ದಿನಾ ಬಾಲಕಿಯರನ್ನ ಹಿಂಬಾಲಿಸಿ ಬರುತ್ತಿದ್ದ ಕಾನ್ಸ್‌ಟೇಬಲ್‌ ನನ್ನು ಸಾರ್ವಜನಿಕರು ಇಂದು ಕೊಠಡಿಯಲ್ಲಿ ಕೂಡಿಹಾಕಿದರು, ಆಮೇಲೇನಾಯ್ತು?

| Updated By: ಆಯೇಷಾ ಬಾನು

Updated on: Jul 26, 2022 | 10:58 PM

ಸಾರ್ವಜನಿಕರು ಒಂಟಿಯಂಗಡಿಯಲ್ಲಿ ಕಾನ್ಸ್‌ಟೇಬಲ್‌ ಚಂದ್ರಶೇಖರ್‌ಗೆ ದಿಗ್ಬಂಧನ ಹಾಕಿದ್ದಾರೆ. ಅಮ್ಮತ್ತಿ ಉಪಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಚಂದ್ರಶೇಖರ್‌, ಪ್ರತಿನಿತ್ಯ ಬಾಲಕಿಯರನ್ನ ಬೈಕ್‌ನಲ್ಲಿ ಹಿಂಬಾಲಿಸುತ್ತಿದ್ದನಂತೆ.

ದಿನಾ ಬಾಲಕಿಯರನ್ನ ಹಿಂಬಾಲಿಸಿ ಬರುತ್ತಿದ್ದ ಕಾನ್ಸ್‌ಟೇಬಲ್‌ ನನ್ನು ಸಾರ್ವಜನಿಕರು ಇಂದು ಕೊಠಡಿಯಲ್ಲಿ ಕೂಡಿಹಾಕಿದರು, ಆಮೇಲೇನಾಯ್ತು?
ಕಾನ್ಸ್‌ಟೇಬಲ್‌ ಚಂದ್ರಶೇಖರ್‌
Follow us on

ಕೊಡಗು: ಪೊಲೀಸ್ ಪೇದೆಯೊಬ್ಬ(Police Constable) ಶಾಲಾ‌ ಬಾಲಕಿಯರನ್ನ(Students) ಹಿಂಬಾಲಿಸಿ ಗ್ರಾಮಸ್ಥರ ಅತಿಥಿಯಾದ ಘಟನೆ ಕೊಡಗು ಜಿಲ್ಲೆಯ ವಿರಾಜಪೇಟೆ ತಾಲ್ಲೂಕಿನ ಒಂಟಿಯಂಗಡಿ ಗ್ರಾಮದಲ್ಲಿ ನಡೆದಿದೆ. ಅಮ್ಮತ್ತಿ ಉಪ ಠಾಣೆಯ ಚಂದ್ರಶೇಖರ್ ದಿಗ್ಬಂಧನಕ್ಕೆ ಒಳಗಾದ ಪೊಲೀಸ್ ಪೇದೆ. ಶಾಲಾ ಬಾಲಕಿಯನ್ನು ಹಿಂಬಾಲಿಸಿ ಕಿರುಕುಳ ನೀಡುತ್ತಿದ್ದ ಆರೋಪ ಹಿನ್ನೆಲೆ ಸಾರ್ವಜನಿಕರು ಕಾನ್ಸ್‌ಟೇಬಲ್‌ನನ್ನು ಕೊಠಡಿಯಲ್ಲಿ ಕೂಡಿಹಾಕಿದ್ದಾರೆ.

ಈತ ಕಳೆದ ಮೂರು ದಿನಗಳಿಂದ ಶಾಲಾ ಬಾಲಕಿಯರನ್ನ ಹಿಂಬಾಲಿಸುವುದು, ಕೈ ಸನ್ನೆ ಮಾಡುವುದು, ಅಸಭ್ಯವಾಗಿ ವರ್ತಿಸುತ್ತಿದ್ದನಂತೆ. ಈ ಬಗ್ಗೆ ಬಾಲಕಿಯರು ತಮ್ಮ ಪೋಷಕರ ಬಳಿ ಅಳಲು ತೋಡಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಪೋಷಕರು ಪೇದೆಯನ್ನು ಹಿಡಿಯಲು ಯೋಜನೆ ರೂಪಿಸಿದ್ದಾರೆ. ಅದರಂತೆ ಇಂದು ಸಂಜೆ ಕೂಡ ಪೊಲೀಸ್ ಪೇದೆ ಸಮವಸ್ತ್ರದಲ್ಲೇ ಬಾಲಕಿಯರು ತೆರಳುತ್ತಿದ್ದ ಆಟೋರಿಕ್ಷಾವನ್ನ ಹಿಂಬಾಲಿಸಿ ಬಂದಿದ್ದಾನೆ. ಈ ಸಂದರ್ಭ ಒಂಟಿಯಂಗಡಿ ಗ್ರಾಮಸ್ಥರು ಪೇದೆಯನ್ನು ಹಿಡಿದು ಪ್ರಶ್ನಿಸಿದಾಗ ಆವಾಜ್ ಹಾಕಿದ್ದಾನೆ. ಆದರೆ ಗ್ರಾಮಸ್ಥರು ಪೊಲೀಸ್ ಪೇದೆಯನ್ನ ಕೋಣೆಯೊಂದರಲ್ಲಿ ಕೂಡಿ ಹಾಕಿ ಹಿರಿಯ ಪೊಲಿಸ್ ಅಧಿಕಾರಿಗಳು ಸ್ಥಳಕ್ಕೆ ಆಗಮಿಸುವಂತೆ ಪಟ್ಟು ಹಿಡಿದಿದ್ದಾರೆ.

ಎಎಸ್ಐ, ಎಸ್ಐ ಆಗಮಿಸಿ ಮನವೊಲಿಕೆ ಮಾಡಲು ಪ್ರಯತ್ನಿಸಿದರೂ ಗ್ರಾಮಸ್ಥರು ಪಟ್ಟು ಸಡಿಲಿಸಲಿಲ್ಲ. ಆರೋಪಿ ಪೇದೆಯನ್ನ ಕೋಣೆಯಲ್ಲಿ ಕೂಡಿ ಹಾಕಿ ರಕ್ಷಿಸುವುದೇ ಪೊಲೀಸರಿಗೆ ದೊಡ್ಡ ಸವಾಲಾಗಿದೆ. ಕೊನೆಗೆ ವಿರಾಜಪೇಟೆ ಡಿವೈಎಸ್ಪಿ ಸ್ಥಳಕ್ಕೆ ಆಗಮಿಸಿ ಜನರ‌ ಮನವೊಲಿಕೆ ಮಾಡಿ ಪೇದೆಯನ್ನ ಸುರಕ್ಷಿತವಾಗಿ ಕರೆದೊಯ್ಯುವಲ್ಲಿ ಯಶಸ್ವಿಯಾಗಿದ್ದಾರೆ. ಪೇದೆ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ. ಪೇದೆ ಚಂದ್ರಶೇಖರ್ ಈ ಹಿಂದೆಯೂ ಮಹಿಳೆಯರೊಂದಿಗೆ ಅಸಭ್ಯವಾಗಿ ವರ್ತಿಸಿದ್ದರು ಎಂಬ ಆರೋಪ ಸಾರ್ವಜನಿಕ ವಲಯದಲ್ಲಿ ಕೇಳಿ ಬಂದಿದೆ.

Published On - 9:54 pm, Tue, 26 July 22