ಬೆಳಗಾವಿ: ಕಳೆದ 6 ತಿಂಗಳಿನಿಂದ ಸಂಬಳ ನೀಡಿಲ್ಲ ಎಂದು ಆರೋಪಿಸಿದ ನೌಕರನೊಬ್ಬ ಮನನೊಂದು ಜಿಲ್ಲಾಧಿಕಾರಿ ಕಚೇರಿ ಮೇಲಿಂದ ಜಿಗಿದು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಬೆಳಕಿಗೆ ಬಂದಿದೆ. ಸಂಬಳ ನೀಡದ ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿಯ ಕ್ರಮಕ್ಕೆ ಮನನೊಂದು ಆತ್ಮಹತ್ಯೆಗೆ ಯತ್ನಿಸಿದೆ ಎಂದು ನೌಕರ ಮಾಹಿತಿ ನೀಡಿದ್ದಾನೆ.
ಜಿಲ್ಲೆಯ ರಾಯಭಾಗ ತಾಲೂಕಿನಲ್ಲಿರುವ ರೇಣುಕಾ ಸಕ್ಕರೆ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ಕೇರಳ ಮೂಲದ ವಾಮದೇವ ಎಂಬಾತನಿಗೆ ಕಂಪನಿ ಕಳೆದ ಆರು ತಿಂಗಳಿನಿಂದ ಸಂಬಳ ನೀಡಿಲ್ಲ ಎಂದು ನೌಕರ ಆರೋಪಿಸಿದ್ದಾನೆ. ಹಾಗಾಗಿ, ಇದರಿಂದ ಮನ ನೊಂದು ಆತ್ಮಹತ್ಯೆಗೆ ಯತ್ನ ನಡೆಸಿದೆ ಎಂದು ಹೇಳಿದ್ದಾನೆ.
ಜಿಲ್ಲಾಧಿಕಾರಿ ಕಚೇರಿಯ ಮೂರನೇ ಮಹಡಿಯಿಂದ ಜಿಗಿಯಲು ಯತ್ನಿಸಿದ ವಾಮದೇವನನ್ನು ಸ್ಥಳದಲ್ಲಿದ್ದ ಪೊಲೀಸರು ಹಾಗೂ ಕಾರ್ಮಿಕರು ಕೂಡಲೇ ರಕ್ಷಣೆ ಮಾಡಿದರು. ಸದ್ಯ, ವಾಮದೇವನನ್ನು ವಶಕ್ಕೆ ಪಡೆದ ಮಾರ್ಕೆಟ್ ಠಾಣೆಯ ಪೊಲೀಸರು ಆತನನ್ನು ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸುತ್ತಿದ್ದಾರೆ.