ತಿರುಪತಿ ಆಡಳಿತ ಮಂಡಳಿಯಿಂದ ಅಪಚಾರ; ಆಂಜನೇಯ ಹುಟ್ಟಿದ್ದು ಕರ್ನಾಟಕದಲ್ಲಿ ಅಲ್ಲ ತಿರುಪತಿಯಲ್ಲಂತೆ!

| Updated By: ಸಾಧು ಶ್ರೀನಾಥ್​

Updated on: Apr 10, 2021 | 3:56 PM

ಪುರಾಣ ಕಾಲದಿಂದಲೂ ಆಂಜನೇಯ ಹುಟ್ಟಿದ್ದು ಕರ್ನಾಟಕದ ಕೊಪ್ಪಳದಲ್ಲಿರುವ ಅಂಜನಾದ್ರಿ ಬೆಟ್ಟದಲ್ಲಿ ಎಂಬ ನಂಬಿಕೆ ಇದೆ. ಆದರೆ, ಈ ನಂಬಿಕೆಯನ್ನು ಬುಡಮೇಲು ಮಾಡುವಂತಹ ಹೇಳಿಕೆಯೊಂದು ನೆರೆಯ ಆಂಧ್ರಪ್ರದೇಶದಿಂದ ಕೇಳಿದು ಬಂದಿದೆ.

ತಿರುಪತಿ ಆಡಳಿತ ಮಂಡಳಿಯಿಂದ ಅಪಚಾರ; ಆಂಜನೇಯ ಹುಟ್ಟಿದ್ದು ಕರ್ನಾಟಕದಲ್ಲಿ ಅಲ್ಲ ತಿರುಪತಿಯಲ್ಲಂತೆ!
ಸಂಗ್ರಹ ಚಿತ್ರ
Follow us on

ತಿರುಪತಿ: ಭಾರತದಲ್ಲಿ ಪೌರಾಣಿಕ ಕತೆಗಳಿಗೆ ಇಂದಿಗೂ ಪ್ರಾಶಸ್ತ್ಯ, ಪ್ರಾಮುಖ್ಯತೆಗಳು ಇವೆ. ನಮ್ಮ ಸುತ್ತಮುತ್ತಲ ಎಷ್ಟೋ ಊರುಕೇರಿಗಳ ಹೆಸರು ಒಂದೊಂದು ಪುರಾಣ ಕತೆಗಳೊಂದಿಗೆ ತಳುಕು ಹಾಕಿಕೊಂಡಿರುತ್ತವೆ. ಆದರೆ, ಈ ವಿಚಾರದಲ್ಲಿ ಆಗಾಗ ಒಂದಷ್ಟು ಜನ ಅಪಸ್ವರ ತೆಗೆದು ಕೆಲ ವಿವಾದಗಳನ್ನೂ ಸೃಷ್ಟಿಸುತ್ತಿರುತ್ತಾರೆ. ಭಾರತೀಯರ ಪಾಲಿಗೆ ಈ ವಿವಾದ, ಅಪಸ್ವರಗಳು ಹೊಸತೇನಲ್ಲ. ಅವು ಹನುಮಂತನ ಬಾಲದಂತೆ ಬೆಳೆಯುತ್ತಲೇ ಇರುತ್ತವೆ. ಅಂದಹಾಗೆ ಹನುಮಂತ ಎಂದ ಕೂಡಲೇ ಈಗ ಹುಟ್ಟಿರುವ ಹೊಸ ವಿವಾದವೊಂದರ ಬಗ್ಗೆ ಹೇಳಲೇಬೇಕು. ಏಕೆಂದರೆ ಈ ವಿವಾದದ ಕೇಂದ್ರಬಿಂದುವೇ ಹನುಮಂತ. ಹೌದು, ಸದ್ಯ ಆಂಜನೇಯನ ಜನ್ಮಸ್ಥಾನದ ಬಗ್ಗೆ ಚರ್ಚೆ ಎದ್ದಿದ್ದು ಆತ ಹುಟ್ಟಿದ್ದು ತಿರುಪತಿಯಲ್ಲಿ ಎಂಬ ಹೊಸ ವಾದ ಶುರುವಾಗಿದೆ.

ಆಂಜನೇಯ ಹುಟ್ಟಿದ್ದು ಕರ್ನಾಟಕದ ಕೊಪ್ಪಳದಲ್ಲಿರುವ ಅಂಜನಾದ್ರಿ ಬೆಟ್ಟದಲ್ಲಿ ಎಂಬ ನಂಬಿಕೆ ಪುರಾಣ ಕಾಲದಿಂದಲೂ ಇದೆ

ಪುರಾಣ ಕಾಲದಿಂದಲೂ ಆಂಜನೇಯ ಹುಟ್ಟಿದ್ದು ಕರ್ನಾಟಕದ ಕೊಪ್ಪಳದಲ್ಲಿರುವ ಅಂಜನಾದ್ರಿ ಬೆಟ್ಟದಲ್ಲಿ ಎಂಬ ನಂಬಿಕೆ ಇದೆ. ಆದರೆ, ಈ ನಂಬಿಕೆಯನ್ನು ಬುಡಮೇಲು ಮಾಡುವಂತಹ ಹೇಳಿಕೆಯೊಂದು ನೆರೆಯ ಆಂಧ್ರಪ್ರದೇಶದಿಂದ ಕೇಳಿ ಬಂದಿದೆ. ಶ್ರೀ ರಾಮಚಂದ್ರ ಕರ್ನಾಟಕಕ್ಕೆ ಬಂದಿದ್ದರು ಎಂಬ ನಂಬಿಕೆಯೊಂದಿಗೆ ಅಂಜನಾದ್ರಿ ಬೆಟ್ಟದ ಕತೆ ತಳುಕು ಹಾಕಿಕೊಂಡಿದೆಯಾದರೂ ಈಗ ಆಂಜನೇಯ ಹುಟ್ಟಿದ್ದು ಕೊಪ್ಪಳದ ಅಂಜನಾದ್ರಿ ಬೆಟ್ಟದಲ್ಲಿ ಅಲ್ಲ ತಿರುಪತಿಯ ಅಂಜನಾದ್ರಿ ಬೆಟ್ಟದಲ್ಲಿ ಎಂಬ ವಾದ ಉದ್ಭವಿಸಿದೆ.

ಈ ವಾದಕ್ಕೆ ಇನ್ನಷ್ಟು ಪುಷ್ಠಿ ನೀಡುವಂತೆ ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ಒಂದು ಹೆಜ್ಜೆ ಮುಂದಕ್ಕೆ ಹೋಗಿ ಸಮಿತಿ ರಚಿಸಿದ್ದು, ಈ ಕುರಿತು ಅಧ್ಯಯನ ನಡೆಸಿದೆ. ಈ ವರದಿ ಶೀಘ್ರದಲ್ಲೇ ಹೊರ ಬರಲಿದ್ದು, ಆಂಜನೇಯನ ಜನ್ಮ ಸ್ಥಳದ ಬಗ್ಗೆ ಏನೇನು ಹೇಳಲಾಗಿದೆ? ತಿರುಪತಿಯಲ್ಲೇ ಹುಟ್ಟಿದ್ದು ಎನ್ನುವುದಾದರೆ ಯಾವೆಲ್ಲಾ ಸಾಕ್ಷ್ಯಗಳನ್ನು ನೀಡಲಾಗಿದೆ? ಎಂಬುದು ಕುತೂಹಲ ಮೂಡಿಸಿದೆ. ವಾಯುಪುತ್ರ ಯಾರ ಮಡಿಲಿಗೋ ಕಾದುನೋಡಬೇಕಿದೆ!

ತಿರುಪತಿಯಲ್ಲಿರುವ ಅಂಜನಾದ್ರಿ ಬೆಟ್ಟವೇ ಆಂಜನೇಯನ ಜನ್ಮಸ್ಥಾನ ಎನ್ನುವುದಕ್ಕೆ ಎಲ್ಲಾ ಆಯಾಮಗಳಲ್ಲಿಯೂ ಅಧ್ಯಯನ ನಡೆಸಲಾಗಿದ್ದು, ಪೂರಕ ದಾಖಲೆಗಳ ಜೊತೆಗೆ ಸಾಕ್ಷ್ಯ ಬಿಡುಗಡೆ ಮಾಡುವುದಾಗಿ ಟಿಟಿಡಿ ಅಧಿಕಾರಿ ಡಾ.ಕೆ.ಎಸ್.ಜವಾಹರ್ ರೆಡ್ಡಿ ತಿಳಿಸಿದ್ದಾರೆ.

ಸಮಿತಿಯಲ್ಲಿ ಯಾರೆಲ್ಲಾ ಇದ್ದಾರೆ?
ಪ್ರೊ. ಸನ್ನಿದಾನಂ ಶರ್ಮಾ, ಪ್ರೊ.ಮುರುಳೀಧರ ಶರ್ಮಾ, ಪ್ರೊ.ರಾಣಿ ಸದಾಶಿವ ಮೂರ್ತಿ, ಪ್ರೊ.ಜೆ.ರಾಮಕೃಷ್ಣ, ಪ್ರೊ. ಶಂಕರ ನಾರಾಯಣ, ಮೂರ್ತಿ ರೆಮಿಲ್ಲಾ, ವಿಜಯ್​ ಕುಮಾರ್​, ವಿಭೂಷಣ ಶರ್ಮಾ ಈ ಸಮಿತಿಯಲ್ಲಿದ್ದಾರೆ.