AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಯಾರೂ ಸಹ ನನಗೆ ಕರೆ ಮಾಡಿಲ್ಲ… ಗೌತಮ್ ಗಂಭೀರ್ ಬೇಸರ

Gautam Gambhir: ಗೌತಮ್ ಗಂಭೀರ್ ಟೀಮ್ ಇಂಡಿಯಾದ ಮುಖ್ಯ ಕೋಚ್ ಆದ ಬಳಿಕ ಭಾರತ ತಂಡವು ಏಕದಿನ ಹಾಗೂ ಟಿ20 ಕ್ರಿಕೆಟ್​ನಲ್ಲಿ ಭರ್ಜರಿ ಪ್ರದರ್ಶನ ನೀಡಿದೆ. ಇದಾಗ್ಯೂ ಟೆಸ್ಟ್ ಕ್ರಿಕೆಟ್​ನಲ್ಲಿ ಟೀಮ್ ಇಂಡಿಯಾದ ಪ್ರದರ್ಶನ ಅಷ್ಟಕ್ಕಷ್ಟೇ. ಅದರಲ್ಲೂ ಭಾರತ ತಂಡವು ಗಂಭೀರ್ ಗರಡಿಯಲ್ಲಿ ನ್ಯೂಝಿಲೆಂಡ್ ಹಾಗೂ ಸೌತ್ ಆಫ್ರಿಕಾ ವಿರುದ್ಧ ಸರಣಿ ಸೋತು ಭಾರೀ ಮುಖಭಂಗಕ್ಕೆ ಒಳಗಾಗಿತ್ತು. ಇದೀಗ ಇವೆಲ್ಲವನ್ನೂ ಮರೆಮಾಚುವಂತೆ ಟೀಮ್ ಇಂಡಿಯಾ ಟಿ20 ವಿಶ್ವಕಪ್ ಗೆದ್ದುಕೊಂಡಿದೆ.

ಯಾರೂ ಸಹ ನನಗೆ ಕರೆ ಮಾಡಿಲ್ಲ... ಗೌತಮ್ ಗಂಭೀರ್ ಬೇಸರ
Gautam Gambhir
ಝಾಹಿರ್ ಯೂಸುಫ್
|

Updated on: Mar 11, 2026 | 3:09 PM

Share

ಟಿ20 ವಿಶ್ವಕಪ್​ ಟೂರ್ನಿಯಲ್ಲಿ ಭಾರತ ತಂಡ ವಿಶ್ವ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಈ ಚಾಂಪಿಯನ್ ಪಟ್ಟದ ಹಿಂದಿನ ರೂವಾರಿ ಕೋಚ್ ಗೌತಮ್ ಗಂಭೀರ್. ಚಾಂಪಿಯನ್ ಟ್ರೋಫಿ ಮುಕ್ತಾಯದ ಬೆನ್ನಲ್ಲೇ ಟಿ20 ವಿಶ್ವಕಪ್​ಗಾಗಿ ಹೊಸ ಪಡೆ ಕಟ್ಟಿದ್ದ ಗಂಭೀರ್ ಇದೀಗ ತಮ್ಮ ರಣತಂತ್ರದೊಂದಿಗೆ ಭಾರತ ತಂಡಕ್ಕೆ ವಿಶ್ವಕಪ್ ತಂದುಕೊಟ್ಟಿದ್ದಾರೆ. ಈ ವಿಶ್ವಕಪ್ ಗೆಲುವಿನ ಖುಷಿಯಲ್ಲಿರುವ ಗಂಭೀರ್ ಈ ಹಿಂದಿನ ಸೋಲುಗಳ ಬಗ್ಗೆ ಮಾತನಾಡಿದ್ದಾರೆ. ಈ ಸೋಲುಗಳ ನಡುವೆ ತನ್ನ ಜೊತೆ ನಿಂತ ಏಕೈಕ ವ್ಯಕ್ತಿ ಜಯ್​ ಶಾ ಎಂದಿದ್ದಾರೆ.

ಟೀಮ್ ಇಂಡಿಯಾ ಗೆಲುವಿನ ನಂತರ ಸುದ್ದಿ ಸಂಸ್ಥೆ ANI ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಗೌತಮ್ ಗಂಭೀರ್, ನ್ಯೂಝಿಲೆಂಡ್ ಮತ್ತು ಸೌತ್ ಆಫ್ರಿಕಾ ವಿರುದ್ಧದ ತವರಿನಲ್ಲಿ ನಡೆದ ಟೆಸ್ಟ್ ಸರಣಿಯಲ್ಲಿ ಟೀಮ್ ಇಂಡಿಯಾ ಸೋಲು ನನ್ನ ಕಾರ್ಯಾವಧಿಯ ಕೆಟ್ಟ ಘಳಿಗೆ.

ತವರಿನಲ್ಲಿನ ಎರಡು ಸೋಲುಗಳನ್ನು ನಾನು ಎಂದಿಗೂ ಮರೆಯುವುದಿಲ್ಲ. ಈ ಹೀನಾಯ ಸೋಲಿನ ಬಳಿಕ ನನಗೆ ಯಾರೂ ಸಹ ಕರೆ ಮಾಡಿರಲಿಲ್ಲ. ಆದರೆ ಜಯ್ ಶಾ ಒಬ್ಬರು ಮಾತ್ರ ಕರೆ ಮಾಡಿ ಮಾತನಾಡಿದ್ದರು.

ಮುಂಬೈನಲ್ಲಿ ನ್ಯೂಝಿಲೆಂಡ್ ವಿರುದ್ಧ ಸೋತ ಬಳಿಕ ಜಯ್​ ಶಾ ಕರೆ ಮಾಡಿದ್ದರು. ನಾನು ಸೋಲಿನಿಂದ ಸಂಪೂರ್ಣ ಕುಗ್ಗಿದ್ದ ಸಮಯ ಅದು. ಈ ವೇಳೆ ಅವರು ಕರೆ ಮಾಡಿ ನೀಡಿದ ಬೆಂಬಲ ನಿಜಕ್ಕೂ ಸ್ಮರಣೀಯ. ಧೈರ್ಯವಾಗಿರಿ, ನಾವು ನಿಮ್ಮೊಂದಿಗಿದ್ದೇವೆ ಎಂದು ಅವರು ಬೆಂಬಲ ಸೂಚಿಸಿದ್ದರು.

ಇದಾದ ಬಳಿಕ ಸೌತ್ ಆಫ್ರಿಕಾ ವಿರುದ್ಧ ಕೂಡ ಸೋತಾಗ ಜಯ್​ ಶಾ ಕರೆ ಮಾಡಿ ಸಮಾಧಾನ ಪಡಿಸಿದ್ದರು. ಅಷ್ಟೇ ಅಲ್ಲದೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿ, ಹೊಸ ಉತ್ಸಾಹ ತುಂಬಿದ್ದರು. ಇದನ್ನು ನಾನು ಯಾವಾಗಲೂ ನೆನಪಿಸಿಕೊಳ್ಳುತ್ತೇನೆ.

ಏಕೆಂದರೆ ಇಂದು ಟಿ20 ವಿಶ್ವಕಪ್ ಗೆಲ್ಲಲು ಅಥವಾ ಕೋಚ್ ಆಗಿ ಮುಂದುವರೆಯಲು ಜಯ್ ಶಾ ನೀಡಿದ ಬೆಂಬಲವೇ ಕಾರಣ. ಅಷ್ಟೇ ಅಲ್ಲದೆ ನಾನು ಟೀಮ್ ಇಂಡಿಯಾ ಮುಖ್ಯ ಕೋಚ್ ಹುದ್ದೆ ಅಲಂಕರಿಸಲು ಕೂಡ ಅವರೇ ಕಾರಣಕರ್ತರು.

ಐಪಿಎಲ್ (2024) ನಲ್ಲಿ ಮುಂಬೈ vs ಕೆಕೆಆರ್ ಪಂದ್ಯದ ಸಮಯದಲ್ಲಿ ಜಯ್ ಭಾಯ್ (ಜಯ್ ಶಾ) ಅವರಿಂದ ನನಗೆ ಕರೆ ಬಂದಿತ್ತು. ಹೀಗೆ ಕರೆ ಮಾಡಿ ಅವರು ಹೇಳಿದ್ದು,  ‘ನಾನು ನಿಮಗೆ ಒಂದು ಆಫರ್ ನೀಡಲು ಬಯಸುತ್ತೇನೆ, ಆದರೆ ನೀವು ನಿರಾಕರಿಸುಂತಿಲ್ಲ. ಇದಾದ ಬಳಿಕ ಅವರು ನೀವು ಟೀಮ್ ಇಂಡಿಯಾದ ಮುಖ್ಯ ಕೋಚ್ ಆಗಬೇಕು’ ಎಂದರು.

ಇದನ್ನು ಕೇಳಿ ನನಗೆ ಆಶ್ಚರ್ಯವಾಯಿತು. ಏಕೆಂದರೆ ಆ ಸಮಯದಲ್ಲಿ ನಾನು ಅದಕ್ಕೆ ಸಿದ್ಧನಾಗಿರಲಿಲ್ಲ. ಟೀಮ್ ಇಂಡಿಯಾದ ಮುಖ್ಯ ಕೋಚ್ ಆಗುವುದು ನನಗೆ ದೊಡ್ಡ ಗೌರವವಾಗಿತ್ತು. ಏಕೆಂದರೆ ಕೆಲವೇ ಕೆಲವು ಮಾಜಿ ಆಟಗಾರರಿಗೆ ಮಾತ್ರ ಡ್ರೆಸ್ಸಿಂಗ್ ಕೋಣೆಗೆ ಕೋಚ್ ಆಗಿ ಮರಳುವ ಅವಕಾಶ ದೊರೆಯುತ್ತದೆ.

ಅಂತಹದೊಂದು ಅವಕಾಶ ನನ್ನ ಮುಂದಿತ್ತು. ಆದರೆ ನನ್ನಲ್ಲಿ ಮುಖ್ಯ ಕೋಚ್ ಅನುಭವ ಇರಲಿಲ್ಲ. ಇದಾಗ್ಯೂ ಜಯ್ ಶಾ ಅವರು ನನ್ನ ಮೇಲೆ ನಂಬಿಕೆ ಇರಿಸಿದ್ದರು. ಈ ನಂಬಿಕೆಗೆ ನಾನು ಅವರಿಗೆ ಕೃತಜ್ಞತೆ ಸಲ್ಲಿಸಲೇಬೇಕು. ಏಕೆಂದರೆ ಇದೀಗ ಟಿ20 ವಿಶ್ವಕಪ್ ಗೆದ್ದಿದ್ದೇವೆ.

ಇದನ್ನೂ ಓದಿ: ಭಾರತ ತಂಡ ಸೂರ್ಯಕುಮಾರ್, ಜಯ್ ಶಾ ಅವರ ಕುಟುಂಬ ಸ್ವತ್ತಲ್ಲ!

ಆದರೆ ಅಂದು ನನ್ನನ್ನು ನಂಬಿದ್ದು ಜಯ್ ಶಾ ಮಾತ್ರ. ನ್ಯೂಝಿಲೆಂಡ್, ಸೌತ್ ಆಫ್ರಿಕಾ ವಿರುದ್ಧ ತವರಿನಲ್ಲಿ ಟೆಸ್ಟ್ ಸರಣಿ ಸೋತಾಗಲೂ ಅವರು ಮಾತ್ರ ನನ್ನ ಮೇಲೆ ನಂಬಿಕೆಯಿಟ್ಟಿದ್ದರು. ಹೀಗಾಗಿ ಜಯ್ ಶಾ ಅವರಿಗೆ ಧನ್ಯವಾದಗಳನ್ನು ಹೇಳಲೇಬೇಕು ಎಂದು ಗೌತಮ್ ಗಂಭೀರ್ ಹಳೆಯ ಘಟನೆಗಳನ್ನು ಸ್ಮರಿಸಿಕೊಂಡಿದ್ದಾರೆ.

Follow Us