ಕೋಲಾರ: ನೀವು ಅಬ್ಬಬ್ಬಾ ಅಂದರೆರ ನಾಲ್ಕೈದು ಗಿಳಿಗಳನ್ನು ಒಟ್ಟಿಗೆ ನೋಡಿರುತ್ತೀರಿ. ಇದಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ನೋಡಬೇಕಾದರೆ ಮೈಸೂರು ಮೃಗಾಯಲಯದಂತಹ ಜೂಗಳಿಗೆ ಭೇಟಿಕೊಡಬೇಕು. ಇಲ್ಲಿ ಭೇಟಿ ಕೊಟ್ಟರೆ ಹತ್ತಾರು ಗಿಳಿಗಳನ್ನಷ್ಟೇ ನೋಡಬಹುದು. ಆದರೆ ಒಂದೇ ಕಡೆಯಲ್ಲಿ ಸಾವಿರಾರು ಗಿಳಿಗಳು ಒಂದೆಡೆ ಸೇರುವುದನ್ನು ನೀವು ಎಂದಾದರು ನೋಡಿದ್ದೀರಾ? ಕೋಲಾರ ಜಿಲ್ಲೆ ಮುಳಬಾಗಿಲು ಪಟ್ಟಣದ ವಿಠಲೇಶ್ವರಪಾಳ್ಯದಲ್ಲಿನ ನಿವಾಸಿಗಳು ಬಿಟ್ಟರೆ ಉಳಿದವರು ನೋಡಿರಲು ಸಾಧ್ಯವೇ ಇಲ್ಲ. ಈ ಪ್ರದೇಶದಲ್ಲಿ ಫಿಶ್ ಗೋಪಿ ಎಂಬ ಪಕ್ಷಿ ಪ್ರೇಮಿಯೊಬ್ಬರಿದ್ದಾರೆ. ಇವರು ಗಿಣಿಗಳ ಮೇಲೆ ಇಟ್ಟಿರುವ ಪ್ರೀತಿ, ಸತ್ಕರಿಸುವ ರೀತಿಗೆ ಅವುಗಳು ನಿತ್ಯ ಇಲ್ಲಿಗೆ ಬರುತ್ತವೆ.
ವಿಠಲೇಶ್ವರ ಪಾಳ್ಯದಲ್ಲಿ ನೀವು ಬೆಳಿಗ್ಗೆ 7 ಗಂಟೆಗೆ ಅಥವಾ ಸಂಜೆ 4.30 ರಿಂದ 6 ಗಂಟೆ ಹೊತ್ತಿನಲ್ಲಿ ಅದರಲ್ಲೂ ಈ ಏರಿಯಾದ ಫಿಶ್ ಗೋಪಿ ಎಂಬುವರ ಮನೆ ಬಳಿ ಬಂದರೆ ಸಾಕು ನೀವು ಏಕಕಾಲಕ್ಕೆ ಸಾವಿರಾರು ಗಿಣಿಗಳನ್ನು ನೋಡಿ ಸಂತೋಷ ಪಡಬಹುದು. ಮನೆಯ ಮೇಲೆ ನೂರಾರು ಗಿಣಿಗಳು, ತೆಂಗಿನ ಮರದ ಮೇಲೂ ನೂರಾರು ಗಿಣಿಗಳು, ವಿದ್ಯುತ್ ಕಂಬದಲ್ಲಿ ತಂತಿಯ ಮೇಲೆ ಎಲ್ಲಿ ನೋಡಿದರೂ ಅಲ್ಲಿ ಎಣಿಸಲಾರದಷ್ಟು ಗಿಣಿಗಳು ಕಣ್ಣಿಗೆ ಕಾಣಿಸಿಕೊಳ್ಳುತ್ತವೆ.
ಪಿಶ್ ಗೋಪಿ ಮನೆಬಳಿ ಗಿಣಿಗಳ ಕಲರವ ಶುರುವಾಗಿದ್ದು ಹೇಗೆ?
ಗೋಪಿ ಮನೆ ಬಳಿಗೆ ಸಾವಿರಾರು ಗಿಣಿಗಳು ಬರೋದೇಕೆ? ಎಂಬ ಪ್ರಶ್ನೆ ನಿಮ್ಮ ಮನಸ್ಸಿನಲ್ಲಿ ಮೂಡಬಹುದು. ಇದರ ಹಿಂದೆ ಒಂದು ರೋಚಕ ಕಥೆ ಇದೆ. ವಿಠಲೇಶ್ವರಪಾಳ್ಯದ ಫಿಶ್ ವ್ಯಾಪಾರ ಮಾಡುವ ಗೋಪಿ ಆ ಪ್ರದೇಶದಲ್ಲಿ ಫಿಶ್ ಗೋಪಿ ಎಂದೇ ಖ್ಯಾತಿ ಪಡೆದಿದ್ದಾರೆ. ಇವರು ಕಳೆದ ಎಂಟು ವರ್ಷಗಳ ಹಿಂದೆ ತಮ್ಮ ಮನೆಯ ಮೇಲೆ ಬರುತ್ತಿದ್ದ ಗುಬ್ಬಚ್ಚಿಗಳಿಗೆ ಅಕ್ಕಿ ಕಾಳುಗಳನ್ನು ಹಾಕುತ್ತಿದ್ದರು. ಆಗ ಗುಬ್ಬಚ್ಚಿಗಳ ಜೊತೆಗೆ ಅಲ್ಲೊಂದು ಇಲ್ಲೊಂದು ಗಿಣಿಗಳು ಬಂದು ಗೋಪಿ ಹಾಕುವ ಕಾಳುಗಳನ್ನು ತಿಂದು ಹೋಗುತ್ತಿದ್ದವು. ಆದರೆ ದಿನಗಳು ಉರುಳುತ್ತಿದ್ದಂತೆ ಗುಬ್ಬಚ್ಚಿಗಳಿಗಿಂತ ಹೆಚ್ಚಾಗಿ ಗಿಣಿಗಳ ಸಂಖ್ಯೆಯೇ ಹೆಚ್ಚಾಗಲು ಆರಂಭವಾದವು. ಒಂದರಿಂದ ಹತ್ತು, ಹತ್ತರಿಂದ ನೂರು, ನೂರರಿಂದ ಸಾವಿರಕ್ಕೆ ಹೆಚ್ಚಾಯ್ತು.
ಅದರಂತೆ ಆಹಾರಕ್ಕಾಗಿ ಗೋಪಿ ಮನೆ ಬಳಿ ಬೆಳಗ್ಗೆ ಮತ್ತು ಸಂಜೆ ಹೊತ್ತಿನಲ್ಲಿ ಸಾವಿರಾರು ಗಿಳಿಗಳು ಜಮಾಯಿಸುತ್ತವೆ. ಗಿಳಿಗಳ ಸಂಖ್ಯೆ ಹೆಚ್ಚಾಯ್ತು ಎಂದು ಗೋಪಿ ಆಹಾರ ಹಾಕುವುದನ್ನು ನಿಲ್ಲಿಸಿಲ್ಲ. ಪ್ರತಿನಿತ್ಯ ಗೋಪಿಯವರ ಮನೆಯ ಬಳಿ ಕನಿಷ್ಠ ಅಂದರೆ ನಾಲ್ಕರಿಂದ ಐದು ಸಾವಿರ ಗಿಣಿಗಳು ಬೆಳಿಗ್ಗೆ ಹಾಗೂ ಸಂಜೆ ಹೊತ್ತು ಬಂದು ಆಹಾರ ಧಾನ್ಯಗಳನ್ನು ತಿಂದು ಹೊಟ್ಟೆ ತುಂಬಿಸಿ ಸ್ವಚ್ಚಂದವಾಗಿ ಬಾನಿನಲ್ಲಿ ಹಾರಿ ಹೋಗುತ್ತವೆ.
ಪ್ರತಿನಿತ್ಯ ಗಿಣಿಗಳಿಗೆ 50 ಕೆಜಿ ಆಹಾರಧಾನ್ಯ!
ಪ್ರತಿ ದಿನವೊಂದಕ್ಕೆ ಗೋಪಿ ಅವರು ಗಿಳಿಗಳಿಗೆ ಆಹಾರ ಹಾಕಬೇಕಾದರೆ ಸುಮಾರು 40 ರಿಂದ 50 ಕೆಜಿ ಅಕ್ಕಿ ಸೇರಿದಂತೆ ಕಾಳು ಬೇಕಾಗುತ್ತದೆ. ಆದರೆ ಅಷ್ಟೊಂದು ದೊಡ್ಡ ಮಟ್ಟದಲ್ಲಿ ಧಾನ್ಯವನ್ನು ಹೊಂದಿಸುವುದು ಕಷ್ಟದ ಕೆಲಸವೇ ಆದರೂ ಗೋಪಿ ತನ್ನ ಸಂಪಾದನೆಯ ಒಂದು ಭಾಗವನ್ನೇ ಈ ಗಿಣಿಗಳಿಗಾಗಿ ಮೀಸಲಿಟ್ಟಿದ್ದಾರೆ. ಸದ್ಯ ತಮ್ಮ ಸತ್ಕಾರ್ಯಕ್ಕೆ ಗೋಪಿ ಅವರು ಯಾರ ಸಹಾಯವೂ ಪಡೆದಿಲ್ಲ. ಆದರೀಗ ಅವರು ದಾನಿಗಳ ಸಹಾಯವನ್ನು ಕೇಳುತ್ತಿದ್ದಾರೆ. ನನಗೆ ಯಾರಾದರೂ ಸ್ವಲ್ಪ ನೆರವು ನೀಡಿದರೆ ನನಗೆ ಸಹಾಯವಾಗುತ್ತದೆ ಎಂದು ಗೋಪಿ ಹೇಳುತ್ತಾರೆ. ಹಾಗೆಂದು ಯಾರೂ ಸಹಾಯ ಮಾಡಲಿಲ್ಲದಿದ್ದರೂ ನಾನು ನನ್ನ ಸತ್ಕಾರ್ಯವನ್ನು ನಿಲ್ಲಿಸುವುದಿಲ್ಲ ಎಂದೂ ಹೇಳುತ್ತಾರೆ.
ಸಮಯಕ್ಕೆ ಸರಿಯಾಗಿ ಬರುವ ಗಿಣಿಗಳ ಕಲರವ ನೋಡೋದೆ ಚಂದ
ಗೋಪಿಯವರ ಮನೆಯ ಬಳಿ ಬೆಳಿಗ್ಗೆ ಮತ್ತು ಸಂಜೆಯಾಯ್ತು ಅಂದರೆ ಸಾಕು ತಂಡೋಪ ತಂಡವಾಗಿ ಗುಂಪು ಕಟ್ಟಿಕೊಂಡು ಗಿಣಿಗಳ ದಂಡು ಹಾಜರಾಗುತ್ತವೆ. ಕಿಚ ಕಿಚ ಶಬ್ದ ಮಾಡುತ್ತಾ ಮರ ಗಿಡಗಳ ಮೇಲೆ ಬಂದು ಕೂರುತ್ತವೆ. ಬೆಳಿಗ್ಗೆ 7 ರಿಂದ 9 ಗಂಟೆವರೆಗೆ ಸಂಜೆ 4.30 ರಿಂದ 6 ಗಂಟೆವರೆಗೆ ಗಿಣಿಗಳು ಪ್ರತ್ಯಕ್ಷವಾಗುತ್ತವೆ. ಹೀಗೆ ಒಂದೇ ಸ್ಥಳದಲ್ಲಿ ಅದು ಏಕಕಾಲಕ್ಕೆ ಇಷ್ಟೊಂದು ಗಿಣಿಗಳನ್ನು ನೋಡುವುದು ನಿಜಕ್ಕೂ ಹಬ್ಬವಾಗಿದೆ. ಹೀಗಾಗಿ ಏರಿಯಾದ ಮಕ್ಕಳು, ಹಿರಿಯರು, ಎಲ್ಲರೂ ಗೋಪಿಯವರ ಮನೆಯ ಬಳಿ ಬಂದು ಗಿಣಿಗಳನ್ನು ನೋಡಿ ಖುಷಿ ಪಡುತ್ತಾರೆ ಎಂದು ಸ್ಥಳೀಯರು ಹೇಳುತ್ತಾರೆ.
ಒಟ್ಟಾರೆ ಮೊಬೈಲ್ ಟವರ್ಗಳು, ರೇಡಿಯೇಶನ್ ಹೀಗೆ ಹಲವು ಕಾರಣಗಳಿಂದ ಪಕ್ಷಿ ಸಂಕುಲವೇ ನಶಿಸಿಹೋಗುತ್ತಿದೆ ಎಂದು ಹೇಳಲಾಗುತ್ತಿದೆ. ಹೀಗಿರುವಾಗ ಸಾವಿರಾರು ಗಿಣಿಗಳಿಗೆ ನಿತ್ಯ ಆಹಾರ ಧಾನ್ಯ ಹಾಕಿ ಒಂದು ಪಕ್ಷಿ ಸಂಕುಲವನ್ನು ಉಳಿಸುವ ನಿಟ್ಟಿನಲ್ಲಿ ಪಿಶ್ ಗೋಪಿಯವರ ಕಾರ್ಯ ನಿಜಕ್ಕೂ ಶ್ಲಾಘನೀಯ. ಜೊತೆಗೆ ಗೋಪಿಯವರ ಕಾರ್ಯಕ್ಕೆ ಆಸಕ್ತರು ಕೈಜೋಡಿಸಿದರೆ ಇನ್ನೂ ಅನುಕೂಲವಾಗುತ್ತದೆ. ಗೋಪಿಯವರಿಗೆ ಜೊತೆಗೆ ಕೈಜೋಡಿಸಲು ಬಯುಸುವವರು ಗೋಪಿ- 7022461758 ಸಂಪರ್ಕಿಸಬಹುದು.
ವರದಿ : ರಾಜೇಂದ್ರ ಸಿಂಹ, ಟಿವಿ9 ಕನ್ನಡ ಕೋಲಾರ
ಮತ್ತಷ್ಟು ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:55 pm, Sun, 9 October 22