ಖರ್ಗೆ ಕುಟುಂಬದ ಟ್ರಸ್ಟ್​ನಿಂದ ಕೆಐಎಡಿಬಿಗೆ ಭೂಮಿ ವಾಪಸ್: ಸಚಿವ ಪರಮೇಶ್ವರ್ ಅಚ್ಚರಿಯ ಪ್ರತಿಕ್ರಿಯೆ

| Updated By: ಗಣಪತಿ ಶರ್ಮ

Updated on: Oct 14, 2024 | 12:10 PM

ಮುಡಾ ಹಗರಣ ಆರೋಪ ತೀವ್ರಗೊಂಡ ಬೆನ್ನಲ್ಲೇ ಸಿಎಂ ಸಿದ್ದರಾಮಯ್ಯ ಪತ್ನಿ ಪಾರ್ವತಿ 14 ನಿವೇಶನಗಳನ್ನು ವಾಪಸ್ ನೀಡಿದ್ದರು. ಅದರ ಬೆನ್ನಲ್ಲೇ ಕೆಐಎಡಿಬಿ ಭೂಮಿ ಹಂಚಿಕೆಯಲ್ಲಿಯೂ ಅಕ್ರಮದ ಆರೋಪ ಕೇಳಿಬಂದಿತ್ತು. ಇದೀಗ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕುಟುಂಬಕ್ಕೆ ಸೇರಿದ ಸಿದ್ದಾರ್ಥ ವಿಹಾರ ಟ್ರಸ್ಟ್ ಭೂಮಿ ವಾಪಸ್ ಮಾಡಿದ್ದು, ಆ ಬಗ್ಗೆ ಗೃಹ ಸಚಿವ ಜಿ ಪರಮೇಶ್ವರ ಅಚ್ಚರಿಯ ಹೇಳಿಕೆ ನೀಡಿದ್ದಾರೆ.

ಖರ್ಗೆ ಕುಟುಂಬದ ಟ್ರಸ್ಟ್​ನಿಂದ ಕೆಐಎಡಿಬಿಗೆ ಭೂಮಿ ವಾಪಸ್: ಸಚಿವ ಪರಮೇಶ್ವರ್ ಅಚ್ಚರಿಯ ಪ್ರತಿಕ್ರಿಯೆ
ಸಚಿವ ಪರಮೇಶ್ವರ್
Follow us on

ಬೆಂಗಳೂರು, ಅಕ್ಟೋಬರ್ 14: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕುಟುಂಬದ ಸಿದ್ದಾರ್ಥ ವಿಹಾರ್ ಟ್ರಸ್ಟ್​ಗೆ ಕೆಐಎಡಿಬಿಗೆ ಭೂಮಿ ಹಂಚಿಕೆಯಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರದ ಆರೋಪದ ಕಾವು ಹೆಚ್ಚಾಗುವ ಮುನ್ನವೇ ಭೂಮಿ ವಾಪಸ್ ನೀಡುವ ನಿರ್ಧಾರ ಕೈಗೊಳ್ಳಲಾಗಿದೆ. ವಿವಾದ ರಾಜ್ಯಪಾಲರ ಅಂಗಳಕ್ಕೆ ತಲುಪುತ್ತಿದ್ದಂತೆಯೇ ಖರ್ಗೆ ಕುಟುಂಬ ಭೂಮಿ ವಾಪಸ್ ನೀಡಲು ನಿರ್ಧರಿಸಿದೆ. ಈ ಬಗ್ಗೆ ಗೃಹ ಸಚಿವ ಜಿ ಪರಮೇಶ್ವರ ಪ್ರತಿಕ್ರಿಯಿಸಿದ್ದು, ತಪ್ಪು ಮಾಡಿದ್ದಾರೆ ಅನ್ನೋ ಕಾರಣಕ್ಕೆ ಭೂಮಿ ವಾಪಸ್ ನೀಡಿಲ್ಲ ಎಂದಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಅವರು, ಭೂಮಿ ಹಂಚಿಕೆಯಾಗಿದ್ದಕ್ಕೆ ಸಾಕಷ್ಟು ಆರೋಪಗಳು ಕೇಳಿ ಬಂದಿದ್ದವು. ಸುಮ್ಮನೆ ಏಕೆ ಗೊಂದಲ ಎಂದು ಭೂಮಿ ವಾಪಸ್ ಕೊಟ್ಟಿದ್ದಾರೆ ಎಂದರು.

ಬಿಜೆಪಿಯವರಿಗೆ ಕಾಮಾಲೆ ಕಣ್ಣು: ಪರಮೇಶ್ವರ

ಸರ್ಕಾರ ಹಳೇ ಹುಬ್ಬಳ್ಳಿ ಗಲಭೆ ಪ್ರಕರಣ ಹಿಂಪಡೆದ ವಿಚಾರವಾಗಿ ಟೀಕಿಸುತ್ತಿರುವ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಬಿಜೆಪಿಯವರಿಗೆ ಕಾಮಾಲೆ ಕಣ್ಣು, ಕಾಣುವುದೆಲ್ಲವೂ ಹಳದಿ. ಬಿಜೆಪಿಯವರಿಗೆ ಗ್ರೀನ್​ ಕಾಣಲ್ಲ, ಬ್ಲ್ಯೂನೂ ಕಾಣುವುದಿಲ್ಲ. ಎಲ್ಲದರಲ್ಲೂ ಬಿಜೆಪಿ ರಾಜಕೀಯ ಮಾಡುವುದು ಸರಿಯಲ್ಲ ಎಂದರು.

ಕೇಸ್ ವಾಪಸ್ ಪಡೆಯಲು ಯಾರಾದರೂ ಮನವಿ ಮಾಡುತ್ತಾರೆ. ಆಗ ನಾವು ಅದರ ಪರಿಶೀಲನೆಗೆ ಸಂಪುಟ ಉಪಸಮಿತಿ ರಚನೆ ಮಾಡುತ್ತೇವೆ. ಈ ಬಗ್ಗೆ ಸಂಬಂಧಿಸಿದ ಇಲಾಖೆಯಿಂದ ಮಾಹಿತಿ‌ ಕೇಳುತ್ತೇವೆ. ನಂತರ ಸಂಪುಟ ಉಪಸಮಿತಿ ಅದರ ಬಗ್ಗೆ ತೀರ್ಮಾನ ಮಾಡುತ್ತದೆ. ವಾಪಸ್ ತಗೋಬೇಕಾ ಬೇಡವಾ ಎಂದು ನಿರ್ಧರಿಸುತ್ತದೆ. ಹುಬ್ಬಳ್ಳಿಯಲ್ಲಿ ಅಷ್ಟೊಂದು ಜನರ ಮೇಲೆ ಕೇಸ್ ಹಾಕುವ ಅಗತ್ಯವಿಲ್ಲ. ಹಾಗೆಂದು ಸಂಪುಟ ಉಪಸಮಿತಿ ಸದಸ್ಯರು ಅಭಿಪ್ರಾಯ ಪಟ್ಟಿದ್ದಾರೆ. ಬಳಿಕ ಸಂಪುಟ ಸಭೆಯಲ್ಲಿ ಕೇಸ್ ವಾಪಸ್ ಪಡೆಯುವ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಪರಮೇಶ್ವರ ಹೇಳಿದರು.

ಇದನ್ನೂ ಓದಿ: ಸಿಎಂ ಪತ್ನಿಯಂತೆ ಖರ್ಗೆ ಕುಟುಂಬದ ಸಿದ್ಧಾರ್ಥ್​ ಟ್ರಸ್ಟ್​ ಸಹ 5 ಎಕರೆ ಸೈಟ್​ ಹಿಂತಿರುಗಿಸಲು ನಿರ್ಧಾರ

ಕೋರ್ಟ್ ಒಪ್ಪಿಕೊಂಡರೆ ಆ ಕೇಸ್​​ಗಳು ವಾಪಸ್ ಆಗುತ್ತವೆ. ಬಿಜೆಪಿ‌ ಅವಧಿಯಲ್ಲೂ ಹಲವು ಕೇಸ್​​ಗಳನ್ನು ವಾಪಸ್ ಪಡೆಯಲಾಗಿತ್ತು. ಉತ್ತರ ಪ್ರದೇಶದಲ್ಲಿ ಅಲ್ಲಿನ ಸಿಎಂ ವಿರುದ್ಧವೇ ಹಲವು ಪ್ರಕರಣಗಳಿದ್ದವು. ಆ ಕೇಸ್​ಗಳನ್ನು ಅವರೇ ವಾಪಸ್ ಪಡೆದುಕೊಂಡಿದ್ದರು. ಹುಬ್ಬಳ್ಳಿ ಕೇಸ್ ವಾಪಸ್​ಗೆ ಕೋರ್ಟ್ ಒಪ್ಪುತ್ತದೆಯೋ ಇಲ್ಲವೋ ಗೊತ್ತಿಲ್ಲ. ನಿಯಮಾನುಸಾರ ಕೇಸ್ ವಾಪಸ್ ಪಡೆಯಬಹುದು. 56 ಕೇಸ್​ಗಳಲ್ಲಿ 43 ಕೇಸ್​ಗಳ ಹಿಂಪಡೆಯಲು ತೀರ್ಮಾನ ಆಗಿದೆ. 43 ಕೇಸ್​ ಸಹ ಅಲ್ಪಸಂಖ್ಯಾತರದ್ದಲ್ಲ, ಅದರಲ್ಲಿ ಎಲ್ಲರೂ ಸೇರಿದ್ದಾರೆ. ಬಿಜೆಪಿ ಎಲ್ಲವನ್ನೂ ರಾಜಕೀಯ ಮಾಡುತ್ತಿದೆ ಎಂದು ಪರಮೇಶ್ವರ್ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ