ಉತ್ತರಾದಿಮಠ VS ರಾಯರಮಠ: ನವವೃಂದಾವನ ಗಡ್ಡೆಯಲ್ಲಿ ಆರಾಧನೆಗೆ ಜಿಲ್ಲಾಡಳಿತ ನಿರ್ಬಂಧ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Jul 08, 2022 | 2:48 PM

ಆರಾಧನೆಗೆ ಅವಕಾಶ ನೀಡಬೇಕು ಎಂದು ಎರಡೂ ಮಠಗಳ ವತಿಯಿಂದ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಗಿತ್ತು.

ಉತ್ತರಾದಿಮಠ VS ರಾಯರಮಠ: ನವವೃಂದಾವನ ಗಡ್ಡೆಯಲ್ಲಿ ಆರಾಧನೆಗೆ ಜಿಲ್ಲಾಡಳಿತ ನಿರ್ಬಂಧ
ನವವೃಂದಾವನ ನಡುಗಡ್ಡೆಯಲ್ಲಿರುವ ರಘುವರ್ಯ ತೀರ್ಥರ ವೃಂದಾವನ
Follow us on

ಕೊಪ್ಪಳ: ಹಂಪಿ ಸಮೀಪದ ಆನೆಗೊಂದಿಯಲ್ಲಿರುವ ನವವೃಂದಾವನ (Navavrundavana) ಗಡ್ಡೆಯಲ್ಲಿ ರಘುವರ್ಯ ತೀರ್ಥರ ಮಹಿಮೋತ್ಸವ ಆರಾಧನೆಗೆ ಕೊಪ್ಪಳ ಜಿಲ್ಲಾಡಳಿತ ನಿರ್ಬಂಧ ಹೇರಿದೆ. ಗಂಗಾವತಿ ತಾಲೂಕಿನ ನವವೃಂದಾವನದಲ್ಲಿ ರಘುವರ್ಯ ತೀರ್ಥರ ಮಹಿಮೋತ್ಸವ ಆಚರಣೆ ಮತ್ತು ಜಯತೀರ್ಥರ ಆರಾಧನೆಗೆ ಮಾಧ್ವ ಪರಂಪರೆಯ ಉತ್ತರಾದಿಮಠ (Uttaradi Mutt) ಮತ್ತು ರಾಯರಮಠಗಳು (Raghavendra Swamy Mutt) ಮುಂದಾಗಿದ್ದವು. ಆರಾಧನೆಗೆ ಅವಕಾಶ ನೀಡಬೇಕು ಎಂದು ಎರಡೂ ಮಠಗಳ ವತಿಯಿಂದ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಗಿತ್ತು. ಈ ಸಂಬಂಧ ಉಪವಿಭಾಗಾಧಿಕಾರಿ ನೇತೃತ್ವದ ಸಭೆಯಲ್ಲಿ ಎರಡೂ ಮಠಗಳ ಪ್ರತಿನಿಧಿಗಳು ಒಮ್ಮತಕ್ಕೆ ಬರಲಿಲ್ಲ. ಹೀಗಾಗಿ ಜಿಲ್ಲಾಡಳಿತವು ನವಬೃಂದಾವನ ಗಡ್ಡೆಯಲ್ಲಿ ಆರಾಧನೆಗೆ ನಿರ್ಬಂಧ ವಿಧಿಸುವ ತೀರ್ಮಾನ ತೆಗೆದುಕೊಂಡಿತು.

ಜುಲೈ 14ರಿಂದ 20ರವರೆಗೆ ಮಹಿಮೋತ್ಸವ ಆರಾಧನೆಗೆ ಅವಕಾಶ ನೀಡುವಂತೆ ಉತ್ತರಾದಿಮಠದ ಭಕ್ತರು ವಿನಂತಿ ಮಾಡಿದ್ದರು. ಜುಲೈ 16ರಿಂದ 18ರವರೆಗೆ ಜಯತೀರ್ಥರ (ಟೀಕಾಚಾರ್ಯರು) ಆರಾಧನೆಗೆ ರಾಯರ ಮಠದ ಭಕ್ತರು ಮನವಿ ಮಾಡಿದ್ದರು. ಏಕಕಾಲಕ್ಕೆ ಎರಡೂ ಮಠಗಳ ಭಕ್ತರು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದ್ದರಿಂದ ಉಭಯ ಮಠಗಳ ಪ್ರತಿನಿಧಿಗಳೊಂದಿಗೆ ಅಧಿಕಾರಿಗಳು ಸಭೆ ನಡೆಸಿದರು. ಉಭಯ ಮಠಗಳಿಗೆ ನಿತ್ಯದ ಪೂಜಾಕಾರ್ಯಕ್ಕೆ ಮಾತ್ರವೇ ಅನುಮತಿ ನೀಡಲಾಗಿದೆ ಎಂದು ಜಿಲ್ಲಾಡಳಿತವು ತಿಳಿಸಿದೆ.

ಉಪವಿಭಾಗಾಧಿಕಾರಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ರಾಯರ ಮಠದ ಭಕ್ತರು ಉತ್ತರಾದಿಮಠದ ಭಕ್ತರ ಜೊತೆಗೂಡಿ ಆರಾಧನೆ ನಡೆಸಲು ಸಹಮತ ವ್ಯಕ್ತಪಡಿಸಿದ್ದರು. ಆದರೆ ಉತ್ತರಾದಿಮಠದ ಭಕ್ತರು ಮಾತ್ರ ಒಂದೇ ದಿನ, ಒಂದೇ ಸ್ಥಳದಲ್ಲಿ ಆರಾಧನೆ, ಮಹೋತ್ಸವ ಆಚರಣೆ ಸಾಧ್ಯವಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತವು ವಿಶೇಷ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸುವಂತಿಲ್ಲ ಎಂಬ ತೀರ್ಮಾನಕ್ಕೆ ಬಂತು.

Published On - 2:47 pm, Fri, 8 July 22