ಬೆಂಗಳೂರು: ನೆರೆಯ ರಾಜ್ಯವಾದ ಆಂಧ್ರ ಪ್ರದೇಶದಲ್ಲಿ ಅಸಾನಿ ಚಂಡಮಾರುತದ (Cyclone Asani) ಅಬ್ಬರ ಶುರುವಾಗಿದೆ. ಆಂಧ್ರದ ಕರಾವಳಿ ಭಾಗದಲ್ಲಿ ಈಗಾಗಲೇ ರೆಡ್ ಅಲರ್ಟ್ (Red Alert) ಘೋಷಿಸಲಾಗಿದೆ. ಕರ್ನಾಟಕದಲ್ಲೂ ಅಸಾನಿ ಚಂಡಮಾರುತದ ಪ್ರಭಾವ ಉಂಟಾಗಲಿದ್ದು, ವಿವಿಧ ಜಿಲ್ಲೆಗಳಲ್ಲಿ ಹಳದಿ ಅಲರ್ಟ್ (Yellow Alert) ಘೋಷಿಸಲಾಗಿದೆ. ಇಂದು ಕರಾವಳಿ ಜಿಲ್ಲೆಗಳಾದ ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡದಲ್ಲಿ ಭಾರೀ ಮಳೆಯಾಗಲಿದೆ. ಬೆಂಗಳೂರು, ಕರಾವಳಿ, ಉತ್ತರ ಒಳನಾಡು, ಮಲೆನಾಡಿನಲ್ಲಿ ಕೂಡ ಮಳೆ ಹೆಚ್ಚಾಗಲಿದೆ.
ಇಂದಿನಿಂದ ಎರಡು ದಿನಗಳ ಕಾಲ ಕರ್ನಾಟಕದ ಕರಾವಳಿ, ದಕ್ಷಿಣ ಒಳನಾಡಿನ ಕೆಲವು ಸ್ಥಳಗಳಲ್ಲಿ ಮತ್ತು ಮಲೆನಾಡು ಪ್ರದೇಶಗಳಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ. ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಹಾಸನ, ಚಿಕ್ಕಮಗಳೂರು, ಶಿವಮೊಗ್ಗ, ಉತ್ತರ ಕನ್ನಡ, ಕೊಡಗು, ತುಮಕೂರು, ರಾಮನಗರ, ಮಂಡ್ಯ, ಮೈಸೂರು, ಚಾಮರಾಜನಗರ, ಕೋಲಾರ ಹಾಗೂ ಚಿಕ್ಕಬಳ್ಳಾಪುರದಲ್ಲಿ ಮೇ 12ರವರೆಗೆ ಮಳೆಯಾಗುವ ನಿರೀಕ್ಷೆಯಿದೆ ಎನ್ನಲಾಗಿದೆ.
ಕರ್ನಾಟಕದ ದಕ್ಷಿಣ ಒಳನಾಡಿನ ಕೆಲವು ಸ್ಥಳಗಳಲ್ಲಿ ಮತ್ತು ಕರಾವಳಿ ಪ್ರದೇಶಗಳಲ್ಲಿ ಮತ್ತು ಉತ್ತರ ಒಳನಾಡಿನಲ್ಲಿ ಇಂದು ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ. ಬಂಗಾಳಕೊಲ್ಲಿಯಲ್ಲಿ ಮೇಲ್ಮೈ ಸುಳಿಗಾಳಿ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ಇನ್ನೂ 2 ದಿನ ಮಳೆಯಾಗುವ ಸಾಧ್ಯತೆಯಿದೆ. ಕರ್ನಾಟಕದ ದಕ್ಷಿಣ ಒಳನಾಡಿನಲ್ಲಿ ಇಂದು ಗುಡುಗು ಸಹಿತ ಮಳೆಯಾಗಲಿದೆ. ಕರ್ನಾಟಕದ ಉತ್ತರ ಒಳನಾಡಿನಲ್ಲಿ ಮಳೆ ಸುರಿಯುವ ಸಾಧ್ಯತೆಯಿದೆ. ಕರಾವಳಿಯಲ್ಲಿ ಇಂದಿನಿಂದ 2 ದಿನ ಮಳೆಯಾಗುವ ನಿರೀಕ್ಷೆಯಿದೆ ಎಂದು ಟಿವಿ9ಗೆ ಹವಾಮಾನ ತಜ್ಞ ಪ್ರಸಾದ್ ಮಾಹಿತಿ ನೀಡಿದ್ದಾರೆ.
ಕರ್ನಾಟಕದ ನಾನಾ ಭಾಗಗಳಲ್ಲಿ ಈಗಾಗಲೇ ಮಳೆ ಅಬ್ಬರ ಶುರುವಾಗಿದ್ದು, ಇಂದು ಕೂಡ ಮಳೆ ಮುಂದುವರೆಯುವ ಸಾಧ್ಯತೆ ಇದೆ. ಈ ಬಗ್ಗೆ ರಾಜ್ಯ ನೈಸರ್ಗಿಕ ವಿಕೋಪ ಇಲಾಖೆ ಮುನ್ಸೂಚನೆ ನೀಡಿದೆ. ರಾಜ್ಯದ ಮಲೆನಾಡು ಜಿಲ್ಲೆಗಳಲ್ಲಿ ಚದುರಿದಿಂದ ವ್ಯಾಪಕವಾಗಿ ಮಳೆ ಸಾಧ್ಯತೆ ಇದೆ. ದಕ್ಷಿಣ ಒಳನಾಡು, ಕರಾವಳಿ ಮತ್ತು ಉತ್ತರ ಒಳನಾಡು ಜಿಲ್ಲೆಗಳಲ್ಲಿ ಅಲ್ಲಲ್ಲಿ ಚದುರಿದಂತೆ ಮಳೆಯಾಗುವ ಸಾಧ್ಯತೆಗಳಿದ್ದು, ಉಳಿದ ಜಿಲ್ಲೆಗಳಲ್ಲಿ ಒಣಹವೆ ಮುಂದುವರೆಯಲಿದೆ ಎಂದು ನೈಸರ್ಗಿಕ ವಿಕೋಪ ಇಲಾಖೆ ಮಾಹಿತಿ ನೀಡಿದೆ. ರಾಜ್ಯದಾದ್ಯಂತ ಅಲ್ಲಲ್ಲಿ ಮಿಂಚಿನೊಂದಿಗೆ ಗುಡುಗು ಸಂಭವಿಸುವ ಸಾಧ್ಯತೆ ಬಗ್ಗೆ ಮುನ್ಸೂಚನೆ ನೀಡಿದ್ದು, ಸುಮಾರು 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ 15 ರಿಂದ 65 ಮಿ.ಮೀ ಮಳೆಯ ಬಗ್ಗೆ ಮುನ್ಸೂಚನೆ ನೀಡಲಾಗಿದೆ.
ಅಸಾನಿ ಚಂಡಮಾರುತದ ಎಫೆಕ್ಟ್:
ಒಡಿಶಾ ಮತ್ತು ಪಶ್ಚಿಮ ಬಂಗಾಳದಲ್ಲಿ ಅಸಾನಿ ಚಂಡಮಾರುತದ ತೀವ್ರತೆ ಹೆಚ್ಚಾಗುತ್ತಿದೆ. ಈ ನಡುವೆ ನೆರೆಯ ಆಂಧ್ರ ಪ್ರದೇಶಕ್ಕೂ ಅಸಾನಿ ಚಂಡಮಾರುತ ಎಂಟ್ರಿ ಕೊಟ್ಟಿದೆ. ಆಂಧ್ರದಲ್ಲಿ ಇಂದಿನಿಂದ 2 ದಿನ ಹೈ ಅಲರ್ಟ್ ಘೋಷಿಸಲಾಗಿದೆ. ಈ ಚಂಡಮಾರುತ ಕಾಕಿನಾಡ ಮತ್ತು ವಿಶಾಖಪಟ್ಟಣಂ ನಡುವೆ ಆಂಧ್ರಪ್ರದೇಶದ ಕರಾವಳಿಯನ್ನು ಮುಟ್ಟುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ತಿಳಿಸಿದೆ. ಈ ಹಿನ್ನೆಲೆಯಲ್ಲಿ ಆಂಧ್ರಪ್ರದೇಶದ ಕರಾವಳಿಗೆ ರೆಡ್ ಅಲರ್ಟ್ ಘೋಷಿಸಲಾಗಿದೆ. ಚಂಡಮಾರುತದಿಂದಾಗುವ ಅನಾಹುತಗಳನ್ನು ತಡೆಯಲು ಸ್ಥಳೀಯ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಲಾಗಿದೆ. ಇಂದು ಬೆಳಗ್ಗೆ ವೇಳೆಗೆ ಈ ಚಂಡಮಾರುತ ವಾಯುವ್ಯಕ್ಕೆ ಚಲಿಸುವ ಮತ್ತು ಪಶ್ಚಿಮ ಮಧ್ಯ ಬಂಗಾಳ ಕೊಲ್ಲಿಯನ್ನು ಕಾಕಿನಾಡ- ವಿಶಾಖಪಟ್ಟಣಂ ಕರಾವಳಿಯ ಸಮೀಪ ತಲುಪುವ ಸಾಧ್ಯತೆಯಿದೆ. ಅಸಾನಿ ಚಂಡಮಾರುತ ಉತ್ತರದಿಂದ ಈಶಾನ್ಯಕ್ಕೆ ನಿಧಾನವಾಗಿ ಮರುಕಳಿಸುವ ಸಾಧ್ಯತೆಯಿದೆ ಮತ್ತು ಕಾಕಿನಾಡ ಮತ್ತು ವಿಶಾಖಪಟ್ಟಣಂ ನಡುವೆ ಆಂಧ್ರಪ್ರದೇಶದ ಕರಾವಳಿಯಲ್ಲಿ ಚಲಿಸುತ್ತದೆ. ನಂತರ ಉತ್ತರ ಆಂಧ್ರಪ್ರದೇಶ ಮತ್ತು ಒಡಿಶಾ ಕರಾವಳಿಯಿಂದ ವಾಯುವ್ಯ ಬಂಗಾಳ ಕೊಲ್ಲಿಯತ್ತ ಸಾಗುತ್ತದೆ.
ಆಂಧ್ರಪ್ರದೇಶ ಕರಾವಳಿಗೆ ರೆಡ್ ವಾರ್ನಿಂಗ್ ನೀಡಲಾಗಿದೆ. ಈ ಚಂಡಮಾರುತದ ಅಬ್ಬರದಿಂದ ಕೃಷ್ಣಾ, ಪೂರ್ವ ಮತ್ತು ಪಶ್ಚಿಮ ಗೋದಾವರಿ ಮತ್ತು ಆಂಧ್ರಪ್ರದೇಶದ ವಿಶಾಖಪಟ್ಟಣಂ ಜಿಲ್ಲೆಗಳ ತಗ್ಗು ಪ್ರದೇಶಗಳು ಮುಳುಗುವ ಸಾಧ್ಯತೆಯಿದೆ ಎಂದು IMD ಎಚ್ಚರಿಸಿದೆ. ಇಂದು ರಾತ್ರಿಯಿಂದ ಆಂಧ್ರಪ್ರದೇಶದ ಕರಾವಳಿ ಮತ್ತು ಒಡಿಶಾದಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಗುರುವಾರ, ಒಡಿಶಾ ಮತ್ತು ಪಶ್ಚಿಮ ಬಂಗಾಳದ ಕರಾವಳಿ ಪ್ರದೇಶಗಳಲ್ಲಿ ಪ್ರತ್ಯೇಕ ಸ್ಥಳಗಳಲ್ಲಿ ಭಾರೀ ಮಳೆಯೊಂದಿಗೆ ಕೆಲವು ಸ್ಥಳಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ತೀವ್ರ ಚಂಡಮಾರುತದ ಕಾರಣದಿಂದ ವಿಮಾನ ಕಾರ್ಯಾಚರಣೆಗೆ ಹೊಡೆತ ನೀಡಿದ್ದು, ಇಂದು ಆಂಧ್ರಪ್ರದೇಶದ ವಿಶಾಖಪಟ್ಟಣಂ ಮತ್ತು ತಮಿಳುನಾಡಿನ ಚೆನ್ನೈನಲ್ಲಿ ಹಲವಾರು ವಿಮಾನಯಾನ ಸಂಸ್ಥೆಗಳು ವಿಮಾನಗಳನ್ನು ರದ್ದುಗೊಳಿಸಿವೆ.
ಇಂದು ಕರ್ನಾಟಕ ಮಾತ್ರವಲ್ಲದೆ ಆಂಧ್ರ ಪ್ರದೇಶದ ಕರಾವಳಿ, ಒಡಿಶಾ ಮತ್ತು ಪಶ್ಚಿಮ ಬಂಗಾಳದಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಅರುಣಾಚಲ ಪ್ರದೇಶ, ಅಸ್ಸಾಂ, ಮೇಘಾಲಯ, ನಾಗಾಲ್ಯಾಂಡ್, ಮಣಿಪುರ, ಮಿಜೋರಾಂ ಮತ್ತು ತ್ರಿಪುರಾದಲ್ಲಿ ವ್ಯಾಪಕ ಮಳೆ ಮತ್ತು ಗುಡುಗು ಸಹಿತ ಮಳೆಯಾಗಲಿದೆ. ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು, ಗಂಗಾನದಿ ಪಶ್ಚಿಮ ಬಂಗಾಳ ಮತ್ತು ಒಡಿಶಾದಲ್ಲಿ ಸಾಕಷ್ಟು ವ್ಯಾಪಕವಾದ ಮಳೆ ಮತ್ತು ಗುಡುಗು ಸಹಿತ ಮಳೆಯಾಗುವ ಮುನ್ಸೂಚನೆ ನೀಡಲಾಗಿದೆ. ಹಿಮಾಲಯದ ಉಪ-ಹಿಮಾಲಯದ ಪಶ್ಚಿಮ ಬಂಗಾಳ, ಸಿಕ್ಕಿಂ, ಬಿಹಾರ, ಆಂಧ್ರಪ್ರದೇಶ, ಕರ್ನಾಟಕ, ಕೇರಳ ಮತ್ತು ಲಕ್ಷದ್ವೀಪಗಳಲ್ಲಿ ಚದುರಿದ ಮಳೆ ಮತ್ತು ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ.
ಹಾಗೇ, ಉತ್ತರಾಖಂಡ, ಹಿಮಾಚಲ ಪ್ರದೇಶ, ಜಮ್ಮು ಮತ್ತು ಕಾಶ್ಮೀರ ಮತ್ತು ಲಡಾಖ್‌ನಲ್ಲಿ ಮಳೆ ಮತ್ತು ಹಿಮವನ್ನು ನಿರೀಕ್ಷಿಸಲಾಗಿದೆ. ಜಾರ್ಖಂಡ್, ಪೂರ್ವ ಉತ್ತರ ಪ್ರದೇಶ, ಮಹಾರಾಷ್ಟ್ರ, ಛತ್ತೀಸ್‌ಗಢ, ತೆಲಂಗಾಣ ಮತ್ತು ತಮಿಳುನಾಡಿನಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ. ಗುಜರಾತ್, ವಿದರ್ಭ, ಪೂರ್ವ ರಾಜಸ್ಥಾನ, ಪಶ್ಚಿಮ ಮಧ್ಯಪ್ರದೇಶ, ದಕ್ಷಿಣ ಹರಿಯಾಣ, ದಕ್ಷಿಣ ಪಂಜಾಬ್ ಮತ್ತು ದೆಹಲಿಯಲ್ಲಿ ಬಿಸಿಗಾಳಿ ಉಂಟಾಗುವ ಸಾಧ್ಯತೆಯಿದೆ.
ಇನ್ನಷ್ಟು ಮಳೆಯ ಕುರಿತ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ