ಕೋಲಾರ: ಮಂಡ್ಯದಲ್ಲಿ ಕಂಡಕ್ಟರ್ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಮಾಸುವ ಮುನ್ನವೇ ಇದೀಗ ಕೋಲಾರ(Kolar) ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಉಪ್ಪುಕುಂಟೆ ಗ್ರಾಮದಲ್ಲಿ ಕೆಎಸ್ಆರ್ಟಿಸಿ(KSRTC) ಬಸ್ ಕಂಡಕ್ಟರ್ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಉಪ್ಪುಕುಂಟೆ ಗ್ರಾಮದ ಸೋಮಾಚಾರಿ (50) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಮೃತ ಕಂಡಕ್ಟರ್ ಇತ್ತೀಚೆಗೆ ಪೆರಾಲಿಸಿಸ್ ಕಾಯಿಲೆಗೆ ತುತ್ತಾಗಿದ್ದರು. ಈ ಮಧ್ಯೆ ಕೆಲಸದ ವೇಳೆ ಶ್ರೀನಿವಾಸಪುರ ಡಿಪೋ ಮ್ಯಾನೇಜರ್ ವೆಂಕಟೇಶ್ ಎಂಬುವವರು ಉದ್ದೇಶಪೂರ್ವಕವಾಗಿ ಕಿರುಕುಳ ನೀಡುತ್ತಿದ್ದರು ಎಂದು ಆರೋಪ ಕೇಳಿಬಂದಿದ್ದು, ಇದರಿಂದ ಮಾನಸಿಕವಾಗಿ ನೊಂದಿದ್ದ ಸೋಮಾಚಾರಿ ಅವರು, ಇಂದು(ಜು.21) ಬೆಳಗಿನ ಜಾವ ಅವರ ತೋಟದಲ್ಲಿಯೇ ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ಕುರಿತು ಶ್ರೀನಿವಾಸಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಹೌದು ಇದೇ ತಿಂಗಳ ಜು.5ರಂದು ಮಂಡ್ಯ ಜಿಲ್ಲೆಯ ನಾಗಮಂಗಲ ಡಿಪೋ ಎದುರು ಕೆಎಎಸ್ಆರ್ಟಿಸಿ ಬಸ್ ಚಾಲಕ ಜಗದೀಶ್ ಎಂಬುವವರು, ಸಚಿವ ಎನ್. ಚಲುವರಾಯಸ್ವಾಮಿಯವರು ರಾಜಕೀಯ ದ್ವೇಷದಿಂದ ನನ್ನನ್ನು ವರ್ಗಾವಣೆ ಮಾಡಿದ್ದಾರೆ ಎಂದು ಆರೋಪಿಸಿ, ವರ್ಗಾವಣೆಯಿಂದ ಬೇಸತ್ತು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿತ್ತು. ಕೂಡಲೇ ಅಸ್ವಸ್ಥಗೊಂಡ ಜಗದೀಶ್ ಅವರನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿ, ಚಿಕಿತ್ಸೆ ಪಡೆದು ಪ್ರಾಣಾಪಾಯದಿಂದ ಪಾರಾಗಿದ್ದರು.
ಚುನಾವಣೆ ಸಂದರ್ಭದಲ್ಲಿ ಜೆಡಿಎಸ್ ಪರ ಕೆಲಸ ಮಾಡಿದ್ದಕ್ಕಾಗಿ ನನ್ನನ್ನು, ರಾಜಕೀಯ ದ್ವೇಷದಿಂದ ವರ್ಗಾವಣೆ ಮಾಡಿದ್ದಾರೆ ಎಂದು ಸಚಿವ ಎನ್. ಚಲುವರಾಯಸ್ವಾಮಿ ವಿರುದ್ಧ ಜಗದೀಶ್ ಆಕ್ರೋಶ ವ್ಯಕ್ತಪಡಿಸಿದ್ದರು. ಹೌದು ಚಾಲಕ ಜಗದೀಶ್ ಡಿಪೋ ಬಳಿ ಸಚಿವರಿಗೆ ಬಾಯಿಗೆ ಬಂದಂತೆ ಬೈದು, ಬಳಿಕ ವಿಷ ಸೇವಿಸಿದ್ದರು. ತಕ್ಷಣವೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿ, ನಂತರ ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ಆದಿಚುಂಚನಗಿರಿ ಆಸ್ಪತ್ರೆಗೆ ಸ್ಥಳಾಂತರ ಮಾಡಲಾಗಿತ್ತು. ಈ ಕಹಿ ಘಟನೆ ಮಾಸುವ ಮುನ್ನವೇ ಇದೀಗ ಮತ್ತೊಬ್ಬ ಕೆಎಸ್ಆರ್ಟಿಸಿ ಕಂಡಕ್ಟರ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಇನ್ನಷ್ಟು ರಾಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 12:45 pm, Fri, 21 July 23