ಕೋಲಾರ: ಕುಡಿದ ಅಮಲಿನಲ್ಲಿ ಪ್ರಾಣ ಸ್ನೇಹಿತನನ್ನೇ ಕೊಂದಿರುವ ಘಟನೆಯೊಂದು ಕೋಲಾರದ ನರಸಾಪುರ ಹೋಬಳಿಯ ಕುರ್ಕಿ ಗ್ರಾಮದಲ್ಲಿ ನಡೆದಿದೆ. ಮೃತ ದುರ್ದೈವಿ ಮುನಿಯಪ್ಪ ಎಂದು ಗುರುತಿಸಲಾಗಿದೆ. ಕೂಲಿ ಕೆಲಸದಿಂದ ಕುಡಿಯೋವರೆಗೂ ಜೊತೆಗೆ ಇರುತ್ತಿದ್ದ ಮುನಿಯಪ್ಪ ಹಾಗೂ ಅವನ ಗೆಳೆಯ ಕೃಷ್ಣಪ್ಪ ಬಹಳ ಒಳ್ಳೇ ದೋಸ್ತಿಗಳು. ಕುಡಿದ ಮತ್ತಿನಲ್ಲಿ ಒಮ್ಮೊಮ್ಮೆ ಕಿತ್ತಾಡಿದ್ರೂ ಮತ್ತೆ ಬಹಳ ಬೇಗ ಒಂದಾಗಿಬಿಡ್ತಿದ್ರು. ಕುಡುಕರ ಗಮ್ಮತ್ತೇ ಹಾಗೆ ಏನೋ.
ಆದರೆ ಮಂಗಳವಾರದಂದು ಕುಡಿದ ಮತ್ತಿನಲ್ಲಿ ಶುರುವಾದ ಜಗಳ ಅದೇಕೋ ತಣ್ಣಗಾಗುವ ಲಕ್ಷಣ ತೋರದೆ ಕೊನೆಗೆ ಮುನಿಯಪ್ಪನ ಕೊಲೆಯಲ್ಲಿ ಅಂತ್ಯವಾಯ್ತು. ಅಷ್ಟಕ್ಕೂ ಜಗಳ ಶುರುವಾಗಿದ್ದು ಕೂಲಿ ಹಂಚಿಕೊಳ್ಳುವ ವಿಚಾರಕ್ಕೆ. ಅಂದು ಎಂದಿನಂತೆ ದಿನಗೂಲಿ ಮುಗಿಸಿಕೊಂಡ ನಂತರ ಪಕ್ಕದ ಮದ್ಯದಂಗಡಿಯಲ್ಲಿ ಕಂಠಪೂರ್ತಿ ಕುಡಿದಿದ್ದರು. ನಂತ್ರ ತಮ್ಮ ಫೇವರೇಟ್ ಅಡ್ಡ ಆಗಿದ್ದ ಹತ್ತಿರದ ದೇವಾಲಯಕ್ಕೆ ಹೋಗಿ ಉಳಿದ ಕೂಲಿ ಹಣವನ್ನ ಹಂಚಿಕೊಳ್ಳೋಕೆ ಮುಂದಾದ್ರು.
ಹಂಚಿಕೆ ವಿಚಾರವಾಗಿ ಇಬ್ಬರ ನಡುವೆ ಜಗಳ ಶುರುವಾಯ್ತು. ಸಿಟ್ಟಿನಲ್ಲಿ ಕೃಷ್ಣಪ್ಪ ಅಲ್ಲೇ ಇದ್ದ ದೊಣ್ಣೆಯೊಂದನ್ನ ತೆಗೊಂಡು ಮುನಿಯಪ್ಪನ ತಲೆಗೆ ಬಲವಾಗಿ ಹೊಡೆದಿದ್ದಾನೆ. ಇದರಿಂದ ಮುನಿಯಪ್ಪನಿಗೆ ತೀವ್ರ ಗಾಯವಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಸ್ನೇಹಿತನ ಮೃತ ದೇಹ ಕಂಡ ಕೃಷ್ಣಪ್ಪ ಗಾಬರಿಯಾಗಿ ಅಲ್ಲಿಂದ ಕಾಲ್ಕಿತ್ತ. ಇತ್ತ ಇವರ ಜಗಳ ದಿನಾ ಇದ್ದಿದ್ದೇ ಅಂತಾ ಸ್ಥಳೀಯರು ಸಹ ಅಲ್ಲಿ ಸುಳಿಯಲಿಲ್ಲ. ಮರುದಿನ ಬೆಳಗ್ಗೆ ಬಂದಾಗ್ಲೇ ಅವರಿಗೆ ವಿಷಯ ತಿಳಿದಿದ್ದು. ಕೂಡಲೇ ಪೊಲೀಸರಿಗೆ ಕರೆಮಾಡಿದ ಹಳ್ಳಿಯವರು ಮುನಿಯಪ್ಪನ ಮನೆಯವರಿಗೂ ಸಹ ವಿಷಯ ತಿಳಿಸಿದರು.
ಇನ್ನು ವಿಷಯ ತಿಳಿದು ಸ್ಥಳಕ್ಕೆ ಬಂದ ವೇಮಗಲ್ ಪೊಲೀಸರು ಸ್ಥಳ ಪರಿಶೀಲನೆ ನಡೆಸಿ ಕೊಲೆ ಮಾಡಿ ತಲೆ ಮರೆಸಿಕೊಂಡಿದ್ದ ಕೃಷ್ಣಪ್ಪನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪ್ರಾಥಮಿಕ ತನಿಖೆಯಲ್ಲಿ ಇಬ್ಬರು ಎಣ್ಣೆಗೋ ಅಥವಾ ಬೀಡಿಗೋ ಕಿತ್ತಾಡಿಕೊಂಡು ಆ ಭರದಲ್ಲಿ ಕೊಲೆಯಾಗಿದೆ ಎಂದು ತಿಳಿದುಬಂದಿದೆ. ಅದೇನೇ ಇರಲಿ. ಈ ಪ್ರಸಂಗ ನೋಡಿದರೆ ಖಂಡಿತ ನೆನಪಾಗೋದು ಒಂದೇ ಮಾತು; ಕುಡಿಯುವ ಮತ್ತೇ ಗಮ್ಮತ್ತು. ಅಳತೆ ಮೀರಿದರೇ ಆಪತ್ತು.
Published On - 12:28 pm, Wed, 10 June 20