ಬೆಂಗಳೂರು: ನಗರದ ಹೃದಯಭಾಗ ಮೆಜೆಸ್ಟಿಕ್ನಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ತಲುಪಲು ಕನಿಷ್ಠ ಎರಡು ಗಂಟೆ ಬೇಕು. ಅಷ್ಟೇ ಅಲ್ಲ, ಏರ್ಪೋರ್ಟ್ಗೆ ಹೋಗಲು ದೊಡ್ಡ ಮೊತ್ತವನ್ನು ಕೂಡ ತೆತ್ತಬೇಕು. ಆದರೆ, ಸೋಮವಾರದಿಂದ ಈ ಸಮಸ್ಯೆಗೆ ಪರಿಹಾರ ಸಿಗಲಿದೆ. ಏಕೆಂದರೆ, ಮೆಜೆಸ್ಟಿಕ್ನಿಂದ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ವಿಶೇಷ ರೈಲು ಸೇವೆ ಲಭ್ಯವಾಗಲಿದೆ.
ಹೌದು, ಕೆಂಪೇಗೌಡ ವಿಮಾನ ನಿಲ್ದಾಣದ ಬಳಿಯಿರುವ ದೇವನಹಳ್ಳಿ ರೈಲ್ವೆ ನಿಲ್ದಾಣವನ್ನು ಅಭಿವೃದ್ಧಿ ಮಾಡಲಾಗಿರುವ ಜೊತೆಗೆ ನಗರದಿಂದ ಈ ನಿಲ್ದಾಣಕ್ಕೆ ಓಡಾಡುವ ರೈಲುಗಳ ಸಂಖ್ಯೆಯನ್ನು ಸಹ ಹೆಚ್ಚಿಸಲಾಗಿದೆ. ಅಷ್ಟೇ ಅಲ್ಲ, ಈ ರೈಲು ಪ್ರಯಾಣಕ್ಕೆ ತೆರಬೇಕಾದ ಮೊತ್ತ ತೀರಾ ಅಗ್ಗವಾಗಿದ್ದು ಕೇವಲ 10-15 ರೂಪಾಯಿಗೆ ಪ್ರಯಾಣಿಕರು ನಗರದಿಂದ ಏರ್ಪೋರ್ಟ್ ತಲುಪಬಹುದಾಗಿದೆ.
ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಿಂದ ಮೊದಲ ರೈಲು ಮುಂಜಾನೆ 4.45ಕ್ಕೆ ಸಂಚಾರ ಆರಂಭಿಸಲಿದೆ. ರಾತ್ರಿ 9 ಗಂಟೆಗೆ ಕೊನೆಯ ರೈಲು ಹೊರಡಲಿದೆ. ಜೊತೆಗೆ, ಕೆಂಪೇಗೌಡ ವಿಮಾನ ನಿಲ್ದಾಣದಿಂದ ಬೆಂಗಳೂರಿಗೆ ಬರಲು ಕೂಡ ರೈಲು ವ್ಯವಸ್ಥೆ ಕಲ್ಪಿಸಲಾಗಿದೆ.
ಕೇವಲ ಪ್ರಯಾಣಿಕರಲ್ಲದೆ ವಿಮಾನ ನಿಲ್ದಾಣದ ಸಿಬ್ಬಂದಿಗೆ ಸಹ ಈ ವ್ಯವಸ್ಥೆ ಹೆಚ್ಚು ಸಹಕಾರಿಯಾಗಲಿದೆ. ಏಕೆಂದರೆ, ನಗರ ಭಾಗದಿಂದ ಅವರಿಗೆ ವಿಮಾನ ನಿಲ್ದಾಣಕ್ಕೆ ಪ್ರಯಾಣಿಸಲು ನಿತ್ಯ 2ರಿಂದ 4 ಗಂಟೆ ವ್ಯಯ ಮಾಡುತ್ತಿದ್ದಾರೆ. ಅಲ್ಲದೆ, ಹೆಚ್ಚು ಹಣವನ್ನು ಕೂಡ ಖರ್ಚು ಮಾಡುತ್ತಿದ್ದಾರೆ. ಹೀಗಾಗಿ, ಅವರ ದಿನನಿತ್ಯದ ಸಮಸ್ಯೆಗೆ ಈಗ ಪರಿಹಾರ ಸಿಕ್ಕಂತಾಗಿದೆ.
ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಅತ್ಯಾಧುನಿಕ ರನ್ ವೇ ಲೋಕಾರ್ಪಣೆ; ಇನ್ಮುಂದೆ ಇರಲ್ಲ ಮಂಜಿನ ಕಾಟ