ಮನೆಯ ಬಳಿ ಬಂದ ನಾಗರಹಾವಿನೊಂದಿಗೆ ಸೆಣೆಸಾಡಿ ತನ್ನ ಯಜಮಾನನ ಪ್ರಾಣಕ್ಕೆ ಕಂಟಕ ತಂದೊಡ್ಡಿದ್ದ ನಾಗರಹಾವಿನೊಂದಿಗೆ ದಿಟ್ಟತನದಿಂದ ಹೋರಾಡಿದ ಶ್ವಾನವೊಂದು ಹಾವನ್ನೂ ಕೊಂದು ಕೊನೆಗೆ ತನ್ನ ಪ್ರಾಣವನ್ನೂ ಸಮರ್ಪಿಸಿ ಮತ್ತೊಮ್ಮೆ ನಿಯತ್ತಿಗೆ ತಾನೇ ಸಾರ್ಮಭೌಮ ಅನ್ನೋದನ್ನು ಶ್ವಾನವೊಂದು (Pug Dog) ನಿರೂಪಿಸಿದೆ. ನಾಗರಹಾವಿನಿಂದ ಮಾಲೀಕನ ಪ್ರಾಣ ಉಳಿಸಿ ತನ್ನ ಪ್ರಾಣ ಕೊಟ್ಟು (Snake Bite), ತ್ಯಾಗದ ಪುಟ ಸೇರಿದ ಶ್ವಾನದ ವೀರಗಾತೆಯಿದು..! ಇಂಥಾದೊಂದು ಅಪರೂಪದ ಹಾಗೂ ಹೃದಯ ವಿದ್ರಾವಕ ಘಟನೆ ನಡೆದಿರೋದು ಕೋಲಾರ ಜಿಲ್ಲೆ ಬಂಗಾರಪೇಟೆ (Bangarpet) ತಾಲ್ಲೂಕು ಬೀರಾಂಡಹಳ್ಳಿ ಗ್ರಾಮದಲ್ಲಿ. ಬೀರಾಂಡಹಳ್ಳಿ ಗ್ರಾಮದ ಕೆಎಸ್ಆರ್ಟಿಸಿ ನೌಕರ ವೆಂಕಟೇಶ್ ಅವರ ಮನೆಯಲ್ಲಿ ಇಂಥಾದೊಂದು ಘಟನೆ ನಡೆದಿದೆ.
ವೆಂಕಟೇಶ್ ಅವರ ಮಗ ವಿಲಾಸ್ ಅವರು ತೋಟದ ಮನೆಯಲ್ಲಿದ್ದರು. ಆ ವೇಳೆ ಮಧ್ಯಾಹ್ನದ ಸುಮಾರಿಗೆ ವಿಲಾಸ್ ತನ್ನ ಮೊಬೈಲ್ ಹಿಡಿದುಕೊಂಡು ಮನೆಯ ಮುಂದಿನ ಹುಲ್ಲು ಹಾಸಿನ ಮೇಲೆ ಓಡಾಡುತ್ತಾ ಮಾತನಾಡುತ್ತಿದ್ದರು. ಆಗ ಅಮೆರಿಕನ್ ಬುಲ್ ತಳಿಯ ಮೂರು ವರ್ಷದ ಶ್ವಾನ (ಮುದ್ದು ಶ್ವಾನದ ಹೆಸರು ಕ್ಯಾಸಿ) ವಿಲಾಸ್ ಜೊತೆ ಸುತ್ತಾ ಓಡಾಡುತ್ತಿತ್ತು. ಈ ವೇಳೆ ಹುಲ್ಲು ಹಾಸಿನ ಮಧ್ಯದಲ್ಲಿ ಮಲಗಿದ್ದ ನಾಗರಹಾವೊಂದು ಯಜಮಾನ ವಿಲಾಸ್ನನ್ನು ಕಂಡು ಬುಸ್ ಎಂದು ಎಡೆ ಎತ್ತಿದೆ. ಆ ತಕ್ಷಣ ಹಾವಿನ ಮೇಲೆ ಹಾರಿ ಅದರೊಂದಿಗೆ ಸೆಣೆಸಾಡಲು ಶುರುಮಾಡಿಕೊಂಡಿತ್ತು ಮುದ್ದು ಕ್ಯಾಸಿ.
ನಾಗರಹಾವಿನೊಂದಿಗೆ ಪ್ರಾಣದ ಹಂಗು ತೊರೆದು ಹೋರಾಡಿದ ಕ್ಯಾಸಿ..!
ಹಾವು ಹಾಗೂ ಶ್ವಾನ ಕ್ಯಾಸಿಯ ನಡುವೆ ಜೋರಾಗಿಯೇ ಕಾಳಗ ನಡೆದಿದೆ. ಹಾವು ಶ್ವಾನದ ಕುತ್ತಿಗೆಗೆ ಸುತ್ತಿಕೊಂಡು ಉರಿಸುಗಟ್ಟಿಸಿದರೆ, ಶ್ವಾನ ಹಾವಿನ ತಲೆ ಭಾಗವನ್ನು ಕಚ್ಚಿ ಕಚ್ಚಿ ಗಾಯಗೊಳಿಸಿದೆ. ಸುಮಾರು ಹೊತ್ತು ಹಾವು ಮತ್ತು ಶ್ವಾನದ ನಡುವೆ ಕಾಳಗ ನಡೆದಿದೆ. ಈ ವೇಳೆ ನಾಗರ ಹಾವು ಎರಡು ಮೂರು ಬಾರಿ ಶ್ವಾನಕ್ಕೆ ಕಚ್ಚಿದೆ. ಆದರೂ ಇದ್ಯಾವುದನ್ನೂ ಲೆಕ್ಕಿಸದ ಶ್ವಾನ ಕ್ಯಾಸಿ ಹಾವಿನ ಕುತ್ತಿಗೆಯನ್ನು ತನ್ನ ಚೂಪಾದ ಹಲ್ಲಿನಿಂದ ಸೀಳುವ ಮೂಲಕ ನಾಗರಹಾವನ್ನು ಸಾಯಿಸುವಲ್ಲಿ ಯಶಸ್ವಿಯಾಗಿತ್ತು!
ತನ್ನ ಮನೆಯ ಮಾಲೀಕನನ್ನು ವಿಷದ ಹಾವಿನಿಂದ ರಕ್ಷಣೆ ಮಾಡಲು ಹೋದ ಶ್ವಾನ ಕ್ಯಾಸಿ ಕೊನೆಗೆ ಹಾವಿನ ಬಿಗಿಯಾದ ಹಿಡಿತದಲ್ಲಿ ಸಿಲುಕಿಕೊಂಡು ಸಾವು ಬದುಕಿನ ನಡುವೆ ಹೋರಾಟ ಮಾಡುತ್ತಿತ್ತು. ಅಲ್ಲೇ ಇದ್ದ ಯಜಮಾನ ವಿಲಾಸ್ ಹಾವಿನ ಬಿಗಿ ಹಿಡಿತದಿಂದ ಬಿಡಿಸಿ ತಕ್ಷಣ ಅದನ್ನು ಆಸ್ಪತ್ರೆಗೆ ಕರೆದೊಯ್ಯುವ ಪ್ರಯತ್ನ ಮಾಡಿದರಾದರೂ ಶ್ವಾನ ಹಾವಿನ ವಿಷದಿಂದ ಮೃತಪಟ್ಟಿತ್ತು. ಯಜಮಾನನ್ನು ರಕ್ಷಣೆ ಮಾಡಲು ಹೋಗಿ ತನ್ನ ಪ್ರಾಣವನ್ನೇ ಕೊಡುವ ಮೂಲಕ ಶ್ವಾನ ಎಂದೆಂದಿಗೂ ನಾವು ನಿಯತ್ತಿಗಾಗಿ ಬದುಕಿರುವವರು ಎನ್ನುವುದನ್ನು ಸಾಬೀತು ಪಡಿಸಿ, ಈ ಭೂಮಿಗೆ ಬಂದಿದ್ದ ಕೆಲಸ ಆಯ್ತು ಅಂತಾ ಶಾಶ್ವತವಾಗಿ ಯಜಮಾನನ ಮಡಿಲಲ್ಲಿ ಪವಡಿಸಿಬಿಟ್ಟಿತು.
ಮನೆಯ ಪಕ್ಕದಲ್ಲೇ ಅಂತ್ಯ ಸಂಸ್ಕಾರ ಮಾಡಿ ಕಣ್ಣೀರಿಟ್ಟ ಮಾಲೀಕರು..!
ಸರ್ಕಾರಿ ಬಸ್ ನೌಕರ ವೆಂಕಟೇಶ್ ಅವರ ಮನೆಯ ಸದಸ್ಯನಂತೆ ಮೂರು ವರ್ಷಗಳಿಂದ ಮನೆಯಲ್ಲಿ ಮುದ್ದು ಮಗುವಿನಂತೆ ಮನೆಯವರ ಜೊತೆಗೆ ಆಟವಾಡಿಕೊಂಡು ಮನೆಯ ಮೂಲೆಯಲ್ಲೆಲ್ಲಾ ಓಡಾಡಿಕೊಂಡಿದ್ದ ಕ್ಯಾಸಿಯ ಸಾವು ಇಡೀ ಕುಟುಂಬಸ್ಥರನ್ನು ಕಣ್ಣೀರಿನ ಕಡಲಲ್ಲಿ ಮುಳುಗಿಸಿತ್ತು. ಕೊನೆಗೆ ಪ್ರಿತಿಯ ಶ್ವಾನ ಕ್ಯಾಸಿಯನ್ನು ತಮ್ಮ ತೋಟದ ಮನೆಯ ಪಕ್ಕದಲ್ಲೇ ಅಂತ್ಯ ಸಂಸ್ಕಾರ ಮಾಡಿದ ಕುಟುಂಬಸ್ಥರು ಕ್ಯಾಸಿ ಅಗಲಿಕೆಯ ನೋವಿನಲ್ಲಿದ್ದಾರೆ.
ಒಟ್ಟಾರೆ ನಿಯತ್ತಿಗೆ ಇನ್ನೊಂದು ಹೆಸರೇ ನಾಯಿ ಎಂಬ ಮಾತನ್ನು ಎಲ್ಲರೂ ಆಗಾಗ ಹೇಳುತ್ತಲೇ ಇರುತ್ತಾರೆ. ಆದರೆ ಆ ಮಾತು ನಿಜ ಎಂದು ಆಗೊಮ್ಮೆ ಈಗೊಮ್ಮೆ ಇಂಥ ಘಟನೆಗಳ ಮೂಲಕ ನಾಯಿಗಳು ಸಾಬೀತುಪಡಿಸುತ್ತವೆ. ಕಾಲ ಬದಲಾಗಿರಬಹುದು, ನಮ್ಮ ತಳಿ, ಜಾತಿ, ಬಣ್ಣ ಬದಲಾಗಿರಬಹುದು ಆದರೆ ನಮ್ಮ ಬುದ್ಧಿ, ನಮ್ಮ ನಿಷ್ಠೆ, ನಮ್ಮ ನಿಯತ್ತು ಎಂದಿಗೂ ಬದಲಾಗಿಲ್ಲ. ನಾವು ಯಾವ ದೇಶದಲ್ಲಿದ್ದರೂ ನಿಯತ್ತು ಎಂಬುದು ನಮ್ಮ ರಕ್ತದ ಕಣಕಣದಲ್ಲಿಯೂ ಇದೆ ಎಂದು ತೋರಿಸಿಕೊಟ್ಟಿದೆ.
-ರಾಜೇಂದ್ರ ಸಿಂಹ