ವಿಜಯಪುರ: ತೋಟಗಾರಿಕಾ ಬೆಳೆಗಳಿಗೆ ಪ್ರಸಿದ್ಧಿ ಪಡೆದಿರುವ ಬೆಳೆ ಎಂದರೆ ವಿಜಯಪುರ ಜಿಲ್ಲೆ. ಅದರಲ್ಲೂ ದ್ರಾಕ್ಷಿ, ನಿಂಬೆ, ದಾಳಿಂಬೆ ಬೆಳೆಗಳು ಉತೃಷ್ಟ ಗುಣಮಟ್ಟದಲ್ಲಿ ಇಲ್ಲಿ ಬೆಳೆಯುತ್ತವೆ. ಹವಾಮಾನ, ತಾಪಮಾನ ಈ ಬೆಳೆಗಳಿಗೆ ಇದು ಪೂರಕವಾಗಿದ್ದು, ಇಡೀ ಏಷ್ಯಾದಲ್ಲಿಯೇ ಉತ್ತಮ ಗುಣಮಟ್ಟದ ದ್ರಾಕ್ಷಿ ಹಾಗೂ ದಾಳಿಂಬೆ ವಿಜಯಪುರ ಜಿಲ್ಲೆಯಲ್ಲಿ ಬೆಳೆಯಲಾಗುತ್ತದೆ. ಇಲ್ಲಿನ ದ್ರಾಕ್ಷಿ, ನಿಂಬೆ ಹಾಗೂ ದಾಳಿಂಬೆ ಅನ್ಯ ರಾಷ್ಟ್ರಗಳಿಗೆ ರಫ್ತಾಗುತ್ತಿದ್ದು, ಅರಬ್ ರಾಷ್ಟ್ರಗಳಲ್ಲಿ ಇಲ್ಲಿನ ತೋಟಗಾರಿಕೆ ಬೆಳೆಗಳಿಗೆ ಹೆಚ್ಚಿನ ಬೇಡಿಕೆ ಇದೆ.
ನಿಂಬೆ ಅಭಿವೃದ್ಧಿ ಮಂಡಳಿ ಸ್ಥಾಪನೆ:
ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಆಡಳಿತದಲ್ಲಿ ಇರುವಾಗ ಅಂದರೆ 2017ರಲ್ಲಿ ಜಿಲ್ಲೆಯಲ್ಲಿ ನಿಂಬೆ ಅಭಿವೃದ್ಧಿ ಮಂಡಳಿ ಸ್ಥಾಪನೆ ಮಾಡಿದ್ದರು. 2018, 2019, 2020 ರಲ್ಲಿ ಹೀಗೆ ಮೂರು ಬಾರಿ ವಾರ್ಷಿಕವಾಗಿ 1 ಕೋಟಿ ರೂಪಾಯಿ ಮಾತ್ರ ಅನುದಾನ ನೀಡಲಾಗಿದೆ. ಆದರೆ ಹೆಚ್ಚಿನ ಹಣ ಇಲ್ಲದ ಕಾರಣ ಅಭಿವೃದ್ಧಿ ಮಾಡಲಾಗುತ್ತಿಲ್ಲಾ.
ಆದರೆ ನಿಂಬೆ ಅಭಿವೃದ್ಧಿ ಮಂಡಳಿ ನೆಮಕಾವಸ್ಥೆಯಾದಂತಾಗಿದೆ. ಸದ್ಯ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ನಿಂಬೆ ಅಭಿವೃದ್ಧಿ ಮಂಡಳಿಗೆ ವಿಜಯಪುರ ಜಿಲ್ಲೆಯವರೇ ಆದ ಅಶೋಕ ಅಲ್ಲಾಪುರ ಅವರನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡಿದ್ದಾರೆ. ಸದ್ಯ ನಿಂಬೆ ಅಭಿವೃದ್ಧಿ ಮಂಡಳಿ ಹಾಲಿ ಆಧ್ಯಕ್ಷ ಅಶೋಕ ಅಲ್ಲಾಪುರ ನಿಂಬೆ ಅಭಿವೃದ್ಧಿ ಮಂಡಳಿಗೆ ಹೆಚ್ಚಿನ ಆನುದಾನ ನೀಡಬೇಕು ಎಂದು ಒತ್ತಾಯ ಮಾಡಿದ್ದಾರೆ.
ಹೆಚ್ಚಿನ ಅನುದಾನಕ್ಕೆ ಒತ್ತಾಯ:
ತೀವ್ರ ಸಂಕಷ್ಟದಲ್ಲಿರುವ ನಿಂಬೆ ಬೆಳೆಯುವ ರೈತರ ಅನುಕೂಲಕ್ಕಾಗಿ ಲಿಂಬೆ ಅಭಿವೃದ್ಧಿ ಮಂಡಳಿ ಇನ್ನಷ್ಟು ಸದೃಢಗೊಳಿಸುವ ದಿಸೆಯಲ್ಲಿ ಈ ಮಂಡಳಿಗೆ ಹೆಚ್ಚಿನ ಅನುದಾನ ಒದಗಿಸುವಂತೆ ಲಿಂಬೆ ಅಭಿವೃದ್ಧಿ ಮಂಡಳಿಯ ಅಧ್ಯಕ್ಷರಾದ ಅಶೋಕ ಅಲ್ಲಾಪೂರ ತೋಟಗಾರಿಕಾ ಸಚಿವ ಆರ್. ಶಂಕರ ಅವರಿಗೆ ಮನವಿ ಮಾಡಿದ್ದು,ಸದ್ಯ ನಿಂಬೆ ಅಭಿವೃದ್ಧಿ ಮಂಡಳಿಗೆ ವಾರ್ಷಿಕವಾಗಿ 100 ಕೋಟಿ ರೂಪಾಯಿ ನೀಡಬೇಕೆಂದು ಅಶೋಕ ಅಲ್ಲಾಪುರ ಒತ್ತಾಯಿಸಿದ್ದಾರೆ.
ಬರಗಾಲದ ಜಿಲ್ಲೆಯಲ್ಲಿ ನಿಂಬೆ ಬೆಳೆಯಲು ಜಿಲ್ಲೆಯ ರೈತರು ಪಡಬಾರದ ಕಷ್ಟ ಪಡುತ್ತಿದ್ದಾರೆ. ನೀರಿನ ಕೊರತೆಯಾದ ವೇಳೆ ಬೇರೆ ಬೇರೆ ಕಡೆಗಳಿಂದ ಟ್ಯಾಂಕರ್ ಮೂಲಕ ನೀರು ತಂದು ನಿಂಬೆ ಬೆಳೆಯನ್ನು ಉಳಿಸಲು ಶ್ರಮ ಹಾಕುತ್ತಾರೆ. ಈ ದಿಸೆಯಲ್ಲಿ ನಿಂಬೆ ಬೆಳೆಗಾರರ ಹಿತವನ್ನು ಕಾಪಾಡಬೇಕಿದೆ. ಕಾರಣ ಹೆಚ್ಚಿನ ಅನುದಾನ ಬಂದರೆ ನಿಂಬೆ ಬೆಳೆಗಾರರಿಗೆ ಸಹಾಯ ಮಾಡಲು ಸಾಧ್ಯವಾಗುತ್ತದೆ ಎಂದು ನಿಂಬೆ ಅಭಿವೃದ್ಧಿ ಮಂಡಳಿ ಆಧ್ಯಕ್ಷ ಅಶೋಕ ಅಲ್ಲಾಪುರ ಹೆಚ್ಚಿನ ಅನುದಾನಕ್ಕೆ ಬೇಡಿಕೆ ಇಟ್ಟಿದ್ದಾರೆ.
ಈ ನಿಟ್ಟಿನಲ್ಲಿ ನಿಂಬೆ ಅಭಿವೃದ್ಧಿ ಮಂಡಳಿ ಆಧ್ಯಕ್ಷ ಅಶೋಕ ಅಲ್ಲಾಪುರ ಕಳೆದ ತಿಂಗಳು ಜನವರಿ 30 ರಂದು ರೈತ ಪರ ಅಭಿವೃದ್ಧಿ ಕಾರ್ಯಕ್ರಮಗಳನ್ನು ರೂಪಿಸುವ ಮತ್ತು ಅನುಷ್ಠಾನಗೊಳಿಸುವ ಕುರಿತಂತೆ ಬೆಂಗಳೂರಿನಲ್ಲಿ ತೋಟಗಾರಿಕಾ ಸಚಿವರೊಂದಿಗೆ ಚರ್ಚೆ ನಡೆಸಿದ್ದಾರೆ. ಲಿಂಬೆ ಬೆಳೆಗಾರರ ಸರ್ವತೋಮುಖ ಅಭಿವೃದ್ಧಿಗಾಗಿ ಲಿಂಬೆ ಅಭಿವೃದ್ಧಿ ಮಂಡಳಿಗೆ ಇನ್ನೂ ಹೆಚ್ಚಿನ ಅನುದಾನ ಒದಗಿಸುವಂತೆ ಸಚಿವರಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಸಭೆಯಲ್ಲಿ ಲಿಂಬೆ ಅಭಿವೃದ್ಧಿ ಮಂಡಳಿಯ ನಿರ್ದೇಶಕರಾದ ಶಂಕರಗೌಡ ಬಿರಾದಾರ, ತೋಟಗಾರಿಕಾ ಜಂಟಿ ನಿರ್ದೇಶಕರಾದ ಪ್ರಸಾದ್, ವ್ಯವಸ್ಥಾಪಕ ನಿರ್ದೇಶಕರಾದ ಸಂತೋಷ ಸಪ್ಪಂಡಿ, ಸಹಾಯಕ ನಿರ್ದೇಶಕರಾದ ಆನಂದ ಬಿರಾದಾರ ಅವರು ಉಪಸ್ಥಿತರಿದ್ದರು.
ಎಲ್ಲೆಲ್ಲಿ ಎಷ್ಟೆಷ್ಟು ನಿಂಬೆ ಬೆಳೆಯಲಾಗುತ್ತಿದೆ:
ವಿಜಯಪುರ ಜಿಲ್ಲೆಯಲ್ಲಿ ಒಟ್ಟು 13,000 ಹೆಕ್ಟೇರ್ ಪ್ರದೇಶಲ್ಲಿ ನಿಂಬೆ ಬೆಳೆಯಲಾಗುತ್ತಿದೆ. ಇದರಾಚೆ ಬಾಗಲಕೋಟೆ, ಕಲಬುರಗಿ ಹೆಚ್ಚಿನ ಮಟ್ಟದಲ್ಲಿ ಲಿಂಬೆ ಬೆಳೆಯಲಾಗುತ್ತದೆ. ಇದರ ಜೊತೆಗೆ ಉತ್ತರ ಕರ್ನಾಟಕ ಭಾಗದ ಕೊಪ್ಪಳ, ಯಾದಗಿರಿ, ರಾಯಚೂರು, ಬೀದರ್ ಜಿಲ್ಲೆಯಗಳಲ್ಲಿ ಸಣ್ಣ ಪ್ರಮಾಣದಲ್ಲಿ ನಿಂಬೆ ಬೆಳೆ ಬೆಳೆಯಲಾಗುತ್ತಿದೆ. ಇನ್ನು ದಕ್ಷಿಣ ಕರ್ನಾಟಕ ಭಾಗದಲ್ಲಿ ನಿಂಬೆ ಬೆಳೆಯ ಪ್ರಮಾಣ ಅತೀ ಕಡಿಮೆಯಿದೆ.