Karnataka Rains: ವರುಣನ ಆರ್ಭಟಕ್ಕೆ ಕರ್ನಾಟಕ ತತ್ತರ; ಮಳೆಯಿಂದ ಸಾವನ್ನಪ್ಪಿದವರ ಸಂಖ್ಯೆ 9ಕ್ಕೆ ಏರಿಕೆ

| Updated By: ಸುಷ್ಮಾ ಚಕ್ರೆ

Updated on: Jul 24, 2021 | 8:52 PM

Karnataka Rain Updates: ಕರ್ನಾಟಕದ 12 ಜಿಲ್ಲೆಗಳಲ್ಲಿ ಮಳೆ ಹೆಚ್ಚಾಗಿದೆ. ರಾಜ್ಯದಲ್ಲಿ ಮಳೆಯಿಂದ 9 ಜನ ಸಾವನ್ನಪ್ಪಿದ್ದು, 830 ಮನೆಗಳು ಕುಸಿದಿವೆ, 15 ಶಾಲಾ ಕಟ್ಟಡಗಳು ನೆಲಸಮವಾಗಿವೆ.

Karnataka Rains: ವರುಣನ ಆರ್ಭಟಕ್ಕೆ ಕರ್ನಾಟಕ ತತ್ತರ; ಮಳೆಯಿಂದ ಸಾವನ್ನಪ್ಪಿದವರ ಸಂಖ್ಯೆ 9ಕ್ಕೆ ಏರಿಕೆ
ಉತ್ತರ ಕನ್ನಡದಲ್ಲಿ ಮಳೆ ಅಬ್ಬರಕ್ಕೆ ಕಂಗಾಲಾದ ಜನ
Follow us on

ಬೆಂಗಳೂರು: ಮಳೆಯ ಅಬ್ಬರಕ್ಕೆ ಮಲೆನಾಡು, ಕರಾವಳಿ, ಕೊಡಗು, ಉತ್ತರ ಕರ್ನಾಟಕದ ಕೆಲವು ಜಿಲ್ಲೆಗಳು ಸಂಪೂರ್ಣ ಜಲಾವೃತವಾಗಿದೆ. ಕಳೆದ ವರ್ಷಗಳಿಗೆ ಹೋಲಿಸಿದರೆ ರಾಜ್ಯದಲ್ಲಿ ಈ ಬಾರಿ ದಾಖಲೆಯ ಪ್ರಮಾಣದ ಮಳೆಯಾಗುತ್ತಿದೆ. ಅನಿರೀಕ್ಷಿತವಾಗಿ ಸುರಿಯಲಾರಂಭಿಸಿದ ಮಳೆಯ ಅಬ್ಬರಕ್ಕೆ ಕರ್ನಾಟಕದಲ್ಲಿ ಸಾವನ್ನಪ್ಪಿದವರ ಸಂಖ್ಯೆ 9ಕ್ಕೆ ಏರಿಕೆಯಾಗಿದೆ. ಇನ್ನೂ ಮೂರ್ನಾಲ್ಕು ದಿನಗಳ ಕಾಲ ಹಲವೆಡೆ ರೆಡ್ ಅಲರ್ಟ್​ ಇರುವುದರಿಂದ ಪ್ರವಾಹ, ಭೂಕುಸಿತದಿಂದ ಪ್ರಾಣಾಪಾಯದ ಭೀತಿ ಹೆಚ್ಚಾಗುತ್ತಿದೆ.

ಕರ್ನಾಟಕದ 12 ಜಿಲ್ಲೆಗಳಲ್ಲಿ ಮಳೆ ಹೆಚ್ಚಾಗಿದೆ. ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಕೊಡಗು, ಬೆಳಗಾವಿ, ರಾಯಚೂರು, ದಾವಣಗೆರೆ ಜಿಲ್ಲೆಗಳಲ್ಲಿ ಮಳೆ ಜಾಸ್ತಿಯಾಗಿದೆ. ರಾಜ್ಯದಲ್ಲಿ ಮಳೆಯಿಂದ 9 ಜನ ಸಾವನ್ನಪ್ಪಿದ್ದು, 830 ಮನೆಗಳು ಕುಸಿದಿವೆ, 15 ಶಾಲಾ ಕಟ್ಟಡಗಳು ನೆಲಸಮವಾಗಿವೆ. ಕರ್ನಾಟಕದಾದ್ಯಂತ 8,733 ಜನರನ್ನು ಸುರಕ್ಷಿತ ಸ್ಥಳಗಳಿಗೆ ಶಿಫ್ಟ್ ಮಾಡಲಾಗಿದೆ. ರಾಜ್ಯ ಸರ್ಕಾರ ಪ್ರವಾಹಪೀಡಿತರಿಗಾಗಿ 80 ಕಡೆ ಪರಿಹಾರ ಕೇಂದ್ರಗಳನ್ನು ತೆರೆದಿದೆ. 12 ಜಿಲ್ಲೆಗಳಲ್ಲೂ ಎನ್​ಡಿಆರ್​ಎಫ್​ ತಂಡಗಳನ್ನು ಕಳುಹಿಸಲಾಗಿದೆ.

ಪಶ್ಚಿಮ ಘಟ್ಟದಲ್ಲಿ ಮಳೆಯ ಅಬ್ಬರ ಸ್ವಲ್ಪವೂ ಕಡಿಮೆಯಾಗಿಲ್ಲ. ಮಳೆಯಿಂದ 12 ವರ್ಷದ ಬಾಲಕ ಪ್ರವಾಹದಲ್ಲಿ ಕೊಚ್ಚಿಹೋಗಿರುವ ಘಟನೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿಯಲ್ಲಿ ನಡೆದಿದೆ. ಬೆಳಗಾವಿಯ ಯದುರವಡಿ ಗ್ರಾಮದ 300 ಜನರನ್ನು ಸುರಕ್ಷಿತ ಸ್ಥಳಗಳಿಗೆ ಶಿಫ್ಟ್ ಮಾಡಲಾಗಿದೆ. ಕೊಡಗು, ಚಿಕ್ಕಮಗಳೂರು, ಶಿವಮೊಗ್ಗದಲ್ಲೂ ಮಳೆಯಿಂದ ಅಪಾರ ಹಾನಿಯಾಗಿವೆ. ಉತ್ತರ ಕನ್ನಡ ಜಿಲ್ಲೆಯ ಕರಾವಳಿ ತಾಲೂಕುಗಳು ಬಹುತೇಕ ಮುಳುಗಡೆಯಾಗಿವೆ.

ಶಿವಮೊಗ್ಗ, ಚಿಕ್ಕಮಗಳೂರು, ಉತ್ತರ ಕನ್ನಡ, ದಕ್ಷಿಣ ಕನ್ನಡ, ಕೊಡಗಿನ ಕೆಲವು ಹಳ್ಳಿಗಳು ಅಕ್ಷರಶಃ ದ್ವೀಪದಂತಾಗಿವೆ. ಕರ್ನಾಟಕದಲ್ಲಿ ಜುಲೈ 27ರವರೆಗೆ ವ್ಯಾಪಕ ಮಳೆಯಾಗಲಿದ್ದು, ಶಿವಮೊಗ್ಗ, ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಹಾಸನ, ಕೊಡಗು ಜಿಲ್ಲೆಗಳಲ್ಲಿ ಇಂದು ಮತ್ತು ನಾಳೆ ರೆಡ್ ಅಲರ್ಟ್ ಘೋಷಿಸಲಾಗಿದೆ. ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ, ಹೊಸನಗರ, ಸಾಗರ ಹಾಗೂ ಉತ್ತರ ಕನ್ನಡದ ಸಿದ್ಧಾಪುರ, ಶಿರಸಿ, ಕುಮಟಾ, ಯಲ್ಲಾಪುರ, ಅಂಕೋಲದಲ್ಲಿ ಈ ಬಾರಿ ದಾಖಲೆಯ ಮಳೆಯಾಗಿದೆ.

ಉತ್ತರ ಒಳನಾಡಿನ ಜಿಲ್ಲೆಗಳಾದ ಬೆಳಗಾವಿ, ಹಾವೇರಿ, ಗದಗ, ಧಾರವಾಡ, ಯಾದಗಿರಿ, ಕಲಬುರ್ಗಿ ಜಿಲ್ಲೆಗಳಲ್ಲಿ ಇಂದು ಹಳದಿ ಅಲರ್ಟ್​ ಘೋಷಿಸಲಾಗಿದೆ. ಮಲೆನಾಡು ಮತ್ತು ಕರಾವಳಿ ಜಿಲ್ಲೆಗಳಿಗೆ ಇಂದು ರೆಡ್ ಅಲರ್ಟ್ ಘೋಷಿಸಲಾಗಿದ್ದು, ಜುಲೈ 26 ಮತ್ತು 27ರಂದು ಆರೆಂಜ್ ಅಲರ್ಟ್​ ಘೋಷಿಸಲಾಗಿದೆ. ಬೆಂಗಳೂರಿನಲ್ಲಿಯೂ ಮಳೆ ಶುರುವಾಗಿದ್ದು, ಇನ್ನೂ ಮೂರು ದಿನ ಮಳೆಯಾಗುವ ಸಾಧ್ಯತೆಯಿದೆ.

ಉತ್ತರಕನ್ನಡದಲ್ಲಿ 4, ಬೆಳಗಾವಿ ಜಿಲ್ಲೆಯಲ್ಲಿ ಇಬ್ಬರು, ಚಿಕ್ಕಮಗಳೂರು, ಧಾರವಾಡ, ಕೊಡಗಿನಲ್ಲಿ ತಲಾ ಓರ್ವ ಸಾವನ್ನಪ್ಪಿದ್ದಾರೆ. ರಾಜ್ಯದಲ್ಲಿ ಪ್ರವಾಹದಿಂದ ಮೂವರು ನಾಪತ್ತೆಯಾಗಿದ್ದಾರೆ. ಉತ್ತರ ಕನ್ನಡ ಜಿಲ್ಲೆಯಲ್ಲೇ ಮೂವರು ನಾಪತ್ತೆಯಾಗಿದ್ದಾರೆ. ರಾಜ್ಯದ 11 ಜಿಲ್ಲೆಗಳಲ್ಲಿ ಮಳೆಯಿಂದ ಹೆಚ್ಚಿನ ಅನಾಹುತಗಳು ಸಂಭವಿಸಿವೆ. 11 ಜಿಲ್ಲೆಗಳ 45 ತಾಲೂಕುಗಳಲ್ಲಿ ಮಳೆಯಿಂದಾಗಿ ಸಂಕಷ್ಟ ಎದುರಾಗಿದೆ. ಬೆಳಗಾವಿ, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಧಾರವಾಡ, ಹಾವೇರಿ, ಕೊಡಗು, ಶಿವಮೊಗ್ಗ, ಉಡುಪಿ, ಉತ್ತರ ಕನ್ನಡ, ದಾವಣಗೆರೆ, ಹಾಸನ ಜಿಲ್ಲೆಯಲ್ಲಿ ಮಳೆಯಿಂದ ಅನಾಹುತಗಳು ನಡೆದಿವೆ. ಬೆಳಗಾವಿ ಜಿಲ್ಲೆಯಲ್ಲೇ 113 ಗ್ರಾಮಗಳು ಮುಳುಗಡೆಯಾಗಿವೆ.

ಉತ್ತರ ಕನ್ನಡ ಜಿಲ್ಲೆಯಲ್ಲಿ 108 ಗ್ರಾಮಗಳಲ್ಲಿ ಪ್ರವಾಹ ಉಂಟಾಗಿದೆ. ಧಾರವಾಡ ಜಿಲ್ಲೆ 25 ಗ್ರಾಮ, ಹಾವೇರಿ ಜಿಲ್ಲೆಯಲ್ಲಿ 12 ಗ್ರಾಮ, ಶಿವಮೊಗ್ಗ ಜಿಲ್ಲೆ 4, ದಾವಣಗೆರೆ ಜಿಲ್ಲೆಯಲ್ಲಿ 5 ಗ್ರಾಮ, ಹಾಸನ ಜಿಲ್ಲೆಯಲ್ಲಿ 16 ಗ್ರಾಮಗಳು ಮಳೆಯಿಂದ ಜಲಾವೃತವಾಗಿದೆ. ರಾಜ್ಯದಲ್ಲಿ ಮಳೆಯಿಂದ 123ಕ್ಕೂ ಹೆಚ್ಚು ಸೇತುವೆಗಳಿಗೆ ಹಾನಿಯಾಗಿದೆ. ರಾಜ್ಯದಲ್ಲಿ ಮಳೆಯಿಂದ 213 ಶಾಲೆಗಳ ಕಟ್ಟಡಗಳಿಗೆ ಹಾನಿಯಾಗಿದೆ. ರಾಜ್ಯದಲ್ಲಿ ಮಳೆಯಿಂದ 78 ಜಾನುವಾರುಗಳು ಸಾವನ್ನಪ್ಪಿವೆ. ರಾಜ್ಯದಲ್ಲಿ ಮಳೆಯಿಂದ ಒಟ್ಟು 555 ಕಿ.ಮೀ ರಸ್ತೆ ಹಾನಿಯಾಗಿದೆ. ರಾಜ್ಯದಲ್ಲಿ ಪ್ರವಾಹ ಪೀಡಿತ ಸ್ಥಳದಿಂದ 31360 ಜನರನ್ನು ಶಿಫ್ಟ್ ಮಾಡಲಾಗಿದೆ.

ರಾಜ್ಯದಲ್ಲಿ ಒಟ್ಟು 237 ಕಾಳಜಿ ಕೇಂದ್ರಗಳ ಸ್ಥಾಪನೆ ಮಾಡಲಾಗಿದೆ. ಕಾಳಜಿ ಕೇಂದ್ರಗಳಲ್ಲಿ ಒಟ್ಟು 22417 ಜನರಿಗೆ ಆಶ್ರಯ ನೀಡಲಾಗಿದೆ. 3502 ವಿದ್ಯುತ್ ಕಂಬ, 342 ಟ್ರಾನ್ಸ್‌ಫಾರ್ಮರ್ ಹಾನಿಯಾಗಿವೆ. ರಾಜ್ಯದಲ್ಲಿ ಪ್ರವಾಹದಿಂದಾಗಿ 58960 ಎಕರೆ ಬೆಳೆ ಹಾನಿಯಾಗಿದೆ. ಮಳೆಯಿಂದ 1962 ಎಕರೆಯಲ್ಲಿದ್ದ ತೋಟಗಾರಿಕೆ ಬೆಳೆ ಹಾನಿಯಾಗಿದೆ ಎಂದು ರಾಜ್ಯಸರ್ಕಾರದಿಂದ ಅಧಿಕೃತ ಮಾಹಿತಿ ಲಭ್ಯವಾಗಿದೆ.

ಇದನ್ನೂ ಓದಿ: Karnataka Weather Today: ಕರ್ನಾಟಕದಾದ್ಯಂತ ಭಾರೀ ಮಳೆ; ಮಲೆನಾಡು ಸೇರಿ 7 ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಣೆ

Maharashtra Rains: ಮಹಾರಾಷ್ಟ್ರದಲ್ಲಿ ಮಳೆಯ ರೌದ್ರಾವತಾರ; ರತ್ನಗಿರಿ ಆಸ್ಪತ್ರೆಗೆ ನೀರು ನುಗ್ಗಿ 8 ಕೋವಿಡ್ ರೋಗಿಗಳು ಸಾವು

(Karnataka Rains Death Toll Rises to 9 in Karnataka as Heavy Rain Continues in Kodagu, Shimoga, Uttara Kannada, Chikmagalur)

Published On - 6:37 pm, Sat, 24 July 21