ಹಾಸನ: ರಾಜ್ಯದಲ್ಲಿ ಮಳೆಯ ಆರ್ಭಟ ಇಂದು ಕೂಡ ಮುಂದುವರಿಯಲಿದ್ದು, ಹಲವೆಡೆ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಈ ನಿಟ್ಟಿನಲ್ಲಿ ಮಕ್ಕಳ ಹಿತದೃಷ್ಟಿಯಿಂದ ಕೊಡಗು ಜಿಲ್ಲಾದ್ಯಂತ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದ್ದು, ಇದೀಗ ಹಾಸನ ಜಿಲ್ಲೆಯ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಸಕಲೇಶಪುರ ತಾಲೂಕಿನ ಅಂಗನವಾಡಿ ಮತ್ತು ಎಲ್ಲಾ ಶಾಲೆಗಳಿಗೆ ರಜೆ ಘೋಷಣೆ ಮಾಡಿ ತಹಶೀಲ್ದಾರ್ ಎಚ್.ಬಿ.ಜೈಕುಮಾರ್ ಅವರು ಆದೇಶ ಹೊರಡಿಸಿದ್ದಾರೆ.
ಕಳೆದ ಒಂದು ವಾರದಿಂದ ಹಾಸನ ಜಿಲ್ಲೆಯ ಬಯಲು ಸೀಮೆಯಲ್ಲಿ ವರುಣಾರ್ಭಟ ನಡೆಯುತ್ತಿದ್ದು, ಮಲೆನಾಡು ಭಾಗದಲ್ಲಿಯೂ ಮಳೆಯ ಆರ್ಭಟ ಆರಂಭಗೊಂಡಿದೆ. ಈ ಮುನ್ಸೂಚನೆ ಹಿನ್ನೆಲೆ ಹಾಸನ ಜಿಲ್ಲೆಗೆ ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್ ಘೋಷಣೆ ಮಾಡಿದೆ. ಈ ಪ್ರದೇಶದಲ್ಲಿ ಧಾರಾಕಾರ ಮಳೆ ಸುರಿಯುವ ಮುನ್ಸೂಚನೆ ಹಿನ್ನೆಲೆ ಶಾಲಾ ಮಕ್ಕಳ ಹಿತದೃಷ್ಟಿಯಿಂದ ಸಕಲೇಶಪುರ ತಹಸೀಲ್ದಾರ್ ಎಚ್.ಬಿ.ಜೈಕುಮಾರ್ ಅವರು ತಾಲ್ಲೂಕಿನ ಅಂಗನವಾಡಿ ಹಾಗೂ ಪ್ರೌಡ ಶಾಲೆಗಳಿಗೆ ರಜೆ ಘೋಷಣೆ ಮಾಡಿ ಆದೇಶ ಹೊರಡಿಸಿದ್ದಾರೆ.
ಕರ್ನಾಟಕದ ಕರಾವಳಿ, ಮಲೆನಾಡಿನಲ್ಲಿ ಇಂದಿನಿಂದ 4 ದಿನ ಭಾರೀ ಮಳೆಯಾಗಲಿದೆ. ಉತ್ತರ ಒಳನಾಡಿನ ಕೆಲವು ಜಿಲ್ಲೆಗಳಲ್ಲಿ ಮಳೆ ಹೆಚ್ಚಾಗಲಿದೆ. ಬೆಂಗಳೂರಿನಲ್ಲಿ ಇಂದು ಮಳೆಯ ಹಿನ್ನೆಲೆಯಲ್ಲಿ ಹಳದಿ ಅಲರ್ಟ್ ಘೋಷಿಸಲಾಗಿದೆ. ಮಲೆನಾಡು ಮತ್ತು ಕರಾವಳಿಯಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಇಂದು ಉತ್ತರ ಕನ್ನಡ, ಶಿವಮೊಗ್ಗ, ಉಡುಪಿ, ಚಿಕ್ಕಮಗಳೂರು, ದಕ್ಷಿಣ ಕನ್ನಡ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ನೀಡಲಾಗಿದೆ. ಇಂದು ಕೊಡಗಿನಾದ್ಯಂತ ಮಳೆಯಿಂದ ರೆಡ್ ಅಲರ್ಟ್ ಘೋಷಿಸಲಾಗಿದೆ.
ಮುಂದಿನ 4 ದಿನಗಳವರೆಗೂ ಕರ್ನಾಟಕದಲ್ಲಿ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಅದರಲ್ಲೂ ಕರಾವಳಿ ಜಿಲ್ಲೆಗಳಲ್ಲಿ ಭಾರೀ ಮಳೆಯಾಗಲಿದೆ ಎಂದು ಮುನ್ಸೂಚನೆ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ಕರಾವಳಿಯಲ್ಲಿ ಇಂದು ಆರೆಂಜ್ ಅಲರ್ಟ್, ಆ. 7 ಮತ್ತು 8ರಂದು ಯೆಲ್ಲೋ ಅಲರ್ಟ್ ಜಾರಿಗೊಳಿಸಲಾಗಿದೆ.
Published On - 6:38 am, Sat, 6 August 22