಸಿದ್ದರಾಮಯ್ಯ ಸರ್ಕಾರ, ದರ್ಶನ್ ಬಗ್ಗೆ ಸ್ಫೋಟಕ ಭವಿಷ್ಯ ನುಡಿದ ಕೋಡಿಶ್ರೀ
ಈಗ ಕ್ರಿಮಿನಲ್ ಪ್ರಕರಣ ರದ್ದು ಕೋರಿರುವ ಅರ್ಜಿಗಳ ವಿಚಾರಣೆಯ ಹೊಣೆ ಹೊತ್ತಿರುವ ನ್ಯಾಯಮೂರ್ತಿ ಇಂದು ಒಂದೇ ದಿನ 600 ಪ್ರಕರಣಗಳ ವಿಚಾರಣೆ ನಡೆಸುವ ಮೂಲಕ ತ್ವರಿತ ನ್ಯಾಯದಾನದ ಹಾದಿಯಲ್ಲಿ ಮಹತ್ವದ ಹೆಜ್ಜೆ ಇಟ್ಟಿದ್ದಾರೆ. ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರು 2019ರ ನವೆಂಬರ್ 26ರಂದು ಕರ್ನಾಟಕ ಹೈಕೋರ್ಟ್‌ನ ಹೆಚ್ಚುವರಿ ನ್ಯಾಯಮೂರ್ತಿಯಾಗಿ ನೇಮಕಗೊಂಡು 2021ರ ಸೆಪ್ಟಂಬರ್ 8ರಂದು ಕಾಯಂ ನ್ಯಾಯಮೂರ್ತಿಯಾಗಿ ನೇಮಕಗೊಂಡಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ