ಕೊಪ್ಪಳ: ತ್ರಿವಳಿ ತಲಾಖ್ (triple talaq) ಇನ್ನೂ ಜೀವಂತ ಇದೆಯಾ? ಎಂಬ ಪ್ರಶ್ನೆ ಕಾಡತೊಡಗಿದೆ. ಏಕೆಂದರೆ ಕೊಪ್ಪಳ ಜಿಲ್ಲೆಯಲ್ಲಿ ಗಂಡನ ವಿರುದ್ಧ ಮಹಿಳೆಯೊಬ್ಬರು ತ್ರಿವಳಿ ತಲಾಖ್ ಪ್ರಕರಣ ದಾಖಲಿಸಿದ್ದಾರೆ. ಕೊಪ್ಪಳ ಜಿಲ್ಲೆಯಲ್ಲಿ ನಿಷೇಧದ ಕಾನೂನು ಜಾರಿಗೆ ಬಂದ ಮೇಲೆ ಮೊದಲ ತ್ರಿವಳಿ ತಲಾಖ್ ಪ್ರಕರಣ ದಾಖಲಾಗಿದೆ ಎಂದು ಪ್ರಕರಣದ ಬಗ್ಗೆ ಕೊಪ್ಪಳ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (koppal SP) ಅರುಣಾಂಗ್ಷು ಗಿರಿ ಮಾಹಿತಿ ನೀಡಿದ್ದಾರೆ. ಖಲೀದಾ ಬೇಗಂ ಎಂಬುವರ ದೂರಿನ ಮೇರೆಗೆ ಕೇಸ್ ದಾಖಲು ಮಾಡಿಕೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಕೊಪ್ಪಳ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರುಣಾಂಗ್ಷು ಗಿರಿ ನೀಡಿರುವ ಮಾಹಿತಿ ಹೀಗಿದೆ:
ಖಲೀದಾ ಬೇಗಂ ಎನ್ನುವವರ ದೂರಿನ ಅನ್ವಯ ಕೊಪ್ಪಳದಲ್ಲಿ ಮೊದಲ ತ್ರಿವಳಿ ತಲಾಕ್ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ. ಖಲೀದಾ ಬೇಗಂ ಪತಿ ಸೈಯದ್ ವಾಹೀದ್ ವಿರುದ್ಧ ತ್ರಿವಳಿ ತಲಾಕ್ ಪ್ರಕರಣ ದಾಖಲಾಗಿದೆ. ಸೈಯದ್ ಮೂಲತಃ ಗಜೇಂದ್ರಗಡ ನಿವಾಸಿ. ಖಲೀದಾ ಬೇಗಂ ಕೊಪ್ಪಳದ ಶಿವಶಾಂತವೀರ ಬಡಾವಣೆ ನಿವಾಸಿ. 2021 ರಲ್ಲಿ ಕೊಪ್ಪಳ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದೆ. ಗಂಡನ ದೌರ್ಜನ್ಯ ವಿರುದ್ಧ ಖಲೀದಾ ಬೇಗಂರಿಂದ ದೂರು ದಾಖಲಾಗಿತ್ತು.
ಕಲಂ -498 ( ಎ ), 323, 504, 506 ಸಹಿತ 149 ಐಪಿಸಿ & 3, 4 ಡಿ.ಪಿ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು. ಜೆ.ಎಂ.ಎಫ್.ಸಿ ನ್ಯಾಯಾಲಯದಲ್ಲೂ ಡೊಮ್ಯಾಸ್ಟಿಕ್ ವೈಲೆನ್ಸ್ ಪ್ರಕರಣದ ದಾಖಲಾಗಿತ್ತು. ಇದೇ ಸೆಪ್ಟಂಬರ್ 15 ರಂದು ಪತಿ ಸೈಯದ್ ವಾಹೀದ್ ಕೋರ್ಟ್ ಗೆ ಹಾಜರಾಗಿದ್ದ. ಕೋರ್ಟ್ ಗೆ ಬಂದಾಗಲೂ ಪತ್ನಿಯೊಂದಿಗೆ ಗಲಾಟೆ ಮಾಡಿದ್ದ. ನಾನು ಷರಿಯತ್ ಪ್ರಕಾರ ಬೇರೆ ಮದುವೆಯಾಗುತ್ತೇನೆ. ನಿನಗೆ ತಲಾಕ್ ಕೊಡುತ್ತೇನೆ, ನಿನಗೂ ನನಗೂ ಯಾವುದೇ ಸಂಬಂಧವಿಲ್ಲ. ನನ್ನ ತಂಟೆಗೆ ಬಂದರೆ ಸಾಯಿಸಿ ಬಿಡುತ್ತೇನೆ ಎಂದು ಹೇಳುತ್ತಾ… ಮೂರು ಬಾರಿ ತಲಾಕ್ ಶಬ್ದ ಉಚ್ಚಾರ ಮಾಡಿ ರಗಳೆ ಮಾಡಿದ್ದನಂತೆ.
ಬೆದರಿಕೆ ಹಾಕಿದ ಗಂಡ ಸೈಯದ್ ವಾಹೀದ್ ವಿರುದ್ಧ ಮತ್ತೆ ಖಲೀದಾ ಬೇಗಂ ದೂರು ನೀಡಿದ್ದರು. ಇದೇ ಸೆಪ್ಟೆಂಬರ್ 18 ರಂದು ಮತ್ತೊಮ್ಮೆ ಕೊಪ್ಪಳ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ. ಕಲಂ -341, 506 ಐಪಿಸಿ & 4 ಮುಸ್ಲಿಂ ಮಹಿಳೆಯರ ಮದುವೆಯ ರಕ್ಷಣೆ ಕಾಯ್ದೆ ಅಡಿ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ ಎಂದು ಎಸ್ಪಿ ಅರುಣಾಂಗ್ಶು ಗಿರಿ ಮಾಹಿತಿ ನೀಡಿದ್ದಾರೆ.
Published On - 7:59 pm, Mon, 19 September 22