ಮಡಿಕೇರಿ: ಹಸಿರಿನ ನಡುವೆ ಕೊಡವರ ಶ್ರೀಮಂತರ ಸಂಸ್ಕೃತಿಯ ಅನಾವರಣ. ವೀರರ ನಾಡು ಕೊಡಗಿನಲ್ಲಿ ಕೋವಿಹಬ್ಬದ ಸಂಭ್ರಮ ಮನೆ ಮಾಡಿದೆ. ಕೊಡವರಿಗೂ ಕೋವಿಗೂ ಅವಿನಾಭಾವ ಸಂಬಂಧವಿದೆ. ಇಲ್ಲಿ ಇದು ಕೇವಲ ಒಂದು ಆಯುಧ ಮಾತ್ರವಲ್ಲ, ಪೂಜಿಸೋ ದೇವರು. ಇದೇ ಕಾರಣಕ್ಕೆ ದೇಶದ ಯಾವುದೇ ಭಾಗದ ಜನರಿಗೆ ಇಲ್ಲದ ವಿಶೇಷ ಸೌಲಭ್ಯ ಕೊಡಗಿನ ಜನರಿಗಿದೆ.
ಇಂಡಿಯನ್ ಆರ್ಮ್ಸ್ ಌಕ್ಟ್ ಸೆಕ್ಷನ್ ಮೂರರ ಪ್ರಕಾರ ಇಲ್ಲಿನ ಜನರಿಗೆ ಕೋವಿ ಬಳಸಲು ವಿನಾಯಿತಿ ನೀಡಲಾಗಿದೆ. ಹೀಗಾಗಿಯೇ ಪ್ರತಿಮನೆಯಲ್ಲೂ ಕೋವಿ ಇಟ್ಟುಕೊಂಡಿರುತ್ತಾರೆ. ಮುಂದಿನ ಪೀಳಿಗೆಗೂ ಈ ಸಂಸ್ಕೃತಿ ಉಳಿಸಿಕೊಂಡು ಹೋಗೋ ನಿಟ್ಟಿನಲ್ಲಿ ನಿನ್ನೆ ಕೋವಿ ಹಬ್ಬ ಆಯೋಜಿಸಲಾಗಿತ್ತು. ಕೋವಿ ಹಬ್ಬದಲ್ಲಿ ಪುರುಷರು ಮಹಿಳೆಯರು ಸೇರಿದಂತೆ ನೂರಾರು ಕೊಡವರು ಭಾಗಿಯಾಗಿದ್ದರು.
ತೆಂಗಿನಕಾಯಿಗೆ ಗುಂಡು ಹಾರಿ ಹಬ್ಬ ಆಚರಣೆ:
ಇನ್ನು ಕಳೆದ 10 ವರ್ಷದಿಂದ ಕೊಡವಾ ನ್ಯಾಷನಲ್ ಕೌನ್ಸಿಲ್ ಈ ವಿಶಿಷ್ಟ ಕೋವಿ ಹಬ್ಬವನ್ನ ಶುರುಮಾಡಿದೆ ಮುಂದಿನ ತಲೆಮಾರಿನವರೆಗೂ ಇದು ಉಳಿಯಲಿ ಅಂತಾ ಕೊಡವರು ಇದಕ್ಕೆ ಹಬ್ಬದ ರೂಪ ಕೊಟ್ಟಿದ್ದಾರೆ. ಈ ವೇಳೆ ಕೋವಿಗಳಿಗೆ ವಿಶೇಷ ಪೂಜೆ ಸಲ್ಲಿಸಿ, ತೆಂಗಿನಕಾಯಿಗೆ ಗುಂಡು ಹಾರಿಸೋ ಮೂಲಕ ಹಬ್ಬ ಆಚರಿಸುತ್ತಾರೆ. ಪುರುಷರು, ಮಹಿಳೆಯರು ಎನ್ನದೇ ಎಲ್ಲರೂ ಬೆರೆತು ಎಂಜಾಯ್ ಮಾಡ್ತಾರೆ. ಯುವತಿಯರೂ ಸ್ಟೆಪ್ ಹಾಕಿ ಸಂಭ್ರಮಿಸುತ್ತಾರೆ.
ಡಿಸೆಂಬರ್ 18 ವಿಶ್ವ ಅಲ್ಪ ಸಂಖ್ಯಾತ ಹಕ್ಕುಗಳ ದಿನಾಚರಣೆ. ಹೀಗಾಗಿ ಕಳೆದ ಹತ್ತು ವರ್ಷಗಳಿಂದ ಈ ದಿನದಂದು ಸಿ.ಎನ್.ಸಿ ಕೋವಿ ಉತ್ಸವ ಆಚರಿಸಲಾಗುತ್ತೆ. ಹಾಗೇ ಕೋವಿ ಬಳಸೋದು ಪ್ರಾಣ ರಕ್ಷಣೆಗಾಗಿ ಅಲ್ಲ ಬದಲಾಗಿ ಕೋವಿಗೆ ಕೊಡವರಲ್ಲಿ ಪೂಜ್ಯಭಾವನೆ ಇದೆ ಅನ್ನೋದನ್ನ ಸಾರೋದು ಈ ಹಬ್ಬದ ಸ್ಪೇಷಲ್.