ಅನೇಕರಿಗೆ ತಾವು ಸರಿಯಾಗಿ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯಡಿ ವಿಮೆಯ ಹಣ (crop insurance) ಕಟ್ಟಿದ್ದರೂ, ಬೆಳೆ ಹಾನಿಯಾಗಿರುವಾಗ (crop loss) ವಿಮೆ ಹಣ ಮಂಜೂರಾಗಲ್ಲ. ಆದ್ರೆ ಇಲ್ಲೊಂದಿಷ್ಟು ಜನ ಯಾರದ್ದೋ ಜಮೀನಿನ ಮೇಲೆ ವಿಮೆ ಪಾವತಿಸಿ, ಲಕ್ಷ ಲಕ್ಷ ಹಣ ವಿಮೆ ಹಣ ಮಂಜೂರು ಮಾಡಿಸಿಕೊಂಡಿದ್ದಾರೆ. ಬೀಜವನ್ನೇ ಬಿತ್ತದೆ, ಬರಡು ಭೂಮಿಯಲ್ಲಿ ಕೂಡಾ ಬೆಳೆ ಹಾನಿಯಾಗಿದೆ ಅಂತ ಸುಳ್ಳು ದಾಖಲಾತಿಗಳನ್ನು ಸೃಷ್ಟಿಸಿ ಲಕ್ಷ ಲಕ್ಷ ಹಣ ಕ್ಲೇಮ್ ಮಾಡಿಸಿಕೊಂಡಿದ್ದಾರೆ.
ಅದು ಬರಡು ಭೂಮಿ. ಈ ಭೂಮಿಯಲ್ಲಿ ಕಳೆದ ಅನೇಕ ವರ್ಷಗಳಿಂದ ಉಳುಮೆಯನ್ನು ಮಾಡಿಲ್ಲಾ. ಆದ್ರೆ ಇದೇ ಭೂಮಿಯಲ್ಲಿ ಬಿತ್ತನೆ ಮಾಡಲಾಗಿದೆ. ಬೆಳೆ ಹಾನಿಯಾಗಿದೆ ಅಂತ ಸುಳ್ಳು ದಾಖಲಾತಿಗಳನ್ನು ಸೃಷ್ಟಿಸಿ ಲಕ್ಷ ಲಕ್ಷ ಹಣ ವಿಮೆ ಹಣ ಮಂಜೂರು ಮಾಡಿಸಿಕೊಳ್ಳಲಾಗಿದೆ. ಇದೊಂದೆ ಜಮೀನಲ್ಲಾ, ಇಂತಹ ಅನೇಕ ಜಮೀನಿನಲ್ಲಿ ಬೆಳೆ ಹಾನಿಯಾಗಿದೆ ಅಂತ ರಿಪೋರ್ಟ್ ತಯಾರಿಸಿ, ಲಕ್ಷಾಂತರ ರೂಪಾಯಿ ವಿಮೆ ಹಣ ಮಂಜೂರು ಮಾಡಿಸಿಕೊಳ್ಳಲಾಗಿದೆ. ಹೌದು ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಕುಡಗುಂಟಿ ಗ್ರಾಮ (Kudgunti village of Yalaburga taluk of Koppal district ) ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಫಸಲ್ ಭೀಮಾ ಯೋಜನೆಯ ವಿಮೆಯಲ್ಲಿ ದೊಡ್ಡ ಮಟ್ಟದ ಅಪರಾತಪರಾ ಮಾಡಿರೋದು ಬೆಳಕಿಗೆ ಬಂದಿದೆ.
ಹೌದು, ಸರ್ಕಾರವು ರೈತರು ತಾವು ಬೆಳೆದ ಬೆಳೆ ಹಾಳಾದ್ರೆ ತೊಂದರೆಗೆ ಸಿಲುಕಬಾರದು ಅನ್ನೋ ಉದ್ದೇಶದಿಂದ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯನ್ನು ಜಾರಿಗೊಳಿಸಿದೆ. ಅನೇಕ ಖಾಸಗಿ ಕಂಪನಿಗಳು ರೈತರಿಂದ ವಿಮೆ ಹಣವನ್ನು ಪಡೆಯುತ್ತವೆ. ಬೆಳೆ ಹಾನಿಯಾದ್ರೆ ರೈತರಿಗೆ ವಿಮೆ ಹಣ ಪಾವತಿಯಾಗುತ್ತದೆ. ಆದ್ರೆ ಈ ಯೋಜನೆಯನ್ನೇ ಕೆಲವರು ದುರುಪಯೋಗ ಮಾಡಿಕೊಂಡಿದ್ದಾರೆ.
ಹೌದು ಕುಡಗುಂಟಿ ಗ್ರಾಮದಲ್ಲಿಯೇ ನೂರಾರ ರೈತರ ಹೆಸರಲ್ಲಿ ವಿಮೆ ವಂಚನೆ ಮಾಡಿರೋದು ಬೆಳಕಿಗೆ ಬಂದಿದೆ. ಯಾವ ರೈತರು ತಮ್ಮ ಕೃಷಿ ಜಮೀನಿನ ಮೇಲೆ ವಿಮೆ ಮಾಡಿಸಿಲ್ಲವೋ ಅನ್ನೋದನ್ನು ಪತ್ತೆ ಮಾಡೋ ವಂಚಕರು, ಭೂ ಮಾಲೀಕ ರೈತರಿಗೆ ಗೊತ್ತಾಗದಂತೆ ಅವರ ಜಮಿನಿನ ಸರ್ವೇ ನಂಬರ್ ಪಡೆದು, ತಮ್ಮ ಅಕೌಂಟ್ ನಂಬರ್ ಹಾಕಿ, ತಾವೇ ವಿಮೆ ಹಣ ಕಟ್ಟಿ ವಿಮೆ ಮಾಡಿಸುತ್ತಾರೆ.
ಇದನ್ನೂ ಓದಿ: ಗದಗ: ವಿಮೆ ಹಣ ನೀಡಲು ನಿರಾಕರಿಸಿದ ವಿಮಾ ಕಂಪನಿಗೆ 2 ಲಕ್ಷಕ್ಕೂ ಅಧಿಕ ದಂಡ; ಇಲ್ಲಿದೆ ವಿವರ
ನಂತರ ವಿಮೆ ಕಂಪನಿ ಅಧಿಕಾರಿಗಳು ಮತ್ತು ಕೃಷಿ ಅಧಿಕಾರಿಗಳ ಜೊತೆ ಸೇರಿ ಆ ಜಮೀನಿನಲ್ಲಿ ಬೆಳೆ ಹಾನಿಯಾಗಿದೆ ಅಂತ ರಿಪೋರ್ಟ್ ಮಾಡಿಸಿ, ಆ ಜಮೀನಿಗೆ ವಿಮೆ ಹಣ ಮಂಜೂರು ಮಾಡುವಂತೆ ನೋಡಿಕೊಳ್ಳುತ್ತಾರೆ. ಹೀಗೆ ಕುಡಗುಂಟಿ ಗ್ರಾಮದಲ್ಲಿಯೇ ಕಳೆದ ಎರಡ್ಮೂರು ವರ್ಷಗಳಲ್ಲಿ ಒಂದುವರೆ ಕೋಟಿಗಿಂತಲೂ ಹೆಚ್ಚು ಹಣವನ್ನು ವಿಮೆ ಮಂಜೂರು ಮಾಡಿಸಿಕೊಂಡು ವಂಚನೆ ಮಾಡಿದ್ದಾರೆ.
ಇಂತಹದೊಂದು ವಂಚಕರ ಗ್ಯಾಂಗೇ ಯಲಬುರ್ಗಾ ತಾಲೂಕಿನಲ್ಲಿ ಕಾರ್ಯನಿರ್ವಹಿಸುತ್ತಿದೆಯಂತೆ. ಕುಡಗುಂಟಿ ಗ್ರಾಮದ ಕೆಲವರು ಸೇರಿಕೊಂಡು ತಮ್ಮ ಗ್ರಾಮದ ನೂರಾರು ರೈತರಿಗೆ ವಂಚನೆ ಮಾಡಿದ್ದಾರೆ. ಕಳೆದ ನಾಲ್ಕೈದು ವರ್ಷಗಳಿಂದ ಇದೇ ರೀತಿ ವಂಚಕರು, ರೈತರ ಹೆಸರಲ್ಲಿ ವಿಮೆ ಹಣವನ್ನು ವಂಚನೆ ಮಾಡುತ್ತಲೇ ಬಂದಿದ್ದಾರಂತೆ. ಆದ್ರೆ ಈ ವರ್ಷ ವಂಚಕರ ವಂಚನೆ ಬಯಲಿಗೆ ಬಂದಿದೆ.
ಕೆಲ ರೈತರಿಗೆ ತಮ್ಮ ಜಮೀನಿನಲ್ಲಿ ಬೆಳೆ ಹಾನಿಯಾಗಿದ್ದಕ್ಕೆ ವಿಮೆ ಹಣ ಮಂಜೂರು ಆಗಿರೋದು ಗೊತ್ತಾಗಿದೆ. ಆದ್ರೆ ಯಾರ ಅಕೌಂಟ್ ಗೆ ಹಣ ಜಮೆಯಾಗಿದೆ ಅಂತ ಪರಿಶೀಲಿಸಿದಾಗ, ಕುಡಗುಂಟಿ ಗ್ರಾಮದ ಕಲ್ಲಯ್ಯಾ, ಪರ್ವಿನ್ ಸೇರಿದಂತೆ ಕೆಲವರ ಅಕೌಂಟ್ ಗೆ ಹಣ ಜಮೆಯಾಗಿರುವದು ಗೊತ್ತಾಗಿದೆ. ಕಿಲಾಡಿಗಳನ್ನು ವಿಚಾರಿಸಿದಾಗ, ನಾವು ನಿಮ್ಮ ಜಮೀನಿನ ಮೇಲೆ ನಾವೇ ವಿಮೆ ಹಣ ಕಟ್ಟಿ ವಿಮೆ ಮಾಡಿಸಿದ್ದೆವು. ಇದೀಗ ವಿಮೆ ಹಣ ಮಂಜೂರಾಗಿದೆ. ನಿಮಗೆ ನಾವು ಹಣ ಕೊಡೋದಿಲ್ಲಾ ಅಂತ ಹೇಳಿದ್ದಾರಂತೆ. ಇದು ರೈತರ ಆಕ್ರೋಶಕ್ಕೆ ಕಾರಣವಾಗಿದೆ.
ಇನ್ನು ಇಂತಹದೊಂದು ಅಕ್ರಮದಲ್ಲಿ ಕೃಷಿ ಇಲಾಖೆಯ ಅಧಿಕಾರಿಗಳು, ವಿಮೆ ಕಂಪನಿಯ ಅಧಿಕಾರಿಗಳು ಕೂಡಾ ಭಾಗಿಯಾಗಿರುವ ಶಂಕೆಯಿದೆ. ಈ ಬಗ್ಗೆ ಸಮಗ್ರ ತನಿಖೆ ನಡೆಸಿದ್ರೆ, ಅಕ್ರಮದ ಇನ್ನಷ್ಟು ಕರಾಳತೆ ಹೊರಬರಲಿದೆ. ಈ ನಿಟ್ಟಿನಲ್ಲಿ ಜಿಲ್ಲಾಡಳಿತ ಅಕ್ರಮದ ಬಗ್ಗೆ ತನಿಖೆ ನಡೆಸುವ ಕೆಲಸ ಮಾಡಬೇಕಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.