ಕೊಪ್ಪಳ, ಏ.19: ಗದಗ ನಗರದಲ್ಲಿ ಕಳೆದ ರಾತ್ರಿ(ಏ.18) ನಡೆದಿರುವ ನಾಲ್ವರ ಬರ್ಬರ ಕೊಲೆ ಪ್ರಕರಣ ಕೇವಲ ಗದಗ ಮಾತ್ರವಲ್ಲ, ಕೊಪ್ಪಳ(Koppal) ನಗರದ ಜನರು ಕೂಡ ಬೆಚ್ಚಿಬೀಳುವಂತೆ ಮಾಡಿದೆ. ಹೌದು, ಕೊಲೆಯಾದ ನಾಲ್ವರ ಪೈಕಿ, ಮೂವರಾದ 55 ವರ್ಷದ ಪರಶುರಾಮ್ ಹಾದಿಮನಿ, ಅವರ ಪತ್ನಿ ಲಕ್ಷ್ಮಿ, ಮತ್ತು ಹದಿನೇಳು ವರ್ಷದ ಪುತ್ರಿ ಆಕಾಂಕ್ಷಾ ಕೊಪ್ಪಳ ನಗರದ ಭಾಗ್ಯ ನಗರದ ನಿವಾಸಿಗಳಾಗಿದ್ದಾರೆ. ಜೊತೆಗೆ ಗದಗ ನಗರಸಭೆ ಉಪಾಧ್ಯೆಕ್ಷೆ ಪುತ್ರ ಕಾರ್ತಿಕ ಬಾಕಳೆ ಸೇರಿ ಒಟ್ಟು ನಾಲ್ಕು ಜನರನ್ನು ದುಷ್ಕರ್ಮಿಗಳು ಮಾರಕಾಸ್ತ್ರದಿಂದ ಕೊಚ್ಚಿ ಕೊಲೆ ಮಾಡಿದ್ದಾರೆ.
ಕೊಲೆಯ ಸುದ್ದಿಯನ್ನು ಮುಂಜಾನೆ ಟಿವಿಯಲ್ಲಿ ನೋಡುತ್ತಿದ್ದಂತೆ, ಕೊಪ್ಪಳದ ಜನರು ಶಾಕ್ ಆಗಿದ್ದಾರೆ. ಇನ್ನು ದಂಪತಿ, ಕೊಪ್ಪಳ ನಗರದ ಭಾಗ್ಯ ನಗರದಲ್ಲಿ ಸ್ವಂತ ಮನೆಯನ್ನು ಹೊಂದಿದ್ದು. ಅನೇಕ ವರ್ಷಗಳಿಂದ ಇಲ್ಲಿಯೇ ವಾಸವಾಗಿದ್ದಾರೆ. ಮೃತ ಪರಶುರಾಮ್, ಕೊಪ್ಪಳ ನಗರದಲ್ಲಿ ಹೋಟೆಲ್ ಉದ್ಯಮವನ್ನು ಹೊಂದಿದ್ದು, ಕೆಲ ಹೋಟೆಲ್ಗಳನ್ನು ನಡೆಸುತ್ತಿದ್ದಾರೆ. ಅವರ ಪತ್ನಿ ಲಕ್ಷ್ಮಿ, ಈ ಹಿಂದೆ ಬಿಜೆಪಿ ಸರ್ಕಾರದ ಅವಧಿಯಲ್ಲಿ, ಭಾಗ್ಯ ನಗರದ ಪಟ್ಟಣ ಪಂಚಾಯತ್ನ ನಾಮ ನಿರ್ದೇಶಿತ ಸದಸ್ಯೆಯಾಗಿ ಹತ್ತು ತಿಂಗಳ ಕಾಲ ಕೆಲಸ ಮಾಡಿದ್ದರು.
ಇದನ್ನೂ ಓದಿ:ಗದಗ ನಗರಸಭೆ ಉಪಾಧ್ಯಕ್ಷೆ ಪುತ್ರ ಸೇರಿದಂತೆ ಒಂದೇ ಕುಟುಂಬದ ನಾಲ್ವರ ಕೊಲೆ
ದಂಪತಿಯ ಕೊಲೆಯ ಬಗ್ಗೆ ಮಾಹಿತಿ ಇಲ್ಲದೇ ಇಂದು ಮುಂಜಾನೆ ಮನೆಗೆ ಮನೆ ಕೆಲಸಕ್ಕೆ ಬಂದಿದ್ದ ಮಹಿಳೆ, ಜೊತೆ ಕೊಲೆ ಸುದ್ದಿ ಕೇಳಿ ಭಾಗ್ಯ ನಗರದಲ್ಲಿರುವ ಜನರು ಕೂಡ ಶಾಕ್ ಆಗಿದ್ದರು. ದಂಪತಿ ಯಾರ ತಂಟೆಗೂ ಹೋಗುತ್ತಿರಲಿಲ್ಲ, ತಾವಾಯ್ತು ತಮ್ಮ ಕೆಲಸವಾಯ್ತು ಎಂದು ಇದ್ದರಂತೆ. ಕಳೆದ ಬುಧವಾರವಷ್ಟೇ ದಂಪತಿ, ಗದಗ್ಗೆ ಹೋಗಿ ಬರೋದಾಗಿ ಹೇಳಿ, ಮನೆ ಕೆಲಸದವಳಿಗೆ ಶುಕ್ರವಾರ ಕೆಲಸಕ್ಕೆ ಬಾ ಎಂದು ಹೇಳಿ ಹೋಗಿದ್ದರಂತೆ.
ಇನ್ನು ದಂಪತಿಯ ಏಕೈಕ ಪುತ್ರಿಯಾಗಿರುವ ಆಕಾಂಕ್ಷಾಳ ಬರ್ತಡೆ ನಿನ್ನೆ ರಾತ್ರಿ ಇತ್ತಂತೆ. ಹೀಗಾಗಿ ಗದಗ್ನ ಸಂಬಂಧಿಗಳ ಮನೆಯಲ್ಲಿಯೇ ಬರ್ತಡೆ ಮಾಡಿದ್ದರು. ಪರಶುರಾಮ್ ಬರ್ತಡೆಯ ಪೋಟೋಗಳನ್ನು ವಾಟ್ಸಪ್ ಸ್ಟೇಟಸ್ ಕೂಡ ರಾತ್ರಿ ಹಾಕಿದ್ದರು. ಪರಶುರಾಮ್ ಪುತ್ರಿ ಕೆಲ ದಿನಗಳ ಹಿಂದೆ ನಡೆದಿರುವ ಎಸ್ ಎಸ್ ಎಲ್ ಸಿ ಪರೀಕ್ಷೆಯನ್ನು ಬರೆದಿದ್ದು, ಫಲಿತಾಂಶದ ನಿರೀಕ್ಷೆಯಲ್ಲಿದ್ದಳು. ಆದ್ರೆ ಮಧ್ಯರಾತ್ರಿ ಸಮಯದಲ್ಲಿ ಹಂತಕರ ಅಟ್ಟಹಾಸಕ್ಕೆ ಮೂವರು ಕೂಡ ಬಲಿಯಾಗಿದ್ದಾರೆ.
ಸದ್ಯ ಪರಶುರಾಮ್ಗೆ ಕೊಪ್ಪಳದಲ್ಲಿ ಯಾವುದೇ ಸಂಬಂಧಿಗಳು ಇಲ್ಲ. ಹೆತ್ತವರು ಕೂಡ ಅನೇಕ ವರ್ಷಗಳ ಹಿಂದೆಯೇ ಮೃತಪಟ್ಟಿದ್ದಾರೆ. ಹೀಗಾಗಿ ಕೊಪ್ಪಳದಲ್ಲಿರುವ ಮನೆಗೆ ಬೀಗ ಬಿದ್ದಿದೆ. ಆದ್ರೆ, ಎಲ್ಲರ ಜೊತೆ ಚೆನ್ನಾಗಿದ್ದ ದಂಪತಿಯ ಬರ್ಬರ ಕೊಲೆ, ಕೊಪ್ಪಳ ಜನರು ಬೆಚ್ಚಿಬೀಳುವಂತೆ ಮಾಡಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ