ಬೆಡ್​ ಬ್ಲಾಕಿಂಗ್ ದಂಧೆ: ತನಿಖಾ ಪ್ರಗತಿ ವರದಿ ಸಲ್ಲಿಸಲು ಹೈಕೋರ್ಟ್​ ಸೂಚನೆ

ಅಕ್ರಮವಾಗಿ ಬೆಡ್ ಬ್ಲಾಕಿಂಗ್ ಮಾಡುತ್ತಿರುವ ವಿಚಾರದ ಬಗ್ಗೆ ತನಿಖಾ ಪ್ರಗತಿ ವರದಿ ಸಲ್ಲಿಸಬೇಕು ಎಂದು ಪೊಲೀಸರಿಗೆ ಹೈಕೋರ್ಟ್ ಸೂಚನೆ ನೀಡಿದೆ.

ಬೆಡ್​ ಬ್ಲಾಕಿಂಗ್ ದಂಧೆ: ತನಿಖಾ ಪ್ರಗತಿ ವರದಿ ಸಲ್ಲಿಸಲು ಹೈಕೋರ್ಟ್​ ಸೂಚನೆ
ಕರ್ನಾಟಕ ಹೈಕೋರ್ಟ್

Updated on: May 05, 2021 | 7:09 PM

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯ ಆಸ್ಪತ್ರೆಗಳಲ್ಲಿ ಅಕ್ರಮವಾಗಿ ಬೆಡ್ ಬ್ಲಾಕಿಂಗ್ ಮಾಡುತ್ತಿರುವ ವಿಚಾರದ ಬಗ್ಗೆ ತನಿಖಾ ಪ್ರಗತಿ ವರದಿ ಸಲ್ಲಿಸಬೇಕು ಎಂದು ಪೊಲೀಸರಿಗೆ ಹೈಕೋರ್ಟ್ ಸೂಚನೆ ನೀಡಿದೆ. ಎಲ್ಲ ಜಿಲ್ಲೆಗಳಲ್ಲೂ ಪ್ರತ್ಯೇಕ ಸಹಾಯವಾಣಿ ಆರಂಭಿಸಬೇಕು. ಕೊವಿಡ್​ನಿಂದ ಆದಾಯ ಕಳೆದುಕೊಂಡವರಿಗೆ ಆಹಾರ ಭದ್ರತೆ ಒದಗಿಸಬೇಕು ಎಂದು ಹೈಕೋರ್ಟ್​ ನಿರ್ದೇಶನ ನೀಡಿದೆ.

ಮತ್ತೊಂದೆಡೆ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಗೃಹ ಸಚಿವ ಬಸವರಾಜ ಬೊಮ್ಮಾಯಿ, ಬೆಡ್​ ಬ್ಲಾಕಿಂಗ್​ ಪ್ರಕರಣದಲ್ಲಿ ವೈದ್ಯರು ಮತ್ತು ಸಿಬ್ಬಂದಿಯ ಕೈವಾಡ ಇರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಶಂಕಿತ ಕೆಲ ವೈದ್ಯರು, ಸಿಬ್ಬಂದಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ಹೇಳಿದರು.

ಸ್ಟೆಪ್​ಡೌನ್​ ಆಸ್ಪತ್ರೆ ಮಾಡುವುದಕ್ಕೆ ಹೋಟೆಲ್​ನವರು ಮುಂದೆ ಬರುತ್ತಾರೆ. ಸ್ಟೆಪ್​ಡೌನ್ ಆಸ್ಪತ್ರೆ ಆದರೆ 20 ಸಾವಿರಕ್ಕೂ ಹೆಚ್ಚು ಬೆಡ್ ಇರುತ್ತದೆ. ನಮಗೆ ಮೂರು ಸಾವಿರ ಬೆಡ್ ಆದರೆ ಸಾಕು ಎಂದು ಬೊಮ್ಮಾಯಿ ಹೇಳಿದರು.

ಸಚಿವರ ಜೊತೆಗೆ ಯಡಿಯೂರಪ್ಪ ಸಭೆ
ಕೊರೊನಾ ನಿರ್ವಹಣೆಯ ಜವಾಬ್ದಾರಿ ವಹಿಸಿರುವ ಸಚಿವರ ಜೊತೆಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಮ್ಮ ಅಧಿಕೃತ ನಿವಾಸ ಕಾವೇರಿಯಲ್ಲಿ ಸಭೆ ನಡೆಸಿದರು. ತಮ್ಮ ತಮ್ಮ ವಿಭಾಗದ ಬೆಳವಣಿಗೆಗಳ ಸಚಿವರು ಮುಖ್ಯಮಂತ್ರಿಗೆ ವಿವರ ನೀಡಿದರು.

ಡಿಸಿಎಂ ಡಾ.ಅಶ್ವತ್ಥ್​ ನಾರಾಯಣ, ಗೃಹ ಸಚಿವ ಬಸವರಾಜ ಬೊಮ್ಮಾಯಿ‌, ಕಂದಾಯ ಸಚಿವ ಆರ್.ಅಶೋಕ್, ಸಚಿವರಾದ ಅರವಿಂದ ಲಿಂಬಾವಳಿ, ಜಗದೀಶ್ ಶೆಟ್ಟರ್, ಆರೋಗ್ಯ ಸಚಿವ ಸುಧಾಕರ್ ಮತ್ತು ಅಧಿಕಾರಿಗಳು ಸಭೆಯಲ್ಲಿ ಭಾಗಿಯಾಗಿದ್ದರು.

ಮಹಿಳೆಯನ್ನು ನೇಮಿಸಿದವರು ಯಾರು: ಎಚ್​ಡಿಕೆ ಪ್ರಶ್ನೆ
ಬೆಡ್ ಬ್ಲಾಕ್ ದಂಧೆಯಲ್ಲಿ ಮಹಿಳೆ ಬಂಧನ ವಿಚಾರಕ್ಕೆ ಸಂಬಂಧಿಸಿದಂತೆ ಮಂಡ್ಯ ನಗರದಲ್ಲಿ ಪ್ರತಿಕ್ರಿಯಿಸಿದ ಮಾಜಿ ಮುಖ್ಯಮಂತ್ರಿ ಎಚ್​.ಡಿ.ಕುಮಾರಸ್ವಾಮಿ, ‘ಆ ಮಹಿಳೆಯನ್ನು ನೇಮಿಸಿದವರು ಯಾರೆಂದು ಸ್ಪಷ್ಟಪಡಿಸಬೇಕು’ ಎಂದು ರಾಜ್ಯ ಸರ್ಕಾರಕ್ಕೆ ಆಗ್ರಹಿಸಿದರು. ಚಾಮರಾಜನಗರ ಘಟನೆ ತನಿಖೆಯಿಂದ ಏನು ಪ್ರಯೋಜನ? ಯಾರಿಗೆ ಶಿಕ್ಷೆ ಕೊಡ್ತೀರಿ, ರಾಜ್ಯ ಸರ್ಕಾರದ್ದೇ ತಪ್ಪಿದೆ‌ ಎಂದು ಹೇಳಿದರು.

ಇದನ್ನೂ ಓದಿ: ಬೆಡ್ ಬ್ಲಾಕಿಂಗ್ ಹಗರಣ: ಬೆಂಗಳೂರಿನ ಎಲ್ಲಾ ವಲಯದ ಕೊವಿಡ್ ವಾರ್ ರೂಮ್ ಮೇಲೆ ಸಿಸಿಬಿ ಅಧಿಕಾರಿಗಳ ದಾಳಿ

ಇದನ್ನೂ ಓದಿ: ಜೂನ್​ ವೇಳೆ ಬೆಂಗಳೂರಿಗೆ 70 ಸಾವಿರ ಆಕ್ಸಿಜನ್ ಬೆಡ್ ಬೇಕು: ಕೇಂದ್ರ ಸರ್ಕಾರ

Published On - 7:07 pm, Wed, 5 May 21