ತಮಿಳುನಾಡಿಗೆ ಹೆಚ್ಚು ನೀರು ಬಿಡಲು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಸೂಚನೆ; ಒಂದು ಹನಿಯೂ ಹೆಚ್ಚು ಬಿಡಲ್ಲವೆಂದ ಕರ್ನಾಟಕ

|

Updated on: Aug 12, 2023 | 11:58 AM

Kaveri Water Management Authority meeting; ಕರ್ನಾಟಕ ಸರ್ಕಾರ ಕೇವಲ 8,000 ಕ್ಯೂಸೆಕ್ ಬಿಡುಗಡೆ ಮಾಡಬಹುದೆಂದು ಪ್ರತಿಕ್ರಿಯಿಸಿದ್ದು, ಒಂದು ಹನಿ ನೀರನ್ನೂ ಹೆಚ್ಚು ಬಿಡುವುದಿಲ್ಲ ಎಂದು ಹೇಳಿದೆ. ಹೀಗಾಗಿ ಸುಪ್ರೀಂ ಕೋರ್ಟ್​ ಮೊರೆ ಹೋಗಿ ಹೆಚ್ಚು ನೀರು ಪಡೆಯುವುದು ಬಿಟ್ಟು ತಮಿಳುನಾಡಿಗೆ ಬೇರೆ ಆಯ್ಕೆಗಳಿಲ್ಲ ಎಂದು ಅಲ್ಲಿನ ಜಲಸಂಪನ್ಮೂಲ ಸಚಿವ ದುರೈಮುರುಗನ್ ತಿಳಿಸಿದ್ದಾರೆ.

ತಮಿಳುನಾಡಿಗೆ ಹೆಚ್ಚು ನೀರು ಬಿಡಲು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಸೂಚನೆ; ಒಂದು ಹನಿಯೂ ಹೆಚ್ಚು ಬಿಡಲ್ಲವೆಂದ ಕರ್ನಾಟಕ
ಸಾಂದರ್ಭಿಕ ಚಿತ್ರ
Follow us on

ಬೆಂಗಳೂರು, ಆಗಸ್ಟ್ 12: ಅಂತರ್ ರಾಜ್ಯ ಗಡಿಯಾದ ಬಿಳಿಗುಂಡ್ಲುವಿಗೆ 10,000 ಕ್ಯೂಸೆಕ್ ನೀರು ದೊರೆಯುವಂತೆ ಮಾಡಲು ಕಾವೇರಿ ನದಿಯ (Kaveri River) ಜಲಾಶಯಗಳಿಂದ ನೀರು ಬಿಡುಗಡೆ ಮಾಡುವಂತೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (CWMA) ಶುಕ್ರವಾರ ಕರ್ನಾಟಕ ಸರ್ಕಾರಕ್ಕೆ ಆದೇಶಿಸಿದೆ. ನವದೆಹಲಿಯಲ್ಲಿ ನಡೆದ ಸಭೆಯ ವೇಳೆ ತಮಿಳುನಾಡಿನ ಅಧಿಕಾರಿಗಳು ಹೊರನಡೆದ ಘಟನೆಯೂ ನಡೆದಿತ್ತು. ಕರ್ನಾಟಕ ಸರ್ಕಾರದ ಒತ್ತಡದ ಮೇರೆಗೆ ಬಿಡುಗಡೆ ಮಾಡಬೇಕಿರುವ ನೀರಿನ ಪ್ರಮಾಣವನ್ನು ಕಡಿಮೆ ಮಾಡಲು ಪ್ರಾಧಿಕಾರ ಪರಿಗಣಿಸುತ್ತಿದೆ ಎಂದು ಆರೋಪಿಸಿ ತಮಿಳುನಾಡು ಅಧಿಕಾರಿಗಳು ಪ್ರತಿಭಟನೆ ನಡೆಸಿದರು. ಆದರೆ ಹೆಚ್ಚು ನೀರು ಬಿಡಲು ಸಾಧ್ಯವೇ ಇಲ್ಲ ಎಂದು ಕರ್ನಾಟಕದ ಅಧಿಕಾರಿಗಳು ತಿಳಿಸಿದ್ದಾರೆ. ಹೀಗಾಗಿ ಸುಪ್ರೀಂ ಕೋರ್ಟ್​ ಮೊರೆ ಹೋಗಲು ತಮಿಳುನಾಡು ಚಿಂತನೆ ನಡೆಸಿದೆ.

ತಡರಾತ್ರಿ ಹೇಳಿಕೆ ನೀಡಿರುವ ತಮಿಳುನಾಡು ಜಲಸಂಪನ್ಮೂಲ ಸಚಿವ ದುರೈಮುರುಗನ್, ಕಾವೇರಿ ನೀರು ನಿಯಂತ್ರಣ ಸಮಿತಿಯು 15 ದಿನಗಳ ಕಾಲ 15,000 ಕ್ಯೂಸೆಕ್ ಬಿಡುಗಡೆ ಮಾಡಲು ನಿರ್ಧರಿಸಿತ್ತು. ಆದರೆ ಕರ್ನಾಟಕ ಸರ್ಕಾರವು ಪ್ರಾಧಿಕಾರದ ಸಭೆಯಲ್ಲಿ ತನ್ನ ನಿಲುವನ್ನು ಬದಲಾಯಿಸಿದೆ. ಆಗಸ್ಟ್ 22 ರವರೆಗೆ ತಮಿಳುನಾಡಿಗೆ ಕೇವಲ 8,000 ಕ್ಯೂಸೆಕ್‌ಗಳನ್ನು ಮಾತ್ರ ಬಿಡುಗಡೆ ಮಾಡಲಾಗುವುದು ಎಂದು ಶುಕ್ರವಾರದಂದು ನಿರ್ದಿಷ್ಟವಾಗಿ ಹೇಳಲಾಗಿದೆ. ಕರ್ನಾಟಕ ಜಲಾಶಯಗಳು ಒಟ್ಟು 114.5 ಟಿಎಂಸಿಎಫ್‌ಟಿ ಸಂಗ್ರಹ ಸಾಮರ್ಥ್ಯದ ಶೇ 82 ರಷ್ಟು ಸಂಗ್ರಹವನ್ನು ಹೊಂದಿವೆ. ಕರ್ನಾಟಕಕ್ಕೆ ನೀರಿನ ಕೊರತೆ ಇಲ್ಲ. ಆದರೆ ತಮಿಳುನಾಡಿಗೆ ನೀರು ಬಿಡಲು ಅವರು ಮನಸ್ಸು ಮಾಡುತ್ತಿಲ್ಲ. ಸುಪ್ರೀಂ ಕೋರ್ಟ್‌ಗೆ ಹೋಗುವುದನ್ನು ಬಿಟ್ಟು ತಮಿಳುನಾಡಿಗೆ ಬೇರೆ ದಾರಿಯಿಲ್ಲ. ಶೀಘ್ರದಲ್ಲೇ ಸುಪ್ರೀಂ ಕೋರ್ಟ್​​ಗೆ ಅರ್ಜಿ ಸಲ್ಲಿಸಿ ನೀರು ಪಡೆಯಲು ಸರ್ಕಾರ ತೀರ್ಮಾನಿಸಿದೆ ಎಂದು ಹೇಳಿರುವುದಾಗಿ ‘ಟೈಮ್ಸ್ ಆಫ್ ಇಂಡಿಯಾ’ ವರದಿ ಮಾಡಿದೆ.

ಕರ್ನಾಟಕವು ಸುಪ್ರೀಂ ಕೋರ್ಟ್ ಆದೇಶ ಮತ್ತು ಸಿಡಬ್ಲ್ಯೂಎಂಎ ನಿರ್ದೇಶನಗಳನ್ನು ಗೌರವಿಸುತ್ತಿಲ್ಲ ಎಂಬ ತಮಿಳುನಾಡು ಸರ್ಕಾರದ ಆರೋಪದ ಹಿನ್ನೆಲೆಯಲ್ಲಿ ಸಭೆ ನಡೆದಿತ್ತು.

ಇದನ್ನೂ ಓದಿ: ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಸಭೆಯಲ್ಲಿ ಗದ್ದಲ; ಪಟ್ಟು ಬಿಡದ ತಮಿಳುನಾಡು ಅಧಿಕಾರಿಗಳು

ಶನಿವಾರದಿಂದ ಪ್ರಾರಂಭಗೊಂಡು ಮುಂದಿನ 15 ದಿನಗಳವರೆಗೆ ಬಿಳಿಗುಂಡ್ಲುವಿಗೆ 10,000 ಕ್ಯೂಸೆಕ್ ದೊರೆಯಬೇಕು ಎಂಧು ನಾವು ಸಭೆಯಲ್ಲಿ ನಿರ್ಧರಿಸಿದ್ದೇವೆ. ಜಲಾಶಯಗಳಿಂದ ಬಿಡುಗಡೆಯ ಪ್ರಮಾಣವನ್ನು ಹೆಚ್ಚು ಮಾಡಬೇಕು ಎಂದು ಪ್ರಾಧಿಕಾರದ ಅಧ್ಯಕ್ಷ ಸೌಮಿತ್ರ ಕುಮಾರ್ ಹಲ್ದಾರ್ ತಿಳಿಸಿರುವುದಾಗಿಯೂ ವರದಿ ಉಲ್ಲೇಖಿಸಿದೆ.

ಒಂದು ಹನಿಯೂ ಹೆಚ್ಚು ಬಿಡುವುದಿಲ್ಲ ಎಂದ ಕರ್ನಾಟಕ

ಹಿಂದಿನ ದಿನ ಸಮಿತಿಯು ನಿರ್ಧರಿಸಿದಂತೆ ಅದೇ ಪ್ರಮಾಣದಲ್ಲಿ ನೀರನ್ನು ಬಿಡುಗಡೆ ಮಾಡಲು ಕರ್ನಾಟಕ ಸರ್ಕಾರಕ್ಕೆ ನಿರ್ದೇಶನಗಳನ್ನು ನೀಡಲು ಪ್ರಾಧಿಕಾರವು ಶುಕ್ರವಾರ ಬಹುತೇಕ ನಿರ್ಧರಿಸಿದೆ ಎಂದು ತಮಿಳುನಾಡು ಅಧಿಕಾರಿಗಳು ತಿಳಿಸಿದ್ದಾರೆ. ಆದರೆ ನಂತರ ಕರ್ನಾಟಕ ಸರ್ಕಾರ ಕೇವಲ 8,000 ಕ್ಯೂಸೆಕ್ ಬಿಡುಗಡೆ ಮಾಡಬಹುದೆಂದು ಪ್ರತಿಕ್ರಿಯಿಸಿತು. ಒಂದು ಹನಿ ನೀರನ್ನೂ ಹೆಚ್ಚು ಬಿಡುವುದಿಲ್ಲ ಎಂದು ಕರ್ನಾಟಕದ ಅಧಿಕಾರಿಗಳು ಹೇಳಿದರು. ಇದಕ್ಕೆ ಸಮ್ಮತಿಸಲು ಪ್ರಾಧಿಕಾರ ಮುಂದಾದಾಗ, ಸಮಿತಿಯು ವೈಜ್ಞಾನಿಕವಾಗಿ ನಿಗದಿಪಡಿಸಿದ್ದನ್ನು ಪ್ರಾಧಿಕಾರವು ಕಡಿಮೆ ಮಾಡುತ್ತಿರುವುದನ್ನು ಖಂಡಿಸಿ ತಮಿಳುನಾಡಿನ ಅಧಿಕಾರಿಗಳು ಸಭೆಯಿಂದ ಹೊರನಡೆದರು.

ಸಮಿತಿ ಸಭೆಯಲ್ಲಿ ಕರ್ನಾಟಕ 15,000 ಕ್ಯೂಸೆಕ್‌ಗೆ ಒಪ್ಪಿಗೆ ನೀಡಲಿಲ್ಲ. ಆದರೆ ತಮಿಳುನಾಡು 15,000 ಕ್ಯೂಸೆಕ್‌ಗಿಂತ ಹೆಚ್ಚು ನೀರು ಬಿಡುಗಡೆ ಮಾಡುವಂತೆ ಒತ್ತಾಯಿಸಿತು ಎಂದು ಕುಮಾರ್ ಹಲ್ದಾರ್ ತಿಳಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:35 am, Sat, 12 August 23