ಸಾರಿಗೆ ನೌಕರರು ಮುಷ್ಕರ ಹಿಂಪಡೆದ ಬೆನ್ನಲ್ಲೇ ಬಸ್​ ಸಂಚಾರ ಪುನರಾರಂಭ; ನಿಟ್ಟುಸಿರು ಬಿಟ್ಟ ಪ್ರಯಾಣಿಕರು

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Dec 14, 2020 | 8:59 PM

ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಬಸ್​ ಸಂಚಾರ ಶುರುವಾಗಿದೆ. ಧಾರವಾಡ, ಶಿವಮೊಗ್ಗೆ, ಚಿಕ್ಕಮಗಳೂರು, ಮಂಗಳೂರು, ಉತ್ತರ ಕನ್ನಡ ಸೇರಿದಂತೆ ಎಲ್ಲ ಕಡೆಗಳಲ್ಲಿ ಸಾರಿಗೆ ನಿಗಮದ ನೌಕರರು ಮರಳಿ ಕೆಲಸಕ್ಕೆ ಹಾಜರಾಗಿದ್ದಾರೆ.

ಸಾರಿಗೆ ನೌಕರರು ಮುಷ್ಕರ ಹಿಂಪಡೆದ ಬೆನ್ನಲ್ಲೇ ಬಸ್​ ಸಂಚಾರ ಪುನರಾರಂಭ; ನಿಟ್ಟುಸಿರು ಬಿಟ್ಟ ಪ್ರಯಾಣಿಕರು
ಸಾಂದರ್ಭಿಕ ಚಿತ್ರ
Follow us on

ಬೆಂಗಳೂರು: ರಾಜ್ಯದಲ್ಲಿ ನಾಲ್ಕು ದಿನಗಳಿಂದ ನಡೆಯುತ್ತಿದ್ದ ಸಾರಿಗೆ ನಿಗಮಗಳ ಸಿಬ್ಬಂದಿ ಮುಷ್ಕರ ಇಂದು ಮಧ್ಯಾಹ್ನ 3.30ರ ವೇಳೆಗೆ ಅಂತ್ಯವಾಗಿದೆ. ಮುಷ್ಕರ ಅಂತ್ಯಗೊಂಡ ತಕ್ಷಣವೇ ರಾಜ್ಯಾದ್ಯಂತ ಬಸ್​ ಸಂಚಾರ ಮತ್ತೆ ಆರಂಭಗೊಂಡಿದೆ. ಇದರಿಂದ ಪ್ರಯಾಣಿಕರು ನಿಟ್ಟುಸಿರುಬಿಟ್ಟಿದ್ದಾರೆ.

ಭರವಸೆ ಪೂರ್ಣಗೊಳ್ಳುವ ಬಗ್ಗೆ ಸರ್ಕಾರದಿಂದ ಲಿಖಿತ ಭರವಸೆ ದೊರೆತ ನಂತರ ಪ್ರತಿಭಟನೆಯ ನೇತೃತ್ವ ವಹಿಸಿದ್ದ ಕೋಡಿಹಳ್ಳಿ ಚಂದ್ರಶೇಖರ್ ಅವರು ಫ್ರೀಡಂಪಾರ್ಕ್​ನಲ್ಲಿ ಮುಷ್ಕರ ನಿಲ್ಲಿಸುವ ಬಗ್ಗೆ ಘೋಷಣೆ ಮಾಡಿದ್ದರು. ಹೀಗಾಗಿ, ಬಸ್​ಗಳು ಮರಳಿ ರಸ್ತೆಗೆ ಇಳಿದಿವೆ.

ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಬಸ್​ ಸಂಚಾರ ಶುರುವಾಗಿದೆ. ಧಾರವಾಡ, ಶಿವಮೊಗ್ಗೆ, ಚಿಕ್ಕಮಗಳೂರು, ಮಂಗಳೂರು, ಉತ್ತರ ಕನ್ನಡ ಸೇರಿದಂತೆ ಎಲ್ಲ ಕಡೆಗಳಲ್ಲಿ ಸಾರಿಗೆ ನಿಗಮದ ನೌಕರರು ಮರಳಿ ಕೆಲಸಕ್ಕೆ ಹಾಜರಾಗಿದ್ದಾರೆ.

ಬೆಂಗಳೂರಲ್ಲಿ ಸಂಜೆ 7ರವರೆಗೆ 1,658 ಬಿಎಂಟಿಸಿ ಬಸ್​ ಸಂಚಾರ ನಡೆಸಿವೆ. ಉಳಿದಂತೆ ರಾಜ್ಯದಲ್ಲಿ 1,547 ಕೆಎಸ್​ಆರ್​ಟಿಸಿ,1163 ಎನ್​ಇಕೆಆರ್​ಟಿಸಿ, 1210 ಎನ್​ಡಬ್ಲ್ಯುಕೆಆರ್​ಟಿಸಿ ಬಸ್​ ಸಂಚಾರ ನಡೆಸಿವೆ. ಈ ಮೂಲಕ ಮುಷ್ಕರದ ನಂತರದಿಂದ ಏಳು ಗಂಟೆವರೆಗೆ ರಾಜ್ಯದಲ್ಲಿ 5,578 ಬಸ್​ಗಳು ಓಡಾಟ ನಡೆಸಿವೆ.

ಸರ್ಕಾರಕ್ಕೆ 3 ತಿಂಗಳ ಗಡುವು
ಸಾರಿಗೆ ನಿಗಮ ನೌಕರರ 10 ಬೇಡಿಕೆಗಳ ಪೈಕಿ 9 ಬೇಡಿಕೆ ಈಡೇರಿಸಲು ಸರ್ಕಾರ ಸಮ್ಮತಿ ಸೂಚಿಸಿದೆ. ಈ ಬೇಡಿಕೆ ಈಡೇರಿಸಲು 3 ತಿಂಗಳ ಗಡುವ ನೀಡಲಾಗಿದೆ. ಸರ್ಕಾರ ಬೇಡಿಕೆ ಈಡೇರಿಸದಿದ್ದರೆ ಮತ್ತೆ ಪ್ರತಿಭಟನೆ ಮಾಡುತ್ತೇವೆ. ಸರ್ಕಾರದ 8-10 ಸಚಿವರು ನನ್ನ ಮೇಲೆ ಮುಗಿಬಿದ್ದಿದ್ದಾರೆ. ನನ್ನ ಮನೆಗೆ ಮುತ್ತಿಗೆ ಹಾಕುವ ಬೆದರಿಕೆ ಹಾಕಿದ್ದಾರೆ. ಇಂತಹ ಬೆದರಿಕೆಗಳಿಗೆ ನಾವು ಮಣಿಯುವುದಿಲ್ಲ. ತಿಂಗಳೊಳಗೆ ಯಾವ ಕೆಲಸ ಆಗಬೇಕೋ ಅವು ಆಗುತ್ತೆ. ಸಾರಿಗೆ ಸಿಬ್ಬಂದಿಯನ್ನು ಸರ್ಕಾರಿ ನೌಕರರಾಗಿ ಘೋಷಿಸಲಿ. ಇದು ಒಂದಲ್ಲ ಎರಡು ವರ್ಷವಾದರೂ ಬಿಡುವುದಿಲ್ಲ ಎಂದು ಕೋಡಿಹಳ್ಳಿ ಹೇಳಿದ್ದರು.

ಸರ್ಕಾರ ನೀಡಿದ ಭರವಸೆ ಪತ್ರದಲ್ಲಿರುವ ಅಂಶಗಳು
1. ನಿಗಮದ ನೌಕರರಿಗೆ ಆರೋಗ್ಯ ಭಾಗ್ಯ ವಿಮಾ ಯೋಜನೆಯನ್ನು ಅಳವಡಿಸಲು ತೀರ್ಮಾನಿಸಲಾಗಿದೆ
2. ಕೊವಿಡ್19 ಸೋಂಕು ತಗುಲಿದ ನಿಗಮದ ನೌಕರರು ಮರಣ ಹೊಂದಿದ ಸಂದರ್ಭದಲ್ಲಿ ಅವರ ಕುಟುಂಬಗಳಿಗೆ ಸರ್ಕಾರಿ ನೌಕರರಿಗೆ ನೀಡಿದಂತೆ 30 ಲಕ್ಷ ರೂ. ಪರಿಹಾರ ನೀಡಲಾಗುವುದು
3. ಅಂತರ್‌ ನಿಗಮ ವರ್ಗಾವಣೆ ಕುರಿತು ಸೂಕ್ತ ನೀತಿ ರಚಿಸಲು ತೀರ್ಮಾನಿಸಲಾಗಿದೆ
4. ತರಬೇತಿಯಲ್ಲಿರುವ ನೌಕರರನ್ನು ತರಬೇತಿ ಅವಧಿಯನ್ನು 2 ವರ್ಷದಿಂದ 1 ವರ್ಷಕ್ಕೆ ಇಳಿಸಲು ತೀರ್ಮಾನಿಸಲಾಗಿದೆ
5. ನಿಗಮದಲ್ಲಿ ಹೆಚ್.ಆರ್.ಎಂ.ಎಸ್ (ಮಾನವ ಸಂಪನ್ಮೂಲ) ವ್ಯವಸ್ಥೆಯನ್ನು ಜಾರಿಗೊಳಿಸಲಾಗುವುದು
6. ಸಿಬ್ಬಂದಿಯು ಕರ್ತವ್ಯ ನಿರ್ವಹಿಸಿದ ಸಂದರ್ಭದಲ್ಲಿ ಭತ್ಯೆಯನ್ನು (ಬಾಟಾ) ಕೊಡಲು ತೀರ್ಮಾನಿಸಲಾಗಿದೆ
7. ಘಟಕದ ವ್ಯಾಪ್ತಿಯಲ್ಲಿ ನೌಕರರಿಗೆ ಕಿರುಕುಳ ತಪ್ಪಿಸಲು ಸೂಕ್ತ ಆಡಳಿತ ವ್ಯವಸ್ಥೆಯನ್ನು ರೂಪಿಸಲಾಗುವುದು
8. ಎನ್.ಐ.ಎನ್.ಸಿ. (ನಾಟ್‌ ಇಶ್ಯೂಡ್ – ನಾಟ್‌ ಕಲೆಕ್ಟೆಡ್‌) ಪದ್ಧತಿ ಬದಲಾಗಿ ಪರ್ಯಾಯ ವ್ಯವಸ್ಥೆಯನ್ನು ಮಾಡಲಾಗುವುದು
9. ವೇತನ ವಿಷಯಕ್ಕೆ ಸಂಬಂಧಿಸಿದಂತೆ ತೀರ್ಮಾನಿಸುವ ಸಂದರ್ಭದಲ್ಲಿ ಸಾರಿಗೆ ನೌಕರರು ಹಲವಾರು ಬೇಡಿಕೆಗಳನ್ನು ಇಟ್ಟಿದ್ದು, ಅದರಲ್ಲಿ 6ನೇ ವೇತನ ಆಯೋಗದ ಶಿಫಾರಸ್ಸುಗಳನ್ನು ಪರಿಗಣಿಸುವಂತೆ ಕೋರಿದ್ದು, ಈ ಬಗ್ಗೆ ಸರ್ಕಾರವು ಆರ್ಥಿಕ ಅಂಶಗಳನ್ನು ಪರಿಗಣಿಸಿ ತೀರ್ಮಾನಿಸಲಾಗುವುದು.

ಸಾರಿಗೆ ಸಿಬ್ಬಂದಿ ಮುಷ್ಕರ ಅಂತ್ಯ -ಕೋಡಿಹಳ್ಳಿ ಚಂದ್ರಶೇಖರ್ ಘೋಷಣೆ, ಯಾವುದೇ ಕ್ಷಣ ಬಸ್​ ರೈಟ್.. ರೈಟ್​!

ಸಂಕಲನ | ಸಾರಿಗೆ ಮುಷ್ಕರ: ಇಲ್ಲಿದೆ ಮೊದಲ ದಿನದಿಂದ ಈವರೆಗಿನ ಘಟನಾವಳಿಗಳ ಚಿತ್ರಣ

Published On - 8:59 pm, Mon, 14 December 20