ಕರಡಿ ಕಾಟಕ್ಕೆ ಕೊಪ್ಪಳ ಜನ ಹೈರಾಣ… ಕರಡಿ ಧಾಮ ಆರಂಭಕ್ಕೆ ಸಿಕ್ಕಿಲ್ಲ ಗ್ರೀನ್ ಸಿಗ್ನಲ್, ಮುಂದೇನು?

| Updated By: ಸಾಧು ಶ್ರೀನಾಥ್​

Updated on: Dec 11, 2023 | 2:03 PM

ಕೊಪ್ಪಳ ಭಾಗದಲ್ಲಿ ಕರಡಿ ಧಾಮ ಆರಂಭಿಸಿದ್ರೆ ಅವುಗಳ ಬೆಳವಣಿಗೆಗೆ ಅನಕೂಲವಾಗುತ್ತದೆ. ಜೊತೆಗೆ ಅವುಗಳಿಂದ ಮಾನವನಿಗೆ, ಮಾನವನಿಂದ ಕರಡಿಗೆ ತೊಂದರೆ ತಪ್ಪುತ್ತದೆ. ಕರಡಿ ಧಾಮ ಮಾಡುವದರಿಂದ ಪ್ರವಾಸಿ ಸ್ಥಳವನ್ನಾಗಿ ಅಭಿವೃದ್ದಿಗೊಳಿಸಲು ಕೂಡಾ ಅನುಕೂಲವಾಗುತ್ತದೆ.

ಕರಡಿ ಕಾಟಕ್ಕೆ ಕೊಪ್ಪಳ ಜನ ಹೈರಾಣ... ಕರಡಿ ಧಾಮ ಆರಂಭಕ್ಕೆ ಸಿಕ್ಕಿಲ್ಲ ಗ್ರೀನ್ ಸಿಗ್ನಲ್, ಮುಂದೇನು?
ಕರಡಿ ಕಾಟಕ್ಕೆ ಕೊಪ್ಪಳ ಜನ ಹೈರಾಣ
Follow us on

ಆ ಭಾಗದ ಜನರು ಇದೀಗ ರಾತ್ರಿಯಾದ್ರೆ ಸಾಕು ತಮ್ಮ ಜಮೀನಿಗೆ ಹೋಗಲು ಭಯ ಪಡ್ತಿದ್ದಾರೆ. ಒಬ್ಬಂಟಿಯಾಗಿ ರಸ್ತೆಯಲ್ಲಿ ಬರಲು ಹೆದರುತ್ತಿದ್ದಾರೆ. ಯಾವಾಗ ಏನಾಗುತ್ತೋ ಅನ್ನೋ ಆತಂಕ ಅಲ್ಲಿನ ಜನರನ್ನು ಕಾಡುತ್ತಿದೆ. ಅಷ್ಟಕ್ಕೂ ಆ ಜನರಿಗೆ ಭಯ ಹುಟ್ಟಿಸಿರೋದು ಚಿರತೆ, ಹುಲಿ ಅಲ್ಲಾ, ಬದಲಾಗಿ ಜಾಂಬವಂತ ಕರಡಿ. ಒಂದೆಡೆ ಅಕ್ರಮ ಗಣಿಗಾರಿಕೆಗಳಿಂದ ಕರಡಿಗಳು ಕಂಗಾಲಾಗಿದ್ರೆ, ಇನ್ನೊಂದಡೆ ಕರಡಿಗಳಿಂದ ಜನ ಕಂಗಾಲಾಗುತ್ತಿದ್ದಾರೆ (bear menace). ಹೌದು ರಾಜ್ಯದ ಕೊಪ್ಪಳ (Koppal), ವಿಜಯನಗರ, ಬಳ್ಳಾರಿ ಜಿಲ್ಲೆಯಲ್ಲಿ ಹೆಚ್ಚಾಗಿ ಕರಡಿಗಳು ಕಾಣುತ್ತವೆ. ಈ ಭಾಗದಲ್ಲಿರುವ ಕಲ್ಲು ಬಂಡೆಯ ಗುಡ್ಡಗಳು ಕರಡಿಗಳ ವಾಸಸ್ಥಾನಕ್ಕೆ ಯೋಗ್ಯವಾಗಿವೆ. ಕೊಪ್ಪಳ ಜಿಲ್ಲೆಯಲ್ಲಿ 32 ಸಾವಿರ ಹೆಕ್ಟೇರ್ ಅರಣ್ಯ ಪ್ರದೇಶವಿದ್ದು, ಇದು ಕರಡಿಗಳ ವಾಸಸ್ಥಾನಕ್ಕೆ (bear sanctuary) ಹೇಳಿ ಮಾಡಿಸಿದಂತಿದೆ. ಇನ್ನು ಗುಹೆಗಳ ಮಾದರಿಯ ಗುಡ್ಡಗಳು ಇರೋದರಿಂದ ಹೆಚ್ಚಾಗಿ ಈ ಭಾಗದಲ್ಲಿಯೇ ಕರಡಿಗಳು ತಮ್ಮ ಬದುಕು ಕಟ್ಟಿಕೊಂಡಿವೆ.

ಆದ್ರೆ ಇತ್ತೀಚೆಗೆ ಅರಣ್ಯ ಭೂಮಿ ಒತ್ತುವರಿ, ಬೆಟ್ಟ ಗುಡ್ಡಗಳ ಪ್ರದೇಶದಲ್ಲಿ ಕಲ್ಲು ಗಣಿಗಾರಿಕೆ, ಅನೇಕ ಪ್ಯಾಕ್ಟರಿಗಳು ಆರಂಭವಾಗಿರೋದರಿಂದ ಕರಡಿಗಳ ಓಡಾಟಕ್ಕೆ, ಅವುಗಳ ವಾಸಕ್ಕೆ ದೊಡ್ಡ ಮಟ್ಟದಲ್ಲಿ ತೊಂದರೆಯಾಗುತ್ತಿದೆ. ಹೀಗಾಗಿ ಕರಡಿಗಳು ಜನವಸತಿ ಪ್ರದೇಶಕ್ಕೆ ಹೆಚ್ಚಾಗಿ ಬರ್ತಿವೆ. ಅದರಲ್ಲೂ ಆಹಾರ ಮತ್ತು ನೀರು ಹುಡುಕಿಕೊಂಡು ಬೆಟ್ಟಗುಡ್ಡಗಳಿಂದ ಹೊರ ಬರ್ತಿರೋ ಕರಡಿಗಳು, ತಮಗೆ ಮಾನವ ತೊಂದರೆ ಕೊಡಬಹುದು ಅಂತ ಮಾನವನ ಮೇಲೆ ದಾಳಿ ಮಾಡ್ತಿವೆ.

ಹೌದು ಕೊಪ್ಪಳ ತಾಲೂಕಿನ ಇರಕಲಗಡ್ ಗ್ರಾಮದಲ್ಲಿ ಕೆಲ ದಿನಗಳ ಹಿಂದಷ್ಟೇ ರಾತ್ರಿ ಸಮಯದಲ್ಲಿ ನಾಲ್ಕು ಕರಡಿಗಳು ದಾಳಿ ಮಾಡಿದ್ದವು. ದಾಳಿಗೊಳಗಾದ ವ್ಯಕ್ತಿ ಇಂದಿಗೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಇನ್ನು ಕಳೆದ ಒಂದು ವರ್ಷದಲ್ಲಿ ಹತ್ತಕ್ಕೂ ಹೆಚ್ಚು ಜನರ ಮೇಲೆ ಕರಡಿಗಳು ದಾಳಿ ಮಾಡಿವೆ. ಹೀಗಾಗಿ ರಾತ್ರಿ ಸಮಯದಲ್ಲಿ ಕರಡಿಗಳು ಹೆಚ್ಚಾಗಿರುವ ಜಿಲ್ಲೆಯ ಕೊಪ್ಪಳ ತಾಲೂಕು, ಗಂಗಾವತಿ ತಾಲೂಕಿನ ಅನೇಕ ಕಡೆ ಜನರು ರಾತ್ರಿ ಸಮಯದಲ್ಲಿ ಹೊರಬರಲು ಭಯ ಪಡುತ್ತಿದ್ದಾರೆ. ಹೀಗಾಗಿಯೇ ಕರಡಿ ಧಾಮವನ್ನು ಆರಂಭಿಸಬೇಕು ಅಂತ ಜನ ಆಗ್ರಹಿಸಿದ್ರು.

ಕರಡಿ ಧಾಮವನ್ನು ಆರಂಭಿಸಿ, ಅವುಗಳನ್ನು ಒಂದಡೆ ಬಿಟ್ಟು, ಅವುಗಳಿಗೆ ನೀರು ಮತ್ತು ಆಹಾರದ ವ್ಯವಸ್ಥೆ ಮಾಡಿದ್ರೆ ಅವುಗಳ ಬೆಳವಣಿಗೆ ಕೂಡಾ ಅನಕೂಲವಾಗುತ್ತದೆ. ಜೊತೆಗೆ ಅವುಗಳಿಂದ ಮಾನವನಿಗೆ, ಮಾನವನಿಂದ ಕರಡಿಗೆ ತೊಂದರೆ ತಪ್ಪುತ್ತದೆ. ಕರಡಿ ಧಾಮವನ್ನು ಮಾಡುವದರಿಂದ ಪ್ರವಾಸಿ ಸ್ಥಳವನ್ನಾಗಿ ಅಭಿವೃದ್ದಿಗೊಳಿಸಲು ಕೂಡಾ ಅನಕೂಲವಾಗುತ್ತದೆ. ಹೀಗಾಗಿಯೇ ಅರಣ್ಯ ಇಲಾಖೆ ಕೂಡಾ ಸರ್ಕಾರಕ್ಕೆ ಕರಡಿ ಧಾಮವನ್ನು ಆರಂಭಿಸಬೇಕು ಅನ್ನೋ ಪ್ರಸ್ತಾವವನ್ನು ಸರ್ಕಾರಕ್ಕೆ ನೀಡಿದೆ.

Also Read: ಹಾಡಹಗಲೇ ದರೋಡೆಗೆ ಇಳಿದ ಖತರ್ನಾಕ್ ಗ್ಯಾಂಗ್; ಸಿನಿಮೀಯ ರೀತಿಯಲ್ಲಿ ಬೆನ್ನಟ್ಟಿ ಹಿಡಿದ ಪೊಲೀಸ್ರು

ಹೌದು ಜಿಲ್ಲೆಯ ಗಂಗಾವತಿ, ಕೊಪ್ಪಳ ವಿಧಾನಸಭಾ ಕ್ಷೇತ್ರದಲ್ಲಿ ಬರುವ ಹಿರೇಸೂಳಿಕೆರೆ, ಚಿಕ್ಕ ಸೂಳಿಕೆರೆ, ತಿಮ್ಮಾಪುರ ಸೇರಿದಂತೆ ವಿವಿಧ ಗ್ರಾಮಗಳ ಸುತ್ತಮುತ್ತಲಿನ ಪ್ರದೇಶದಲ್ಲಿರುವ 1267 ಎಕರೆ ಪ್ರದೇಶದಲ್ಲಿ ಕರಡಿ ಸಂರಕ್ಷಣಾ ಜೋನ್ ಮಾಡಲು ಕಳೆದ ಮಾರ್ಚ್ ನಲ್ಲಿಯೇ ಸರ್ಕಾರಕ್ಕೆ ಪ್ರಸ್ತಾವಣೆ ಸಲ್ಲಿಸಲಾಗಿದೆ. ಈ ಬಗ್ಗೆ ಮುತುವರ್ಜಿ ವಹಿಸಿರುವ ಕೊಪ್ಪಳ ಜಿಲ್ಲಾ ಅರಣ್ಯ ಇಲಾಕೆ, ಸರ್ಕಾರ, ಮತ್ತು ಅರಣ್ಯ ಇಲಾಖೆ ಜೊತೆ ಮೇಲಿಂದ ಮೇಲೆ ಪತ್ರ ವ್ಯವಹಾರವನ್ನು ಕೂಡಾ ಮಾಡುತ್ತಿದೆ.

ಆದ್ರೆ ಇಲ್ಲಿವರಗೆ ಸರ್ಕಾರದಿಂದ ಕರಡಿ ಧಾಮ ಆರಂಭಕ್ಕೆ ಗ್ರೀನ್ ಸಿಗ್ನಲ್ ಸಿಕ್ಕಿಲ್ಲಾ. ಇದು ಸಹಜವಾಗಿ ಜನರ ಆಕ್ರೋಶಕ್ಕೆ ಕಾರಣವಾಗಿದೆ. ಸರ್ಕಾರ, ಅರಣ್ಯ ಇಲಾಖೆ ಜನರ ಜೀವದ ಜೊತೆ ಚೆಲ್ಲಾಟವಾಡುತ್ತಿದೆ, ರಾತ್ರಿ ಸಮಯದಲ್ಲಿ ಜನರು ಓಡಾಡಲು ಭಯಪಡುತ್ತಿದ್ದಾರೆ ಅಂತ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನು ಕರಡಿದಾಮದ ಬಗ್ಗೆ ಗಂಗಾವತಿ ಶಾಸಕ ಜನಾರ್ದನರೆಡ್ಡಿ ಬೆಳಗಾವಿ ಚಳಿಗಾಲದ ಅಧಿವೇಶನದಲ್ಲಿ ಕೂಡಾ ಪ್ರಸ್ತಾಪ ಮಾಡಿದ್ದು,ಆದಷ್ಟು ಬೇಗನೆ ಕರಡಿ ದಾಮ ಆರಂಭವಾಗುತ್ತೆ ಅಂತಿದ್ದಾರೆ.

ಜನರ ಜೀವ ಹೋಗುವ ಮೊದಲು ಅರಣ್ಯ ಇಲಾಖೆ ಕರಡಿ ಧಾಮವನ್ನು ಆರಂಭಿಸಬೇಕಿದೆ. ಕರಡಿ ಧಾಮ ಆರಂಭದಿಂದ ಮಾನವನಿಂದ ಕರಡಿಗಳಿಗೂ ತೊಂದರೆ ತಪ್ಪುತ್ತದೆ. ಜೊತೆಗೆ ಕರಡಿಗಳಿಂದ ಮಾನವರಿಗೂ ತೊಂದರೆ ತಪ್ಪುತ್ತದೆ. ಅವುಗಳ ಬೆಳವಣಿಗೆಗೆ ಕೂಡಾ ಅನಕೂಲವಾಗುತ್ತದೆ. ಈ ನಿಟ್ಟಿನಲ್ಲಿ ಅರಣ್ಯ ಇಲಾಖೆ ಇನ್ನಷ್ಟು ಕ್ರಮಗಳನ್ನು ಕೈಗೊಂಡು, ಕರಡಿ ಧಾಮವನ್ನು ಆರಂಭಿಸುವ ಕೆಲಸ ಮಾಡಬೇಕಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ