ಹಿಜಾಬ್ ಕೇಸ್ ವಿಚಾರಣೆ ಇಂದು ಹೈಕೋರ್ಟ್ನಲ್ಲಿ ವಾದ -ಪ್ರತಿವಾದವನ್ನು ಆಲಿಸಿದೆ. ರಾಜ್ಯ ಸರ್ಕಾರದ ಪರ ವಾದಮಂಡನೆ ಮಾಡಿದ್ದು, ಹೈಕೋರ್ಟ್ ವಿಚಾರಣೆಯನ್ನು ಸೋಮವಾರ ಮಧ್ಯಾಹ್ನ 2:30ಕ್ಕೆ ಮುಂದೂಡಲಾಗಿದೆ. ಸೋಮವಾರವೂ ಸರ್ಕಾರದ ಪರ ಎಜಿ ಪ್ರಭುಲಿಂಗ ನಾವದಗಿ ವಾದ ಮಂಡಿಸಲಿದ್ದಾರೆ.ಹಿಜಾಬ್ ಕೇಸರಿ ಶಾಲು ವಿವಾದ ಹೈಕೋರ್ಟ್ನಲ್ಲಿ ವಿಚಾರಣೆ ನಡೆಯುತ್ತಿದೆ. ಕೋರ್ಟ್ ಆದೇಶದಂತೆ ಹಿಜಾಬ್ ಧರಿಸಿ ಕಾಲೇಜಿಗೆ ಬರಲು ಅವಕಾಶವಿಲ್ಲದಿದ್ದರೂ, ವಿದ್ಯಾರ್ಥಿಗಳು ಪ್ರತಿನಿತ್ಯ ಹಿಜಾಬ್ ಧರಿಸಿ ಬರುತ್ತಿದ್ದಾರೆ. ಕಾಲೇಜು ಆಡಳಿತ ಮಂಡಳಿ ವಿದ್ಯಾರ್ಥಿಗಳ ಮನವೊಲಿಸಲು ಪ್ರಯತ್ನಿಸುತ್ತಿದ್ದಾರೆ. ಇನ್ನೂ ಕೆಲವೆಡೆ ಹಿಜಾಬ್ ಧರಿಸಲು ಅವಕಾಶ ಮಾಡಿಕೊಡಿ ಎಂದು ಧರಣಿ, ಪ್ರತಿಭಟನೆಗಳು ನಡೆಯುತ್ತಿವೆ. ಹಾಗಾಗಿ ವಿದ್ಯಾರ್ಥಿಗಳು ಯಾರು ಕೂಡ ಕ್ಲಾಸ್‌ಗೆ ಬರುತ್ತಿಲ್ಲ. ನಮಗೆ ಹಿಜಾಬ್ ಧರಿಸಲು ಅವಕಾಶ ನೀಡಿದರೇ ಮಾತ್ರ ಕಾಲೇಜಿಗೆ ಬರುತ್ತೇವೆ ಎನ್ನುತ್ತಿದ್ದಾರೆ. ಇತ್ತ ವಿದ್ಯಾರ್ಥಿಗಳಿಲ್ಲದೇ ಶಾಲಾ ಕಾಲೇಜುಗಳು ಖಾಲಿ ಖಾಲಿ ಆಗಿವೆ.
ಹುಬ್ಬಳ್ಳಿ: ಹಿಜಾಬ್ ಗಲಾಟೆ ಹಿನ್ನಲೆ ನಗರದ ಅಂಜುಮನ್ ಇಸ್ಲಾಂ ಸಂಸ್ಥೆಯಿಂದ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. ಇಂದು ಎಲ್ಲ ಮಸೀದಿಗಳಲ್ಲಿ ಹಿಜಾಬ್ ಬಗ್ಗೆ ಚರ್ಚೆ ಮಾಡಲಾಗುತ್ತಿದ್ದು, ಕೋರ್ಟ್ ಮಧ್ಯಂತರ ಆದೇಶ ಪಾಲಿಸುವಂತೆ ಸೂಚನೆ ನೀಡಲಾಗಿದೆ ಎಂದು ಅಂಜುಮನ್ ಸಂಸ್ಥೆ ಆಧ್ಯಕ್ಷ ಯೂಸೂಫ್ ಸವಣೂರ ಹೇಳಿದ್ದಾರೆ. ಉಚ್ಛ ನ್ಯಾಯಾಲಯದ ಆದೇಶ ಪಾಲಿಸುವಂತೆ ವಿದ್ಯಾರ್ಥಿಗಳಿಗೆ, ಪಾಲಕರಿಗೆ ಸೂಚನೆ ನೀಡಿದ್ದು, ಶಾಲೆ, ಕಾಲೇಜ್ಗೆ ಬರುವ ಮುಸ್ಲಿಂ ವಿದ್ಯಾರ್ಥಿನಿಯರು ವಿಶ್ರಾಂತಿ ಕೊಠಡಿಗಳಲ್ಲಿ ಹಿಜಾಬ್, ಬುರ್ಖಾ ತೆಗೆದಿಟ್ಟು ತರಗತಿಗಳಿಗೆ ಹಾಜರಾಗುವಂತೆ ಸೂಚಿಸಲಾಗಿದೆ. ಇಂದು ಇಸ್ಲಾಂ ಸಮೂದಾಯದ ಸಭೆ ಬಳಿಕ ಮಹತ್ವದ ನಿರ್ಧಾರ ತೆಗೆದುಕೊಳ್ಳಲಾಗಿದೆ. ಪರೀಕ್ಷೆ ಹತ್ತಿರದಲ್ಲಿರೋದ್ರಿಂದ ಮಕ್ಕಳ ಭವಿಷ್ಯ ಮುಖ್ಯ. ಹೀಗಾಗಿ ನ್ಯಾಯಾಲಯದ ಆದೇಶ ಪಾಲನೆ ಮಾಡುವಂತೆ ಎಲ್ಲಾ ಪೋಷಕರಿಗೂ ಮನವಿ ಮಾಡಲಾಗಿದೆ ಎಂದು ಹೇಳಿದರು.
ಉರ್ದು ಶಾಲೆಗಳಲ್ಲೂ ಹಿಜಾಬ್ ನಿರ್ಬಂಧಿಸಲಾಗುತ್ತಿದೆ. ಡಿಗ್ರಿ ಕಾಲೇಜುಗಳಲ್ಲಿ ಹಿಜಾಬ್ ನಿರ್ಬಂಧಿಸಲಾಗಿದೆ. ಸರ್ಕಾರದ ನಿರ್ಬಂಧದಿಂದಲೇ ಸುವ್ಯವಸ್ಥೆ ಸಮಸ್ಯೆ ಉದ್ಭವಿಸಿದೆ. ಕಾಲೇಜು ಗೇಟಿನೊಳಗೇ ಹಿಜಾಬ್ ಬಿಡುತ್ತಿಲ್ಲ. ಈ ಬಗ್ಗೆ ಸರ್ಕಾರಕ್ಕೆ ಸೂಕ್ತ ನಿರ್ದೇಶನ ನೀಡಬೇಕು. ಅರ್ಜಿದಾರರ ಪರ ಮೊಹಮ್ಮದ್ ತಾಹೀರ್ ವಾದ ಮಂಡಿಸಿದ್ದಾರೆ. ಈ ಬಗ್ಗೆ ದಾಖಲೆಗಳೊಂದಿಗೆ ಲಿಖಿತವಾಗಿ ಮಾಹಿತಿ ನೀಡಲಿ, ಪೊಲೀಸರಿಗೆ ಸೂಕ್ತ ನಿರ್ದೇಶನ ನೀಡುತ್ತೇವೆ ಎಂದು ಎಜಿ ಪ್ರತಿಕ್ರಿಯೆ ನೀಡಿದ್ದಾರೆ. ಹೈಕೋರ್ಟ್ ಆದೇಶದ ಹೆಸರಲ್ಲಿ ಹಿಜಾಬ್ ನಿರ್ಬಂಧಿಸಲಾಗುತ್ತಿದೆ ಎಂದು ಮೊಹಮ್ಮದ್ ತಾಹೀರ್ ಹೇಳಿದ್ದಾರೆ. ನೀವು ಅಗತ್ಯ ಮಾಹಿತಿ ನೀಡಿದರೆ ಎಜಿ ಗಮನಹರಿಸುತ್ತಾರೆ. ಸೂಕ್ತ ಅರ್ಜಿ ಸಲ್ಲಿಸದೇ ನಿರ್ದೇಶನ ನೀಡುವುದು ಹೇಗೆ ಎಂದು ಸಿಜೆ ಕೇಳಿದ್ದು, ವಿಚಾರಣೆ ಫೆ.21 ಕ್ಕೆ ಮುಂದೂಡಿಕೆ ಮಾಡಲಾಗಿದೆ.
ಹಿಜಾಬ್ ಧಾರ್ಮಿಕ ಸ್ವಾತಂತ್ರ್ಯದ ವಿಚಾರವಷ್ಟೇ ಅಲ್ಲ. ಆತ್ಮಸಾಕ್ಷಿಯ ಸ್ವಾತಂತ್ರ್ಯದ ಪ್ರಶ್ನೆಯೂ ಆಗಿದೆ. ಅರ್ಜಿದಾರರ ಪರ ವಕೀಲ ಯೂಸುಫ್ ರ ವಾದ ಹೀಗಿದೆ ಎಂದು ಹೇಳಿದ್ದು, ಅರ್ಜಿದಾರರ ಪ್ರಶ್ನೆಗೆ ನಿಮ್ಮ ಉತ್ತರವೇನು ಎಂದು ಸಿಜೆ ಕೇಳಿದ್ದಾರೆ. ಸಂವಿಧಾನದ 25(1) ಪರಿಪೂರ್ಣ ಹಕ್ಕಲ್ಲ. ಸರ್ಕಾರ ಕಾನೂನು ಮೂಲಕವೂ ನಿರ್ಬಂಧಿಸಬಹುದು. ಸಾರ್ವಜನಿಕ ಸುವ್ಯವಸ್ಥೆ, ನೈತಿಕತೆ, ಆರೋಗ್ಯಕ್ಕೆ ವಿರುದ್ಧವಾಗಿದೆಯೇ ಪರಿಶೀಲಿಸಬೇಕು. ಧಾರ್ಮಿಕ ಸ್ವಾತಂತ್ರ್ಯವನ್ನು ಈ 3 ರೀತಿಯಲ್ಲಿ ಪರೀಕ್ಷಿಸಬೇಕು. ಕೋವಿಡ್ ವೇಳೆಯಲ್ಲಿ ಎಲ್ಲಾ ಚರ್ಚ್, ದೇವಾಲಯ ಮಸೀದಿ ಮುಚ್ಚಲಾಗಿತ್ತು. ಸಾರ್ವಜನಿಕ ಆರೋಗ್ಯದ ಕಾರಣದಿಂದ ಇಂತಹ ನಿರ್ಬಂಧಕ್ಕೆ ಅವಕಾಶವಿದೆ ಎಂದು ಎಜಿ ಹೇಳಿದ್ದಾರೆ. ಆತ್ಮಸಾಕ್ಷಿಯ ಸ್ವಾತಂತ್ರ್ಯದ ಬಗ್ಗೆ ಸುಪ್ರೀಂಕೋರ್ಟ್ ತೀರ್ಪಿದೆ. ಕೆಲವರಿಗೆ ಯಾವುದೇ ಶಕ್ತಿಯ ಬಗ್ಗೆಯೇ ನಂಬಿಕೆ ಇರದಿರಬಹುದು. ದೇವರಿಲ್ಲ ಎಂಬ ಭಾವನೆಗೂ ಸಂವಿಧಾನದಲ್ಲಿ ಸ್ಥಾನವಿದೆ ಎಂದು ಎಜಿ ವಾದ ಮಂಡಿಸಿದ್ದಾರೆ.
ಒಂದು ಬಾರಿ ಒಂದೊಂದು ಪಕ್ಷದವರು ಶಾಸಕರಾಗಿ ಆಯ್ಕೆಯಾಗುತ್ತಾರೆ. ಶಾಸಕರಾದವರನ್ನು ಸಮಿತಿ ಅಧ್ಯಕ್ಷರಾಗಿ ಮಾಡಬಹುದೇ? ಅವರ ರಾಜಕೀಯ ಚಿಂತನೆಗಳು ಶಿಕ್ಷಣ ಸಂಸ್ಥೆಗಳ ಮೇಲೆ ಪರಿಣಾಮ ಬೀರುವುದಿಲ್ಲವೇ ? ರಾಜ್ಯ ಸರ್ಕಾರಕ್ಕೆ ನ್ಯಾ.ಕೃಷ್ಣ ದೀಕ್ಷಿತ್ ಪ್ರಶ್ನೆ ಕೇಳಿದ್ದಾರೆ. ಈ ಪಕ್ಷ ಆ ಪಕ್ಷ ಎಂದು ಹೇಳುತ್ತಿಲ್ಲ. ಶಾಸಕ ಅಧ್ಯಕ್ಷರಾದರೆ ಉಳಿದ ಸದಸ್ಯರ ಕಥೆಯೇನು. ಕಾಫಿ ಟೀ ಕುಡಿಯುವುದಲ್ಲದೇ ಅಡಳಿತದಲ್ಲೂ ಭಾಗವಹಿಸಲು ಸಾಧ್ಯವೇ. ರಾಜ್ಯ ಸರ್ಕಾರಕ್ಕೆ ನ್ಯಾ. ಕೃಷ್ಣ ದೀಕ್ಷಿತ್ ಪ್ರಶ್ನಿಸಿದ್ದಾರೆ. ಇದು ಖಂಡಿತಾ ಚಿಂತಿಸಬೇಕಾದ, ಚರ್ಚಿಸಬೇಕಾದ ವಿಚಾರವಾಗಿದೆ ಎಂದು ಎಜಿ ಹೇಳಿದ್ದಾರೆ. ಸಮಿತಿಯ ಸದಸ್ಯರನ್ನು ಯಾರು ನೇಮಿಸುತ್ತಾರೆ ಸರ್ಕಾರಕ್ಕೆ ನ್ಯಾ.ಕೃಷ್ಣ ದೀಕ್ಷಿತ್ ಪ್ರಶ್ನೆ. ಸಮವಸ್ತ್ರದ ವಿಚಾರವಾಗಿ ಇದರ ಮೊದಲು ಯಾವುದೇ ವಿವಾದ ಆಗಿರಲಿಲ್ಲ. ಯಾವುದೇ ವಿದ್ಯಾರ್ಥಿಗಳೂ ದೂರು ನೀಡಿರಲಿಲ್ಲ ಎಂದು ಎಜಿ ಉತ್ತರಿಸಿದ್ದಾರೆ.
ಶಿಕ್ಷಣ ಕಾಯ್ದೆ ಸೆ. 133ಯಡಿ ಸರ್ಕಾರಕ್ಕೆ ನಿರ್ದೇಶನ ನೀಡುವ ಅಧಿಕಾರವಿದೆ. ಕಾಲೇಜು ಅಭಿವೃದ್ದಿ ಸಮಿತಿಯಲ್ಲಿ ಸಮಾಜದ ಎಲ್ಲ ವರ್ಗದ ಪ್ರತಿನಿಧಿಗಳಿದ್ದಾರೆ ಎಂದು ಎಜಿ ಹೇಳಿದ್ದು, ಸರ್ಕಾರದ ಅಧೀನ ಕಾರ್ಯದರ್ಶಿ ಸುತ್ತೋಲೆ ಮೂಲಕ ಸಮಿತಿಗೆ ಅನುಮತಿಸಬಹುದೇ ಎಂದು ಸಿಜೆ ಕೇಳಿದ್ದಾರೆ. ಅಧೀನ ಕಾರ್ಯದರ್ಶಿ ಸಚಿವರ ಅನುಮೋದನೆ ನಂತರವೇ ಆದೇಶ ಹೊರಡಿಸುತ್ತಾರೆ. ಹೀಗಾಗಿ ಇದನ್ನು ಸರ್ಕಾರದ ಆದೇಶ ಎಂದು ಪರಿಗಣಿಸಬಹುದು ಎಂದು ಎಜಿ ನಾವದಗಿ ಹೇಳಿದ್ದಾರೆ. ಸರ್ಕಾರದ ಕಾರ್ಯನಿರ್ವಹಣೆ ನಿಯಮದಡಿ ಆದೇಶ ಹೊರಡಿಸಬಹುದೇ? ಅಧೀನ ಕಾರ್ಯದರ್ಶಿ ಆದೇಶ ಹೊರಡಿಸಬಹುದೇ ಪರಿಶೀಲಿಸಿ ಎಂದು ಸರ್ಕಾರಕ್ಕೆ ನ್ಯಾ.ಕೃಷ್ಣ ದೀಕ್ಷಿತ್ ಪ್ರಶ್ನಿಸಿದ್ದಾರೆ. ನಾನು ಮೂಲ ದಾಖಲೆಗಳನ್ನು ಪರಿಶೀಲಿಸಿ ಮಾಹಿತಿ ನೀಡುತ್ತೇನೆ. ಸಾಮಾನ್ಯವಾಗಿ ಸರ್ಕಾರದ ವ್ಯವಹರಣೆ ನಿಯಮದಡಿಯೇ ಸುತ್ತೋಲೆ ಹೊರಡಿಸಲಾಗುತ್ತದೆ ಎಂದು ಎಜಿ ಹೇಳಿದ್ದಾರೆ.
ಒಂದು ಕಡೆ ಸಮವಸ್ತ್ರದ ಬಗ್ಗೆ ಉನ್ನತ ಸಮಿತಿ ರಚಿಸುತ್ತೇವೆಂದಿದ್ದೀರಿ, ಮತ್ತೊಂದು ಕಡೆ ಸಮವಸ್ತ್ರದ ಬಗ್ಗೆ ಸಮಿತಿಗೆ ನಿರ್ಧಾರ ನೀಡಿದ್ದೀರಿ. ಇದು ಸರ್ಕಾರದ ವಿರೋದಾಭಾಸದ ಹೇಳಿಕೆಯಲ್ಲವೇ ಎಂದು ಸಿಜೆ ಪ್ರಶ್ನಿಸಿದೆ. ಪರಿಸ್ಥಿತಿಯ ಆಧಾರದಲ್ಲಿ ಸರ್ಕಾರ ಈ ನಿರ್ಧಾರ ಕೈಗೊಂಡಿದೆ. ಮೊದಲಿಗೆ ಸರ್ಕಾರಕ್ಕೆ ಸಮವಸ್ತ್ರಸಂಹಿತೆ ತರುವ ಉದ್ದೇಶವಿರಲಿಲ್ಲ. ಶಿಕ್ಷಣ ಕಾಯ್ದೆಯನ್ನು ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ತರಲಾಗಿದೆ ಎಂದು ಎಜಿ ವಾದ ಮಂಡಿಸಿದ್ದಾರೆ. ಖಾಸಗಿ ಶಾಲೆಗಳೂ ಸರ್ಕಾರದ ಅಂಗೀಕಾರ ಪಡೆಯಬೇಕು. ಶಿಕ್ಷಣ ಕಾಯ್ದೆಯ ಸೆಕ್ಷನ್ನ್ನು ಎಜಿ ಓದುತ್ತಿದ್ದಾರೆ. ಶಾಲೆಗಳಿಗೆ ನಿರ್ವಹಣಾ ಸಮಿತಿಯಿದೆ. ಕಾಲೇಜಿಗೆ ನಿರ್ವಹಣಾ ಸಮಿತಿ ಇಲ್ಲ. ನಿಯಮ 11 ರಲ್ಲಿ ಶಿಕ್ಷಣ ಸಂಸ್ಥೆಗಳಿಗೆ ಸಮವಸ್ತ್ರದ ಅಧಿಕಾರ ನೀಡಲಾಗಿದೆ. ಕಾಲೇಜುಗಳಲ್ಲೂ ಶಿಕ್ಷಣ ಕಾಯ್ದೆ ಜಾರಿಗೊಳಿಸುವ ಉದ್ದೇಶದಿಂದ ಆದೇಶಿಸಲಾಗಿದೆ. ಕಾಲೇಜು ಅಭಿವೃದ್ದಿ ಸಮಿತಿ ಸ್ಥಾಪಿಸಲು ನಿರ್ದೇಶಿಸಲಾಯಿತು. 2014 ರಿಂದಲೂ ಕಾಲೇಜು ಅಭಿವೃದ್ದಿ ಸಮಿತಿಗಳಿವೆ. ಈವರೆಗೆ ಯಾವುದೇ ಕಾಲೇಜುಗಳು ಇದನ್ನು ಪ್ರಶ್ನಿಸಿಲ್ಲ. ವಿದ್ಯಾರ್ಥಿಗಳೂ ಈವರೆಗೆ ಕಾಲೇಜು ಅಭಿವೃದ್ದಿ ಸಮಿತಿಯ ರಚನೆ ಪ್ರಶ್ನಿಸಿಲ್ಲ.
ಸರ್ಕಾರಿ ಆದೇಶದಲ್ಲಿ ನೇರವಾಗಿ ಹೇಳಿಲ್ಲ ಎಂದು ಹೈಕೋರ್ಟ್ ಹೇಳಿದೆ. ಸರ್ಕಾರ ಧಾರ್ಮಿಕ ವಿಚಾರದಲ್ಲಿ ಮಧ್ಯಪ್ರವೇಶಿಸಲು ಬಯಸಿರಲಿಲ್ಲ ಎಂದು ಎಜಿ ಹೇಳಿದ್ದು, ಸರ್ಕಾರ ಕಾಲೇಜು ಅಭಿವೃದ್ದಿ ಸಮಿತಿಗೆ ಅಧಿಕಾರ ನೀಡಿದೆ ಎಂದಿದ್ದೀರಿ ಆದರೂ ಹೈಕೋರ್ಟ್ ತೀರ್ಪುಗಳ ಉಲ್ಲೇಖದ ಅಗತ್ಯವೇನಿತ್ತು ಎಂದು ಸಿಜೆ ಪ್ರಶ್ನಿಸಿದ್ದಾರೆ. ಸರ್ಕಾರದ ಆದೇಶದಲ್ಲಿರುವ ವಿವರಣೆ ಉಪೇಕ್ಷಿಸಿ ಸಮಿತಿ ನಿರ್ಧರಿಸಬಹುದೇ ಸರ್ಕಾರಕ್ಕೆ ನ್ಯಾ.ಕೃಷ್ಣ ದೀಕ್ಷಿತ್ ಪ್ರಶ್ನೆ ಕೇಳಿದ್ದಾರೆ. ನಾವು ಆ ತೀರ್ಪುಗಳನ್ನು ಉಲ್ಲೇಖಿಸದೇ ಇರಬಹುದಿತ್ತು. ಅಧಿಕಾರಿಗಳು ಏಕೆ ಉಲ್ಲೇಖಿಸಿದರೋ ತಿಳಿದಿಲ್ಲ. ಆದರೆ ಸರ್ಕಾರದ ನಿರ್ಧಾರ ಸ್ಪಷ್ಟವಾಗಿದೆ. ಸಮವಸ್ತ್ರದ ಅಧಿಕಾರವನ್ನು ಸಮಿತಿಗೆ ನೀಡಲಾಗಿದೆ ಎಂದು ಎಜಿ ಹೇಳಿದ್ದಾರೆ. ಸರ್ಕಾರದ ಆದೇಶಗಳು ವೈನ್ನಂತಲ್ಲ, ಹಳೆಯದಾದಂತೆ ಅವು ಉತ್ತಮಗೊಳ್ಳುವುದಿಲ್ಲ ಎಂದು ನ್ಯಾ.ಕೃಷ್ಣ ದೀಕ್ಷಿತ್ ಸುಪ್ರೀಂಕೋರ್ಟ್ ತೀರ್ಪು ಉಲ್ಲೇಖಿಸಿದ್ದಾರೆ.
ನಾವು ಹಿಜಾಬ್ ವಿಚಾರವನ್ನೂ ಸಮಿತಿಗೆ ನೀಡಿದ್ದೇವೆ ಎಂದು ಎಜಿ ವಾದ ಮಾಡಿದ್ದಾರೆ. ಒಂದು ವೇಳೆ ಕಾಲೇಜು ಅಭಿವೃದ್ದಿ ಸಮಿತಿ ಅನುಮತಿ ನೀಡಬಹುದು. ಹಿಜಾಬ್ ಗೆ ಅನುಮತಿ ನೀಡಿದರೆ ನಿಮಗೆ ಆಕ್ಷೇಪವಿಲ್ಲವೇ ಎಂದು ಸಿಜೆ ಪ್ರಶ್ನಿಸಿದ್ದಾರೆ. ಅಂತಹ ದೂರುಗಳು ಬಂದರೆ ಸರ್ಕಾರ ಪರಿಗಣಿಸಲಿದೆ ಎಂದು ಎಜಿ ಹೇಳಿದ್ದಾರೆ. ಸಾವಿರಾರು ಅರ್ಜಿಗಳು ದಾಖಲಾಗಬೇಕೆಂದು ಬಯಸುತ್ತೀರಾ ಎಂದು ಸರ್ಕಾರಕ್ಕೆ ನ್ಯಾ.ಕೃಷ್ಣ ದೀಕ್ಷಿತ್ ಪ್ರಶ್ನೆ ಮಾಡಿದ್ದಾರೆ. ಹಿಜಾಬ್ ಬಗ್ಗೆ ನಿಮ್ಮ ನಿಲುವನ್ನು ಸ್ಪಷ್ಟಪಡಿಸಿಲ್ಲ ಎಂದು ಹೈಕೋರ್ಟ್ ಹೇಳಿದೆ.
ಖಾಸಗಿ ಶಾಲೆಗಳಲ್ಲಿ ಆಡಳಿತ ಮಂಡಳಿ ನಿಗದಿಪಡಿಸಿದ ಸಮವಸ್ತ್ರ ಧರಿಸಬೇಕು. ವಿದ್ಯಾವಿಕಾಸ ಯೋಜನೆಯಲ್ಲಿ ಉಚಿತ ಸಮವಸ್ತ್ರ ನೀಡಿದೆ. ಸರ್ಕಾರಿ ಶಾಲೆಗಳಲ್ಲಿ ಸರ್ಕಾರ ಸಮವಸ್ತ್ರ ನೀಡುತ್ತಿದೆ. ಪಿಯು ಕಾಲೇಜುಗಳಲ್ಲಿ ಕಾಲೇಜು ಅಭಿವೃದ್ದಿ ಸಮಿತಿ ಸಮವಸ್ತ್ರ ನಿಗದಿಪಡಿಸಬೇಕು. ಸಮವಸ್ತ್ರ ನಿಗದಿಪಡಿಸದ ಕಾಲೇಜುಗಳಲ್ಲಿ ಗೌರವಯುತ ಸಮವಸ್ತ್ರ ಧರಿಸಬೇಕು. ಸಮಾನತೆ, ಶಿಸ್ತಿಗೆ ಪೂರಕವಾದ ಸಮವಸ್ತ್ರ ಧರಿಸಲು ಸೂಚಿಸಲಾಗಿದೆ. ಸರ್ಕಾರದ ಆದೇಶವನ್ನು ಅನಗತ್ಯವಾಗಿ ದೊಡ್ಡದು ಮಾಡಲಾಗಿದೆ. ಯಾವುದೇ ಕಾಲೇಜುಗಳಲ್ಲಿ ಸಮವಸ್ತ್ರ ನೀತಿಯಿಂದ ಸಮಸ್ಯೆ ಆಗಿರಲಿಲ್ಲ ಎಂದು ನಾವದಗಿ ವಾದ ಮಂಡಿಸಿದ್ದಾರೆ.
ಸರ್ಕಾರ ಈ ಬಗ್ಗೆ ಆದೇಶ ಹೊರಡಿಸುವ ಮೊದಲೇ ರಿಟ್ ಸಲ್ಲಿಸಲಾಯಿತು. ರಿಟ್ ಅರ್ಜಿ ಸಲ್ಲಿಸಿದರೂ ಕಾಲೇಜಿನಲ್ಲಿ ಪ್ರತಿಭಟನೆ ಮುಂದುವರಿಯಿತು. ಉಡುಪಿಯ ಕಾಲೇಜಿನ ವಿವಾದ ರಾಜ್ಯಾವ್ಯಾಪಿ ವಿಸ್ತರಿಸಿತು. ಉನ್ನತ ಸಮಿತಿ ರಚಿಸುತ್ತೇವೆಂದು ಹೇಳಿದರೂ ಪ್ರತಿಭಟನೆ ನಿಲ್ಲಲಿಲ್ಲ. ಹೀಗಾಗಿ ಸರ್ಕಾರ ಫೆ.5 ರಂದು ಈ ಆದೇಶ ಹೊರಡಿಸಬೇಕಾಯಿತು. ಫೆ.5 ರ ಸರ್ಕಾರಿ ಆದೇಶದಿಂದ ಅರ್ಜಿದಾರರ ಹಕ್ಕಿಗೆ ಧಕ್ಕೆಯಾಗಿಲ್ಲ. ಸರ್ಕಾರಿ ಶಾಲೆಗಳಲ್ಲಿ ಸರ್ಕಾರ ನಿಗದಿಪಡಿಸಿದ ಸಮವಸ್ತ್ರ ಧರಿಸಬೇಕು ಎಂದು ವಾದ ಮಂಡಿಸಿದರು. ಖಾಸಗಿ ಶಾಲೆಗಳಲ್ಲಿ ಆಡಳಿತ ಮಂಡಳಿ ನಿಗದಿಪಡಿಸಿದ ಸಮವಸ್ತ್ರ ಧರಿಸಬೇಕು. ವಿದ್ಯಾವಿಕಾಸ ಯೋಜನೆಯಲ್ಲಿ ಉಚಿತ ಸಮವಸ್ತ್ರ ನೀಡಿದೆ. ಸರ್ಕಾರಿ ಶಾಲೆಗಳಲ್ಲಿ ಸರ್ಕಾರ ಸಮವಸ್ತ್ರ ನೀಡುತ್ತಿದೆ. ಪಿಯು ಕಾಲೇಜುಗಳಲ್ಲಿ ಕಾಲೇಜು ಅಭಿವೃದ್ದಿ ಸಮಿತಿ ಸಮವಸ್ತ್ರ ನಿಗದಿಪಡಿಸಬೇಕು. ಸಮವಸ್ತ್ರ ನಿಗದಿಪಡಿಸದ ಕಾಲೇಜುಗಳಲ್ಲಿ ಗೌರವಯುತ ಸಮವಸ್ತ್ರ ಧರಿಸಬೇಕು ಎಂದು ಎಂದು ಹೇಳಿದರು.
ಕಾಲೇಜಿನಲ್ಲಿ ಶಿಸ್ತು, ಸಮಾನತೆ ಇರಲೆಂದು ಸಮವಸ್ತ್ರ ಸಂಹಿತೆ ಮಾಡಲಾಗಿದೆ. ಶಾಲಾ ಅಭಿವೃದ್ದಿ ಸಮಿತಿ ನಡಾವಳಿಯಲ್ಲಿ ಇದು ಉಲ್ಲೇಖವಾಗಿದೆ. 1985 ರಿಂದಲೂ ಸಮವಸ್ತ್ರ ಸಂಹಿತೆ ಪಾಲಿಸುತ್ತಿರುವ ಹಿನ್ನೆಲೆ, ವಿದ್ಯಾರ್ಥಿನಿಯರಿಗೆ ಸಮವಸ್ತ್ರ ಮಾತ್ರ ಧರಿಸುವಂತೆ ಸೂಚಿಸಲಾಯಿತು. ಇದಕ್ಕೆ ವಿದ್ಯಾರ್ಥಿನಿಯರು, ಅವರ ಪೋಷಕರು ವಿರೋಧ ವ್ಯಕ್ತಪಡಿಸಿದರು. ಹೀಗಾಗಿ ಸರ್ಕಾರ ಮಧ್ಯಪ್ರವೇಶಿಸಬೇಕಾಯಿತು. ಹಾಲಿ ಇರುವ ಸಮವಸ್ತ್ರ ಸಂಹಿತೆ ಬಗ್ಗೆ ಪರಾಮರ್ಶೆಗೆ ಸಮಿತಿ. ಉನ್ನತ ಮಟ್ಟದ ಸಮಿತಿ ರಚಿಸಲು ಸರ್ಕಾರ ನಿರ್ಧರಿಸಿತು. ಸಮವಸ್ತ್ರ ವಿಚಾರದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಸೂಚಿಸಲಾಯಿತು. ನಂತರ ಕಾಲೇಜು ಅಭಿವೃದ್ದಿ ಸಮಿತಿ ಮತ್ತೊಂದು ನಿರ್ಣಯ ಅಂಗೀಕರಿಸಿತು. ಹಿಂದೆ ಇದ್ದಂತೆಯೇ ಸಮವಸ್ತ್ರ ಸಂಹಿತೆ ಮುಂದುವರಿಸಲು ನಿರ್ಧರಿಸಲಾಯಿತು.
2018ರಲ್ಲಿ ಹೆಣ್ಣುಮಕ್ಕಳಿಗೆ ಸಮವಸ್ತ್ರ ಸಂಹಿತೆ ರೂಪಿಸಲಾಗಿದೆ. ಡಿಸೆಂಬರ್ 2021ರವರೆಗೆ ಕಾಲೇಜಿನಲ್ಲಿ ಸಮಸ್ಯೆ ಇರಲಿಲ್ಲ. ಉಡುಪಿಯ ಪಿಯು ಕಾಲೇಜು ವಿದ್ಯಾರ್ಥಿನಿಯರ ಕಾಲೇಜಾಗಿದ್ದು, ಕೆಲ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಬರುವುದಾಗಿ ಹೇಳಿದರು. ಡಿಸೆಂಬರ್ 2021 ರಲ್ಲಿ ಈ ಬಗ್ಗೆ ಪ್ರಿನ್ಸಿಪಾಲ್ ಗೆ ಮನವಿ ನೀಡಿದರು. ಜನವರಿ 1, 2022 ರಂದು ಕಾಲೇಜು ಅಭಿವೃದ್ದಿ ಸಮಿತಿ ಸಭೆ ಸೇರಿತು. 1985 ರಿಂದ ಎಲ್ಲಾ ವಿದ್ಯಾರ್ಥಿನಿಯರೂ ಸಮವಸ್ತ್ರ ಧರಿಸುತ್ತಿದ್ದರು. ಸಹೋದರತ್ವ ಭಾವನೆಯಿಂದ ಇರಬೇಕೆಂದು ಸಮವಸ್ತ್ರ ನಿಗದಿಯಾಗಿದೆ ಎಂದು ಹೇಳಲಾಗಿದೆ.
ಶಬರಿ ಮಲೆ, ಶಾಯಿರಾ ಬಾನು ಕೇಸ್ನ ಆಧಾರದಲ್ಲಿ ನಿರ್ಧರಿಸಬೇಕು. ಹಿಜಾಬ್ ಅತ್ಯಗತ್ಯವೇ ಅಲ್ಲವೇ ನಿರ್ಧರಿಸಬೇಕು. ಸಂವಿಧಾನದಡಿ ನೈತಿಕವಾಗಿದೆಯೇ, ವೈಯಕ್ತಿಕವಾಗಿ ಗೌರವಯುತವಾಗಿಯೇ. ಹಿಜಾಬ್ ಈ ಪರೀಕ್ಷೆಗಳಲ್ಲಿ ಉತ್ತೀರ್ಣವಾಗಬೇಕು.
ಸರ್ಕಾರದ ಆದೇಶದ ಹಿಂದಿನ ಉದ್ದೇಶವೇನು ಎಂದು ಸಿಜೆ ಕೇಳಿದ್ದಾರೆ. 19.3.2013 ರಲ್ಲೇ ಸಮವಸ್ತ್ರದ ಬಗ್ಗೆ ನಿರ್ಣಯ ಅಂಗೀಕರಿಸಲಾಗಿದೆ. ಕಾಲೇಜು ಅಭಿವೃದ್ದಿ ಸಮಿತಿ 2013 ರಲ್ಲೇ ನಿರ್ಣಯ ಅಂಗೀಕರಿಸಿದೆ. ಉಡುಪಿಯ ಕಾಲೇಜಿನ ಅಭಿವೃದ್ಧಿ ಸಮಿತಿ. ಕಾಲೇಜು ಅಭಿವೃದ್ದಿ ಸಮಿತಿಗೆ ಕಾನೂನಿನ ಮಾನ್ಯತೆ ಇದೆಯೇ. ಸರ್ಕಾರಕ್ಕೆ ನ್ಯಾ.ಕೃಷ್ಣ ದೀಕ್ಷಿತ್ ಪ್ರಶ್ನೆ ಮಾಡಿದ್ದಾರೆ.
ಕಾಲೇಜು ಅಭಿವೃದ್ದಿ ಸಮಿತಿಗೆ ಕಾನೂನಿನ ಮಾನ್ಯತೆ ಇದೆ. ಸರ್ಕಾರ ಫೆ.5 ರ ಆದೇಶ ಹೊರಡಿಸುವ ಕಾರಣ ವಿವರಿಸುತ್ತೇನೇ ಎಂದು ಎಜಿ ಹೇಳಿದ್ದಾರೆ. ಶಾಲಾ ಅಭಿವೃದ್ದಿ ಸಮಿತಿಯಲ್ಲಿ ಹಲವು ಗಣ್ಯ ವ್ಯಕ್ತಿಗಳಿರುತ್ತಾರೆ. ಶಾಸಕರಲ್ಲದೇ, ಉಪನ್ಯಾಸಕರು, ವಿದ್ಯಾರ್ಥಿಗಳು, ಪರಿಶಿಷ್ಟ ಜಾತಿ ಪಂಗಡಗಳ ಸದಸ್ಯರು ಈ ಸಮಿತಿಯಲ್ಲಿರುತ್ತಾರೆ.
ಅಧ್ಯಕ್ಷರಿಗೆ ಸಂಸ್ಥೆ ರಿಟ್ ಅರ್ಜಿ ಸಲ್ಲಿಸಲು ಒಕ್ಕೂಟ ಅನುಮತಿ ನೀಡಿದೆಯೇ? ಅನುಮತಿ ನೀಡದೇ ಹೇಗೆ ಒಕ್ಕೂಟದ ಪರ ಅರ್ಜಿ ಸಲ್ಲಿಸಿದ್ದೀರಿ ಎಂದು ಸಿಜೆ ಕೇಳಿದ್ದಾರೆ. ಒಕ್ಕೂಟದ ನಿರ್ಣಯ ಹೈಕೋರ್ಟ್ ಗೆ ಸಲ್ಲಿಸಿಲ್ಲ ಎಂದು ಜಿ.ಆರ್.ಮೋಹನ್ ಹೇಳಿದ್ದು, ಈ ರೀತಿಯಲ್ಲಿ ಅರ್ಜಿ ಸಲ್ಲಿಸುವುದು ಆಘಾತಕಾರಿ ವಿಚಾರವಾಗಿದೆ ಎಂದು ಸಿಜೆ ಹೇಳಿದ್ದಾರೆ. ಸೋಮವಾರ ಈ ಕುರಿತ ಒಕ್ಕೂಟದ ನಿರ್ಣಯ ಸಲ್ಲಿಸುತ್ತೇವೆ. ಒಕ್ಕೂಟದ ಬೈಲಾ, ನಿರ್ಣಯ, ಅಧಿಕಾರ ಪತ್ರ ಸಲ್ಲಿಸಿ ಎಂದು ಸಿಜೆ ಹೇಳಿದ್ದಾರೆ. ಸರ್ಕಾರದ ಪರ ಪ್ರಭುಲಿಂಗ್ ನಾವದಗಿ ವಾದಮಂಡನೆ ಮಾಡಿದ್ದು, ಪ್ರತಿವಾದಿ 1 ರಿಂದ 4 ರ ಪರವಾಗಿ ನಾನು ವಾದ ಮಂಡಿಸುತ್ತಿದ್ದೇನೆ. ಸರ್ಕಾರದ ಫೆ.5ರ ಅಧಿಸೂಚನೆಯನ್ನು ಅರ್ಜಿದಾರರು ಪ್ರಶ್ನಿಸಿದ್ದಾರೆ. ಶಿಕ್ಷಣ ಕಾಯ್ದೆಯಡಿ ಈ ಆದೇಶವನ್ನು ಸರ್ಕಾರ ಹೊರಡಿಸಿದೆ. ಹಿಜಾಬ್ ಇಸ್ಲಾಂನ ಅತ್ಯಗತ್ಯ ಆಚರಣೆಯಲ್ಲ ಇದು ಸರ್ಕಾರದ ನಿಲುವು. ಹಿಜಾಬ್ ನಿರ್ಬಂಧ ಅಭಿವ್ಯಕ್ತಿ ಸ್ವಾತಂತ್ರ್ಯ ಉಲ್ಲಂಘನೆ ಆಗುವುದಿಲ್ಲ ಎಂದು ಹೇಳಿದ್ದಾರೆ.
ರಾಜ್ಯಾದ್ಯಾಂತ ಯೂಟ್ಯೂಬ್ ನಿಂದ ಸಮಸ್ಯೆ ಆಗುತ್ತಿದ್ದು, ತಾತ್ಕಾಲಿಕವಾಗಿ ನಿಲ್ಲಿಸುವಂತೆ ಹಿರಿಯ ವಕೀಲ ರವಿವರ್ಮಕುಮಾರ್ ಮನವಿ ಮಾಡಿಕೊಂಡಿದ್ದಾರೆ. ಪ್ರತಿವಾದಿಗಳ ವಾದ ಮಂಡನೆಯನ್ನೂ ಜನ ಕೇಳಲಿ ಬಿಡಿ ಎಂದು ಸಿಜೆ ಹೇಳಿದ್ದಾರೆ. ಹಿಜಾಬ್ ಧರಿಸಿ ಹೋದವರಿಗೆ ಪ್ರವೇಶ ನೀಡುತ್ತಿಲ್ಲ. ಕೆಲ ವ್ಯಕ್ತಿಗಳು ಹಿಜಾಬ್ ಧರಿಸಿ ಬರಲು ಅಡ್ಡಿ ಮಾಡುತ್ತಿದ್ದಾರೆ ಎಂದು ಅರ್ಜಿದಾರರ ಪರ ವಕೀಲರಿಂದ ವಾದ ಮಂಡನೆ ಮಾಡಲಾಗುತ್ತಿದೆ. ಕಾಲೇಜಿನವರಲ್ಲದ ವ್ಯಕ್ತಿಗಳು ಅಡ್ಡಿಪಡಿಸಿದರೆ ಪೊಲೀಸ್ ದೂರು ನೀಡಿ ಎಂದು ಸಿಜೆ ಹೇಳಿದರು. ಸಮರ್ಪಕ ಮಾಹಿತಿಯಿಲ್ಲದೇ ನೀವು ಅರ್ಜಿ ಸಲ್ಲಿಸಿದ್ದೀರಿ ಎಂದು ಸಿಜೆ ಪ್ರಶ್ನಿಸಿದ್ದಾರೆ. ಇಂತಹ ಅರ್ಜಿಗಳಿಂದ ಕೋರ್ಟ್ ಸಮಯ ವ್ಯರ್ಥವಾಗುತ್ತಿದೆ ಎಂದಿದ್ದಾರೆ.
ಹಿಜಾಬ್ ಅರ್ಜಿ ವಿಚಾರಣೆ ಆರಂಭವಾಗಿದೆ. ಇನ್ನೂ ಮೂರು ರಿಟ್ ಅರ್ಜಿ ಸಲ್ಲಿಸಲಾಗಿದೆ ಎಂದು ಸಿಜೆ ಹೇಳಿದ್ದಾರೆ. ಹೊಸ ಅರ್ಜಿಗಳಲ್ಲಿ 10 ನಿಮಿಷವಷ್ಟೇ ಸಮಯ ನೀಡಲಾಗುವುದು ಎಂದು ಸಿಜೆ ಹೇಳಿದ್ದಾರೆ. ದುಪಟ್ಟಾವನ್ನು ಹಿಜಾಬ್ ನಂತರ ಬಳಸಲು ಅನುಮತಿ ಕೋರಿಕೆ ಈ ಅರ್ಜಿ ಸಂಬಂಧ ವಿಚಾರಣೆ ನಡೆಸಲು ಹಿರಿಯ ವಕೀಲ ರವಿವರ್ಮಕುಮಾರ್ ಮನವಿ ಮಾಡಿಕೊಂಡಿದ್ದಾರೆ. ಯೂಟ್ಯೂಬ್ ಲೈವ್ನ್ನು ತಾತ್ಕಾಲಿಕವಾಗಿ ನಿಲ್ಲಿಸುವಂತೆ ಮನವಿ ಮಾಡಿದ್ದು, ರಾಜ್ಯಾದ್ಯಾಂತ ಯೂಟ್ಯೂಬ್ ನಿಂದ ಸಮಸ್ಯೆ ಆಗುತ್ತಿದೆ ಎಂದು ಹಿರಿಯ ವಕೀಲ ರವಿವರ್ಮಕುಮಾರ್ ಮನವಿ ಮಾಡಿಕೊಂಡಿದ್ದಾರೆ.
ತರಗತಿಗಳಲ್ಲಿ ಹಿಜಾಬ್ ನಿರ್ಬಂಧ ವಿಚಾರವಾಗಿ ಹೈಕೋರ್ಟ್ ಪೂರ್ಣಪೀಠದಲ್ಲಿ ವಿಚಾರಣೆ ಆರಂಭವಾಗಿದೆ. ಹಿರಿಯ ವಕೀಲ ಎ.ಎಂ.ಧರ್ ವಾದಮಂಡನೆ ಮಾಡಲಿದ್ದು, ಹೊಸದಾಗಿ ರಿಟ್ ಅರ್ಜಿ ಸಲ್ಲಿಸಲಾಗಿದೆ. ಸೋಮವಾರ ನಿಮ್ಮ ಅರ್ಜಿ ವಿಚಾರಣೆಗೆ ಸ್ವೀಕರಿಸುತ್ತೇವೆ ಎಂದು ಸಿಜೆ ಹೇಳಿದ್ದಾರೆ. ವಕೀಲ ರಹಮತುಲ್ಲಾ ಕೊತ್ವಾಲ್ ವಾದ ಮಂಡಿಸಲಿದ್ದು, ನಿನ್ನೆ ನನ್ನ ಪಿಐಎಲ್ ವಜಾಗೊಂಡಿತ್ತು, ಮರುಪರಿಶೀಲನಾ ಅರ್ಜಿ ಸಲ್ಲಿಸಿದ್ದೇನೆ, ದಯಮಾಡಿ ಅದರ ವಿಚಾರಣೆ ನಡೆಸಲು ಮನವಿ ಮಾಡಿದ್ದಾರೆ.
ಅದನ್ನೂ ಸೋಮವಾರ ವಿಚಾರಣೆ ನಡೆಸಲಾಗುವುದು ಎಂದು ಸಿಜೆ ಹೇಳಿದ್ದಾರೆ.
ಹಿಜಾಬ್ ಅರ್ಜಿ ವಿಚಾರಣೆ ಕೆಲವೇ ಕ್ಷಣಗಳಲ್ಲಿ ಆರಂಭವಾಗಲಿದ್ದು, ಇಂದು ಸರ್ಕಾರದ ಪರ ಎಜಿ ನಾವದಗಿ ವಾದ ಮಂಡನೆ ಮಾಡಲಿದ್ದಾರೆ. ಹಿಜಾಬ್ ವಿಚಾರಣೆ ಇಂದೂ ಕೂಡ ಹೈಕೋರ್ಟ್ನಲ್ಲಿ ಮುಂದುವರೆದಿದೆ. ನಿನ್ನೆ ಅರ್ಜಿದಾರರಪರ ವಾದ ಮಂಡನೆಯಾಗಿದ್ದು, ಇಂದು ಸರ್ಕಾರದ ಪರ ವಾದ ಮಂಡನೆ ನಡೆಯಲಿದೆ.
ಸಮವಸ್ತ್ರ ವಿಚಾರದಲ್ಲಿ ಯಾರಿಗೂ ನಿರ್ಬಂಧ ಇರಲಿಲ್ಲ. ಫೆಬ್ರವರಿ 5ರವರೆಗೆ ಯಾವುದೇ ಗೈಡ್‌ಲೈನ್ಸ್ ಕೂಡ ಇರಲಿಲ್ಲ. ಗೈಡ್‌ಲೈನ್ಸ್ ಹೊರಡಿಸುವ ಪ್ರಶ್ನೆ ಹುಟ್ಟುಕೊಂಡಿದ್ದು ಹೇಗೆ ಎಂದು ವಿಧಾನಸೌಧದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪ್ರಶ್ನಿಸಿದ್ದಾರೆ. ಈಗ ಮೂಲಭೂತ ಹಕ್ಕಿಗೆ ತೊಂದರೆ ಬಂದಿದೆ. ಶಾಲಾ ಅಭಿವೃದ್ಧಿ ಸಮಿತಿಗಳು ಎಲ್ಲೆಲ್ಲಿ ಇವೆ ಎಂದು ಹೇಳಲಿ. ಕೋರ್ಟ್ ಆದೇಶ ವಿರುದ್ಧ ಅಧಿಕಾರಿ ಸುತ್ತೋಲೆ ಹೊರಡಿಸಲ್ಲ. ಸರ್ಕಾರ ಹೇಳದೆ ಅಧಿಕಾರಿ ಸುತ್ತೋಲೆ ಹೊರಡಿಸುವುದಿಲ್ಲ. ಪೊಲೀಸರಿಗೆ, ಶಾಲೆಗಳಿಗೆ ಏನು ಸಂಬಂಧವೆಂದು ಪ್ರಶ್ನಿಸಿದ್ದಾರೆ. ವಿದ್ಯಾರ್ಥಿಗಳನ್ನು ಶಾಲೆಗೆ ಹೋಗದಂತೆ ತಡೆಯುವ ಹಕ್ಕಿದ್ಯಾ ರಾಜ್ಯದಲ್ಲಿ ಕೇವಲ ಶಾಂತಿ ಮಾತ್ರ ಕದಡುವ ಕೆಲಸ ಮಾಡ್ತಿಲ್ಲ. ಮುಂದಿನ ದಿನಗಳಲ್ಲಿ ಹೂಡಿಕೆದಾರರು ರಾಜ್ಯಕ್ಕೆ ಬರುವುದಿಲ್ಲ ಇದನ್ನು ಸಿಎಂ ಬಸವರಾಜ ಬೊಮ್ಮಾಯಿ ನೆನೆಪಿನಲ್ಲಿಟ್ಟುಕೊಳ್ಳಬೇಕು ಎಂದು ಹೇಳಿದ್ದಾರೆ.
ರಾಜ್ಯದಲ್ಲಿರುವ ಮುಸ್ಲಿಂ ಹೆಣ್ಣುಮಕ್ಕಳು ಆತಂಕದಲ್ಲಿದ್ದಾರೆ. ಸಿಎಂ ಕೂಡಲೇ ಅಧಿಕಾರಿಗಳನ್ನು ಕರೆದು ಮಾತನಾಡಬೇಕು ಎಂದು ವಿಧಾನಸೌಧದಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ. ಹೆಣ್ಣುಮಕ್ಕಳನ್ನು ಶಿಕ್ಷಣದಿಂದ ವಂಚಿತರಾಗಿ ಮಾಡುತ್ತಿದ್ದೀರಿ. ಇದಕ್ಕಿಂತ ಸಂವಿಧಾನಬಾಹಿರವಾದ ಕೆಲಸ ಮತ್ತೊಂದಿಲ್ಲ. ಮಕ್ಕಳನ್ನು ಶಾಲೆಯಿಂದ ವಾಪಸ್ ಕಳಿಸಲಾಗುತ್ತಿದೆ. ಇದಕ್ಕಿಂತ ಪಾಪದ ಕೆಲಸ ಮತ್ತೊಂದಿಲ್ಲ ಎಂದಿದ್ದಾರೆ. ಶಾಲೆಗಳ ಬಳಿ ಪೊಲೀಸರನ್ನು ತಂದು ನಿಲ್ಲಿಸಿದ್ದೀರಿ, ಏನಿದು? ಇದು ಕೋರ್ಟ್‌ವರೆಗೆ ಹೋಗದಂತೆ ನೋಡಿಕೊಳ್ಳಬೇಕಿತ್ತು ಎಂದು ಹೇಳಿದ್ದಾರೆ.
ಹುಬ್ಬಳ್ಳಿ: ಹಿಜಾಬ್ ವಿಷಯ ಈಗಾಗಲೇ ನ್ಯಾಯಲಯದಲ್ಲಿದೆ. ಕೋರ್ಟ್ನಲ್ಲಿರುವಾಗಲೇ ದುರದ್ದೇಶದಿಂದ ಗಲಾಟೆ ಮಾಡಲಾಗುತ್ತಿದೆ. ಮಧ್ಯಂತರ ಆದೇಶ ಎಲ್ಲಿ ಪಾಲನೆ ಆಗುತ್ತಿಲ್ಲವೋ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಹುಬ್ಬಳ್ಳಿಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿಕೆ ನೀಡಿದ್ದಾರೆ. ನ್ಯಾಯಾಲಯ ಹಿಜಾಬ್ ಪರ ಅಥವಾ ವಿರುದ್ಧವಾದರೂ ತೀರ್ಪು ಕೊಡಲಿ. ಅದನ್ನ ನಾವು ಪಾಲನೆ ಮಾಡಬೇಕಾಗುತ್ತೆ. ಆದ್ರೆ ಪರವಾಗಿ ಬಂದ್ರು, ವಿರುದ್ಧವಾಗಿ ಬಂದ್ರು ಹಿಜಾಬ್ ಹಾಕ್ತಿವಿ ಅನ್ನೋದು ಸರಿಯಲ್ಲ. ಶಾಲೆ ಮತ್ತು ಕಾಲೇಜುಗಳಿಗೆ ವಿದ್ಯಾರ್ಥಿಗಳಿಗೆ ಮಾತ್ರ ಅವಕಾಶ ನೀಡಿ. ಆದ್ರೆ ಹಿಜಾಬ್ ಹಾಕಿಸೋಕೆ, ಅಥವಾ ತೆಗಿಸೋಕೆ ಯಾರೇ ಬಂದ್ರು ಒದ್ದು ಒಳಗೆ ಹಾಕಿ. ಸರ್ಕಾರ ಎಷ್ಟು ದಿನ ಇವರನ್ನ ಸಂಬಾಳಿಸಬೇಕು. ಗಲಾಟೆ ಮಾಡುವವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮಕ್ಕೆ ಮುಂದಾಗಬೇಕು ಎಂದು ಹೇಳಿದ್ದಾರೆ.
ಹಿಜಾಬ್ ಬಗ್ಗೆ ಅನಗತ್ಯವಾಗಿ ವಿವಾದ ಹುಟ್ಟು ಹಾಕುತ್ತಿದ್ದಾರೆ ಎಂದು ಸಂಘ ಪರಿವಾರದವರ ವಿರುದ್ಧ ವಿಧಾನಸೌಧದಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ. ಬಹುತೇಕ ಮುಸ್ಲಿಂ ವಿದ್ಯಾರ್ಥಿನಿಯರು ಹಿಜಾಬ್ ಧರಿಸುತ್ತಾರೆ. ಹಿಜಾಬ್ ಧರಿಸುವುದರಿಂದ ಯಾರಿಗೂ ತೊಂದರೆಯಾಗಲ್ಲ. ಕೋರ್ಟ್ ಕೂಡ ಹಿಜಾಬ್ ವಿಚಾರ ಗಂಭೀರವಾಗಿ ಪರಿಗಣಿಸಿದೆ. ಧರ್ಮ ಹಾಗೂ ಸಂಪ್ರದಾಯಕ್ಕೆ ಯಾರೂ ಅಡ್ಡಿಪಡಿಸಬಾರದು. ಇತ್ತೀಚಿನ ದಿನಗಳಲ್ಲಿ ಮುಸ್ಲಿಂ ಹೆಣ್ಣುಮಕ್ಕಳು ಶಾಲೆಗೆ ಬರ್ತಿದ್ದಾರೆ. ಮೊದಲು ಶಾಲೆಗೆ ಹೋಗುವವರ ಸಂಖ್ಯೆ ಬಹಳ ಕಡಿಮೆಯಿತ್ತು. ಹೆಣ್ಣು ಮಕ್ಕಳನ್ನು ಶಿಕ್ಷಣದಿಂದ ವಂಚಿತರನ್ನಾಗಿ ಮಾಡುವ ಹುನ್ನಾರ ಸಂಘ ಪರಿವಾರ ನಡೆಸುತ್ತಿದೆ ಎಂದು ಹೇಳಿದ್ದಾರೆ.
ಕೊಪ್ಪಳ: ಕ್ಲಾಸ್ ರೂಂ ನಲ್ಲಿ ವಿದ್ಯಾರ್ಥಿಗಳು ಹಿಜಾಬ್ ಧರಿಸಿ ಕುಳಿತಿರುವಂತಹ ಘಟನೆ ನಡೆದಿದೆ. ಸರ್ಕಾರಿ ಪ್ರಥಮ ದರ್ಜೆ ಮಾಹಾವಿದ್ಯಾಲಯದಲ್ಲಿ ಹಿಜಾಬ್ ಧರಿಸಿ ವಿದ್ಯಾರ್ಥಿಗಳು ಕ್ಲಾಸ್ನಲ್ಲಿ ಕುಳಿತುಕೊಂಡಿದ್ದಾರೆ. ಜಿಲ್ಲೆಯ ಗಂಗಾವತಿಯ ಸರ್ಕಾರಿ ಪ್ರಥಮ ದರ್ಜೆ ಮಾಹಾವಿದ್ಯಾಲಯದಲ್ಲಿ ಕೋರ್ಟ್ ಮದ್ಯಂತರ ತೀರ್ಪು ಉಲ್ಲಂಘಿಸಿ ಕ್ಲಾಸ್ ರೂಂಗೆ ವಿದ್ಯಾರ್ಥಿಗಳು ಎಂಟ್ರಿಕೊಟ್ಟಿದ್ದಾರೆ. ನಿನ್ನೆನೂ ಹಿಜಾಬ್ ಧರಿಸಿ ವಿದ್ಯಾರ್ಥಿಗಳು ಕ್ಲಾಸ್ನಲ್ಲಿ ಕುಳಿತುಕೊಂಡಿದ್ದಾರೆ. ಕಾಲೇಜ್ ಸಿಬ್ಬಂದಿ
ಯಾವದೇ ಕ್ರಮ ಕೈಗೊಂಡಿಲ್ಲ.
ಚಿಕ್ಕೋಡಿ: ಹಿಜಾಬ್ ಕೇಸರಿ ಶಾಲು ವಿವಾದ ಮುಂದುವರೆದಿದ್ದು, ಬೆಳಗಾವಿ ಜಿಲ್ಲೆ ಅಥಣಿ ಪಟ್ಟಣದ ಶ್ರಿ ಕೆಎ ಲೋಕಾಪುರ ಪದವಿ ಕಾಲೇಜ್ ಕ್ಯಾಂಪಸ್ ನಲ್ಲಿ ಕೇಸರಿ ಶಾಲು ಧರಿಸಿಕೊಂಡು ಬಂದಿದ್ದ ವಿದ್ಯಾರ್ಥಿಗಳು ಕೇಸರಿ ಶಾಲು ಪ್ರದರ್ಶನ ಮಾಡಿದ್ದಾರೆ. ಪಿಯು ಕಾಲೇಜು ಆವರಣದಲ್ಲಿ ವಿದ್ಯಾರ್ಥಿಗಳು ಕೆಸರಿ ಶಾಲು ಧಾರಣೆ ಮಾಡಿಕೊಂಡು ಬಂದಿದ್ದು, ಕಾಲೇಜು ಆವರಣವರೆಗೆ 10 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಕೇಸರಿ ಶಾಲು ಹಾಕಿಕೊಂಡು ಬಂದಿದ್ದಾರೆ. ಸ್ಥಳಕ್ಕೆ ಅಥಣಿ ಪೊಲೀಸರು ದೌಡಾಯಿಸಿದ್ದು, ಆಡಳಿತ ಮಂಡಳಿ ಅಧಿಕಾರಿಗಳ ಜೊತೆ ಸಭೆ ನಡೆಸಿದ್ದಾರೆ.
ಬೆಳಗಾವಿ: ಹಿಜಾಬ್ ಸಂಘರ್ಷ ವಿಚಾರವಾಗಿ ವಿಜಯ್ ಪ್ಯಾರಾಮೆಡಿಕಲ್ ಕಾಲೇಜಿನಲ್ಲಿ ವಿದ್ಯಾರ್ಥಿನಿಯರ ಮಧ್ಯೆ ಜಟಾಪಟಿ ಉಂಟಾಗಿದೆ. ತರಗತಿ ಮುಗಿಸಿ ಕಾಲೇಜಿನಿಂದ ಹೊರಬಂದ ವಿದ್ಯಾರ್ಥಿನಿಯರು, ಹಿಜಾಬ್ ಧರಿಸಿ ವಿದ್ಯಾರ್ಥಿನಿಯರ ವಿರುದ್ಧ ಇತರೆ ವಿದ್ಯಾರ್ಥಿನಿಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅವರಿಗೆ ಶಿಕ್ಷಣ ಮುಖ್ಯವಲ್ಲ, ಅವರಿಂದ ನಮಗೆ ತೊಂದರೆ ಆಗ್ತಿದೆ ಎಂದು ಇತರೆ ವಿದ್ಯಾರ್ಥಿನಿಯರು ಹೇಳುತ್ತಿದ್ದಾರೆ. ನಾವು ತರಗತಿಗೆ ಹಾಜರಾಗಿಲ್ಲ ಹೇಗೆ ತೊಂದರೆ ಆಗುತ್ತೆ ಎಂದು ಹಿಜಾಬ್ ಧರಿಸಿ ಬಂದಿದ್ದ ವಿದ್ಯಾರ್ಥಿನಿಯರು ಕೇಳಿದ್ದಾರೆ. ಅವರಿಗೆ ಶಿಕ್ಷಣ ಮುಖ್ಯ ಅಲ್ಲ, ಶಿಕ್ಷಣ ಮುಖ್ಯ ಆಗಿದ್ರೆ ಹಿಜಾಬ್ ತಗೆದು ಬರ್ತಿದ್ರು.
ಅವರಿಂದ ನಮ್ಮ ಶಿಕ್ಷಣ ಹಾಳಾಗುತ್ತಿದೆ. ಇನ್ಸ್ಟಾಗ್ರಾಮ್‌ನಲ್ಲಿ ಹಿಜಾಬ್ ತಗೆದು ರೀಲ್ಸ್ ಹಾಕ್ತಾರೆ, ಈಗ ಹಿಜಾಬ್ ತಗೆಯೋಕಾಗಲ್ಲ.
ಇನ್ಸ್ಟಾಗ್ರಾಮ್‌ನಲ್ಲಿ ರೀಲ್ಸ್ ಮಾಡಬೇಕಾದ್ರೆ ಹಿಜಾಬ್ ಬಗ್ಗೆ ಗೊತ್ತಾಗಲ್ವಾ. ಹಿಜಾಬ್ ಬುರ್ಖಾ ತಗೆಯಲು ಪ್ರತ್ಯೇಕ ಕೊಠಡಿ ಕೊಡ್ತೀವಿ ಅಂದ್ರೆ ಕೇಳ್ತಿಲ್ಲ. ಬಿಂದಿ, ಕುಂಕುಮ, ಬಳೆ ತಗೆಯಲು ಕೆಲವೆಡೆ ಹಿಜಾಬ್ ಧರಿಸಿದವರ ಆಗ್ರಹವಾಗಿದ್ದು, ಅದು ನಮ್ಮ ಸಂಪ್ರದಾಯ ತಗೆಯಲ್ಲ ಎಂದು ವಿದ್ಯಾರ್ಥಿನಿಯರು ಹೇಳಿದ್ದಾರೆ.
ಬೆಳಗಾವಿ: ಹಿಜಾಬ್ ವಿಚಾರ ಹಿನ್ನೆಲೆ ತರಗತಿಗೆ ಅವಕಾಶ ನೀಡದಿದ್ದಕ್ಕೆ ವಿದ್ಯಾರ್ಥಿನಿಯರು ಆಕ್ರೋಶ ಹೊರ ಹಾಕಿದ್ದಾರೆ. ಹಿಜಾಬ್ ಧರಿಸಿದ್ದಕ್ಕೆ ತರಗತಿಗೆ ಅನುಮತಿ ನೀಡಿಲ್ಲ. ಬೇರೆಯವರಿಗೆ ತರಗತಿ ತೆಗೆದುಕೊಂಡಿದ್ದಾರೆ. ಯಾವುದೇ ಕಾರಣಕ್ಕೂ ನಾವು ಹಿಜಾಬ್ ತೆಗೆಯುವುದಿಲ್ಲ. ಐದು ದಿನ ಕ್ಲಾಸ್‌ಗೆ ಬರದಂತೆ ಕಾಲೇಜಿನವರು ಹೇಳಿದ್ದಾರೆ ಎಂದು ಟಿವಿ 9ಗೆ ಹಿಜಾಬ್ ಧರಿಸಿ ಬಂದಿದ್ದ ವಿದ್ಯಾರ್ಥಿನಿ ಹೇಳಿಕೆ ನೀಡಿದ್ದಾರೆ.
ಹಾಸನ: ಹಾಸನದಲ್ಲಿ ಹಿಜಾಬ್ಗಾಗಿ ಕಾಲೇಜು ವಿದ್ಯಾರ್ಥಿನಿಯರಿಂದ ಹೋರಾಟ ಮಾಡಲಾಗಿದ್ದು, ತರಗತಿ ಬಹಿಷ್ಕರಿಸಿ ವಿದ್ಯಾರ್ಥಿನಿಯರು ಮನೆಗೆ ವಾಪಸ್ಸಾಗಿದ್ದಾರೆ. ನಗರದ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ಘಟನೆ ನಡೆದಿದ್ದು,
20ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಮನೆಗೆ ವಾಪಸ್ಸಾಗಿದ್ದಾರೆ. ಕೆಲ ಗಂಟೆ ಕಾಲೇಜು ಎದುರು ಪ್ರತಿಭಟನೆ ನಡೆಸಿ, ನಂತರ ಮನೆಗೆ ವಾಪಸ್ಸಾಗಿದ್ದಾರೆ. ಹಿಜಾಬ್ ಧರಿಸಿ ಕ್ಲಾಸ್ನಲ್ಲಿ ಕುಳಿತುಕೊಳ್ಳಲು ಅವಕಾಶ ಕೋರಿ ಪ್ರತಿಭಟನೆ ಮಾಡಲಾಗಿದೆ. ಇಂದೇ ಅಂತಿಮ ನಿರ್ಧಾರ ಹೊರಬೀಳಲಿ ಎಂದು ಆಗ್ರಹಿಸಿದ್ದಾರೆ.
ಬೆಂಗಳೂರು: ರಾಜ್ಯದ ಹಿಜಾಬ್ ಗಲಾಟೆ ಎಲ್ಲವೂ ಸರಿ ಹೋಗಲಿದೆ. ಇಂದು ಅಷ್ಟಾಗಿ ಹಿಜಾಬ್ ಗಲಾಟೆ ಇಲ್ಲ ಎಂದು ಬಿ.ಸಿ. ನಾಗೇಶ್ ಹೇಳಿಕೆ ನೀಡಿದ್ದಾರೆ. ಕ್ಲಾಸ್ ರೂಂಗೆ ಸಮವಸ್ತ್ರದಲ್ಲಿ ಬರಬೇಕು. ಮಕ್ಕಳು ಅರ್ಥಮಾಡಿಕೊಳ್ಳಬೇಕು. ಡಿಗ್ರಿ ಕಾಲೇಜು ಸ್ವಲ್ಪ ಗೊಂದಲ ಇದೆ. ಡಿಗ್ರಿ ಕಾಲೇಜುನಲ್ಲಿ ಸಮವಸ್ತ್ರ ಇಲ್ಲ. 1 to 12 ತರಗತಿಯಲ್ಲಿ ಸಮವಸ್ತ್ರ ಇದೆ. ಹೀಗಾಗಿ ಇಂದು ಎಲ್ಲವೂ ಸರಿ ಹೋಗುತ್ತೆ ಎಂದಿದ್ದಾರೆ. ಹಿಜಾಬ್ ಹಾಕಿಕೊಂಡು ಬನ್ನಿ ಆದ್ರೆ ಕ್ಲಾಸ್ರೂಮ್ ಹೋಗುವಾಗ ತೆಗೆದು ಹೋಗಿ. ನಿನ್ನೆ ಮುಸ್ಲಿಂ ಶಾಸಕರ ಜೊತೆ ಜೊತೆ ಮಾತನಾಡಿದ್ದೇನೆ. ಅವ್ರು ಕೋಟ್೯ ಆದೇಶ ಪಾಲನೆ ಮಾಡಿ ಎಂದು ಮುಖಂಡರಿಗೆ ಹೇಳಿದ್ದಾರೆ. ಮುಂದೆ ಯಾವುದೇ ತೊಂದರೆ ಆಗಲ್ಲ. ಎಲ್ಲವೂ ಸರಿ ಹೋಗಲಿದೆ. ಇಂದು ಗಲಾಟೆ ಬಗ್ಗೆ ವರದಿ ತೆಗೆದುಕೊಳ್ತಿದ್ದೇವೆ. ಮಕ್ಕಳ ಶಿಕ್ಷಣ ತುಂಬಾ ಮುಖ್ಯ. ಹೀಗಾಗಿ ಮಕ್ಕಳಿಗೆ ಕನ್ವಿನ್ಸ್ ಮಾಡುವ ಕೇಲಸ ಮಾಡ್ತೇವೆ ಮತ್ತು ಪೋಷಕರು ಸಹ ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದ್ದಾರೆ.
ಕಲಬುರಗಿ: ಹಿಜಾಬ್ ತಂಟೆಗೆ ಬಂದ್ರೆ ತುಂಡು ತುಂಡು ಮಾಡುತ್ತೇವೆ. ಕೈ ಮುಖಂಡ ಮುಕ್ರಂ ಖಾನ್ ವಿರುದ್ದ ಹಿಂದುಪರ ಸಂಘಟನೆಗಳಿಂದ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಕುರಿತಾಗಿ ನಗರದಲ್ಲಿ ಶ್ರೀರಾಮ ಸೇನೆ ಅಧ್ಯಕ್ಷ ಆಂದೋಲಾದ ಕರುಣೇಶ್ವರ ಸ್ವಾಮೀಜಿ ಹೇಳಿಕೆ ನೀಡಿದ್ದಾರೆ. ಮುಕ್ರಂ ಖಾನ್ರ ಬಂಧನವಾಗಬೇಕು. ಅವರ ಮನೆಗೆ ಹೋಗ್ತೇವೆ, ನಮ್ಮನ್ನು ಕತ್ತರಿಸಲಿ ನೋಡೋಣಾ ಎಂದಿದ್ದಾರೆ. ಹಿಜಾಬ್ ಬೇಡವಾದ್ರೆ ಕುಂಕುಮ, ಬಿಂದಿಗೆ ಅವಕಾಶವೇಕೆ ಅನ್ನೋ ಮುಸ್ಲಿಂ ವಿದ್ಯಾರ್ಥಿನಿಯರ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, ಕುಂಕುಮ ಧರ್ಮದ ಸಂಕೇತ. ಅದನ್ನು ಪ್ರಶ್ನಿಸುವ ನೈತಿಕತೆ ಮುಸ್ಲಿಂರಿಗೆ ಇಲ್ಲಾ. ಹಿಜಾಬ್ ಮತ್ತು ಬುರ್ಕಾ ಹೊರದೇಶದ್ದು. ಬುರ್ಖಾ ಮತ್ತು ಬಿಂದಿ ಬೇಕಾದ್ರೆ ಅವರು ಪಾಕಿಸ್ತಾನಕ್ಕೆ ಹೋಗಲಿ ಎಂದು ಹೇಳಿದ್ದಾರೆ.
ತುಮಕೂರು: ಹಿಜಾಬ್ ವಿವಾದ ಹಿನ್ನೆಲೆ ನಗರದ ಎಂಪ್ರೆಸ್ ಶಾಲೆ ಬಳಿ ಪೊಲೀಸ್ ಭದ್ರತೆ ಮುಂದುವರೆಸಲಾಗಿದೆ. ಇಂದು ಕೂಡ ವಿದ್ಯಾರ್ಥಿನಿಯರು ಶಾಲೆಗೆ ಬಂದು ವಾಪಸ್ ಹೋಗಿದ್ದಾರೆ. ಹಿಜಾಬ್ ಬುರ್ಕಾ ಧರಿಸಿ ಮೂವರು ವಿದ್ಯಾರ್ಥಿನಿಯರು ಶಾಲೆ ಒಳಗೆ ಹೋಗಲು ಯತ್ನಿಸಿದ್ದು, ಪೊಲೀಸರು ತಡೆದಿದ್ದಾರೆ. ಹಾಗಾಗಿ ಮೂವರು ವಿದ್ಯಾರ್ಥಿನಿಯರು ವಾಪಸ್ ತೆರಳಿದ್ದಾರೆ. ಇನ್ನುಳಿದಂತೆ ಮುಸ್ಲಿಂ ಸಮುದಾಯದ ವಿದ್ಯಾರ್ಥಿನಿಯರನ್ನ ಪರಿಶೀಲನೆ ನಡೆಸಿ ಪೊಲೀಸರು ಒಳಗೆ ಕಳಿಸುತ್ತಿದ್ದಾರೆ.
ಬೆಂಗಳೂರು: ರಾಜ್ಯದ ಶಾಲೆ-ಕಾಲೇಜುಗಳಲ್ಲಿ ಹಿಜಾಬ್ ಸಂಘರ್ಷ ವಿಚಾರವಾಗಿ ಸಿಎಂ ಹಾಗೂ ಶಿಕ್ಷಣ ಸಚಿವರಿಗೆ ಶಿಕ್ಷಣ ಇಲಾಖೆಯ ಮಾಜಿ ಸಚಿವ ಸುರೇಶ್ ಕುಮಾರ್ ಪತ್ರ ಬರೆಯುವ ಮೂಲಕ ಸಲಹೆ ನೀಡಿದ್ದಾರೆ. ನನ್ನ ಶಾಲೆ-ಕಾಲೇಜು ನನ್ನ ಹೆಮ್ಮೆ, ನನ್ನ ಶಿಕ್ಷಣ, ನನ್ನ ಸಮವಸ್ತ್ರ. ನನ್ನದೇ ಭವಿಷ್ಯವೆನ್ನುವ ಭಾವನೆ ವಿದ್ಯಾರ್ಥಿಗಳಲ್ಲಿ ಬೆಳೆಯಬೇಕು. ಶಿಕ್ಷಣ ಇಲಾಖೆ ಹೊಸ ಕಾಯಕಲ್ಪದೊಂದಿಗೆ ಕೆಲಸ ಮಾಡಬೇಕು. ಶಾಲೆ-ಕಾಲೇಜುಗಳ ಆವರಣದಲ್ಲಿ ಸೌಹಾರ್ದತೆ ಕಾಪಾಡಲು ಸರ್ಕಾರ ಸಕಾರಾತ್ಮಕ ಕಾರ್ಯಕ್ರಮಗಳನ್ನು ರೂಪಿಸಬೇಕು. ಶಿಕ್ಷಣ ಇಲಾಖೆ ಕೂಡಲೇ ಕೆಲವು ಕ್ರಮಗಳಿಗೆ ಮುಂದಾಗಬೇಕು ಎಂದು ಪತ್ರದ ಮೂಲಕ ಸಲಹೆ ನೀಡಿದ್ದಾರೆ.
ಬಳ್ಳಾರಿ: ಹಿಜಾಬ್ ಕೇಸರಿ ಶಾಲು ವಿವಾದದ ಮಧ್ಯೆ ವಿದ್ಯಾರ್ಥಿನಿಯರ ಸ್ನೇಹ ಗಮನ ಸೆಳೆದಿದೆ. ಹಿಜಾಬ್ ಧರಿಸಿ ಬಂದ ವಿದ್ಯಾರ್ಥಿನಿಯನ್ನ ಕ್ಲಾಸ್‌ಗೆ ಬರುವಂತೆ ಸಹಪಾಠಿ ಕರೆದಿದ್ದಾಳೆ. ಹಿಜಾಬ್ ತಗೆಯಲು ಮುಸ್ಲಿಂ ವಿದ್ಯಾರ್ಥಿನಿ ನಿರಾಕರಿಸಿದ್ದಾಳೆ. ಸಹಪಾಠಿಯ ಮನವಿ ತಿರಸ್ಕರಿಸಿ ವಿದ್ಯಾರ್ಥಿನಿ ಮನೆಗೆ ಮರಳಿದ್ದಾಳೆ. ಬಳ್ಳಾರಿಯ ಸರಳಾದೇವಿ ಕಾಲೇಜು ಮುಂಭಾಗದಲ್ಲಿ ಈ ಘಟನೆ ಕಂಡುಬಂದಿದೆ. ಹಿಜಾಬ್ ಧರಿಸಿ ಬಂದವರಿಗೆ ಕಾಲೇಜಿನೊಳಗೆ ಪ್ರವೇಶ ನೀಡಲಾಗದು ಎಂದು ಪ್ರಾರ್ಚಾರ್ಯರು ಹೇಳಿದ್ದಾರೆ. ಹಿಜಾಬ್ ತಗೆದಿಟ್ಟು ಬಾ ಎಂದು ಕರೆದರೂ ಸಹಪಾಠಿ ಬಾರದೇ ಮರಳಿ ಹೋಗಿದ್ದಾಳೆ.
ಮಡಿಕೇರಿ: ಕೊಡಗಿನಲ್ಲಿ ಹಿಜಾಬ್ ವಿಚಾರ ತಾರಕ್ಕೆ ಏರಿದೆ. ಬೇಕು ಬೇಕು ನ್ಯಾಯ ಬೇಕು ಎಂದು ಕಾಲೇಜಿನ ಮುಂದೆ ವಿದ್ಯಾರ್ಥಿನಿಯರು ಪ್ರತಿಬಟಿಸುತ್ತಿದ್ದಾರೆ. ಸಂಜೆಯವರೆಗೂ ಇಲ್ಲೇ ಕೂರುತ್ತೇವೆ ನಮ್ಮಗೆ ನ್ಯಾಯ ಕೊಡಿ ಎಂದು ವಿದ್ಯಾರ್ಥಿಗಳು ಪ್ರಾಂಶುಪಾಲರೊಂದಿಗೆ ವಾಗ್ವಾದಕೆ ಇಳಿದಿದ್ದಾರೆ. ಮಡಿಕೇರಿ ನಗರದ ಪ್ರಥಮ ದರ್ಜೆ ಕಾಲೇಜಿನಲ್ಲಿ ಘಟನೆ ನಡೆದಿದೆ. 15 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಿಜಾಬ್ ಧರಿಸಿ ಬಂದಿದ್ದಾರೆ. ಹಿಜಾಬ್ ತೆಗೆದು ಬಂದ್ರೆ ಕಾಲೇಜಿಗೆ ಎಂಟ್ರಿ ಎಂದು ಪ್ರಾಂಶುಪಾಲರು ಹೇಳಿದ್ದು, ಹೈಕೋರ್ಟ್ ಹಾಗೂ ಸರ್ಕಾರದ ಸೂಚನೆಯನ್ನ ಪಾಲಿಸುತ್ತಿರುವುದಾಗಿ ಪ್ರಾಂಶುಪಾಲ ವಿಜಯ್ ಹೇಳಿದ್ದಾರೆ.
ಸ್ಥಳದಲ್ಲಿ ಬಿಗಿ ಪೊಲೀಸ್ ಭದ್ರತೆ ನೀಡಲಾಗಿದೆ.
ರಾಮನಗರ: ಜಿಲ್ಲೆಯಲ್ಲಿ ಹಿಜಾಬ್ ವಿವಾದ ಮುಂದುವರೆದಿದೆ. ಹಿಜಾಬ್ ಧರಿಸಿ ಕ್ಲಾಸ್‌ಗೆ ಹೋಗುದಾಗಿ ಪಿಯು ವಿದ್ಯಾರ್ಥಿನಿಯರು ಹಠ ಹಿಡಿದಿದ್ದಾರೆ. ಮಾಗಡಿ ತಾಲೂಕಿನ ಕುದೂರಿನ ಕರ್ನಾಟಕ ಪಬ್ಲಿಕ್ ಶಾಲೆಯ ಆವರಣದಲ್ಲಿರೋ ಪದವಿ ಪೂರ್ವ ಕಾಲೇಜುನಲ್ಲಿ ಘಟನೆ ನಡೆದಿದೆ. 30ಕ್ಕೂ ಹೆಚ್ಚು ವಿರ್ದಾರ್ಥಿನಿಯರಿಂದ ಶಾಲೆ ಮುಂದೆ ಪ್ರತಿಭಟನೆ ಮಾಡಲಾಗುತ್ತಿದ್ದು, ವಿದ್ಯಾರ್ಥಿನಿಯರ ಪ್ರತಿಭಟನೆಗೆ ಮುಸ್ಲಿಂ ವಿದ್ಯಾರ್ಥಿಗಳು ಸಾಥ್ ನೀಡಿದ್ದಾರೆ. ನಿನ್ನೆ ಮಾಗಡಿ ತಹಶಿಲ್ದಾರ್ ಹಾಗೂ ಡಿವೈಎಸ್‌ಪಿ, ವಿದ್ಯಾರ್ಥಿನಿಯರನ್ನ ಮನವೊಲಿಸಿದ್ದರು. ನಿನ್ನೆ ನಡೆದ ಸಂಧಾನ ಸಭೆಯಲ್ಲಿ ನಾಳೆಯಿಂದ ಹಿಜಾಬ್ ಧರಿಸದೇ ತರಗತಿಗೆ ಬರುತ್ತೇವೆ ಎಂದು ವಿದ್ಯಾರ್ಥಿಗಳು ಹೇಳಿದ್ದರು. ಆದರೆ ಇಂದು ಮತ್ತೆ ಹಿಜಾಬ್ ಧರಿಸುತ್ತೇವೆ ಎಂದು ಹಠ ಹಿಡಿದಿದ್ದಾರೆ. ನಮಗೆ ಕಾಲೇಜು ಹೊರಗಡೆಯೇ ಕೂರಿಸಿ ಪಾಠ ಮಾಡಿ ಎಂದು ಪಟ್ಟು ಹಿಡಿದಿದ್ದು, ವೀ ವಾಂಟ್ ಹಿಜಾಬ್ ಎಂದು ವಿದ್ಯಾರ್ಥಿನಿ ಹಾಗೂ ವಿದ್ಯಾರ್ಥಿಗಳಿಂದ ಘೋಷಣೆ ಕೂಗುತ್ತಿದ್ದಾರೆ. ಸದ್ಯ ಕಾಲೇಜು ಬಳಿ ಬಿಗಿ ಭದ್ರತೆ ನೀಡಲಾಗಿದೆ.
ಯಾದಗಿರಿ: ಇಂದು ಕೂಡ ಹಿಜಾಬ್ ವಿವಾದ ಮುಂದುವರೆದಿದ್ದು, ವಿದ್ಯಾರ್ಥಿನಿಯರಿಂದ ಕಾಲೇಜು ಮುಂದೆ ಹೈಡ್ರಾಮಾ ಮಾಡಲಾಗುತ್ತಿದೆ. ನಗರದ ನ್ಯೂ ಕನ್ನಡ ಕಾಲೇಜಿನಲ್ಲಿ ಘಟನೆ ನಡೆದಿದ್ದು, ಹತ್ತಾರು ವಿದ್ಯಾರ್ಥಿನಿಯರಿಂದ ಕಾಲೇಜು ಮುಂದೆ ಪ್ರೊಟೆಸ್ಟ್ ಮಾಡುತ್ತಿದ್ದಾರೆ. ಕಾಲೇಜ್ ಗೇಟ್ ಗೋಡೆಯ ಮೇಲೆ ಹೈಕೋರ್ಟ್ ಮಧ್ಯಂತರ ಆದೇಶವನ್ನು ಆಡಳಿತ ಮಂಡಳಿ ಅಂಟಿಸಿದೆ. ಕೇವಲ ಶಾಲಾ ಸಮವಸ್ತ್ರ ಧರಿಸಿ ತರಗತಿಗೆ ಹಾಜರಾಗಬೇಕು. ಯಾವುದೇ ಧಾರ್ಮಿಕ ಸಂಕೇತದ ವಸ್ತ್ರ ಧರಿಸುವಂತಿಲ್ಲ. ಹೈಕೋರ್ಟ್ ಆದೇಶ ಪಾಲಿಸಿ ತರಗತಿಗೆ ಬನ್ನಿ ಎಂದು ಆಡಳಿತ ಮಂಡಳಿ ಹೇಳಿದೆ. ಈ ವೇಳೆ ಕಾಲೇಜು ಆಡಳಿತ ಮಂಡಳಿಯೊಂದಿಗೆ ವಿದ್ಯಾರ್ಥಿನಿಯರು ವಾಗ್ವಾದ ನಡೆಸಿದರು.
ಕೋಲಾರ: ಹಿಜಬ್ ಹಾಗೂ ಕೇಸರಿ ಶಾಲು ವಿವಾದದಿಂದಾಗಿ, ಇಂದು ಕೂಡ ನಗರದ ಸರ್ಕಾರಿ ಬಾಲಕಿಯರ ಜೂನಿಯರ್ ಕಾಲೇಜಿಗೆ ವಿದ್ಯಾರ್ಥಿನಿಯರು ಬಂದಿಲ್ಲ. ಹಿಜಬ್ ತೆಗೆಯಬೇಕು ಎನ್ನುವ ನಿಯಮ ಇರುವ ಹಿನ್ನೆಲೆ, ಮುಸ್ಲಿಂ ಸಮುದಾಯದ ವಿದ್ಯಾರ್ಥಿನಿಯರು ಕಾಲೇಜಿಗೆ ಹಾಜರಾಗಿಲ್ಲ. ಎರಡು ದಿನದಿಂದ ಕಾಲೇಜಿನ ಗೇಟ್ ಬಳಿ ಮೌನ ಪ್ರತಿಭಟನೆ ಮಾಡಿದ್ದ ವಿದ್ಯಾರ್ಥಿನಿಯರು, ಇಂದು ಕೇವಲ ಬೆರಳೆಣಿಕೆಯಷ್ಟು ಮಾತ್ರ ಕಾಲೇಜಿಗೆ ಹಾಜರಾಗಿದ್ದಾರೆ.
ದಾವಣಗೆರೆ: ಹಿಜಾಬ್ -ಕೇಸರಿ ಸಂಘರ್ಷ ಹಿನ್ನೆಲೆಯಲ್ಲಿ ಸಾಣಿಹಳ್ಳಿಮಠದ ಡಾ.ಪಂಡಿತಾರಾಧ್ಯ ಸ್ವಾಮೀಜಿ ದಾವಣಗೆರೆ ನಗರದಲ್ಲಿ ಹೇಳಿಕೆ ನೀಡಿದ್ದಾರೆ. ಬಟ್ಟೆಗಿಂತ ಬದುಕು ಮುಖ್ಯ. ಬಟ್ಟೆ ಕಾರಣಕ್ಕಾಗಿ ಹುಟ್ಟಿದ ಸಂಘರ್ಷದಲ್ಲಿ ಬದುಕು ಹಾಳಾಗಬಾರದು. ಸಾಮರಸ್ಯ ಬದುಕಿಗೆ ಬಸವತತ್ವದ ಸಂದೇಶವಿದೆ. ಅದನ್ನ ಪಾಲನೆ ಮಾಡಬೇಕಾಗಿದೆ. ವಿದ್ಯಾರ್ಥಿ ಸಮೂಹವನ್ನ ಗಮನದಲ್ಲಿ ಇಟ್ಟುಕೊಂಡು ಅವರಲ್ಲಿ ಜಾತಿ ಬೀಜ ಬಿತ್ತುವ ಕೆಲಸ ನಡೆದಿದೆ. ನಾವು ಹಾಕಿಕೊಳ್ಳುವ ಬಟ್ಟೆಗಳು ಕಾವಿ, ಖಾಕಿ ಅಥವಾ ಖಾದಿ ಆಗಿರಬಹುದು. ಈ ಬಟ್ಟೆಗಳಿಗಿಂತ ಬದುಕು ಮುಖ್ಯ. ಇದನ್ನ ಪ್ರತಿಯೊಬ್ಬರು ಅರಿತುಕೊಳ್ಳಬೇಕು. ಸಾಮರಸ್ಯದ ಬದುಕಿನತ್ತ ಪ್ರತಿಯೊಬ್ಬರು ಸಾಗಬೇಕು. ಇದಕ್ಕೆ ಬಸವ ತತ್ವದಲ್ಲಿ ಇರುವ ಸಂದೇಶಗಳನ್ನ ಅರಿಯಬೇಕೆಂದೆ ಸ್ವಾಮೀಜಿ ಹೇಳಿದ್ದಾರೆ.
ಚಿತ್ರದುರ್ಗ: ಹಿಜಾಬ್ ವಿವಾದ ಹಿನ್ನೆಲೆ ನಗರದಲ್ಲಿ ಇಂದು ಕೂಡ ಹಿಜಾಬ್ ವಿವಾದ ಮುಂದುವರೆದಿದೆ. ನಗರದ ಎಸ್ಆರ್ಎಸ್ ಕಾಲೇಜಿಗೆ ವಿದ್ಯಾರ್ಥಿಗಳು ಹಿಜಾಬ್ ಧರಿಸಿಕೊಂಡು ಬರುತ್ತಿದ್ದಾರೆ. ಹಿಜಾಬ್ ಧರಿಸಿ ಬಂದ ವಿಧ್ಯಾರ್ಥಿನಿಯರನ್ನ ಆಡಳಿತ ಮಂಡಳಿ ಹೊರ ಹಾಕಿದೆ. 50ಕ್ಕೂ ಹೆಚ್ಚು ವಿಧ್ಯಾರ್ಥಿಗಳು ಗೇಟ್ ಬಳಿ ಜಮಾವಣೆಗೊಂಡಿದ್ದಾರೆ. ಈ ನಡುವೆ ವಿದ್ಯಾರ್ಥಿಗಳು ಪೊಲೀಸರೊಂದಿಗೆ ವಾಗ್ವಾದಕ್ಕಿಳಿದರು. ಸದ್ಯ ಕಾಲೇಜ ಗೇಟ್ ಬಳಿ ಬಿಗಿ ಪೊಲೀಸ್ ಭದ್ರತೆ ಒದಗಿಸಲಾಗಿದ್ದು, ಬಿಗುವಿನ ವಾತಾವರಣ ನಿರ್ಮಾಣವಾಗಿದೆ.
Published On - 10:38 am, Fri, 18 February 22