ಬೆಂಗಳೂರು: ಹೊಸಪೇಟೆ-ವಾಸ್ಕೋ ಮತ್ತು ಲೋಂಡಾ-ಮಿರಜ್ ರೈಲು ಮಾರ್ಗಗಳ (Hospet-Vasco and Londa-Miraj route) ಪಶ್ಚಿಮ ಘಟ್ಟಗಳ ದಟ್ಟ ಅರಣ್ಯಗಳ ಪ್ರದೇಶಗಳಲ್ಲಿ ರಾತ್ರಿ ಸಮಯದಲ್ಲಿ ರೈಲುಗಳ ವೇಗವನ್ನು ಮಿತಿಗೊಳಿಸುವಂತೆ ಕೋರಿ ಸಲ್ಲಿಸಲಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ (ಪಿಐಎಲ್) ಪ್ರತಿಕ್ರಿಯೆ ನೀಡುವಂತೆ ಕರ್ನಾಟಕ ಅರಣ್ಯ ಇಲಾಖೆಗೆ (Karnataka forest department) ಹೈಕೋರ್ಟ್ (Karnataka High Court) ಮಂಗಳವಾರ ಸೂಚನೆ ನೀಡಿದೆ. ಗಿರಿಧರ್ ಕುಲಕರ್ಣಿ ಅವರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಿ ವರಾಳೆ ಮತ್ತು ನ್ಯಾಯಮೂರ್ತಿ ಅಶೋಕ್ ಎಸ್ ಕಿಣಗಿ ಅವರಿದ್ದ ವಿಭಾಗೀಯ ಪೀಠ ವಿಚಾರಣೆ ನಡೆಸಿತು. ಬೆಳಗಾವಿ, ಹಳಿಯಾಳ ಮತ್ತು ಧಾರವಾಡ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ಮತ್ತು ಕಾಳಿ ಹುಲಿ ಸಂರಕ್ಷಿತ ಪ್ರದೇಶದ ನಿರ್ದೇಶಕರು ಎರಡು ವಾರಗಳ ಒಳಗಾಗಿ ತಮ್ಮ ಉತ್ತರವನ್ನು ಸಲ್ಲಿಸುವಂತೆ ನ್ಯಾಯಾಲಯ ಸೂಚಿಸಿದೆ.
ರೈಲು ವೇಗ ಕಡಿಮೆ ಮಾಡುವ ವಿಚಾರವಾಗಿ ಕೇಂದ್ರ ಸರ್ಕಾರ ಈಗಾಗಲೇ ತನ್ನ ವಿವರಣೆ ಸಲ್ಲಿಸಿದ್ದು, ರೈಲ್ವೆ ಅಧಿಕಾರಿಗಳು ಮತ್ತು ಅರಣ್ಯ ಇಲಾಖೆ ಅಧಿಕಾರಿಗಳ ನಡುವೆ ಸಭೆ ನಡೆಸಲಾಗುತ್ತಿದೆ ಎಂದು ತಿಳಿಸಿದೆ.
ರಾತ್ರಿ ವೇಳೆ ಕಾಡಿನ ಮೂಲಕ ಹಾದುಹೋಗುವ ರೈಲುಗಳ ವೇಗವನ್ನು ಕಡಿಮೆ ಮಾಡುವಂತೆ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದ್ದರೂ, ಈ ಮಾರ್ಗಗಳಲ್ಲಿ ರೈಲುಗಳು ಹೆಚ್ಚಿನ ವೇಗದಲ್ಲಿ ಸಂಚರಿಸುತ್ತಿವೆ. ಇದರಿಂದಾಗಿ ವನ್ಯಜೀವಿಗಳು ಅಪಘಾತಕ್ಕೀಡಾಗುವುದನ್ನು ತಪ್ಪಿಸಲು ವೇಗ ಕಡಿಮೆ ಮಾಡುವಂತೆ ನಿರ್ದೇಶಿಸಬೇಕು ಎಂದು ಅರ್ಜಿಯಲ್ಲಿ ಮನವಿ ಮಾಡಲಾಗಿದೆ.
ಇದನ್ನೂ ಓದಿ: Karnataka High Court Recruitment 2023: ಕರ್ನಾಟಕ ಹೈಕೋರ್ಟ್ನಲ್ಲಿನ ಚಾಲಕ ಹುದ್ದೆಗಳಿಗೆ ಅರ್ಜಿ ಆಹ್ವಾನ
2014ರಿಂದ ಎರಡು ಆನೆಗಳು, 49 ಗೌರ್‌ಗಳು, ಐದು ಸಾಂಬಾರ್ ಜಿಂಕೆಗಳು, ಒಂದು ಸೋಮಾರಿ ಕರಡಿ, ಒಂದು ಕಾಡು ನಾಯಿ, ಒಂದು ಕಾಡು ಹಂದಿ ಮತ್ತು ಒಂದು ಜಿಂಕೆ ಸೇರಿದಂತೆ 60 ಕಾಡು ಪ್ರಾಣಿಗಳು (ಸರೀಸೃಪಗಳು ಮತ್ತು ಉಭಯಚರಗಳನ್ನು ಹೊರತುಪಡಿಸಿ) ಈ ಎರಡು ರೈಲ್ವೆ ಮಾರ್ಗಗಳಲ್ಲಿ ಸಾವನ್ನಪ್ಪಿವೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.
ಹಲವಾರು ಬಾರಿ ವಿನಂತಿ ಮಾಡಿದ್ದರೂ ಕಾಡು ಪ್ರಾಣಿಗಳ ಅಪಘಾತಗಳನ್ನು ತಪ್ಪಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲು ರೈಲ್ವೆ ಇಲಾಖೆ ವಿಫಲವಾಗಿದೆ. ಈ ಸಮಸ್ಯೆಗಳ ಕುರಿತು ಅಧಿಕಾರಿಗಳಿಗೆ ನೀಡಿದ ಮನವಿಗಳನ್ನು ನಿರ್ಲಕ್ಷಿಸಲಾಗಿದೆ ಎಂದೂ ಅರ್ಜಿದಾರರು ಉಲ್ಲೇಖಿಸಿದ್ದಾರೆ.
ಪ್ರಸ್ತುತ ಇರುವ ಎರಡು ಮಾರ್ಗಗಳನ್ನು ಕೈಬಿಟ್ಟು ಬೆಳಗಾವಿ-ಧಾರವಾಡ ನಡುವೆ ಪರ್ಯಾಯ ರೈಲು ಮಾರ್ಗ ನಿರ್ಮಿಸಲು ಅಧಿಕಾರಿಗಳಿಗೆ ನಿರ್ದೇಶನ ನೀಡಬೇಕು ಎಂದೂ ಮನವಿಯಲ್ಲಿ ಕೋರಲಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ