ಕೊಪ್ಪಳ: ಬಾಲಕನನ್ನು ಬೆತ್ತಲೆಗೊಳಿಸಿ ಪೂಜೆ ಮಾಡಿಸಿದ್ದ ಪ್ರಕರಣ ಸಂಬಂಧ ಕೊಪ್ಪಳ ಗ್ರಾಮೀಣ ಠಾಣೆ ಪೊಲೀಸರು ಓರ್ವನನ್ನು ಬಂಧಿಸಿದ್ದಾರೆ. ಹಾಗೂ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ಆರೋಪಿ ಶರಣಪ್ಪ ತಳವಾರ ಎಂಬ ವ್ಯಕ್ತಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ವಿರುಪನಗೌಡ ಸಿದ್ದನಗೌಡ್ರ ಹಾಗೂ ಶರಣಪ್ಪ ಓಜನಹಳ್ಳಿ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.
ಘಟನೆ ಹಿನ್ನೆಲೆ
ಸಾಲ ತೀರಬೇಕೆಂದ್ರೆ ಬೆತ್ತಲೆ ಪೂಜೆ ಮಾಡಬೇಕೆಂದು ಹೇಳಿ ಬಾಲಕನಿಂದ ಗ್ರಾಮಸ್ಥರು ಬೆತ್ತಲೆ ಪೂಜೆ ಮಾಡಿಸಿದ ಅಮಾನವೀಯ ಘಟನೆ ಹುಬ್ಬಳ್ಳಿಯಲ್ಲಿ ಜೂನ್ 16 ರಂದು ನಡೆದಿತ್ತು. ಬಡತನದ ಬೇಗೆಯಿಂದ ಬಳಲುತ್ತಿದ್ದ 16 ವರ್ಷದ ಬಾಲಕನನ್ನು ಪುಸಲಾಯಿಸಿ ಆತನಿಗೆ ಬೆತ್ತಲೆ ಪೂಜೆ ಮಾಡುವಂತೆ ಗ್ರಾಮಸ್ಥರು ಸೂಚಿಸಿದ್ದು ಬೆತ್ತಲೆ ಪೂಜೆ ವಿಡಿಯೋ ವೈರಲ್ ಆಗಿತ್ತು. ಹಾಗೂ ವಿಕೃತ ಮೆರೆದವರ ವಿರುದ್ಧ ಪ್ರಕರಣ ದಾಖಲಾಗಿತ್ತು. ಬಾಲ ನ್ಯಾಯ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.
ಅಪ್ಪನ್ನ ಸಾಲ ತೀರ ಬೇಕು, ಕೈ ತುಂಬಾ ಹಣ ಬೇಕು ಅಂದ್ರೆ ಬೆತ್ತಲೆ ಪೂಜೆ ಮಾಡಬೇಕು ಎಂದು ಗ್ರಾಮದ ಕೆಲವರು ಬಾಲಕನ ತಲೆ ಕೆಡಿಸಿದ್ದಾರೆ. ಬಡತನದ ಬೇಗೆಯಿಂದ ಬಳಲುತ್ತಿದ್ದ ಕೊಪ್ಪಳ ತಾಲೂಕಿನ ಹಾಸಗಲ್ ಗ್ರಾಮದ ಬಾಲಕನನ್ನು ಪುಸಲಾಯಿಸಿ ಪರಿಚಯಸ್ಥರೇ ದ್ರೋಹ ಮಾಡಿದ್ದಾರೆ. ಜೂನ್ 16 ರಂದು ಹುಬ್ಬಳ್ಳಿಯಲ್ಲಿ ನಡೆದ ಅಮಾನವೀಯ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಅಲ್ಲದೆ ಕಿರಾತಕರು ಬಾಲಕನ ಬೆತ್ತಲೆ ಪೂಜೆಯ ವಿಡಿಯೋ ಮಾಡಿ ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಇದರಿಂದ ನೊಂದ ಬಾಲಕ ಮತ್ತು ಕುಟುಂಬಸ್ಥರು ಕೊಪ್ಪಳ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ವಿಕೃತ ಮೆರೆದ ಶರಣಪ್ಪ, ಮರಿಗೌಡ, ಶರಣಪ್ಪ ತಳವರ್ ವಿರುದ್ಧ ದೂರು ದಾಖಲಾಗಿತ್ತು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 1:09 pm, Tue, 4 October 22