ಮಡಿಕೇರಿ: ಹಸಿರ ರಾಶಿಯ ಮೇಲೆ ಮೊಸರು ಚೆಲ್ಲಿದಂತೆ ಅರಳಿನಿಂತಿರೋ ಹೂವುಗಳು. ಜೇನಿನ ಝೇಂಕಾರದೊಂದಿಗೆ ಘಮ್ಮೆನ್ನುತ್ತಿರುವ ಹೂವಿನ ಘಮಲು. ಎಲ್ಲೆಡೆ ಕಂಪು ಹರಿಸಿದ ಶ್ವೇತವರ್ಣದ ಕಾಫಿ ಹೂವುಗಳ ರಂಗು. ಪ್ರವಾಸಿಗರ ಹಾಟ್‌ಸ್ಪಾಟ್.. ಕಾಫಿಯ ತವರು.. ದಕ್ಷಿಣದ ಕಾಶ್ಮೀರ ಅಂತೆಲ್ಲಾ ಕರೆಸಿಕೊಳ್ಳುವ ಕಾಫಿ ನಾಡು ಕೂಡಗಿನಲ್ಲಿ ಈಗ ಕಾಫಿ ಹೂವಿನ ಘಮಲು ಹರಡಿದೆ.
ನವೆಂಬರ್‌ನಿಂದ ಈವರೆಗೆ ಕಾಫಿ ಹಣ್ಣುಗಳನ್ನು ಮೈದುಂಬಿಕೊಂಡು ಕಂಗೊಳಿಸುತ್ತಿದ್ದ ಕಾಫಿ ತೋಟಗಳು, ಈಗ ಶ್ವೇತ ವರ್ಣದ ಸುಂದರಿಯರನ್ನು ಬಿಗಿದಪ್ಪಿಕೊಂಡು ಕಂಪು ಬೀರುತ್ತಿವೆ. ಈಗ ಕಾಫಿ ಗಿಡಗಳು ಹೂ ಬಿಡುವ ಸಮಯವಾಗಿದ್ದು, ರೊಬೆಸ್ಟಾ ಕಾಫಿ ತೋಟಗಳಲ್ಲಿ ಹೂಗಳು ನಳನಳಿಸುತ್ತಿವೆ. ಗಿಡಗಳಲ್ಲಿ ಅರಳಿ ನಿಂತಿರೋ ಬಿಳಿ ಬಣ್ಣದ ಹೂಗಳು ಎಲ್ಲರ ಗಮನಸೆಳೆಯುತ್ತಿವೆ.
ಕಾಫಿ ಹಣ್ಣನ್ನು ಕೂಯ್ಲು ಮಾಡಿದ ನಂತರ ಫೆಬ್ರವರಿ, ಮಾರ್ಚ್ ತಿಂಗಳಲ್ಲಿ ಸುರಿಯೋ ಮಳೆ ಮತ್ತು ತುಂತುರು ನೀರಾವರಿ ವೇಳೆ ಕಾಫಿ ತೋಟಗಳ ಬಣ್ಣವೇ ಬದಲಾಗಿ ಬಿಡುತ್ತೆ. ಹಸಿರ ರಾಶಿಯ ಮೇಲೆ ಮೊಸರು ಚೆಲ್ಲಿದಂತೆ ಬಾಸವಾಗುವ ಈ ಸುಂದರ ದೃಶ್ಯವನ್ನು ನೋಡೋದೇ ಖುಷಿ. ರಸ್ತೆಗಳ ಬದಿಯಲ್ಲೆಲ್ಲಾ ಅರಳಿನಿಂತಿರೋ ಹೂಗಳು ನೋಡುಗರ ಕಣ್ಣಿಗೆ ಹಬ್ಬವನ್ನಷ್ಟೇ ಅಲ್ಲ, ಸುಮಧುರ ಸುವಾಸನೆ ಬೀರುತ್ತಾ ತಮ್ಮ ಇರುವಿಕೆಯನ್ನು ಸಾರುತ್ತಿವೆ. ಅಷ್ಟೇ ಅಲ್ಲ ರೈತರಲ್ಲಿ ಸಂತಸ ಮೂಡಿಸಿದೆ.