ಜೂನ್ ವೇಳೆ ಬೆಂಗಳೂರಿಗೆ 70 ಸಾವಿರ ಆಕ್ಸಿಜನ್ ಬೆಡ್ ಬೇಕು: ಕೇಂದ್ರ ಸರ್ಕಾರ
ಜೂನ್ ಮೊದಲ ವಾರದ ವೇಳೆಗೆ ಬೆಂಗಳೂರಿಗೆ 70 ಸಾವಿರ ಆಕ್ಸಿಜನ್ ಬೆಡ್ಗಳು ಬೇಕಾಗಬಹುದು ಎಂದು ಕೇಂದ್ರ ಸರ್ಕಾರ ರಾಜ್ಯಸರ್ಕಾರಕ್ಕೆ ಮಾಹಿತಿ ರವಾನಿಸಿದೆ.
ಬೆಂಗಳೂರು: ದಿನ ಸಾಗುತ್ತಿದ್ದಂತೆಯೇ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದೆ. ನಗರದ ಜನರು ಆಸ್ಪತ್ರೆಗಳಲ್ಲಿ ಜಾಗವಿಲ್ಲದೇ ಒದ್ದಾಡುತ್ತಿದ್ದಾರೆ. ಇದೇ ಸಮಯದಲ್ಲಿ ಜನರಿಗೆ ಮತ್ತೊಂದು ಆತಂಕಕಾರಿ ಸುದ್ದಿಯೊಂದು ಕೇಳಿ ಬರುತ್ತಿದೆ. ಜೂನ್ ಮೊದಲ ವಾರದ ವೇಳೆಗೆ ಬೆಂಗಳೂರಿಗೆ 70 ಸಾವಿರ ಆಕ್ಸಿಜನ್ ಬೆಡ್ಗಳು ಬೇಕಾಗಬಹುದು ಎಂದು ಕೇಂದ್ರ ಸರ್ಕಾರ ರಾಜ್ಯಸರ್ಕಾರಕ್ಕೆ ಮಾಹಿತಿ ರವಾನಿಸಿದೆ.
ನಿನ್ನೆ ನಡೆದ ವಿಶೇಷ ಸಚಿವ ಸಂಪುಟ ಸಭೆಯಲ್ಲಿ ಈ ಕುರಿತಂತೆ ಕೊವಿಡ್ ಟಾಸ್ಕ್ ಫೋರ್ಸ್ ಅಧ್ಯಕ್ಷ ಡಾ. ಅಶ್ವಥ್ ನಾರಾಯಣ ಅವರು ಮಾಹಿತಿ ಬಹಿರಂಗಪಡಿಸಿದ್ದಾರೆ. ಹೀಗಾಗಿ ರಾಜ್ಯದ ಪಾಲಿನ ಆಕ್ಸಿಜನ್ ರಾಜ್ಯವೇ ಬಳಕೆ ಮಾಡಲು ಅನುಮತಿ ಪಡೆಯುವಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಮೇಲೆ ಸಚಿವ ಒತ್ತಡ ಹೇರಿದ್ದಾರೆ.
ತುರ್ತು ಸಭೆ ಕರೆದ ಸಿಎಂ ಯಡಿಯೂರಪ್ಪ ಯಾವ ಸಚಿವರಿಗೆ ಯಾವ ಹೊಣೆಗಾರಿಕೆ ನೀಡಿದರು? ಇಲ್ಲಿದೆ ವಿವರ ಜಿಲ್ಲಾ ಉಸ್ತುವಾರಿ ಸಚಿವರು ಜಿಲ್ಲೆಗಳಲ್ಲಿ ಕೊವಿಡ್ ಸಂಬಂಧಿತ ಸಮಸ್ಯೆಗಳನ್ನು ಸರಿಪಡಿಸಬೇಕು. ಮೆಡಿಕಲ್ ಆಕ್ಸಿಜನ್ ಸರಬರಾಜು ವ್ಯವಸ್ಥೆಯ ಜವಾಬ್ಧಾರಿಯನ್ನು ಸಚಿವ ಜಗದೀಶ್ ಶೆಟ್ಟರ್ ಅವರಿಗೆ ವಹಿಸಲಾಗಿದೆ. ರೆಮ್ಡೆಸಿವರ್ ಪೂರೈಕೆ ನಿರ್ವಹಣೆ ಜವಾಬ್ದಾರಿಯನ್ನು ಉಪ ಮುಖ್ಯಮಂತ್ರಿ ಡಾ ಸಿ.ಎನ್. ಆಶ್ವತ್ಥನಾರಾಯಣ ಅವರು ವಹಿಸಿಕೊಳ್ಳಲಿದ್ದಾರೆ. ಆಸ್ಪತ್ರೆಗಳಲ್ಲಿನ ಬೆಡ್ಗಳ ಹೊಣೆಗಾರಿಕೆಯನ್ನು ಸಚಿವ ಆರ್. ಅಶೋಕ್ ನೋಡಿಕೊಳ್ಳಲಿದ್ದಾರೆ. ಹಾಗೇ, ಅರಣ್ಯ ಸಚಿವ ಅರವಿಂದ್ ಲಿಂಬಾವಳಿ, ಗೃಹ ಸಚಿವ ಬಸವರಾಜ ಬೊಮ್ಮಾಯಿಯವರಿಗೂ ಕೆಲ ಜವಾಬ್ದಾರಿ ಹೊರಿಸಲಾಗಿದೆ. ರಾಜ್ಯದಲ್ಲಿ ಮಾಧ್ಯಮದವರನ್ನು ಕೊವಿಡ್ ವಾರಿಯರ್ಸ್ ಎಂದು ಪರಿಗಣಿಸಲು ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದು ಸಿಎಂ ಯಡಿಯೂರಪ್ಪ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಚಾಮರಾಜನಗರದ ಘಟನೆ ಬಗ್ಗೆ ತೀವ್ರ ವಿಷಾದ ವ್ಯಕ್ತಪಡಿಸುತ್ತೇನೆ. ದುರಂತದ ಬಗ್ಗೆ 3 ದಿನದಲ್ಲಿ ವರದಿ ನೀಡಲು ಸೂಚಿಸಿದ್ದೇನೆ. ಮಹಾರಾಷ್ಟ್ರದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಕಡಿಮೆ ಆಗುತ್ತಿದೆ. ಹಾಗಾಗಿ ಜಿಂದಾಲ್ ಕಂಪನಿ ಉತ್ಪಾದಿಸುವ ಮೆಡಿಕಲ್ ಆಕ್ಸಿಜನ್ನ್ನು ನಾವೇ ಬಳಸಿಕೊಳ್ಳುತ್ತೇವೆ. ಈಕುರಿತು ಕೇಂದ್ರಕ್ಕೆ ಮನವಿ ಮಾಡುತ್ತೇವೆ. ಸಂಸದ ತೇಜಸ್ವಿ ಸೂರ್ಯ ಹಾಸಿಗೆ ಬ್ಲಾಕಿಂಗ್ ಮಾಡುವ ದಂದೆ ಬಯಲಿಗೆಳೆದಿದ್ದಾರೆ. ಇನ್ನು ಅರ್ಧ ಗಂಟೆಯಲ್ಲಿ ಈ ಅವ್ಯವಹಾರದ ವಿರುದ್ಧ ಕ್ರಮ ಕೈಗೊಳ್ಳುತ್ತೇನೆ ಎಂದು ಸಿಎಂ ಯಡಿಯೂರಪ್ಪ ವಿವರಿಸಿದ್ದಾರೆ.