Madikeri News: ಮಡಿಕೇರಿಯಲ್ಲಿ ಅವೈಜ್ಞಾನಿಕ ಲೇಔಟ್ ನಿರ್ಮಾಣಕ್ಕೆ ಬೃಹತ್ ಬೆಟ್ಟವೇ ಬಲಿ, ಭೂ ಕುಸಿತದ ಆತಂಕ

| Updated By: Rakesh Nayak Manchi

Updated on: Jun 12, 2023 | 5:02 PM

ಮಡಿಕೇರಿ ಬೆಟ್ಟದ 84 ಎಕರೆ ಜಾಗವನ್ನ ಖರೀದಿಸಿರೋ ಆಂಧ್ರ ಮೂಲದ ರೆಡ್ಡಿಯೊಬ್ಬರು 50 ಎಕರೆಗೂ ಅಧಿ ಖಾಸಗಿ ಅರಣ್ಯವನ್ಬು ಸರ್ವ ನಾಶ ಮಾಡಿದ್ದಾರೆ. ಹೀಗಾಗಿ ಅವೈಜ್ಞಾನಿಕ‌ ಕಾಮಗಾರಿ ಸ್ಥಗಿತ ಕೋರಿ ಫೀಲ್ಡ್ ಮಾರ್ಷಲ್ ಕೆಎಂ ಕಾರ್ಯಪ್ಪ ಅವರ ಪುತ್ರ ಏರ್ ಮಾರ್ಷಲ್ ನಂದಾ ಕಾರ್ಯಪ್ಪನವರು ಜಿಲ್ಲಾಧಿಕಾರಿ ಮತ್ತು ನಗರ ಸಭೆಗೆ ದೂರು ನೀಡಿದ್ದಾರೆ.

Madikeri News: ಮಡಿಕೇರಿಯಲ್ಲಿ ಅವೈಜ್ಞಾನಿಕ ಲೇಔಟ್ ನಿರ್ಮಾಣಕ್ಕೆ ಬೃಹತ್ ಬೆಟ್ಟವೇ ಬಲಿ, ಭೂ ಕುಸಿತದ ಆತಂಕ
ಮಡಿಕೇರಿಯಲ್ಲಿ ಅವೈಜ್ಞಾನಿಕ ಲೇಔಟ್ ನಿರ್ಮಾಣಕ್ಕೆ ಬೃಹತ್ ಬೆಟ್ಟವೇ ಬಲಿ
Follow us on

ಕೊಡಗು: ಜಿಲ್ಲೆಯಲ್ಲಿ 2018 ಮತ್ತು 19ರ ಭೀಕರ ಜಲ ಪ್ರಳಯ ಮತ್ತು ಭೂ ಕುಸಿತ ನಿಮಗೆಲ್ಲಾ ನೆನಪಿರಬಹುದು. ಈ ಮಹಾ ದುರಂತಕ್ಕೆ ಪ್ರಕೃತಿಯ ಮೇಲೆ ಮಾನವನ ಅತಿಯಾದ ಹಸ್ತಕ್ಷೇಪವೂ ಒಂದು ಕಾರಣ ಅಂತ ವಿಜ್ಞಾನಿಗಳು ಎಚ್ಚರಿಕೆ ನೀಡಿದ್ದರು. ಆದರೆ ಈ ಎಚ್ಚರಿಕೆಯ ಹೊರತಾಗಿಯೂ ಜಿಲ್ಲೆಯಲ್ಲಿ ಪ್ರಕೃತಿಯ ಮೇಲೆ ಅನಾಚಾರ ಮಾಡಲಾಗುತ್ತಲೇ ಇದೆ. ಮಡಿಕೇರಿ (Madikeri) ನಗರದ ಹೊರವಲಯದಲ್ಲಿ ಜೆಸಿಬಿ ಘರ್ಜನೆಗೆ ಬೃಹತ್ ಪರ್ವತವೇ ಮಂಗಮಾಯವಾಗಿದೆ. ಅದೂ ಕೂಡ ಶ್ರೀಮಂತರು ವಾಸಿಸುವ ವಿಲ್ಲಾಗಳಿಗಾಗಿ.

ಹೌದು, ಕರ್ಣಂಗೇರಿ ಗ್ರಾಮದ ಸರ್ವೆ ನಂಬರ್ 543/73 ಮತ್ತು 543/74 ನಲ್ಲಿಒಟ್ಟು 38 ಎಕರೆ ಬೆಟ್ಟ ಪ್ರದೇಶವನ್ನು ಇನ್ನಿಲ್ಲದಂತೆ ಅಗೆದು ಸಮತಟ್ಟು ಮಾಡಲಾಗಿದೆ. ಇದರೊಂದಿಗೆ ನೂರಾರು ಮರಗಳನ್ನೂ ಕಡಿದು ಗುರುತೇ ಸಿಗದಂತೆ ಭೂ ಸಮಾಧಿ ಮಾಡಲಾಗಿದೆ. ಇದು ಖಾಸಗಿ ಜಾಗವಾಗಿದ್ದು ಸುಮಾರು 10 ವರ್ಷಗಳ ಹಿಂದೆ ಇಲ್ಲಿ ಸುಮಾರು 80ಕ್ಕು ಅಧಿಕ ಎಕರೆ ಜಾಗವನ್ನು ಸ್ಥಳೀಯರು ಆಂಧ್ರ ಮೂಲದ ಉದ್ಯಮಿಗಳಿಗೆ ಮಾರಾಟ ಮಾಡಿದ್ದರು. ಬಳಿಕ 2016, 17ರಲ್ಲಿ ಈ ಜಮೀನನ್ನು ಭೂ ಪರಿವರ್ತನೆ ಮಾಡಲಾಗಿತ್ತು ಎನ್ನಲಾಗುತ್ತದೆ.

ಆಂದ್ರಪ್ರದೇಶ ಮೂಲದ ಅಪ್ಪಾರಾವ್, ಸುಬ್ಬಯಮ್ಮ ಮತ್ತು ವೇಂಕಟೇಶ್ವರ ರವಿ ರೆಡ್ಡಿ ಎಂಬುವರೆ ಸದ್ಯ ಈ ಬೆಟ್ಟದ ಮಾಲಿಕರಾಗಿದ್ದಾರೆ. ಇದರಲ್ಲಿ 38 ಎಕರೆ ಜಾಗದಲ್ಲಿ ಜೆಸಿಬಿ ಬಳಸಿ ಬೆಟ್ಟವನ್ನ ಅವೈಜ್ಞಾನಿಕವಾಗಿ ಕೊರೆದು ಸಮತಟ್ಟುಗೊಳಿಸಲಾಗುತ್ತಿದೆ. ಲೇಔಟ್, ವಿಲ್ಲಾ ಅಥವಾ ರೆಸಾರ್ಟ್ ನಿರ್ಮಾಣಕ್ಕಾಗಿ ಹೀಗೆ ಮಾಡುತ್ತಿರಬಹುದು ಎನ್ನಲಾಗುತ್ತಿದೆ. ಎರಡು ಬೆಟ್ಟಗಳ ಮಧ್ಯೆ ಹರಿಯುವ ನೈಸರ್ಗಿಕ ನೀರಿನ ಸೆಲೆಗಳ ಮೇಲೂ ಮಣ್ಣು ಹಾಕಿ ಸಿಮೆಂಟ್ ರಸ್ತೆ ನಿರ್ಮಿಸಿ ಬಿಟ್ಟಿದ್ದಾರೆ. ಇದರಿಂದ ಮಳೆಗಾದಲ್ಲಿ ನೀರು ಹರಿಯಲು ಜಾಗವೇ ಇಲ್ಲದಂತಾಗಿದೆ. ಆದ್ದರಿಂದ ಮಳೆಗಾಲದಲ್ಲಿ ಇಲ್ಲಿ ಭೂಕುಸಿತವಾಗಿ ಬೆಟ್ಟದ ತಪ್ಪಲಿನ ಮನೆಗಳು ಭೂ ಸಮಾಧಿಯಾಗುವ ಆತಂಕ ಎದುರಾಗಿದೆ.

ಜಾಗದ ಮಾಲಿಕರ ವಿರುದ್ಧ ಎಫ್ಐಆರ್

ಯಾವಾಗ ಟಿವಿ9 ಈ ಸ್ಥಳಕ್ಕೆ ಭೇಟಿ ನೀಡಿತೋ, ವಿಷಯ ಅರಿತ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿ ಪರಿಸ್ಥಿತಿ ಅವಲೋಕಿಸಿದ್ದಾರೆ. ಬಹಳಷ್ಟು ಮರಗಳು ನಾಶವಾಗಿರುವುದನ್ನು ಗಮನಿಸಿ ಅಪ್ಪಾರಾವ್, ಸುಬ್ಬಯಮ್ಮ ಮತ್ತು ವೇಂಕಟೇಶ್ವರ ರವಿ ರೆಡ್ಡಿ ವಿರುದ್ಧ ಮೊಕದ್ದಮೆ ದಾಖಲಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಡಿಎಫ್ಒ ಪೂವಯ್ಯ, ತಮ್ಮ ಸಿಬ್ಬಂದಿ ಸ್ಥಳ ಅವಲೋಕನ
ನಡೆಸಿದ್ದು ಸುಮಾರು 80 ರಿಂದ 100 ಮರಗಳು ನಾಶವಾಗಿರುವ ಬಗ್ಗೆ ಮಾಹಿತಿ ಸಿಕ್ಕಿದೆ. ಹಾಗಾಗಿ ಜಾಗದ ಮಾಲಿಕರ ವಿರುದ್ಧ ಮೊಕದ್ದಮೆ ದಾಖಲಿಸಲಾಗಿದ್ದು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಪ್ರತಾಪ್ ಸಿಂಹ ಅವರನ್ನು ಸೋಲಿಸಲು ಡಾ. ಯತೀಂದ್ರ ಸಿದ್ದರಾಮಯ್ಯ ಸೂಕ್ತ ವ್ಯಕ್ತಿ: ಅವರಿಗೇ ಲೋಕಸಭಾ ಟಿಕೆಟ್ ಕೊಡಿ – ಪತ್ರ ಚಳವಳಿ

ಈ ಪ್ರದೇಶವನ್ನು ಮಂಗಳಾದೇವಿ ನಗರ ಎಂದೂ ಕರೆಯಲಾಗುತ್ತದೆ. ಈ ಪ್ರದೇಶವನ್ನು ಭೂ ವಿಜ್ಞಾನಿಗಳು ನೈಸರ್ಗಿಕವಾಗಿ ಅತಿಸೂಕ್ಷ್ಮ ಎಂದು ಘೋಷಿಸಿದ್ದಾರೆ. ಕಳೆದ ಆರು ವರ್ಷಗಳ ಹಿಂದೆ ಈ ಭಾಗದಲ್ಲಿ ಮನೆಯೊಂದರ ಮೇಲೆ ದಿಣ್ಣೆ ಕುಸಿದು ಆರು ಮಂದಿ ಜೀವಂತ ಭೂ ಸಮಾಧಿಯಾಗಿದ್ದರು. ಇಂತಹ ದುರ್ಗಮ ಬೆಟ್ಟ ಪ್ರದೇಶಗಳಲ್ಲಿ ಈ ರೀತಿಯ ಅವೈಜ್ಞಾನಿಕ ವಾಣಿಜ್ಯ ಚಟುವಟಿಕೆ ನಡೆಸುತ್ತಿರುವುದು ತೀವ್ರ ಆತಂಕಕ್ಕೆ ಕಾರಣವಾಗಿದೆ. ಈ ಆತಂಕದಿಂದಲೇ ಫಿಲ್ಡ್ ಮಾರ್ಷಲ್ ಕೆಎಂ ಕಾರ್ಯಪ್ಪ ಅವರ ಪುತ್ರ ಏರ್ ಮಾರ್ಷಲ್ ನಂದಾ ಕಾರ್ಯಪ್ಪ ಈ ಕಾಮಗಾರಿ ಸ್ಥಗಿತಗೊಳಿಸುವಂತೆ ಜಿಲ್ಲಾಧಿಕಾರಿ ಮತ್ತು ನಗರಸಭೆ ಅಧ್ಯಕ್ಷೆ ಅನಿತಾ ಪೂವಯ್ಯಗೆ ಲಿಖಿತ ದೂರು ನೀಡಿದ್ದಾರೆ. ಆದರೂ ಏನೂ ಪ್ರಯೋಜನವಾಗಿರಲಿಲ್ಲ.

ಆದರೆ ಪ್ರಭಾವಿಗಳಾಗಿರುವ ರಿಯಲ್ ಎಸ್ಟೇಟ್ ಉದ್ಯಮಿಗಳು ಪ್ರಕೃತಿಗೆ ಸ್ವಲ್ಪನೂ ಬೆಲೆಕೊಡದೆ ಹಣದಾಸೆಗೆ ಬಿದ್ದು ಈ ರೀತಿ ಭೂಮಿಯನ್ನ ವಿಕಾರಗೊಳಿಸುತ್ತಿದ್ದಾರೆ ಅಂತ ಸ್ಥಳೀಯರು ಆರೋಪಿಸುತ್ತಿದ್ದಾರೆ. ಈ ಪ್ರಕರಣವನ್ನ ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸುವಂತೆ ಆಗ್ರಹಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 12:53 pm, Mon, 12 June 23