ಬೈಕ್ ಸವಾರನ ಮೇಲಿನ ದರ್ಪ ಪ್ರಕರಣ: ಮಾಲೂರು JMFC ಜಡ್ಜ್ ಗಾಯತ್ರಿ ಬೀದರ್‌ಗೆ ವರ್ಗಾವಣೆ

ಕೋಲಾರದ ಮಾಲೂರು ಜೆಎಂಎಫ್‌ಸಿ ನ್ಯಾಯಾಧೀಶೆ ಗಾಯತ್ರಿ ಅವರನ್ನು ಬೀದರ್‌ನ ಹುಮ್ನಾಬಾದ್‌ಗೆ ವರ್ಗಾಯಿಸಲಾಗಿದೆ. ಬೈಕ್ ಸವಾರನೊಂದಿಗೆ ದರ್ಪ ತೋರಿದ್ದಕ್ಕೆ ಹೈಕೋರ್ಟ್ ತೀವ್ರ ತರಾಟೆಗೆ ತೆಗೆದುಕೊಂಡಿತ್ತು. ಈ ಘಟನೆ ವೈರಲ್ ಆಗಿದ್ದು, ನ್ಯಾಯಾಧೀಶೆ ವಿರುದ್ಧ ಕ್ರಮಕ್ಕೆ ಹೈಕೋರ್ಟ್ ಸೂಚಿಸಿತ್ತು. ಇದರ ಬೆನ್ನಲ್ಲೇ ಇದೀಗ ವರ್ಗಾವಣೆ ಆದೇಶ ಹೊರಬಿದ್ದಿದ್ದು, ನ್ಯಾಯಾಂಗದ ವರ್ಚಸ್ಸಿಗೆ ಧಕ್ಕೆ ತಂದ ಪ್ರಕರಣಕ್ಕೆ ತೆರೆಬಿದ್ದಿದೆ.

ಬೈಕ್ ಸವಾರನ ಮೇಲಿನ ದರ್ಪ ಪ್ರಕರಣ: ಮಾಲೂರು JMFC ಜಡ್ಜ್ ಗಾಯತ್ರಿ ಬೀದರ್‌ಗೆ ವರ್ಗಾವಣೆ
ನ್ಯಾಯಾಧೀಶೆ ಗಾಯತ್ರಿ
Edited By:

Updated on: Aug 06, 2026 | 6:02 AM

ಬೆಂಗಳೂರು ಆ.6: ಬೈಕ್ ಸವಾರನ ಮೇಲೆ ದರ್ಪ ತೋರಿ, ಹೈಕೋರ್ಟ್‌ನಿಂದ ತರಾಟೆಗೆ ಒಳಗಾಗಿದ್ದ ಕೋಲಾರ ಜಿಲ್ಲೆಯ ಮಾಲೂರು ಜೆಎಂಎಫ್‌ಸಿ (JMFC) ನ್ಯಾಯಾಧೀಶೆ ಗಾಯತ್ರಿ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಬೀದರ್ ಜಿಲ್ಲೆಯ ಹುಮ್ನಾಬಾದ್ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ವರ್ಗಾವಣೆ ಮಾಡಲಾಗಿದೆ. ಈ ಕುರಿತು ಹೈಕೋರ್ಟ್ ರಿಜಿಸ್ಟ್ರಾರ್ ಚಂದ್ರಶೇಖರ ರೆಡ್ಡಿ ಅವರು ಅಧಿಕೃತ ಆದೇಶ ಹೊರಡಿಸಿದ್ದಾರೆ.

ಬೈಕ್ ಸವಾರ ವಿನಯ್ ಎಂಬಾತ ನ್ಯಾಯಾಧೀಶೆ ಗಾಯತ್ರಿ ಅವರ ಇನೋವಾ ಕಾರನ್ನು ಓವರ್‌ಟೇಕ್ ಮಾಡಿದ್ದಾನೆ ಎಂಬ ಕಾರಣಕ್ಕೆ ಆಕ್ರೋಶಗೊಂಡ ನ್ಯಾಯಾಧೀಶೆ ಬೈಕ್ ಸವಾರನ ಫಾಲೋ ಮಾಡಿಕೊಂಡು ಹೊಗಿ ಸಾರ್ವಜನಿಕವಾಗಿ ರಂಪಾಟ ನಡೆಸಿದ್ದರು. ಈ ಜಗಳದ ದೃಶ್ಯಾವಳಿಗಳು ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದ್ದವು. ಘಟನೆಯ ಬಳಿಕ ಬೈಕ್ ಸವಾರ ವಿನಯ್ ವಿರುದ್ಧ ಮಾಲೂರು ಠಾಣೆಯಲ್ಲಿ ಎಫ್‌ಐಆರ್ (FIR) ದಾಖಲು ಮಾಡಲಾಗಿತ್ತು.

ತಮ್ಮ ವಿರುದ್ಧದ ನಕಲಿ ಪ್ರಕರಣ ರದ್ದುಗೊಳಿಸುವಂತೆ ಕೋರಿ ಬೈಕ್ ಸವಾರ ವಿನಯ್ ಹೈಕೋರ್ಟ್ ಮೆಟ್ಟಿಲೇರಿದ್ದರು. ಹೈಕೋರ್ಟ್ ನ್ಯಾಯಮೂರ್ತಿ ನಾಗಪ್ರಸನ್ನ ಅವರ ಪೀಠದಲ್ಲಿ ಈ ಅರ್ಜಿಯ ವಿಚಾರಣೆ ನಡೆದಿತ್ತು. ಪ್ರಕರಣವನ್ನು ತೀವ್ರವಾಗಿ ಪರಿಗಣಿಸಿದ ಪೀಠವು, ಎಫ್‌ಐಆರ್ ದಾಖಲಿಸಿದ್ದಕ್ಕೆ ತರಾಟೆಗೆ ತೆಗೆದುಕೊಂಡಿತ್ತಲ್ಲದೆ, ನ್ಯಾಯಾಧೀಶೆಯ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಹೈಕೋರ್ಟ್ ರಿಜಿಸ್ಟ್ರಾರ್‌ಗೆ ಸೂಚನೆ ನೀಡಿದ್ದರು.

ಇದನ್ನೂ ಓದಿ: 120 ಕೋಟಿ ಮಠದ ಜಮೀನು ಕಬಳಿಕೆ ಕೇಸ್: ಕೊನೆಗೂ ಪೊಲೀಸರ ಮುಂದೆ ಹಾಜರಾದ ಕಿಂಗ್‌ಪಿನ್ ನರೇಶ್ ಗೌಡ

ಹೈಕೋರ್ಟ್ ನೀಡಿದ ನಿರ್ದೇಶನದ ಬೆನ್ನಲ್ಲೇ ಇದೀಗ ನ್ಯಾಯಾಧೀಶೆ ಗಾಯತ್ರಿ ಅವರನ್ನು ಹುಮ್ನಾಬಾದ್‌ಗೆ ವರ್ಗಾಯಿಸಿ ಆದೇಶ ಹೊರಡಿಸಲಾಗಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ವಿಕಾಸ್​ ಬಿಎಂ

ವಿಕಾಸ್​ ಬಿಎಂ ಅವರು ಹುಟ್ಟಿದ್ದು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯಲ್ಲಿ. ಬೆಳೆದಿದ್ದು ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿಯಲ್ಲಿ. ಮೈಸೂರು ಯೂನಿವರ್ಸಿಟಿ ಯಲ್ಲಿ ಶಿಕ್ಷಣ ಮುಗಿಸಿ, 2014 ರಿಂದ ಎಲೆಕ್ಟ್ರಾನಿಕ್ ಮಾದ್ಯಮದಲ್ಲಿ ವೃತ್ತಿ ಜೀವನ ಆರಂಭಿಸಿದ್ದಾರೆ. ಸದ್ಯ ಬೆಂಗಳೂರು ಕ್ರೈಂ ವರದಿಗಾರನಾಗಿ 11 ವರ್ಷ ಸೇವೆ ಸಲ್ಲಿಸಿದ್ದಾರೆ. ಕ್ರೈಂ ರಿಪೋರ್ಟಿಂಗ್ ಹಾಗು ಇನ್ವೆಷ್ಟಿಗೇಟಿವ್ ವರದಿಗಾರರಾಗಿ ಹಾಗು ಸ್ಟಿಂಗ್ ಆಪರೇಷನ್​ಗಳನ್ನ ಮಾಡಿದ್ದಾರೆ. ರಾಮೇಶ್ವರಂ ಕೆಫೆ ಬಾಂಬ್ ಬ್ಲಾಸ್ಟ್ ಪ್ರಕರಣದ ಸುದ್ದಿ ಮೊದಲು ಬ್ರೇಕ್ ಮಾಡಿದ್ದಲ್ಲದೆ, ಶಂಕಿತರ ಸಿಸಿ ಕ್ಯಾಮರಾ ವಿಡಿಯೋಗಳನ್ನ ಪ್ರಸರಣ ಮಾಡಿ ಸಂಸ್ಥೆಯಿಂದ ಪ್ರಶಂಸೆಗೆ ಪಾತ್ರನಾಗಿದ್ದಾರೆ. ಅಲ್ಲದೇ ಬೆಂಗಳೂರಲ್ಲಿ ಟೈಡಾಲ್ ಡ್ರಗ್ ಸೇವನೆಯ ಸ್ಟಿಂಗ್ ಆಪರೇಷನ್ ಮಾಡಿ, ಮೆಡಿಕಲ್ ಗಳಲ್ಲಿ ಟೈಡಾಲ್ ಮಾತ್ರೆಯ ಮಾರಟ ನಿಯಂತ್ರಣಕ್ಕೆ ಬರುವಂತೆ ಮಾಡಿದ್ದಾರೆ. ನೊಂದವರ ಪರವಾಗಿ ನಿಂತು ವಸ್ತುನಿಷ್ಠವಾಗಿ ಸುದ್ದಿಗಳನ್ನ ನೀಡಿ ನ್ಯಾಯ ಕೊಡಿಸುವುದು ಇವರ ಮೊದಲ ಉದ್ದೇಶ. ಸದ್ಯ ಟಿವಿ9 ಸಂಸ್ಥೆಯಲ್ಲಿ ಬೆಂಗಳೂರು ಕ್ರೈಂ ವರದಿಗಾರರಾಗಿ ಕೆಲಸ ಮಾಡುತ್ತಿದ್ದಾರೆ. ರೋಡ್ ಟ್ರಿಪ್, ಕ್ರಿಕೆಟ್‌, ವಾಲಿಬಾಲ್ ಆಡುವುದು, ಕ್ರೈಂ ಇನ್ವೆಷ್ಟಿಗೇಷನ್ ಪುಸ್ತಕ ಓದುವುದು ಮತ್ತು ಕ್ರೈಂ ತ್ರಿಲ್ಲರ್ ಸಿನಿಮಾಗಳನ್ನ ನೋಡುವುದು ಇವರ ಹವ್ಯಾಸಗಳು.

Read More
Loading...
Unable to load recommendations.
Follow Us