ಕೊಪ್ಪಳ: ಬತ್ತಿದ ಕೊಳವೆ ಬಾವಿಗಳು, ಬೆಳೆ ಉಳಿಸಿಕೊಳ್ಳಲು ಟ್ಯಾಂಕರ್ ನೀರಿನ ಮೊರೆ ಹೋದ ರೈತರು

| Updated By: ಆಯೇಷಾ ಬಾನು

Updated on: Feb 10, 2024 | 8:43 AM

ಕೊಪ್ಪಳ ಜಿಲ್ಲೆಯ ಕನಕಗಿರಿ ತಾಲೂಕಿನ ಅಡವಿಬಾವಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ರೈತರು ಕೃಷಿಗಾಗಿ ಕೊರೆಸಿದ್ದ ಕೊಳವೆಬಾವಿಗಳು ಬೇಸಿಗೆ ಆರಂಭದಲ್ಲಿಯೇ ಬತ್ತಿವೆ. ಹೀಗಾಗಿ ತಮ್ಮ ಬೆಳೆಗಳನ್ನು ಉಳಿಸಿಕೊಳ್ಳಲು ರೈತರು ಟ್ಯಾಂಕರ್ ನೀರಿನ ಮೊರೆ ಹೋಗಿದ್ದಾರೆ. ಪ್ರತಿನಿತ್ಯ ಮೂರರಿಂದ ನಾಲ್ಕು ಸಾವಿರ ಹಣವನ್ನು ಟ್ಯಾಂಕರ್ ನೀರಿಗಾಗಿ ಖರ್ಚು ಮಾಡುತ್ತಿದ್ದಾರೆ.

ಕೊಪ್ಪಳ, ಫೆ.10: ಸರಿಯಾಗಿ ಮಳೆಯಾಗದೇ ಇರೋದರಿಂದ ಈಗಾಗಲೇ ಮುಂಗಾರು ಮತ್ತು ಹಿಂಗಾರು ಬೆಳೆ ಕಳೆದುಕೊಂಡು ರೈತರು (Farmers) ಕಂಗಾಲಾಗಿದ್ದಾರೆ. ಆದರೆ ಇದ್ದ ಅಲ್ಪಸ್ವಲ್ಪ ನೀರಲ್ಲಿ ತೋಟಗಾರಿಕೆ ಬೆಳೆ ಬೆಳದಿದ್ದ ರೈತರಿಗೂ ಇದೀಗ ದೊಡ್ಡ ಶಾಕ್ ಎದುರಾಗಿದೆ. ರಾಜ್ಯದಲ್ಲಿ ಅವಧಿಗೂ ಮೊದಲೇ ಬೇಸಿಗೆ ಆರಂಭವಾಗಿದೆ. ಅದರಲ್ಲೂ ಬಿಸಿಲನಾಡು ಅಂತ ಕರೆಸಿಕೊಳ್ಳುವ ಕೊಪ್ಪಳ (Koppal) ಜಿಲ್ಲೆಯಲ್ಲಿ ಬೇಸಿಗೆಯ ಬಿಸಿಲು ಈಗಾಗಲೇ ನೆತ್ತಿ ಸುಡುತ್ತಿದೆ. ಇನ್ನು ಬೇಸಿಗೆ ಆರಂಭಕ್ಕೆ ಮುನ್ನವೇ ಕೊಳವೆ ಬಾವಿಗಳು ಬತ್ತಿಹೋಗಿವೆ. ಹೀಗಾಗಿ ರೈತರು ಬೆಳೆ ಉಳಿಸಿಕೊಳ್ಳಲು ಇದೀಗ ಪ್ರತಿನಿತ್ಯ ಸಾವಿರಾರು ರೂಪಾಯಿ ಖರ್ಚು ಮಾಡಿ, ಟ್ಯಾಂಕರ್ ನೀರಿನ ಮೊರೆ ಹೋಗುತ್ತಿದ್ದಾರೆ.

ಕೊಪ್ಪಳ ಜಿಲ್ಲೆಯ ಕನಕಗಿರಿ ತಾಲೂಕಿನ ಅಡವಿಬಾವಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ರೈತರು ಕೃಷಿಗಾಗಿ ಕೊರೆಸಿದ್ದ ಕೊಳವೆಬಾವಿಗಳು ಬೇಸಿಗೆ ಆರಂಭದಲ್ಲಿಯೇ ಬತ್ತಿವೆ. ನಾಲ್ಕಾರು ಹೊಸ ಬೋರವೆಲ್ ಕೊರಿಸಿದ್ರು ಕೂಡಾ ಎಲ್ಲಿಯೂ ನೀರು ಬರ್ತಿಲ್ಲಾ. ಇದು ರೈತರ ಆತಂಕವನ್ನು ಹೆಚ್ಚಿಸಿದೆ. ಯಾಕಂದ್ರೆ ಅಡವಿಬಾವಿ ಸೇರಿದಂತೆ ಸುತ್ತಮುತ್ತಲಿನ ನೂರಾರು ರೈತರು ದ್ರಾಕ್ಷಿ ಬೆಳೆಯನ್ನು ಬೆಳೆದಿದ್ದಾರೆ. ಇದೀಗ ದ್ರಾಕ್ಷಿ ಕಾಯಿಯಾಗಿದ್ದು, ಹಣ್ಣಾಗುವ ಹಂತದಲ್ಲಿದೆ. ಈ ಸಮಯದಲ್ಲಿ ದ್ರಾಕ್ಷಿಗೆ ಚೆನ್ನಾಗಿ ನೀರು ಬಿಟ್ಟರೆ, ಉತ್ತಮವಾದ ಫಸಲು ಬರುತ್ತದೆ. ಆದ್ರೆ ಇದೇ ಸಮಯದಲ್ಲಿ ಕೊಳವೆಬಾವಿಗಳು ಬತ್ತಿರುವುದರಿಂದ, ದ್ರಾಕ್ಷಿ ಬೆಳೆಗೆ ನಿಗದಿತ ಪ್ರಮಾಣದಲ್ಲಿ ನೀರು ಪೂರೈಕೆ ಮಾಡಲಿಕ್ಕಾಗದೇ ರೈತರು ಪರದಾಡುತ್ತಿದ್ದಾರೆ. ಕೆಲ ರೈತರ ದ್ರಾಕ್ಷಿ ತೋಟಗಳು ಬೆಳೆ ಬರುವ ಮುನ್ನವೇ ಒಣಗಿ ಹೋಗಿದ್ದರೆ, ಇನ್ನು ಕೆಲ ರೈತರ ತೋಟಗಳಲ್ಲಿನ ದ್ರಾಕ್ಷಿ ಸರಿಯಾಗಿ ಹಣ್ಣು ಆಗ್ತಿಲ್ಲಾ. ಹೀಗಾಗಿ ಇರೋ ಬೆಳೆಯನ್ನು ರಕ್ಷಿಸಿಕೊಳ್ಳಲು ರೈತರು ಟ್ಯಾಂಕರ್ ನೀರಿನ ಮೊರೆ ಹೋಗಿದ್ದಾರೆ.

ರೈತರು ಇದೀಗ ಪ್ರತಿನಿತ್ಯ ಮೂರರಿಂದ ನಾಲ್ಕು ಸಾವಿರ ಹಣವನ್ನು ಟ್ಯಾಂಕರ್ ನೀರಿಗಾಗಿ ಖರ್ಚು ಮಾಡುತ್ತಿದ್ದಾರೆ. ಏಳೆಂಟು ಕಿಲೋ ಮೀಟರ್ ದೂರದಿಂದ ಟ್ಯಾಂಕರ್ ಮೂಲಕ ನೀರನ್ನು ತರೆಸಿ, ತಮ್ಮ ಕೃಷಿ ಹೊಂಡಕ್ಕೆ ಡಂಪ್ ಮಾಡುತ್ತಿದ್ದು, ನಂತರ ಹನಿ ನೀರಾವರಿ ಮೂಲಕ ದ್ರಾಕ್ಷಿ ಬೆಳೆಗೆ ನೀರು ಬಿಡುತ್ತಿದ್ದಾರೆ. ಆದ್ರೂ ಕೂಡಾ ಸಮರ್ಪಕವಾಗಿ ನೀರು ಸಾಲುತ್ತಿಲ್ಲ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ.

ಇದನ್ನೂ ಓದಿ: Karnataka Dam Water Level: ಫೆ.09ರ ರಾಜ್ಯದ ಪ್ರಮುಖ ಡ್ಯಾಂಗಳ ನೀರಿನ ಮಟ್ಟದ ವಿವರ ಇಲ್ಲಿದೆ

ಒಂದು ಎಕರೆಗೆ ಪ್ರತಿನಿತ್ಯ ಹದಿನೈದಕ್ಕೂ ಹೆಚ್ಚು ಟ್ಯಾಂಕರ್ ನೀರು ಬೇಕಾಗುತ್ತದೆ. ಈ ಹಂತದಲ್ಲಿ ಒಂದೊದು ಗಿಡಕ್ಕೂ ಇಪ್ಪತ್ತೈದರಿಂದ ಮೂವತ್ತು ಲೀಟರ್ ನೀರನ್ನು ಪೂರೈಕೆ ಮಾಡಬೇಕು. ಒಂದು ಎಕರೆಯಲ್ಲಿ ಏಳು ನೂರು ಗಿಡಗಳಿವೆ. ಪ್ರತಿನಿತ್ಯ ಹತ್ತು ಟ್ಯಾಂಕರ್ ನೀರನ್ನು ತರಿಸಿ ಬಿಟ್ಟರು ಕೂಡಾ ಎಲ್ಲದಕ್ಕೂ ಸರಿಯಾಗಿ ನೀರು ಪೂರೈಕೆ ಮಾಡಲು ಆಗ್ತಿಲ್ಲಾ. ಹೀಗಾಗಿ ಲಕ್ಷಾಂತರ ರೂಪಾಯಿ ಆದಾಯದ ದ್ರಾಕ್ಷಿ ಹಾಳಾಗುತ್ತಿದೆ. ಒಂದು ಸಲ ದ್ರಾಕ್ಷಿ ಗಿಡಗಳು ಹಾಳಾದ್ರೆ ಮುಂದಿನ ವರ್ಷ ಕೂಡಾ ಸರಿಯಾಗಿ ಬೆಳೆ ಬರೋದಿಲ್ಲಾ. ಲಕ್ಷಾಂತರ ರೂಪಾಯಿ ಖರ್ಚು ಮಾಡಿ ನಿರ್ಮಾಣ ಮಾಡಿದ್ದ ದ್ರಾಕ್ಷಿ ತೋಟವೇ ಹಾಳಾಗುತ್ತದೆ ಅಂತ ರೈತ ಹನುಮೇಶ್ ಆತಂಕವನ್ನು ವ್ಯಕ್ತಪಡಿಸುತ್ತಿದ್ದಾರೆ.

ಲಕ್ಷಾಂತರ ರೂಪಾಯಿ ಆದಾಯ ನಷ್ಟದ ಭೀತಿ

ಸರಿಯಾಗಿ ಬೆಳೆ ಬಂದಿದ್ದರೆ ಒಂದು ಎಕರೆಗೆ ಆರು ಲಕ್ಷ ರೂಪಾಯಿಯಷ್ಟು ದ್ರಾಕ್ಷಿ ಬೆಳೆ ಬರ್ತಿತ್ತು. ಖರ್ಚು ಕಳೆದ್ರು ಸರಿಸುಮಾರು ಎರಡುವರೆ ಲಕ್ಷ ರೂಪಾಯಿ ಆದಾಯ ರೈತರಿಗೆ ಬರ್ತಿತ್ತು. ಆದ್ರೆ ಇದೀಗ ದ್ರಾಕ್ಷಿ ಹಣ್ಣು ಸರಿಯಾಗಿ ಆಗದೇ ಇರೋದರಿಂದ, ಮಾಡಿದ ಖರ್ಚು ಕೂಡಾ ಬರೋದಿಲ್ಲಾ ಅಂತ ರೈತರು ಆತಂಕ ವ್ಯಕ್ತಪಡಿಸುತ್ತಿದ್ದಾರೆ. ದ್ರಾಕ್ಷಿ ಬೆಳೆಯಲು ಗೊಬ್ಬರ, ಕೂಲಿ. ಆಳುಗಳ ವೇತನ, ವಿವಿಧ ಕೆಮಿಕಲ್ ಗಳಿಗೆ ಲಕ್ಷಾಂತರ ರೂಪಾಯಿ ಹಣವನ್ನು ಸಾಲ ಮಾಡಿ ಖರ್ಚು ಮಾಡಿದ್ದೇವೆ. ಇದೀಗ ಸಾಲದ ಹಣವು ಬಾರದೇ ಇದ್ದರೆ ತಮ್ಮ ಬದುಕು ಬೀದಿಗೆ ಬೀಳುತ್ತದೆ ಅಂತಾರೆ ರೈತ ಯಮನೂರಪ್ಪ.

ಈಗಾಗಲೇ ದ್ರಾಕ್ಷಿ ಬೆಳೆಗಾರರು ಲಕ್ಷಾಂತರ ರೂಪಾಯಿ ಖರ್ಚು ಮಾಡಿದ್ದಾರೆ. ಇದೀಗ ಮಾಡಿದ ಖರ್ಚು ಬಾರದೇ ಇರೋದರಿಂದ ಮುಂದೇನು ಅನ್ನೋ ಚಿಂತೆ ರೈತರನ್ನು ಕಾಡುತ್ತಿದೆ. ಹೀಗಾಗಿ ಸರ್ಕಾರ ರೈತರ ನೆರವಿಗೆ ಬರಬೇಕಿದೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 8:36 am, Sat, 10 February 24