ಕರ್ನಾಟಕದಲ್ಲಿ ಮುಂಗಾರು (Karnataka Monsson) ಮಳೆ ಚುರುಕಾಗಿದ್ದು ಉತ್ತರ ಒಳನಾಡು ಮತ್ತು ದಕ್ಷಿಣ ಒಳನಾಡಿಯಲ್ಲಿ ಉತ್ತಮ ಮಳೆಯಾಗುತ್ತಿದೆ. ಕರಾವಳಿ ಪ್ರದೇಶಗಳಾದ ಉತ್ತರ ಕನ್ನಡ, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಭಾರಿ ಮಳೆಯಾಗುತ್ತಿದೆ. ಈ ಹಿನ್ನೆಲೆ ಇಂದು (ಜು.05) ಈ ಜಿಲ್ಲೆಗಳ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಇನ್ನು ಬಜೆಟ್ ಅಧಿವೇಶನ ಆರಂಭವಾಗಿದ್ದು, ನಿನ್ನೆ (ಜು.04) ಗ್ಯಾರೆಂಟಿ ಜಾರಿ ವಿಚಾರವಾಗಿ ಅಧಿವೇಶನ ಗದ್ದಲದಿಂದ ಕೂಡಿತ್ತು. ಅಲ್ಲದೇ ಆಡಳಿತ ಮತ್ತು ಪ್ರತಿಪಕ್ಷದ ನಾಯಕರು ಸದನ ಬಾವಿಗೆ ಇಳಿದು ಧರಣಿ ಮಾಡಿದ ಪ್ರಸಂಗವೂ ನಡೆಯಿತು.
ಬೆಂಗಳೂರು ಹೊರವರ್ತುಲ ರಸ್ತೆ ಸಂಬಂಧ ಬಿಡಿಎ ಕಚೇರಿಯಲ್ಲಿ ಅಧಿಕಾರಿಗಳ ಜೊತೆ ಡಿಸಿಎಂ ಡಿಕೆ ಶಿವಕುಮಾರ್ ಸಭೆ ಮಾಡಿದ್ದಾರೆ. ನಿನ್ನೆಯಷ್ಟೇ ಸುರಂಗ ರಸ್ತೆ ಸಂಬಂಧ ಸಭೆ ನಡೆದಿತ್ತು. ಬ್ರ್ಯಾಂಡ್ ಬೆಂಗಳೂರು ಸಂಬಂಧ ಸಾಲುಸಾಲು ಸಭೆ ನಡೆಸಲಾಗುತ್ತಿದೆ.
ಎಸ್ಸಿ, ಎಸ್ಟಿ ಸಮುದಾಯದ ಮೀಸಲಾತಿ ಪ್ರಮಾಣ ಹೆಚ್ಚಳ ವಿಚಾರವಾಗಿ ಮಾತನಾಡಿದ ಸಿಎಂ ಸಿದ್ಧರಾಮಯ್ಯ ಸಂವಿಧಾನದ 9ನೇ ಶೆಡ್ಯೂಲ್ಗೆ ಸೇರಿಸಲು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿದೆ. ಅದಕ್ಕೂ ಮೊದಲು ಬಿಜೆಪಿ ಸರ್ಕಾರ ಸೃಷ್ಟಿಸಿದ ಗೊಂದಲ ನಿವಾರಿಸಬೇಕಿದೆ ಎಂದು ST ಜನಪ್ರತಿನಿಧಿಗಳ ನಿಯೋಗ ಭೇಟಿ ವೇಳೆ ಸಿಎಂ ಸಿದ್ದರಾಮಯ್ಯ ಭರವಸೆ ನೀಡಿದರು.
ನಾಯಕ ಸಮುದಾಯದ ತಳವಾರರನ್ನು ಮಾತ್ರ ಎಸ್ಟಿಗೆ ಸೇರಿಸಲಾಗಿದ್ದು, ಇದು ಅತ್ಯಂತ ಸೂಕ್ಷ್ಮ ವಿಚಾರ, ಕಾನೂನು ತಜ್ಞರ ಜತೆ ಚರ್ಚಿಸುವ ಭರವಸೆ ನೀಡಿದರು. ಎಸ್ಟಿ ಸಚಿವಾಲಯಕ್ಕೆ ಕಾರ್ಯದರ್ಶಿ ನೇಮಕಾತಿ ಬಗ್ಗೆ ಮತ್ತು ಬುಡಕಟ್ಟು ಸಲಹಾ ಮಂಡಳಿ ಸ್ಥಾಪನೆ ಬಗ್ಗೆ ವರದಿ ನೀಡಿದಲ್ಲಿ ಪರಿಶೀಲಿಸಿ ಕ್ರಮಕೈಗೊಳ್ಳುವುದಾಗಿ ತಿಳಿಸಿದರು.
ಪರಿಶಿಷ್ಟ ಜಾತಿ ಹಾಗೂ ಪಂಗಡದ ಪ್ರಮಾಣಪತ್ರ ವಿತರಣೆಯಾಗುತ್ತಿರುವ ಬಗ್ಗೆ ಮಾತನಾಡಿದ ಸಿಎಂ ಸಿದ್ಧರಾಮಯ್ಯ ಸಿ.ಆರ್.ಇ ಸೆಲ್ನಲ್ಲಿ ಈ ಬಗ್ಗೆ ಕ್ರಮ ತೆಗೆದುಕೊಳ್ಳಬೇಕು. ರಾಯಚೂರು, ಬಿಜಾಪುರ, ಭಾಗದಲ್ಲಿ ಕೋಲಿ, ಕಬ್ಬಲಿಗ ತಳವಾರರ ಸಮುದಾಯಗಳನ್ನು ಎಸ್ಟಿ ಗೆ ಸೇರಿಸಬೇಕು ಎನ್ನುವ ಬೇಡಿಕೆ ಇದೆ. ಕೋಲಿ ಸಮಾಜದವರು ತಳವಾರರು ಎಂದೇ ಹೇಳುತ್ತಾರೆ. ಈ ಗೊಂದಲಗಳ ಬಗ್ಗೆಯೂ ತೀರ್ಮಾನವಾಗಬೇಕು ಎಂದರು.
ಉಡುಪಿ ಜಿಲ್ಲೆಯಾದ್ಯಂತ ಭಾರಿ ಮಳೆ ಮುಂದುವರಿದಿದೆ ಹಾಗಾಗಿ ಶಾಲಾ ಕಾಲೇಜುಗಳಿಗೆ ನಾಳೆ ರಜೆ ಘೋಷಿಸಿ ಉಡುಪಿ ಜಿಲ್ಲಾಧಿಕಾರಿ ಕೂರ್ಮಾರಾವ್ ಆದೇಶ ಹೊರಡಿಸಿದ್ದಾರೆ.
ವಾಲ್ಮೀಕಿ ಪೀಠಾಧಿಪತಿ ಪ್ರಸನ್ನಾನಂದಪುರಿ ಸ್ವಾಮೀಜಿ ಜೊತೆ ಗೃಹಕಚೇರಿ ಕೃಷ್ಣಾದಲ್ಲಿ ಸಿಎಂ ಸಿದ್ದರಾಮಯ್ಯ ಇಂದು ಸಭೆ ಮಾಡಿದರು. ಸಚಿವರಾದ ಸತೀಶ್ ಜಾರಕಿಹೊಳಿ, ಕೆ.ಎನ್.ರಾಜಣ್ಣ ಸೇರಿದಂತೆ ವಾಲ್ಮೀಕಿ ಸಮುದಾಯದ 14 ಶಾಸಕರು, ಮುಖಂಡರು ಉಪಸ್ಥಿತರಿದ್ದರು. ನಕಲಿ ST ಜಾತಿ ಪ್ರಮಾಣಪತ್ರ ನೀಡುವವರು, ಪಡೆಯುವವರು ಮತ್ತು ಮಾನ್ಯ ಮಾಡುವವರ ವಿರುದ್ಧ ಕ್ರಮಕ್ಕೆ ವಾಲ್ಮೀಕಿ ಸಮಾಜದ ನಿಯೋಗ ಮನವಿ ಮಾಡಿದೆ.
ಮಂಗಳೂರಿನಲ್ಲಿ ಮಳೆ ಆರ್ಭಟಕ್ಕೆ ಬಲಿಯಾದ ಸುರೇಶ್ ಗಟ್ಟಿ ಕುಟುಂಬಕ್ಕೆ ತಹಶೀಲ್ದಾರ್ ಪ್ರಭಾಕರ್ 5 ಲಕ್ಷ ರೂ. ಪರಿಹಾರ ನೀಡಿ ಸಾಂತ್ವನ ಹೇಳಿದ್ದಾರೆ. ಸುರೇಶ್ ಪತ್ನಿ ಶಾಂಭ ಅವರಿಗೆ ಪರಿಹಾರ ಚೆಕ್ ಹಸ್ತಾಂತರಿಸಿದ್ದಾರೆ. ಮಂಗಳೂರು ಹೊರವಲಯದ ಪಿಲಾರು ಬಳಿ ಮನೆ ಸಮೀಪ ಕಾಲು ಸಂಕ ದಾಟುವಾಗ ಆಯತಪ್ಪಿ ಬಿದ್ದು ಸುರೇಶ್ ಗಟ್ಟಿ ಮೃತಪಟ್ಟಿದ್ದರು.
ಜುಲೈ 7ರಂದು ರಾಜ್ಯ ಸರ್ಕಾರದ ಬಜೆಟ್ ಮಂಡನೆ ಹಿನ್ನೆಲೆ ಹಣಕಾಸು ಇಲಾಖೆ ಅಧಿಕಾರಿಗಳ ಜತೆ ಬೆಂಗಳೂರಿನ ವಸಂತನಗರದ ಕೆಎಸ್ಎಫ್ಸಿ ಕಚೇರಿಯಲ್ಲಿ ಸಿಎಂ ಸಿದ್ದರಾಮಯ್ಯ ಸಭೆ ನಡೆಸಿದ್ದಾರೆ.
ಸ್ಪೀಕರ್ ಯು.ಟಿ.ಖಾದರ್ ರಾತ್ರಿಗೆ ಊಟ ಹಾಕಿಸುತ್ತಾರೆ. ಇಂದೇ ಕೊಬ್ಬರಿಗೆ ಬೆಂಬಲ ಬೆಲೆ ಬಗ್ಗೆ ಸರ್ಕಾರ ನಿರ್ಣಯ ಮಾಡಬೇಕು. ಇಲ್ಲವಾದಲ್ಲಿ ಸದನದಲ್ಲಿ ಅಹೋರಾತ್ರಿ ಧರಣಿ ಮಾಡಬೇಕಾಗುತ್ತದೆ ಎಂದು ವಿಧಾನಸಭೆಯಲ್ಲಿ ಜೆಡಿಎಸ್ ಶಾಸಕ ಹೆಚ್.ಡಿ.ರೇವಣ್ಣ ಎಚ್ಚರಿಕೆ ನೀಡಿದ್ದಾರೆ.
ಕೊಬ್ಬರಿಗೆ ಬೆಂಬಲ ಬೆಲೆ ನಿರ್ಣಯ ಮಾಡದಿದ್ರೆ ಇಲ್ಲೇ ಪ್ರತಿಭಟನೆ ಮಾಡುವುದಾಗಿ ವಿಧಾನಸಭೆಯಲ್ಲಿ ಹೊಳೆನರಸೀಪುರ ಜೆಡಿಎಸ್ ಶಾಸಕ ಹೆಚ್.ಡಿ.ರೇವಣ್ಣ ಹೇಳಿದರು. ಪಂಚೆ ಹಾಸಿಕೊಂಡು ಸದನದಲ್ಲೇ ಮಲಗುತ್ತೇವೆ. ಕೊಬ್ಬರಿಗೆ ಬೆಂಬಲ ಬೆಲೆ ಬಗ್ಗೆ ಇವತ್ತೇ ನಿರ್ಧಾರ ಮಾಡಿ. ಇಲ್ಲವಾದಲ್ಲಿ ಇಲ್ಲೇ ಪಂಚೆ ಹಾಸಿಕೊಂಡು ನಾವು ಮಲಗುತ್ತೇವೆ ಎಂದಿದ್ದಾರೆ.
ಗೋಹತ್ಯೆ ಕಾಯ್ದೆಯನ್ನು ಹಿಂಪಡೆಯುತ್ತೇವೆಂದು ನಾವು ಹೇಳಿಲ್ಲ ಎಂದು ಪರಿಷತ್‌ನಲ್ಲಿ ಪಶುಸಂಗೋಪನೆ ಸಚಿವ ಕೆ.ವೆಂಕಟೇಶ್ ಸ್ಪಷ್ಟನೆ ನೀಡಿದ್ದಾರೆ. ಗೋಹತ್ಯೆ ಕಾಯ್ದೆ ಬಗ್ಗೆ ಪಕ್ಷದ ಒಳಗಡೆ ಚರ್ಚೆ ನಡೆಯುತ್ತಿದೆ. ಗೋಹತ್ಯೆ ಬಗ್ಗೆ ದಾಖಲೆ ಏನಾದ್ರೂ ಇದ್ರೆ ನೀಡಲಿ. ಗೋಹತ್ಯೆ ಬಗ್ಗೆ ಅರ್ಧ ಗಂಟೆ ಚರ್ಚೆಗೆ ಮನವಿ ನೀಡಿ. ಪರಿಶೀಲಿಸಿ ಅವಕಾಶ ನೀಡುತ್ತೇವೆಂದ ಸಭಾಪತಿ ಹೊರಟ್ಟಿ. ಹೀಗಾಗಿ ಬಿಜೆಪಿ ಸದಸ್ಯರು ಪರಿಷತ್‌ನಲ್ಲಿ ಪ್ರತಿಭಟನೆ ಹಿಂಪಡೆದರು.
ನಾವು ನಿಮ್ಮನ್ನು ಎರಡು ಬಾರಿ ಮುಖ್ಯಮಂತ್ರಿಯನ್ನಾಗಿ ಮಾಡಿಲ್ವಾ? ನಾವು ನಿಮ್ಮನ್ನು ಕುಮಾರಣ್ಣ ಅನ್ನಲ್ವಾ. ವಿಶ್ವಾಸ ಇದ್ದಾಗ ಇದ್ದೆವು, ವಿಶ್ವಾಸ ಇಲ್ಲದಿದ್ದಾಗ ಹೊರಬಂದಿದ್ದೇವೆ. ನಾವೇನು ನಿಮ್ಮನ್ನು ಹೆಸರು ಹೇಳಿ ಕರೆಯುತ್ತೀವಾ ಎಂದ ಬಳಿಕ ಆಯ್ತು ಸ್ವಲ್ಪ ಕೇಳಿ ಶಿವಲಿಂಗೇಗೌಡರೇ ಎಂದು ಹೆಚ್ಡಿ ಕುಮಾರಸ್ವಾಮಿ ಹೇಳಿದ್ದಾರೆ.
ವಿಧಾನಸಭೆಯಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಚರ್ಚೆ ಆರಂಭಿಸಿದ್ದು, ಈ ವೇಳೆ ಹಾಸನ ಜಿಲ್ಲೆಯ ಶಾಸಕರೊಬ್ಬರು ಎಂದಿದ್ದು, ಆಗ ಎದ್ದು ನಿಂತ ಅರಸೀಕೆರೆ ಕಾಂಗ್ರೆಸ್ ಶಾಸಕ ಶಿವಲಿಂಗೇಗೌಡ ನಾನು ಹೆಸರು ಇಟ್ಟುಕೊಂಡೇ ಬಂದಿದ್ದೇನೆ, ಕಸುವು ಇಲ್ಲದೇ ಬಂದಿಲ್ಲ. ಅದ್ಯಾಕೆ ಹಾಸನ ಜಿಲ್ಲೆಯ ಶಾಸಕರು ಅಂತೀರಾ ಹೆಸರು ಹೇಳಿ ಎಂದಿದ್ದಾರೆ.
ವಿಧಾನಸಭೆ: ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯ ಕುರಿತ ಚರ್ಚೆ ಮುಂದುವರೆದಿದ್ದು, ಸದನದಲ್ಲಿ ಸಚಿವರ ಗೈರಿಗೆ ವಿಪಕ್ಷ ಬಿಜೆಪಿ ಆಕ್ಷೇಪ ವ್ಯಕ್ತಪಡಿಸಿದೆ. ಸಚಿವರು ವರ್ಗಾವಣೆ ದಂಧೆಯಲ್ಲಿ ಇದ್ದಾರೆ ಅಂದರೆ ಮುಗಿಸಿಕೊಂಡೇ ಬರಲಿ. ಸದನವನ್ನು ಸ್ವಲ್ಪ ಹೊತ್ತು ಮುಂದೆ ಹಾಕಿ ಎಂದು ಸ್ಪೀಕರ್ಗೆ ಕಾರ್ಕಳ ಶಾಸಕ ಸುನೀಲ್ ಕುಮಾರ್ ಒತ್ತಾಯಿಸಿದ್ದಾರೆ.
ಭೋಜನ ವಿರಾಮದ ಬಳಿಕ ವಿಧಾನಸಭೆ ಕಲಾಪ ಪುನರಾರಂಭ ಆಗಿದ್ದು, ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯದ ಕುರಿತು ಸಾಗರ ಶಾಸಕ ಬೇಳೂರು ಗೋಪಾಲಕೃಷ್ಣ ಚರ್ಚೆ ಮುಂದುವರಿಸಿದ್ದಾರೆ.
ವಿಧಾನಸಭೆ ಕಲಾಪ ಮುಂದೂಡಲ್ಪಟ್ಟ ಬಳಿಕ ಸದನದೊಳಗೆ ಕೆಲವು ಹೊತ್ತು ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಮತ್ತು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮಾತುಕತೆ ಮಾಡಿದ್ದಾರೆ. ಹತ್ತು ನಿಮಿಷಗಳಿಗೂ ಹೆಚ್ಚು ಕಾಲ ಮಾತನಾಡಿ ಜೊತೆಯಾಗಿಯೇ ಸದನದಿಂದ ಹೊರಬಂದಿದ್ದಾರೆ.
ಬೆಂಗಳೂರು: ಸಭಾಪತಿ ಯು.ಟಿ ಖಾದರ್ ಅವರು ವಿಧಾನಸಭೆ ಕಲಾಪವನ್ನು ಮಧ್ಯಾಹ್ನ 2:30 ಕ್ಕೆ ಮುಂದೂಡಿದ್ದಾರೆ.
ಬೆಂಗಳೂರು: ಸಭಾಪತಿ ಬಸವರಾಜ ಹೊರಟ್ಟಿ ವಿಧಾನಪರಿಷತ್ ಕಲಾಪ ಮಧ್ಯಾಹ್ನ 3 ಗಂಟೆಗೆ ಮುಂದೂಡಿದ್ದಾರೆ.
ಬೆಂಗಳೂರು: ಗೋ ಹತ್ಯೆ ವಿಚಾರದಲ್ಲಿ ಸಚಿವರು ಸರಿಯಾದ ಉತ್ತರ ಕೊಡಬೇಕು ಎಂದು ಬಿಜೆಪಿ ಸದಸ್ಯರು ವಿಧಾನಪರಿಷತ್ನಲ್ಲಿ ಬಾವಿಗಿಳಿದು ಹೋರಾಟ ಮಾಡುತ್ತಿದ್ದಾರೆ. ಈ ವೇಳೆ ಸಚಿವ ಕೃಷ್ಣಬೈರೆಗೌಡ ಮಾತನಾಡಿ ರಾಜಕೀಯಕ್ಕಾಗಿ ಬಿಜೆಪಿ ಹೋರಾಟ ಮಾಡುತ್ತಿದ್ದೆ. ಇದು ಸರಿಯಲ್ಲ. ಉದ್ದೇಶಪೂರ್ವಕವಾಗಿ ಬಿಜೆಪಿ ಸದನದ ಸಮಯ ಹಾಳು ಮಾಡುತ್ತಿದೆ ಎಂದು ವಾಗ್ದಾಳಿ ಮಾಡಿದರು.
ಬೆಂಗಳೂರು: ಬಿಜೆಪಿ ಪ್ರತಿಭಟನೆ ಪಶ್ಚಾತ್ತಾಪದ ಪ್ರತಿಭಟನೆ. ಅಗತ್ಯ ವಸ್ತುಗಳ ಬೆಲೆ ಏರಿಕೆ ವಿರುದ್ಧ ದೆಹಲಿಯಲ್ಲಿ ಪ್ರತಿಭಟಿಸಿ. ಕೇಂದ್ರ ಸರ್ಕಾರದ ವಿರುದ್ಧ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಧರಣಿ ನಡೆಸಲಿ. ತೈಲ ಬೆಲೆ ಕುಸಿದಿದ್ದರೂ ಪೆಟ್ರೋಲ್, ಡೀಸೆಲ್ ದರ ಇಳಿಸಿಲ್ಲ. ಕೇಂದ್ರ ಸರ್ಕಾರ ತೈಲ ಬೆಲೆ ಇಳಿಸದಿದ್ದರಿಂದ ಬೆಲೆ ಏರಿಕೆಯಾಗಿದೆ ಎಂದು ಸದನದಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.
ಬೆಂಗಳೂರು: ನಿಲುವಳಿ ಪ್ರಸ್ತಾವ ಮಂಡನೆ ವೇಳೆ ಸರ್ಕಾರದ ವಿರುದ್ಧ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಾಗ್ದಾಳಿ ಮಾಡಿದರು. ಈ ವೇಳೆ ಮಧ್ಯಪ್ರವೇಶಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಯತ್ನಾಳ್ ಅವರೇ ನೀವು ಸ್ವಲ್ಪ ತಾಳ್ಮೆಯಿಂದಿರಿ. ನಿಮ್ಮನ್ನು ವಿಪಕ್ಷ ನಾಯಕರ ಮಾಡುತ್ತಾರೋ ಇಲ್ವೋ ಗೊತ್ತಿಲ್ಲ. ಇಲ್ಲಿ ಎದ್ದೆದ್ದು ನಿಂತು ಮಾತಾಡಿದರೆ ನಿಮ್ಮ ವಿಪಕ್ಷ ನಾಯಕ ಮಾಡುತ್ತಾರೆ ಅಂತಾ ಅಂದುಕೊಂಡಿದ್ದೀರಾ? ಸದನ ಆರಂಭವಾಗಿ ಮೂರು ದಿನ ಆದರೂ ವಿಪಕ್ಷ ನಾಯಕ ಮಾಡಲು ಆಗಿಲ್ಲ, ಇಲ್ಲಿ ಬಂದು ಬುರುಡೆ ಹೊಡೆಯುತ್ತಿದ್ದೀರಿ ಎಂದು ಬಸನಗೌಡ ಪಾಟೀಲ್ ಯತ್ನಾಳ್ ಅವರಿಗೆ ಕಿಚಾಯಿಸಿದರು.
ಬೆಂಗಳೂರು: ತಕ್ಕಡಿ ಮಾತ್ರ ಅಲ್ಲ ಸ್ಪೀಕರ್ ಪೀಠವೇ ನಿನ್ನೆ ವಾಲಿತ್ತು ಎಂದು ನಿಲುವಳಿ ಪ್ರಸ್ತಾವನೆ ವೇಳೆ ಶಾಸಕ ಆರ್. ಅಶೋಕ್ ಹೇಳಿದರು. ಆರ್. ಅಶೋಕ್ ಮಾತಿಗೆ ಸಭಾಪತಿ ಯು ಟಿ ಖಾದರ್ ತಕ್ಕಡಿಯೂ ಸರಿ ಇದೆ, ಪೀಠವೂ ಸರಿ ಇದೆ, ನೋಡುವವರ ಕಣ್ಣುಗಳು ಸರಿ ಇರಬೇಕು ಅಷ್ಟೇ ಎಂದು ತಿರುಗೇಟು ನೀಡಿದರು.
ಬೆಂಗಳೂರು: ವಿಧಾನಸಭೆಯಲ್ಲಿ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ ತಿದ್ದುಪಡಿ ವಿಧೇಯಕ, ಸರಕು ಮತ್ತು ಸೇವೆಗಳ ತೆರಿಗೆ ತಿದ್ದುಪಡಿ ವಿಧೇಯಕ, ವಿಧಾನಮಂಡಲ ಅರ್ಹತಾ ನಿವಾರಣಾ ತಿದ್ದುಪಡಿ ವಿಧೇಯಕ, ಅಗ್ನಿಶಾಮಕ ದಳ ತಿದ್ದುಪಡಿ ವಿಧೇಯಕ, ರಸ್ತೆ ಸುರಕ್ಷತಾ ಪ್ರಾಧಿಕಾರ ತಿದ್ದುಪಡಿ ವಿಧೇಯಕ ಮತ್ತು ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಹಾರ ನಿಯಂತ್ರಣ ಮತ್ತು ತಿದ್ದುಪಡಿ ವಿಧೇಯಕಗಳ ಮಂಡನೆ ಮಾಡಲಾಗಿದೆ.
ಬೆಂಗಳೂರು: ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ಜುಲೈ 7 ರಂದು ಬೆಳಗ್ಗೆ 9 ಗಂಟೆಗೆ ನಡೆಯಲಿದೆ. ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ನಡೆಯಲಿದೆ.
ಬೆಂಗಳೂರು: ವಿಧಾನಮಂಡಲದ ವಿವಿಧ ಸಮಿತಿಗಳಿಗೆ ಸದಸ್ಯರ ನೇಮಕಕ್ಕೆ ಚುನಾವಣಾ ಪ್ರಸ್ತಾವವನ್ನು ಸಂಸದೀಯ ವ್ಯವಹಾರಗಳ ಸಚಿವ ಹೆಚ್.ಕೆ. ಪಾಟೀಲ್ ಬದಲಾಗಿ ಗ್ರಾಮೀಣಾಭಿವೃದ್ಧಿ ಇಲಾಖೆ ಸಚಿವ ಪ್ರಿಯಾಂಕ್ ಖರ್ಗೆ ಪ್ರಸ್ತಾವ ಮಂಡಿಸಿದರು.
ಬೆಂಗಳೂರು: ಸದನದಲ್ಲಿ ಗ್ಯಾರಂಟಿಗಳ ಕುರಿತು ಚರ್ಚೆಗೆ ಅವಕಾಶ ನೀಡುವುದಾಗಿ ಸ್ಪೀಕರ್ ಭರವಸೆ ನೀಡಿದ ಹಿನ್ನೆಲೆ ವಿಧಾನಸಭೆ ಕಲಾಪದಲ್ಲಿ ಬಿಜೆಪಿ ಶಾಸಕರು ಧರಣಿ ವಾಪಸ್ ಪಡೆದಿದ್ದಾರೆ.
ಬೆಂಗಳೂರು: ವಿಧಾನಪರಿಷತ್ ಕಲಾಪ ಆರಂಭ ಆಗುತ್ತಿದ್ದಂತೆ ಸದನದ ಬಾವಿಗಿಳಿದು ಬಿಜೆಪಿ ಸದಸ್ಯರಿಂದ ಧರಣಿ ಮಾಡಿದ ಹಿನ್ನೆಲೆ ಉಪ ಸಭಾಪತಿ ಅವರು ಕಲಾಪವನ್ನು 10 ನಿಮಿಷ ಮುಂದೂಡಿದ್ದರು.
ಪರಿಷತ್ ಕಲಾಪ ಆರಂಭ
ಬೆಂಗಳೂರು: ವಿಪಕ್ಷ ನಾಯಕ, ರಾಜ್ಯಾಧ್ಯಕ್ಷರ ಹೆಸರು ಇಂದೇ ಘೋಷಣೆಯಾಗುವ ಸಾಧ್ಯತೆ ಇದೆ ಎಂದು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ. ವಿಪಕ್ಷ ನಾಯಕ, ರಾಜ್ಯಾಧ್ಯಕ್ಷ ಯಾರಾಗಬೇಕು ಅಂತಾ ಕೇಂದ್ರದ ನಾಯಕರು ಬಂದು ಅಭಿಪ್ರಾಯ ತೆಗೆದುಕೊಂಡು ಹೋಗಿದ್ದಾರೆ. ಬಹುಶಃ ಇವತ್ತು ಅಮಿತ್ ಷಾ, ಪ್ರಧಾನಿ ಮೋದಿ ಅವರ ಜೊತೆ ಚರ್ಚೆ ನಡೆಸಿ ತೀರ್ಮಾನಕ್ಕೆ ಬರಬಹುದು ಅಂತ ನಾವೆಲ್ಲಾ ಭಾವಿಸಿದ್ದೇವೆ. ಏನು ತೀರ್ಮಾನ ತೆಗೆದುಕೊಳ್ಳುತ್ತಾರೆ ನೋಡೋಣ. ಅವರ ತೀರ್ಮಾನವನ್ನು ಸ್ವಾಗತಿಸುತ್ತೇವೆ ಎಂದು ಹೇಳಿದರು.
ಬಹುಶಃ ಇವತ್ತು ಘೋಷಣೆ ಆಗಬಹುದು
ಮೈಸೂರು: ವರುಣ ಕ್ಷೇತ್ರಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹೆಚ್ಚು ಸಮಯ ನೀಡದ ಹಿನ್ನೆಲೆ ಕ್ಷೇತ್ರದಲ್ಲಿ ತಂದೆಯ ಜವಾಬ್ದಾರಿ ನಿಭಾಯಿಸಲು ಮಾಜಿ ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ಒಲವು ತೋರಿದ್ದಾರೆ. ಕಳೆದ ಬಾರಿಯಂತೆ ಸಣ್ಣ ಹುದ್ದೆ ನೀಡಿದರೂ ನಿಭಾಯಿಸುತ್ತೇನೆ. ತಂದೆ ಸಿಎಂ ಆಗಿರುವುದರಿಂದ ಕ್ಷೇತ್ರದ ಜನರಿಗೆ ಸಮಯ ನೀಡಲಾಗುತ್ತಿಲ್ಲ. ಕ್ಷೇತ್ರದ ಜನರ ಸಮಸ್ಯೆ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಬೇಕು. ಜನರ ಸಣ್ಣ ಪುಟ್ಟ ಸಮಸ್ಯೆ ಬಗೆಹರಿಸಲು ಸರ್ಕಾರಿ ಸ್ಥಾನಮಾನ ಅಗತ್ಯ. ಹೀಗಾಗಿ ಚಿಕ್ಕ ಸ್ಥಾನಮಾನ ನೀಡಿದರೂ ಸಹಕಾರಿ ಆಗಲಿದೆ. ಕಳೆದ ಬಾರಿ ಆಶ್ರಯ ಸಮಿತಿಯ ಅಧ್ಯಕ್ಷ ಸ್ಥಾನ ನೀಡಿದ್ದರು. ಅದು ದೊಡ್ಡ ಹುದ್ದೆಯಲ್ಲ ಆದರೂ ಅಂತಹದ್ದೇ ಸಣ್ಣ ಹುದ್ದೆ ನೀಡಿದರೇ ಜನರ ಸೇವೆ ಮಾಡಲು ನಾನು ಸಿದ್ಧನಿದ್ದೇನೆ ಎಂದರು.
ಬೆಂಗಳೂರು: ಸರ್ಕಾರದ ಅನ್ನ ಭಾಗ್ಯ ಯೋಜನೆಗೆ ಅಕ್ಕಿ ನೀಡುವಂತೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರದ ಬಿಜೆಪಿ ಸಂಸದರ ವಿರುದ್ದ ಯುವ ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದ್ದು, ಅಲ್ಲದೇ ಕೇಂದ್ರ ಸರ್ಕಾರ ರಾಜ್ಯಕ್ಕೆ ಮಲತಾಯಿ ಧೋರಣೆ ತೋರುತ್ತಿದೆ ಎಂದು ಪ್ರತಿಭಟನೆ ಮಾಡಲು ಮುಂದಾಗಿದೆ. ಈ ಹಿನ್ನೆಲೆ ಬೆಂಗಳೂರಿನ ಮಲ್ಲೇಶ್ವರಂ ಬಿಜೆಪಿ ಕಚೇರಿ ಬಳಿ ಪೋಲೀಸ್ ಬಿಗಿ ಭದ್ರತೆ ಏರ್ಪಡಿಸಲಾಗಿದೆ.
ಕೊಪ್ಪಳ: ಶಾಸಕ ಗಾಲಿ ಜನಾರ್ಧನರೆಡ್ಡಿ ನಾಮಪತ್ರ ಸಲ್ಲಿಕೆಯಲ್ಲಿ ದೋಷವಿದೆ ಎಂದು ಜೂ.26 ರಂದು ಅನಂತಪುರದ ಗಣಿ ಉದ್ಯಮಿ ಟಪಾಲುಶ್ಯಾಮಪ್ರಸಾದ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದಾರೆ. ಹೀಗಾಗಿ ಈ ಬಗ್ಗೆ ಪರಿಶೀಲಿಸಿ ವರದಿ ನೀಡುವಂತೆ ರಾಜ್ಯ ಚುನಾವಣಾಧಿಕಾರಿಗಳು ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿದ್ದಾರೆ.
ಪತ್ರ ಬರೆದ ರಾಜ್ಯ ಚುನಾವಣಾಧಿಕಾರಿ.
ಮೈಸೂರು: ಪಕ್ಷ ಸೂಚಿಸಿದರೆ ಆದೇಶ ಪಾಲಿಸಲು ಸಿದ್ದ. ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧೆ ಮಾಡುವ ಬಗ್ಗೆ ನಾನಾಗಲಿ ತಂದೆಯವರಾಗಲಿ ಚರ್ಚೆ ನಡೆಸಿಲ್ಲ. ಚುನಾವಣೆಗೆ ಇನ್ನು 8 ತಿಂಗಳ ಕಾಲಾವಕಾಶ ಇದೆ. ಚುನಾವಣೆ ಸಮೀಪ ಯಾರು ಸೂಕ್ತ ಅಭ್ಯರ್ಥಿ ಎಂದು ಗೊತ್ತಾಗಲಿದೆ. ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲಬೇಕು ಅಷ್ಟೇ ಆದ್ದರಿಂದ ಸೂಕ್ತ ವ್ಯಕ್ತಿಯನ್ನು ಆಯ್ಕೆ ಮಾಡುತ್ತೇವೆ. ಒಂದು ವೇಳೆ ನಾನು ಸ್ಪರ್ಧೆ ಮಾಡಬೇಕು ಎಂದು ಪಕ್ಷ ಸೂಚನೆ ನೀಡಿದರೇ ಪಾಲನೆ ಮಾಡಬೇಕಾಗುತ್ತದೆ ಎಂದು ಲೋಕಸಭೆ ಚುನಾವಣೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪುತ್ರ ಡಾ. ಯತೀಂದ್ರ ಸಿದ್ದರಾಮಯ್ಯ ಸ್ಪರ್ಧೆ ಮಾಡಬೇಕು ಎಂದು ಬೆಂಬಲಿಗರ ಒತ್ತಾಯ ವಿಚಾರವಾಗಿ ಡಾ. ಯತೀಂದ್ರ ಸಿದ್ದರಾಮಯ್ಯ ಅಭಿಪ್ರಾಯ ವ್ಯಕ್ತಪಿಡಿಸಿದರು.
ಬೆಂಗಳೂರು: ಖಾಸಗಿ ಆಸ್ಪತ್ರೆಯ ವೈದ್ಯನ ಮೇಲೆ ಹಲ್ಲೆ ಹರೀಶ್ ಹಾಗೂ ರಾಜೇಶ್ ಎಂಬುವರು ಹಲ್ಲೆ ಮಾಡಿರುವ ಆರೋಪ ಕೇಳಿಬಂದಿದೆ. ಮಾರತ್ತಹಳ್ಳಿಯ ಪಣತ್ತೂರಿನಲ್ಲಿ ಘಟನೆ ನಡೆದಿದೆ. ಪಣತ್ತೂರಿನಲ್ಲಿ ಖಾಸಗಿ ಅಸ್ಪತ್ರೆಯ ಬಸವರಾಜು ಹಲ್ಲೆಗೊಳಗಾದ ವೈದ್ಯ.
ಚಿಕ್ಕಮಗಳೂರು: ಚಿಕ್ಕಮಗಳೂರಿನ ಮಲೆನಾಡು ಭಾಗದಲ್ಲಿ ವರುಣನ ಆರ್ಭಟ ಜೋರಾಗಿದ್ದು, ಪಶ್ಚಿಮ ಘಟ್ಟಗಳ ಸಾಲಿನಲ್ಲಿ ಧಾರಾಕಾರ ಮಳೆಯಾಗುತ್ತಿದೆ. ಈ ಹಿನ್ನೆಲೆ ಇಂದಿನಿಂದ ಮೂರುದಿನಗಳ ಕಾಲ ಚಿಕ್ಕಮಗಳೂರು ಜಿಲ್ಲೆಗೆ ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ. ಜಿಲ್ಲೆಯ ಕಳಸ,ಮೂಡಿಗೆರೆ, ಶೃಂಗೇರಿ ಎನ್.ಆರ್ಪುರ, ಮುಳ್ಳಯ್ಯನಗಿರಿ, ದತ್ತಪೀಠ ದಲ್ಲಿ ಭಾರಿ ಮಳೆಯಾಗಲಿದೆ. ಇನ್ನು ಚಿಕ್ಕಮಗಳೂರು ನಗರ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಾದಾರಣ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
Published On - 7:56 am, Wed, 5 July 23