ದೇಶ ಎಂದರೆ ಜನರೇ ಅಲ್ಲವೆ? ಜನದ್ರೋಹಿಗಳು ದೇಶ ಪ್ರೇಮಿಗಳು ಹೇಗಾಗುತ್ತಾರೆ? ನಾಡಿನ ಜನತೆಗೆ ಸಿದ್ದರಾಮಯ್ಯ ಬರೆದ ಪತ್ರ

| Updated By: guruganesh bhat

Updated on: Jan 31, 2021 | 7:28 PM

ಮೆರವಣಿಗೆ ನಡೆಸಿದ 10 ಲಕ್ಷ ರೈತರನ್ನು ಯಾವ ನಾಲಿಗೆಯಲ್ಲಿ ದೇಶದ್ರೋಹಿಗಳು ಎನ್ನುವುದು? ಆತ್ಮ, ಹೃದಯಗಳನ್ನು ಮಾರಿಕೊಂಡ, ಒತ್ತೆ ಇಟ್ಟುಕೊಂಡ ಜನದ್ರೋಹಿಗಳು ಮಾತ್ರವೇ ಈ ಮಾತುಗಳನ್ನಾಡಲು ಸಾಧ್ಯ ಅಲ್ಲವೇ?

ದೇಶ ಎಂದರೆ ಜನರೇ ಅಲ್ಲವೆ? ಜನದ್ರೋಹಿಗಳು ದೇಶ ಪ್ರೇಮಿಗಳು ಹೇಗಾಗುತ್ತಾರೆ? ನಾಡಿನ ಜನತೆಗೆ ಸಿದ್ದರಾಮಯ್ಯ ಬರೆದ ಪತ್ರ
ವಿಪಕ್ಷ ನಾಯಕ ಸಿದ್ದರಾಮಯ್ಯ
Follow us on

ನಾಡಿನ ಪ್ರೀತಿಯ ಬಂಧುಗಳೇ,

ದೇಶದ ರೈತರು ಇಂದು ಅತ್ಯಂತ ಹತಾಶರಾಗಿ ಬೀದಿಗೆ ಇಳಿದು ಪ್ರತಿಭಟಿಸುತ್ತಿದ್ದಾರೆ. ಪ್ರತಿಭಟನೆ ಏಕೆ ನಡೆಯುತ್ತಿದೆಯೆಂದು ಅನೇಕರಿಗೆ ಗೊತ್ತಿದೆ. ಗೊತ್ತಿಲ್ಲದ ಜನರೂ ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ಈ ರಾಜ್ಯದ, ನಮ್ಮ ದೇಶದ ಅಸಂಖ್ಯಾತ ಜನರು ಅತ್ಯಂತ ಮೂಲಭೂತ ಅಗತ್ಯಗಳಾದ ಅನ್ನ, ಬಟ್ಟೆ, ಆರೋಗ್ಯ, ಶಿಕ್ಷಣ ಹೀಗೆ ದೈನಂದಿನ ವಿಚಾರಗಳಲ್ಲಿ ಮುಳುಗಿದ್ದಾರೆ. ದೇಶದ ಆಗು ಹೋಗುಗಳ ಕುರಿತು ಆಸಕ್ತಿ ಇರುವವರು ಮಾಹಿತಿಯನ್ನು ಹುಡುಕಿ ಅಥವಾ ಕೇಳಿ ಪಡೆದುಕೊಂಡು ಸತ್ಯ ಯಾವುದು ಸುಳ್ಳು ಯಾವುದು ಎಂದು ಪರಾಮರ್ಶಿಸಿ ವಿಚಾರವಂತರಾಗುತ್ತಿದ್ದಾರೆ.

ದೇಶದ ರೈತರು ಕಣ್ಣಲ್ಲಿ ನೀರು ಹಾಕಿ ರೋಧಿಸುತ್ತಿರುವುದನ್ನು ನಾವು ನೋಡುತ್ತಿದ್ದೇವೆ. ಅವರು ಯಾಕೆ ಕಣ್ಣೀರು ಹಾಕುತ್ತಿದ್ದಾರೆ? ದೆಹಲಿಯ ಮೈನಸ್ ಡಿಗ್ರಿ ಚಳಿಯಲ್ಲಿ ವಯಸ್ಸಾದವರು, ಅಸಹಾಯಕರು, ಯುವಕರು ಕೂತು ಯಾಕೆ ಪ್ರತಿಭಟನೆ ನಡೆಸುತ್ತಿದ್ದಾರೆ? ಸುಮಾರು 140 ಕ್ಕೂ ಹೆಚ್ಚು ಜನರು ಹೋರಾಟದಲ್ಲಿ ಯಾಕೆ ಹುತಾತ್ಮರಾದರು? ಸಾವೆಂಬುದು ಅಷ್ಟೊಂದು ಸರಳವೇ ಅವರಿಗೆ? ರೈತರ ಸಾವಿಗೆ ಎಂತೆಂಥ ಭೀಕರ ಪರಿಸ್ಥಿತಿ ನಿರ್ಮಾಣವಾಗಿದೆ ಎಂಬುದನ್ನು ಮಧ್ಯಮ ವರ್ಗದ ನಗರಗಳಲ್ಲಿನ ನಾವು ಅರ್ಥ ಮಾಡಿಕೊಂಡಿದ್ದೇವೆಯೇ?

ಯಾರೋ ಕೆಲವು ಕಿಡಿಗೇಡಿಗಳು ಜನವರಿ 26 ನೇ ತಾರೀಖು ಕೆಂಪು ಕೋಟೆಯ ಬಳಿ ಬಾವುಟ ಹಾರಿಸಿದರು, ದಾಂಧಲೆ ಮಾಡಿದರು. ದಾಂಧಲೆ ಮಾಡಿದವರಿಗೆ ಶಿಕ್ಷೆಯಾಗಬೇಕು ನಿಜ. ದೆಹಲಿಯ ಬೀದಿ ಬೀದಿಗಳಲ್ಲಿ ಸಿಸಿ ಕ್ಯಾಮೆರಾಗಳಿವೆ ಎಂದು ಕೇಳಿದ್ದೇನೆ. ಅವುಗಳ ಮೂಲಕ ತಪ್ಪಿತಸ್ಥರನ್ನು ಹಿಡಿದು ಶಿಕ್ಷಿಸಲಿ. ಕೆಂಪು ಕೋಟೆಯ ಆವರಣಕ್ಕೆ ಹೋದವರೆಷ್ಟು ಜನ? ಹೆಚ್ಚೆಂದರೆ ಒಂದೆರಡು ಸಾವಿರ ಜನರಿರಬಹುದು. ಉಳಿದಂತೆ ಪೊಲೀಸರು ವಿಧಿಸಿದ್ದ ನಿಯಮಗಳಂತೆ ನಡೆದುಕೊಂಡು ಮೆರವಣಿಗೆ ನಡೆಸಿದ 10 ಲಕ್ಷ ರೈತರನ್ನು ಯಾವ ನಾಲಿಗೆಯಲ್ಲಿ ದೇಶದ್ರೋಹಿಗಳು ಎನ್ನುವುದು? ಆತ್ಮ, ಹೃದಯಗಳನ್ನು ಮಾರಿಕೊಂಡ, ಒತ್ತೆ ಇಟ್ಟುಕೊಂಡ ಜನದ್ರೋಹಿಗಳು ಮಾತ್ರವೇ ಈ ಮಾತುಗಳನ್ನಾಡಲು ಸಾಧ್ಯ ಅಲ್ಲವೇ? ದೇಶ ಎಂದರೆ ಜನರೇ ಅಲ್ಲವೆ? ಜನದ್ರೋಹಿಗಳು ದೇಶ ಪ್ರೇಮಿಗಳು ಹೇಗಾಗುತ್ತಾರೆ?

ಬಾಯಿ ಮಾತಲ್ಲಿ ಮಾತ್ರ ದೇಶ ಪ್ರೇಮದ ಬಗ್ಗೆ ಬರೀ ಭಾಷಣ ಮಾಡುವ ಬಿಜೆಪಿಯವರು ಮೊನ್ನೆ, ‘ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವಿದ್ದಾಗ ಅತಿ ಹೆಚ್ಚು ಆತ್ಮಹತ್ಯೆಗಳಾದವು’ ಎಂದು ಟ್ವೀಟ್​ ಮಾಡಿದ್ದರು. ಇದನ್ನು ತಿಳುವಳಿಕೆಯುಳ್ಳ ನಾಡಿನ ಜನರು ಪರಿಶೀಲಿಸಿ ನೋಡಿದರೆ ಸತ್ಯ ತಿಳಿಯುತ್ತದೆ. ಅತಿ ಹೆಚ್ಚು ಆತ್ಮಹತ್ಯೆಗಳಾಗಿರುವುದು ಬಿಜೆಪಿ ಸರ್ಕಾರಗಳಿದ್ದ ಮಹಾರಾಷ್ಟ್ರ, ಮಧ್ಯ ಪ್ರದೇಶ ಮುಂತಾದ ರಾಜ್ಯಗಳಲ್ಲಿ. ಇಷ್ಟಕ್ಕೂ ಯಾಕೆ ಆತ್ಮಹತ್ಯೆಗಳಾದವು?

ಕೇಂದ್ರದಲ್ಲಿ ನರೇಂದ್ರ ಮೋದಿಯವರ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆ ಚೀನಾದಿಂದ ಭಾರತಕ್ಕೆ ಆಮದು ಮಾಡಿಕೊಳ್ಳುತ್ತಿದ್ದ ರೇಷ್ಮೆಯ ಮೇಲಿನ ಆಮದು ತೆರಿಗೆಯನ್ನು ಶೇ.5 ಕ್ಕೆ ಇಳಿಸಿದರು. ನಮ್ಮ ರೇಷ್ಮೆಗೆ ಬೆಲೆ ಕುಸಿಯಿತು. ರೈತರ ಹೊಟ್ಟೆ ಮೇಲೆ ತಣ್ಣೀರು ಬಟ್ಟೆ ಬಿತ್ತು. ಮಲೇಶಿಯಾ ಮುಂತಾದ ದೇಶಗಳಿಂದ ದೊಡ್ಡ ಮಟ್ಟದಲ್ಲಿ ಎಣ್ಣೆ, ಸೋಯಾ ಕಾಳುಗಳನ್ನು ಆಮದು ಮಾಡಿಕೊಂಡರು. ದೇಶದಲ್ಲಿ ಎಣ್ಣೆ ಕಾಳು ಬೆಳೆಯುವ ಮಧ್ಯ ಪ್ರದೇಶ, ಕರ್ನಾಟಕ, ಮಹಾರಾಷ್ಟ್ರ ಮುಂತಾದ ರಾಜ್ಯಗಳ ರೈತರ ಬದುಕಿಗೆ ಗಂಡಾಂತರ ಒದಗಿತು. ಇದರ ಜೊತೆಯಲ್ಲಿ ದೇಶದ ಅನೇಕ ಕಡೆ ಭೀಕರ ಬರಗಾಲ ಬಂತು. ರೈತರ ಸಾಲ ಮನ್ನಾ ಮಾಡಿ ಎಂದು ಕೈ ಮುಗಿದು ಕೇಂದ್ರವನ್ನು ರಾಜ್ಯಗಳು ಕೇಳಿಕೊಂಡವು. ಮೋದಿಯವರು ರೈತರ ಸಾಲ ಮನ್ನಾ ಮಾಡುವ ಬದಲಾಗಿ ದೊಡ್ಡ ಕೈಗಾರಿಕೋದ್ಯಮಿಗಳ ಸಾಲ ವಸೂಲಿ ಮಾಡುವುದನ್ನು ನಿಲ್ಲಿಸಿ ಅದನ್ನು ಎನ್​ಪಿಎ ಎಂದು ಮಾಫಿ ಮಾಡಿಬಿಟ್ಟರು.

ನೀವೆಲ್ಲರೂ ನೋಡುತ್ತಿದ್ದೀರಿ. ಇನ್ನಷ್ಟು ವಿಶಾಲ ಮನಸ್ಸಿನಿಂದ ನೋಡಿ ಕೇಂದ್ರದ ಪಾಲಿಸಿಗಳು ಯಾರ ಪರವಾಗಿವೆ ಎಂದು. ಬಡವರ ಪರವಾಗಿವೆ ಎಂದು ನನಗಂತೂ ಅನ್ನಿಸುತ್ತಿಲ್ಲ. ಗ್ಯಾಸಿನ ಬೆಲೆ ಗಗನಕ್ಕೇರಿದೆ. ಯುಪಿಎ ಸರ್ಕಾರದ ಅಂತ್ಯದ ವೇಳೆಗೆ ಪೆಟ್ರೋಲ್ ಮೇಲೆ ಕೇಂದ್ರ ಸರಕಾರ ವಿಧಿಸುತ್ತಿದ್ದ ತೆರಿಗೆ 9.21 ಮಾತ್ರ. ಇದನ್ನು ಈಗ 32.98 ಕ್ಕೆ ಹೆಚ್ಚಿಸಲಾಗಿದೆ. ಹಾಗೆಯೇ ಡೀಸೆಲ್ ಮೇಲೆ ಮೊದಲಿದ್ದ ತೆರಿಗೆ 3.45 ಮಾತ್ರ. ಈಗ ಇದನ್ನು 31.83 ಕ್ಕೆ ಹೆಚ್ಚಿಸಲಾಗಿದೆ. ರಾಜ್ಯದಿಂದ ಸ್ಥೂಲವಾಗಿ ನೋಡಿದರೂ ಸುಮಾರು ಎರಡೂವರೆ ಲಕ್ಷಕೋಟಿ ರೂಪಾಯಿ ಹಣ ಕೇಂದ್ರಕ್ಕೆ ಹೋಗುತ್ತಿದೆ. ಅದರಲ್ಲಿ 1 ಲಕ್ಷಕೋಟಿ ಆದಾಯ ತೆರಿಗೆ, 83 ಸಾವಿರ ಕೋಟಿ ಜಿ.ಎಸ್.ಟಿ, 36 ಸಾವಿರ ಕೋಟಿ ಪೆಟ್ರೋಲ್ ಡೀಸೆಲ್ ಮೇಲಿನ ಹೆಚ್ಚುವರಿ (ಅಡಿಷನಲ್) ತೆರಿಗೆ, ಯುಪಿಎ ಸರ್ಕಾರವಿದ್ದಾಗ ಕೇವಲ 3500 ಕೋಟಿ ಮಾತ್ರ ತೆರಿಗೆ ಸಂಗ್ರಹವಾಗುತ್ತಿತ್ತು.

ನಮ್ಮ ಐ.ಟಿ ರಫ್ತಿನಿಂದ ಬರುವ ತೆರಿಗೆಯನ್ನು, ಸುಂಕವನ್ನು, ಸೆಸ್ಸುಗಳನ್ನು ಇದರಲ್ಲಿ ಸೇರಿಸಿಲ್ಲ. ದೇಶದಲ್ಲಿ ಶೇ.40 ಕ್ಕೂ ಹೆಚ್ಚಿನ ಪ್ರಮಾಣದ ರಫ್ತು ನಮ್ಮ ರಾಜ್ಯದಿಂದಲೇ ಆಗುತ್ತದೆ. ಅಂದರೆ ಕೇಂದ್ರ ನಮಗೆ ಶೇ.42 ರಷ್ಟು ಕೊಡಬೇಕಲ್ಲವೆ? ಆದರೆ, ತೆರಿಗೆ ಮತ್ತು ಸಹಾಯಧನಗಳ ರೂಪದಲ್ಲಿ ಕೊಡುತ್ತಿರುವುದು ಕೇವಲ 45 ರಿಂದ 50 ಸಾವಿರ ಕೋಟಿ ಮಾತ್ರ. ದೇಶದ ಬೇರೆ ಬೇರೆ ರಾಜ್ಯಗಳೂ ಬೆಳವಣಿಗೆಯಾಗಬೇಕು ನಿಜ. ಅದಕ್ಕೆ ಕೇಂದ್ರ ಉಳಿಸಿಕೊಳ್ಳುವ ಶೇ.58 ರಷ್ಟು ನಮ್ಮ ಹಣದಲ್ಲಿ ಉದಾರವಾಗಿ ನೀಡಲಿ ಯಾರು ಬೇಡ ಅಂದವರು?

ರೈತರ ವಿಚಾರಕ್ಕೆ ಬರೋಣ. ರೈತರು ಈಗ ಕೇಂದ್ರವು ಜಾರಿಗೆ ತಂದಿರುವ ಮೂರೂ ಕಾಯ್ದೆಗಳು ನಮ್ಮನ್ನು ನಾಶ ಮಾಡುತ್ತವೆ ಎಂದು ಹೇಳುತ್ತಿದ್ದಾರೆ. ಅವುಗಳನ್ನು ಹಿಂಪಡೆಯಿರಿ ಎಂದು ಪ್ರತಿಭಟಿಸುತ್ತಿದ್ದಾರೆ. ಈ ಕಾಯ್ದೆಗಳು ರೈತರನ್ನು ಉದ್ಧಾರ ಮಾಡುತ್ತವೆ ಎಂದು ಕೇಂದ್ರ ಹೇಳುತ್ತಿದೆ. ತಿಳಿದವರು ಯಾವುದು ಸರಿ ಎಂದು ಯೋಚಿಸಬೇಕಲ್ಲವೆ? ಸರಿ ತಪ್ಪುಗಳ ಕುರಿತು ಜನರಿಗೆ ಹೇಳಬೇಕಲ್ಲವೆ? ಚರ್ಚೆ, ಸಂವಾದ ನಡೆಸುವವರನ್ನೇ ದೇಶದ್ರೋಹಿಗಳು ಎಂದು ಬಿಂಬಿಸಿ ಅನೇಕ ಮಾಧ್ಯಮದವರ ಮೇಲೆ ಕೇಸು ಹಾಕಿಬಿಟ್ಟರೆ ಅದನ್ನು ಪ್ರಜಾಪ್ರಭುತ್ವ ಎನ್ನಲಾದೀತೆ?

ರೈತರು ಕೇಳುತ್ತಿರುವುದು ಇಷ್ಟೆ. ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತಂದಿದ್ದೀರಿ. ಯಾರು ಎಲ್ಲಿ ಬೇಕಾದರೂ ಕೊಳ್ಳಬಹುದು ಮಾರಬಹುದು ಎನ್ನುತ್ತೀರಿ. ಎಪಿಎಂಸಿಗಳಲ್ಲಿ ವ್ಯಾಪಾರ ಮಾಡುವ ವ್ಯಾಪಾರಿಗಳು ತೆರಿಗೆ ಕಟ್ಟಬೇಕು. ಹೊರಗೆ ಖರೀದಿಸುವವರು ತೆರಿಗೆ ಕಟ್ಟುವಂತಿಲ್ಲ. ಹಾಗಾದಾಗ ಯಾರು ಎಪಿಎಂಸಿಗೆ ಬಂದು ಖರೀದಿಸುತ್ತಾರೆ? ಕೊಳ್ಳುವವರು ಇಲ್ಲ ಎಂದ ಮೇಲೆ ಮಾರುವವರು ತಮ್ಮ ಉತ್ಪನ್ನ ಎಲ್ಲಿ ಮಾರುವುದು? ರೈತರು ತಮ್ಮ ಹೊಲ ಗದ್ದೆಗಳಲ್ಲೇ ಮಾರಿದರೆ ಎಷ್ಟು ಬೆಲೆಗೆ ಮಾರಿದರು ಎಂದು ನೋಡುವುದು ಹೇಗೆ? ರೈತರನ್ನು ಒಬ್ಬಂಟಿಗಳಾಗಿಸಿ ಶೋಷಣೆ ಮಾಡಿದರೆ ಅದನ್ನು ಹೇಗೆ ನಿಲ್ಲಿಸುತ್ತೀರಿ? ಉತ್ಪನ್ನಗಳ ಬೆಲೆಯನ್ನು ಹೇಗೆ ನಿರ್ಣಯಿಸುತ್ತೀರಿ? ಎಪಿಎಂಸಿಗಳಿದ್ದರೆ ರೈತರು ತಮ್ಮ ಉತ್ಪನ್ನವನ್ನು ಮಳಿಗೆಗಳಲ್ಲಿಟ್ಟು ಸಾಲ ಪಡೆಯಬಹುದು. ಈಗ ಎಪಿಎಂಸಿಗಳೆಲ್ಲ ಖಾಸಗಿಯವರ ಪಾಲಾದರೆ ರೈತರು ಬದುಕುವುದು ಹೇಗೆ? ಎಪಿಎಂಸಿ ವ್ಯವಸ್ಥೆಯಲ್ಲಿ ಲೋಪಗಳಿಲ್ಲವೆಂತಲ್ಲ. ಅವುಗಳನ್ನು ಸರ್ಕಾರ-ರೈತರು ಒಟ್ಟಾಗಿ ಸೇರಿ ಸರಿ ಮಾಡಬೇಕಲ್ಲವೆ? ರೈತರೊಂದಿಗೆ ಚರ್ಚಿಸದೆ ಕೊರೊನಾ ಕರ್ಫ್ಯೂ ಇದ್ದಾಗ ಸುಗ್ರೀವಾಜ್ಞೆ ಮೂಲಕ ಯಾಕೆ ಹೊಸ ಕಾನೂನು ತಂದಿರಿ? ಸಂವಿಧಾನದಲ್ಲಿ ರಾಜ್ಯಗಳಿಗೆ ಇರುವ ಕೃಷಿ ಮಾರುಕಟ್ಟೆಗಳ ಮೇಲಿನ ಅಧಿಕಾರವನ್ನು ಯಾಕೆ ದಮನಿಸಿ ಒಕ್ಕೂಟ ವ್ಯವಸ್ಥೆಯನ್ನು ಹಾಳುಗೆಡವುತ್ತಿದ್ದೀರಿ? ಎಂದು ರೈತರು ಕೇಳುತ್ತಿದ್ದಾರೆ.

ಈ ಪ್ರಶ್ನೆಗಳಿಗೆ ಕೇಂದ್ರ ಸರ್ಕಾರ ಉತ್ತರಿಸುತ್ತಿಲ್ಲ. ಬದಲಿಗೆ, ‘ಬೆಂಬಲ ಬೆಲೆ ರದ್ದು ಮಾಡಲಾಗುತ್ತದೆ ಎಂದು ಕೆಲವು ರೈತರು ಮತ್ತು ವಿರೋಧ ಪಕ್ಷಗಳು ಅಪಪ್ರಚಾರ ಮಾಡುತ್ತಿವೆ. ಇದು ಸುಳ್ಳು ಎಂದು ಕೋಟ್ಯಾಂತರ ರೂಪಾಯಿ ಖರ್ಚು ಮಾಡಿ ಜಾಹಿರಾತು ನೀಡುತ್ತಾರೆ. ಇದಕ್ಕೆ ರೈತರು ‘ಆಯಿತಪ್ಪ, ರೈತರ ಉತ್ಪನ್ನಗಳಿಗೆ ಕನಿಷ್ಟ ಬೆಂಬಲ ಬೆಲೆಯನ್ನು ನೀಡುವ ಕಾಯ್ದೆಯೊಂದನ್ನು ಜಾರಿಗೆ ತನ್ನಿ’ ಎಂದರೆ ಕೇಂದ್ರ ಸರ್ಕಾರ ಬಾಯಿಯನ್ನೇ ಬಿಡದೆ ಮೌನವಾಗುತ್ತದೆ. ಪಂಜಾಬು ಮತ್ತು ಕೇರಳ ಸರ್ಕಾರಗಳು ಕನಿಷ್ಟ ಬೆಂಬಲ ಬೆಲೆಗಿಂತ ಕಡಿಮೆ ಬೆಲೆಗೆ ಯಾರಾದರೂ ಕೊಂಡುಕೊಂಡರೆ ಅದು ಶಿಕ್ಷಾರ್ಹ ಅಪರಾಧ ಎಂದು ಕಾಯ್ದೆ ತಂದರೆ, ರಾಷ್ಟ್ರಪತಿಗಳು ಆ ಕಾಯ್ದೆಗೆ ಸಹಿ ಮಾಡದೆ ತಿರಸ್ಕರಿಸುತ್ತಾರೆ. ಏನಿದರ ಅರ್ಥ?

ಮತ್ತದೇ ಗೌರವಾನ್ವಿತ ರಾಷ್ಟ್ರಪತಿಗಳ ಬಾಯಲ್ಲಿ ಈ ಮೂರೂ ಕಾಯ್ದೆಗಳು ರೈತ ಪರವಾಗಿವೆ ಎಂದು ಕೇಂದ್ರ ಸರ್ಕಾರ ಭಾಷಣ ಮಾಡಿಸುತ್ತದೆ. ಹೇಗೆ ಸಹಾಯವಾಗ್ತದೆ ಹೇಳ್ರಪ್ಪಾ ಅಂದರೆ ಮತ್ತದೇ ಮಾತು ತಿರುಚುವ ಕೆಲಸ. ಪ್ರತಿಭಟನೆ ಮಾಡಿದರೆ ದೇಶದ್ರೋಹಿ ಎಂಬ ಕೇಸು. ಹಾಗಿದ್ದರೆ ರೈತರನ್ನು ಹೇಗೆ ರಕ್ಷಿಸಬೇಕು? ಗದುಗಿನ ಭಾರತ ಕೃತಿ ಬರೆದ ಕನ್ನಡದ ಹೆಮ್ಮೆಯ ಕವಿ ಕುಮಾರವ್ಯಾಸ ಹೇಳುತ್ತಾನೆ; ‘ಕೃಷಿಯೇ ಮೊದಲು ಸರ್ವಕ್ಕೆ.. ಕೃಷಿ ವಿಹೀನನ ದೇಶವದು ದುರ್ದೇಶ ಎನ್ನುತ್ತಾನೆ.’ ಇದು ಇವರಿಗೆ ಯಾಕೆ ಅರ್ಥವಾಗುವುದಿಲ್ಲ?

ಪ್ರತಿಭಟಿಸುತ್ತಿರುವ ರೈತರು ತಮಗಾಗಿ ಮಾತ್ರ ಪ್ರತಿಭಟಿಸುತ್ತಿಲ್ಲ. ದೇಶಕ್ಕಾಗಿ ಪ್ರತಿಭಟಿಸುತ್ತಿದ್ದಾರೆ. ನಗರಗಳ ನಿಮ್ಮೆಲ್ಲರ ರಕ್ಷಣೆಗಾಗಿ ಪ್ರತಿಭಟಿಸುತ್ತಿದ್ದಾರೆ. ದಯಮಾಡಿ ಅರ್ಥಮಾಡಿಕೊಳ್ಳಿ. ಹೇಗೆ ಗೊತ್ತೆ? ಎಪಿಎಂಸಿ ಕಾಯ್ದೆಯ ನಂತರ ಮತ್ತೊಂದು ಕಾಯ್ದೆಯನ್ನು ತಿದ್ದುಪಡಿ ಮಾಡಿದ್ದಾರೆ. ಅದು ಅಗತ್ಯ ವಸ್ತುಗಳ ಕಾಯ್ದೆ. ಅದರಲ್ಲಿ ಮನುಷ್ಯರು ಬದುಕಲಿಕ್ಕೆ ತಿನ್ನಬಹುದಾದ ಆಹಾರ ಧಾನ್ಯಗಳು, ಎಣ್ಣೆ, ಕಾಳುಗಳು, ಬೇಳೆಗಳು ಮುಂತಾದವುಗಳನ್ನು ಗೋದಾಮುಗಳಲ್ಲಿ ಸಂಗ್ರಹಿಸುವುದಕ್ಕೆ ಈ ಮೊದಲು ಒಂದು ಮಿತಿ ಇತ್ತು. ಈಗ ಆ ಮಿತಿ ತೆಗೆದು ಹಾಕಿದ್ದಾರೆ. ಯಾರು ಎಷ್ಟು ಬೇಕಾದರೂ ಸಂಗ್ರಹಿಸಿಡಬಹುದು. ಇದರಿಂದ ರೈತರಿಗೂ ಗ್ರಾಹಕರು ಇಬ್ಬರಿಗೂ ಭೀಕರ ಹೊಡೆತ ಬೀಳುತ್ತದೆ.

ಉದಾಹರಣೆಗೆ ಹಿಮಾಚಲದ ಸೇಬನ್ನು ವ್ಯಾಪಾರಿಗಳು ಹಿಂದೆ ತೋಟಗಳಲ್ಲೇ 20ರೂ ಕೊಟ್ಟು ಖರೀದಿಸುತ್ತಿದ್ದರಂತೆ. ಈ ದೇಶದ ದೊಡ್ಡ ವ್ಯಾಪಾರಿಯೊಬ್ಬ [ಅವನು ಯಾರು ಎಂದು ಹೇಳಬೇಕಾಗಿಲ್ಲ] ಹೋಗಿ ನಾನು 30 ರೂ ಕೊಡುತ್ತೇನೆ ಎಂದು ಎರಡು ವರ್ಷ ಖರೀದಿಸಿದನಂತೆ. ವ್ಯಾಪಾರಿಗಳು ನಷ್ಟ ಅನುಭವಿಸಿದರು. ಬೇರೆ ಕೆಲಸಗಳನ್ನು ಹುಡುಕಿ ಹೊರಟರು. ಈಗ ಆ ದೊಡ್ಡ ವ್ಯಾಪಾರಿ ಕುಳ ರೈತರಿಂದ 8-10 ರೂಪಾಯಿ ಕೊಟ್ಟು ಕೊಂಡುಕೊಳ್ಳುತ್ತಿದ್ದಾನಂತೆ. ಹಾಗೆ ಕೊಂಡುಕೊಂಡು ದಾಸ್ತಾನು ಮಾಡಿ ನಮಗೆ ನಿಮಗೆ 150-180 ರೂಗೆ ಮಾರತೊಡಗಿದ್ದಾನೆ. 2015-16 ರಲ್ಲಿ ತೊಗರಿ ಬೇಳೆ ಏನಾಯಿತು ಎಂದು ನಿಮಗೆ ಗೊತ್ತಿದೆ. ರೈತರಿಂದ 60-70 ರೂಗೆ ಖರೀದಿ ಮಾಡಿ 180-200 ರೂಗೆ ನಮಗೆ ಮಾರಾಟ ಮಾಡಿದರು. ಆಗ ಐಟಿ ಇಲಾಖೆ ಅದಾನಿ, ಜಿಂದಾಲ್ ಮತ್ತು ಇತರೆ ಬಹುರಾಷ್ಟ್ರೀಯ ಕಂಪೆನಿಗಳ ಗೋದಾಮುಗಳ ಮೇಲೆ ದಾಳಿ ಮಾಡಿ 75 ಸಾವಿರ ಟನ್ ತೊಗರಿ ಬೇಳೆ ವಶ ಪಡಿಸಿಕೊಂಡಿತು. ಇವರೆಲ್ಲರೂ ಅಕ್ರಮ ದಾಸ್ತಾನು ಮಾಡಿದ್ದರು. ಹೊಸ ಕಾಯ್ದೆ ಪ್ರಕಾರ ಮುಂದಿನ ದಿನಗಳಲ್ಲಿ ಯಾರೂ ದಾಳಿ ಮಾಡುವಂತಿಲ್ಲ. ಆ ರೀತಿ ಕಾಯ್ದೆಗೆ ತಿದ್ದುಪಡಿ ತಂದಿದ್ದಾರೆ.

ಗೋದಾಮುಗಳಲ್ಲಿನ ಗೋಲ್‍ಮಾಲ್‍ನಿಂದ ಅವರಿಗೆ ಸಿಗುವ ಲಾಭದ ಲೆಕ್ಕವೆಷ್ಟು ಗೊತ್ತಾ? ಭಾರತದಲ್ಲಿ ನಾವು ವರ್ಷಕ್ಕೆ 48-50 ಮಿಲಿಯನ್ ಮೆಟ್ರಿಕ್ ಟನ್ ತೊಗರಿ ಬೇಳೆ ಬಳಸುತ್ತೇವೆ. ಒಂದು ಕೆ.ಜಿ ತೊಗರಿ ಬೇಳೆಗೆ ಕೇವಲ 30 ರೂ ಜಾಸ್ತಿಯಾದರೆ ದೇಶದ ಜನ ಸುಮಾರು ಒಂದೂವರೆ ಲಕ್ಷ ಕೋಟಿ ರೂಪಾಯಿ ಹಣವನ್ನು ಹೆಚ್ಚಿಗೆ ತಮ್ಮ ಜೇಬಿನಿಂದ ಪಾವತಿಸುತ್ತಾರೆ. ಈ ಕಾಯ್ದೆ ಜಾರಿಗೆ ತಂದಾಗಿನಿಂದ ತೊಗರಿ ಬೇಳೆ ಸುಮಾರು 40 ರೂ ಜಾಸ್ತಿಯಾಗಿದೆ. ಅಡುಗೆ ಎಣ್ಣೆ ಸುಮಾರು 40 ರೂ ಜಾಸ್ತಿಯಾಗಿದೆ. ಅಕ್ಕಿ ಬೆಲೆ ಜಾಸ್ತಿಯಾಗಿದೆ. ಹೀಗೆ ಆಹಾರ ಧಾನ್ಯಗಳ ಬೆಲೆಗಳೆಲ್ಲ ಜಾಸ್ತಿಯಾಗಿವೆ. ನಿಮ್ಮ ಮನೆಗಳಲ್ಲಿ ಹೆಣ್ಣು ಮಕ್ಕಳನ್ನು ಕೇಳಿ ನೋಡಿ. ಕಳೆದ 4 ತಿಂಗಳಿಂದೀಚೆಗೆ ಪ್ರತಿ ತಿಂಗಳ ಮನೆ ಖರ್ಚು ಎಷ್ಟು ಹೆಚ್ಚಾಗುತ್ತಲೇ ಹೋಗುತ್ತಿದೆ ಎಂದು. ಇದನ್ನೂ ಸರಿಪಡಿಸಬೇಕೆಂದು ರೈತರು ಹೋರಾಡುತ್ತಿದ್ದಾರೆ. ಅಂಥ ರೈತರನ್ನು ಕೆಲವರು ದೇಶದ್ರೋಹಿಗಳು ಎನ್ನುತ್ತಾರಲ್ಲ? ಅವರನ್ನು ಮನುಷ್ಯರು ಎನ್ನುವುದೋ ಇಲ್ಲ ಪಂಚೇಂದ್ರಿಯಗಳು ಸತ್ತು ಹೋದ ರಾಕ್ಷಸರೆನ್ನುವುದೋ?

ಭತ್ತಕ್ಕೆ ಬೆಲೆ ಇಲ್ಲ ಆದರೆ ಅಕ್ಕಿ ಬೆಲೆ ಗಗನಕ್ಕೇರುತ್ತಿದೆ. ಇತ್ತ ರೈತರಿಗೂ ಬೆಲೆ ಸಿಗುತ್ತಿಲ್ಲ, ಗ್ರಾಹಕರಿಗೂ ಅನುಕೂಲ ಆಗುತ್ತಿಲ್ಲ. ಹಾಗಾದರೆ ದೇಶದ ಹಣ ಎಲ್ಲಿಗೆ ಹೋಗುತ್ತಿದೆ? ತಿಳಿದವರು ಮರದ ಮೇಲೆ ಕುಳಿತ ಹಕ್ಕಿಗಳಂತೆ ಕೆಲಸ ಮಾಡಬೇಕೋ ಇಲ್ಲ ಕೊಳಲೂದಿ ಬೇಟೆಗಾರ ಬೇಟೆಯಾಡಲು ಸಹಾಯ ಮಾಡಬೇಕೋ? ಎಂದು ನನ್ನ ಪ್ರೀತಿಯ ಜನರೇ ಹೇಳಬೇಕು. ಇಷ್ಟೆಲ್ಲಾ ಸಾಲದು ಎಂದು ಕೇಂದ್ರ ಸರಕಾರ, ‘ರೈತರೊಂದಿಗೆ ಬಂಡವಾಳಿಗರು ಒಪ್ಪಂದ ಮಾಡಿಕೊಳ್ಳುವ ಕಾಯ್ದೆಯನ್ನೂ ಜಾರಿಗೆ ತಂದಿದ್ದಾರೆ. ಒಪ್ಪಂದದಲ್ಲಿ ಏನಾದರೂ ಲೋಪಗಳಾದರೆ ರೈತರು ಎಸಿ-ಡಿಸಿ ಬಳಿಗೆ ಹೋಗಬೇಕಂತೆ. ಕೋರ್ಟಿಗೆ ಹೋಗಬಾರದಂತೆ. ಈ ಸಮಸ್ಯೆ ಇತ್ಯರ್ಥ ಪಡಿಸುವ ಅಧಿಕಾರವನ್ನು ಆ ಕಾಯ್ದೆಯಲ್ಲಿ ಕೋರ್ಟ್‍ಗಳಿಗೆ ಕೊಟ್ಟೇ ಇಲ್ಲ ಎಂದು ಹೇಳಲಾಗಿದೆ. ಹೀಗಿದ್ದಾಗ ಈ ಅಧಿಕಾರಿಗಳು ಯಾರ ಪರವಾಗಿ ತೀರ್ಮಾನ ಮಾಡುತ್ತಾರೆಂದು ನಮಗೆಲ್ಲ ಗೊತ್ತಿದೆಯಲ್ಲ.

ಈಗ ಹೇಳಿ ಈ ಕಾಯ್ದೆಗಳು ದೇಶದ ಜನರ ಪರವಾಗಿವೆಯೆ? ರೈತರ ಪರವಾಗಿವೆಯೇ? ಕಾರ್ಮಿಕರನ್ನು ಶೋಷಣೆ ಮಾಡುವುದಕ್ಕಂತೂ ಇನ್ನೂ ಭೀಕರ ಕಾಯಿದೆಗಳನ್ನು ಜಾರಿಗೆ ತಂದಿದ್ದಾರೆ. ಕಾರ್ಮಿಕರು ಬೀದಿಯಲ್ಲಿದ್ದರೂ ಯಾರೂ ಕೇಳುವವರಿಲ್ಲ.

ಈಗಲೂ ನನ್ನ ದೇಶದ ಹೆಮ್ಮೆಯ ರೈತರನ್ನು ದೇಶದ್ರೋಹಿಗಳು ಎನ್ನಲು ನಿಮಗೆ ಮನಸ್ಸು ಬರುತ್ತದೆಯೇ? ಮತ್ತೊಮ್ಮೆ ನಾಡಿನ ಪ್ರೀತಿಯ ಜನರನ್ನು ವಿನಂತಿಸುತ್ತೇನೆ. ದಯಮಾಡಿ ರೈತರನ್ನು ದೇಶದ್ರೋಹಿಗಳು ಎನ್ನಬೇಡಿ. ಅವರ ಕಷ್ಟಕ್ಕೆ ಜೊತೆಯಾಗಿ. ಆಗದಿದ್ದರೆ ಅವರ ಬಗ್ಗೆ ಕೆಟ್ಟ ಮಾತು ಆಡುವುದನ್ನಾದರೂ ನಿಲ್ಲಿಸಿ. ಇಡೀ ದೇಶ ಪ್ರತಿಭಟನಾನಿರತ ರೈತರ ಋಣದಲ್ಲಿದೆ ಎನ್ನುವುದನ್ನು ಮರೆಯದಿರೋಣ.

ಧನ್ಯವಾದಗಳೊಂದಿಗೆ
ಇಂತಿ ತಮ್ಮವ,
ಸಿದ್ದರಾಮಯ್ಯ

Published On - 4:54 pm, Sun, 31 January 21